ಹೋಳಿ ಸಂಭ್ರಮಕ್ಕೆ ಸುಗ್ಗಿ ಕುಣಿತ, ಕರಡಿ ವೇಷದ ಮೆರುಗು

| Published : Mar 24 2024, 01:34 AM IST

ಸಾರಾಂಶ

ಉತ್ತರಕನ್ನಡ ಜಿಲ್ಲೆಯಲ್ಲಿ ಹೋಳಿ ಹಬ್ಬದ ಪ್ರಯುಕ್ತ ಆಚರಿಸಲಾಗುವ ಸುಗ್ಗಿ ಕುಣಿತ ಜನಮನ ಸೆಳೆಯುತ್ತಿದೆ.

ಕಾರವಾರ: ಜಿಲ್ಲಾದ್ಯಂತ ಹೋಳಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಸುಗ್ಗಿ ಕುಣಿತ ಮೇಳೈಸಿದೆ. ಕರಡಿ ವೇಷಧಾರಿಗಳು ರಸ್ತೆಗಳಲ್ಲಿ ಓಡಾಡುವ ವಾಹನ ಸವಾರರ ಬಳಿ, ಮನೆಗಳಿಗೆ, ಅಂಗಡಿಗಳಿಗೆ ತೆರಳಿ ಹಣ ಪಡೆಯುವ ಸಂಪ್ರದಾಯ ಕೂಡಾ ನಡೆದುಕೊಂಡು ಬಂದಿದೆ.

ಕೋಮಾರಪಂಥ, ಹಾಲಕ್ಕಿ, ಪಡ್ತಿ ಹೀಗೆ ವಿವಿಧ ಸಮುದಾಯದಲ್ಲಿ ಹೋಳಿ ಹಬ್ಬದ ಮೊದಲು ಸುಗ್ಗಿ ಕುಣಿತ ನಡೆಸುವ ವಾಡಿಕೆ ತಲೆತಲಾಂತರದಿಂದ ನಡೆದುಕೊಂಡು ಬಂದಿದೆ. ಮನೆ ಮನೆಗೆ ತೆರಳಿ ಸಾಂಪ್ರದಾಯಿಕ ಹಾಡುಗಳಿಗೆ ನೃತ್ಯ ಮಾಡಲಾಗುತ್ತದೆ. ಮನೆಯವರು ಪ್ರೀತಿಯಿಂದ ನೀಡಿದ ಹಣ, ಅಕ್ಕಿ, ಕಾಯಿ ಮೊದಲಾದ ವಸ್ತುಗಳನ್ನು ಗೌರವಪೂರ್ವಕವಾಗಿ ಸ್ವೀಕರಿಸುತ್ತಾರೆ. ತಲೆಗೆ ಕಟ್ಟುವ ತುರಾಯಿ ವಿಶೇಷವಾಗಿದ್ದು, ಆಕರ್ಷಣೀಯವಾಗಿ ಇರುತ್ತದೆ. ಗ್ರಾಮದೇವತೆಗೆ ಪೂಜೆ ಸಲ್ಲಿಸಿ ಊರಿನ(ಸಮುದಾಯದ) ಮುಖ್ಯಸ್ಥರ ಮನೆಯಿಂದ ಸುಗ್ಗಿ ಕುಣಿತ ಆರಂಭಿಸಲಾಗುತ್ತದೆ. ಸುಗ್ಗಿ ಕುಣಿತದ ಬಳಿಕ ಬಂದ ಹಣವನ್ನು ಸದ್ವಿನಿಯೋಗಕ್ಕೆ ಬಳಕೆ ಮಾಡಲಾಗುತ್ತದೆ. ಹೋಳಿಯ ದಿನ ಮುಕ್ತಾಯವಾಗುತ್ತದೆ.

ಹೋಳಿ ಹಿನ್ನೆಲೆಯಲ್ಲಿ ಕರಡಿ, ಹುಲಿ, ರಾಕ್ಷಸ ಒಳಗೊಂಡು ವಿವಿಧ ವೇಷಗಳನ್ನು ಯುವಕರು ಹಾಕುತ್ತಾರೆ. ಪ್ರತಿ ಮನೆ ಮನೆಗೆ, ಅಂಗಡಿಗಳಿಗೆ ತೆರಳಿ ಹಣವನ್ನು ಪಡೆಯುತ್ತಾರೆ. ರಸ್ತೆಗಳಲ್ಲಿ ಸಂಚಾರ ಮಾಡುವ ವಾಹನ ಸವಾರರಿಂದ ಕೂಡಾ ಹಣ ಪಡೆಯುತ್ತಾರೆ. ಹಣದಲ್ಲಿ ಮನೆಗೆ ಬೇಕಾದ ದಿನಸಿ ಸಾಮಗ್ರಿಗಳನ್ನು ಖರೀದಿಸಿಕೊಂಡು ಹೋಗುತ್ತಾರೆ.

ಬಗೆ ಬಗೆಯ ಬಣ್ಣದಿಂದ ಕೂಡಿದ ಪುಡಿಗಳ ಪ್ಯಾಕೇಟ್‌ಗಳು ಮಾರುಕಟ್ಟೆಗೆ ಈಗಾಗಲೆ ಲಗ್ಗಿ ಇಟ್ಟಿವೆ. ಚಿಕ್ಕಮಕ್ಕಳಿಗಾಗಿ ಬಣ್ಣವನ್ನು ನೀರಿನಲ್ಲಿ ಮಿಶ್ರಣ ಮಾಡಿ ನೀರನ್ನು ಹಾರಿಸಲು ಬಳಸುವ ಚಿಕ್ಕ ಗಾತ್ರದಿಂದ ದೊಡ್ಡ ಗಾತ್ರದವರೆಗಿನ ಪಿಚಕಾರಿಗಳು ಅಂಗಡಿಗಳ ಎದುರು ರಾರಾಜಿಸುತ್ತಿವೆ.

ಈ ಬಾರಿ ಪದವಿಪೂರ್ವ ವಿದ್ಯಾರ್ಥಿಗಳ ಬಹುತೇಕ ಮಕ್ಕಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಹಾಗೂ ಸೋಮವಾರ(ಮಾ. ೨೫) ಹಬ್ಬ ಇರುವ ಕಾರಣದಿಂದ ಹೋಳಿಯ ರಂಗು ಕಡಿಮೆಯಾಗುವ ಸಾಧ್ಯತೆಯಿದೆ. ಕರಾವಳಿ ಭಾಗದಲ್ಲಿ ಹೋಳಿಯ ದಿನದಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಕುಟುಂಬಸ್ಥರೊಂದಿಗೆ, ಸ್ನೇಹಿತರೊಂದಿಗೆ, ನೆರೆಹೊರೆಯವರೊಂದಿಗೆ ಹೋಳಿಯನ್ನು ಆಡಿ ಬಳಿ ಸಮುದ್ರ ಸ್ನಾನ ಮಾಡುವ ಪದ್ಧತಿ ನಡೆದುಕೊಂಡು ಬಂದಿದೆ. ಕೆಲವು ಕಡೆ ಮನೆಗಳ ಎದುರು ಡಿಜೆ ಅಬ್ಬರ ಕೂಡಾ ಜೋರಾಗಿರುತ್ತದೆ. ಚಲನಚಿತ್ರಗಳ ಗೀತೆಗಳನ್ನು ಹಾಕಿಕೊಂಡು ಎಲ್ಲರೂ ಜತೆಗೂಡಿ ನೃತ್ಯವನ್ನು ಮಾಡಿ ಸಂಭ್ರಮಿಸುತ್ತಾರೆ. ಶಿರಸಿಯಲ್ಲಿ ಪ್ರಸಕ್ತ ಮಾರಿಕಾಂಬಾ ದೇವರ ಜಾತ್ರಾ ಮಹೋತ್ಸವ ಇರುವುದರಿಂದ ಹೋಳಿ ಆಚರಣೆ ಇರುವುದಿಲ್ಲ. ಕಾನೂನು ಕ್ರಮ: ಈ ವರ್ಷ ಹೋಳಿ ಹಬ್ಬ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಒಂದೇ ದಿನ ಬಂದಿದೆ. ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ, ಮೇಲ್ವಿಚಾರಕರಿಗೆ ಬಣ್ಣ ಹಚ್ಚುವುದರಿಂದ ತೊಂದರೆಯಾಗುವ ಸಂಭವವಿದೆ. ಮಾ. ೨೫ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತೆರಳುವ ಮಕ್ಕಳ, ಪಾಲಕ- ಪೋಷಕರ, ಶಿಕ್ಷಕರ ಮತ್ತು ಅಧಿಕಾರಿಗಳ ಮೇಲೆ ಬಣ್ಣ ಅಥವಾ ಬಣ್ಣದ ನೀರು ಎರಚುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ಬಣ್ಣ ಎರಚಿದರೆ ಅಂಥವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.