ಹಾನಗಲ್ಲ ತಾಲೂಕಿನಲ್ಲಿ ನಿರೀಕ್ಷಿತ ಫಲ ಕೊಡದ ಜೇನು ಸಾಕಾಣಿಕೆ

| Published : Aug 22 2024, 12:54 AM IST

ಸಾರಾಂಶ

ಹಾನಗಲ್ಲ ತಾಲೂಕಿನಲ್ಲಿ ಜೇನುಕೃಷಿಗೆ ಪ್ರಕೃತಿಯೂ ಕೈಕೊಡುವ ಜತೆಗೆ, ಕಾಡುಪ್ರಾಣಿಗಳು ರೈತ ವಿಮುಖನಾಗುವಂತೆ ಮಾಡಿದೆ. ಹಲವು ರೈತರು ಜೇನುಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ.

ಮಾರುತಿ ಶಿಡ್ಲಾಪುರ

ಹಾನಗಲ್ಲ: ಉತ್ಸಾಹದಿಂದ ಜೇನುಕೃಷಿಗೆ ಮುಂದಾದವರು ಈಗ ಹಿಂದಡಿ ಇಡುತ್ತಿದ್ದಾರೆ!

ತಾಲೂಕಿನಲ್ಲಿ ಜೇನುಕೃಷಿಗೆ ಪ್ರಕೃತಿಯೂ ಕೈಕೊಡುವ ಜತೆಗೆ, ಕಾಡುಪ್ರಾಣಿಗಳು ರೈತರು ವಿಮುಖನಾಗುವಂತೆ ಮಾಡಿದೆ. ಒಂದೆರಡು ದಶಕಗಳಿಂದ ಹಾನಗಲ್ಲ ತಾಲೂಕಿನಲ್ಲಿ ತೋಟಗಾರಿಕೆ ಪ್ರದೇಶದ ಅಭಿವೃದ್ಧಿಯಾಗುತ್ತಿದ್ದು, ಕೆಲವರು ಜೇನುಕೃಷಿಗೆ ಆಸಕ್ತಿ ತೋರಿದ್ದರು. ಆದರೆ ರೈತರ ನಿರೀಕ್ಷೆಗೆ ತಕ್ಕ ಫಲ ಸಿಕ್ಕಿಲ್ಲ.

ತೋಟಗಾರಿಕೆ ಇಲಾಖೆ ಪ್ರತಿ ವರ್ಷ ಸರ್ಕಾರದ ಅನುದಾವನ್ನು ಆಧರಿಸಿ ಒಬ್ಬಿಬ್ಬರಿಗೆ ಜೇನುಗೂಡು, ಸ್ಟ್ಯಾಂಡ್, ಜೇನುಹುಳು ಉಚಿತವಾಗಿ ಕೊಡುತ್ತದೆ. ಆದರೆ ಅದನ್ನು ಪಡೆಯುವಾಗ ಇದ್ದ ಉತ್ಸಾಹ ಪಡೆದ ಆನಂತರ ಕೃಷಿಕರಲ್ಲಿ ಉಳಿಯುತ್ತಿಲ್ಲ.

ತೋಟಗಾರಿಕೆ ಪ್ರದೇಶದಲ್ಲಿ ರೈತರು ಜೇನುಸಾಕಣೆ ಮಾಡಿದ್ದಾರೆ. ಆದರೆ ಅತಿ ಹೆಚ್ಚು ಹೂವು ಬೆಳೆಯುವ ಪ್ರದೇಶದಲ್ಲಿ ಜೇನು ಸಾಕಣೆ ಒಳ್ಳೆಯ ಫಲ ನೀಡಬಲ್ಲದು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಕರಡಿ ದಾಳಿ: ಶಿರಸಿ ಗಡಿಭಾಗದಲ್ಲಿ ಜೇನುಕೃಷಿಗೆ ಕರಡಿ ಕಾಟವಿದೆ. ಇದರಿಂದ ರೈತರು ಭಯಗೊಳ್ಳುತ್ತಿದ್ದಾರೆ. ಕರಡಿಗಳು ಜೇನುಗಾಗಿಯೇ ಬರುತ್ತವೆ ಎಂದು ಅರಿವಾದ ಮೇಲೆ ಜೇನುಕೃಷಿಯನ್ನೇ ಬಿಟ್ಟಿದ್ದಾರೆ. ಹಾನಗಲ್ಲ ತಾಲೂಕಿನ ಕಾಮನಹಳ್ಳಿಯ ಆದರ್ಶ ರೈತ, ಹತ್ತು ಹಲವು ಪ್ರಶಸ್ತಿ ಪಡೆದ ಮುತ್ತಣ್ಣ, ಈ ಕರಡಿ ಕಾಟದಿಂದಲೇ ಜೇನುಕೃಷಿ ನಿಲ್ಲಿಸಿದ್ದಾರೆ.

ತಾಲೂಕಿನ ಗೆಜ್ಜಿಹಳ್ಳಿಯಲ್ಲಿ ನಿವೃತ್ತ ಶಿಕ್ಷಕ ಗೋಪಾಲಾಚಾರ್ಯ ಬಡಿಗೇರ ಸಾಂಬಾರು ಬೆಳೆಗಳ ಜತೆಗೆ ಜೇನುಕೃಷಿ ಕೈಗೊಂಡಿದ್ದರು. ಆದರೆ ಈಗಿನ ಬಿಸಿಲಿನ ತಾಪಮಾನಕ್ಕೆ ಜೇನುನೊಣಗಳು ನಿಲ್ಲುತ್ತಿಲ್ಲ. ಅಲ್ಲದೆ ಮಕರಂದಕ್ಕಾಗಿ ದೂರ ದೂರ ಹೋದ ಜೇನುನೊಣಗಳು ಮರಳಿ ಬರದೇ ಇದ್ದ ಸಂದರ್ಭಗಳು ಇವೆ. ಹಾನಗಲ್ಲ ತಾಲೂಕು ಜೇನು ಕೃಷಿಗೆ ಅಷ್ಟೊಂದು ಸೂಕ್ತ ಅಲ್ಲ. ಮಳೆಗಾಲದ ಫಸಲು ಸಿಗುವ ಸಂದರ್ಭದಲ್ಲಿ ಜೇನುನೊಣಗಳು ಇಲ್ಲಿರುತ್ತವೆ. ಬೇಸಿಗೆಯಲ್ಲಿ ಅವು ಇಲ್ಲಿಂದ ಪಲಾಯನ ಮಾಡುತ್ತವೆ ಎನ್ನುತ್ತಾರೆ.

ಮಾರುಕಟ್ಟೆ: ಜೇನು ಮಾರಾಟಕ್ಕೆ ಇಲ್ಲಿ ಮಾರುಕಟ್ಟೆ ವ್ಯವಸ್ಥೆಯೂ ಇಲ್ಲ. ಅಲ್ಲದೆ ಮಾರ್ಗದರ್ಶನದ ಕೊರತೆಯೂ ಇದೆ. ಜೇನು ಕೃಷಿ ಆಭಿವೃದ್ಧಿಗಾಗಿ ತಜ್ಞರು ರೈತರಿಗೆ ತರಬೇತಿ ಶಿಬಿರಗಳನ್ನು ನಡೆಸುವ ಅಗತ್ಯವಿದೆ.

ಅನುದಾನ: ತೋಟಗಾರಿಕೆ ಇಲಾಖೆ ೨೦೧೯ರಲ್ಲಿ ₹೫೦ ಸಾವಿರ, ೨೦೨೦ರಲ್ಲಿ ₹೭೫ ಸಾವಿರ ಸೇರಿದಂತೆ ಪ್ರತಿ ವರ್ಷ ಸರ್ಕಾರದ ಅನುದಾನವನ್ನಾಧರಿಸಿ ರೈತರಿಗೆ ಜೇನು ಕೃಷಿಗಾಗಿ ಸೌಲಭ್ಯ ನೀಡುತ್ತ ಬಂದಿದೆ. ಆದರೆ ಉಳಿದ ಕೃಷಿಯಂತೆ ರೈತರು ಜೇನುಕೃಷಿಗೆ ಆಸಕ್ತಿ ತೋರುತ್ತಿಲ್ಲ ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ.ಅತ್ಯಂತ ಆಸಕ್ತಿಯಿಂದ ಜೇನುಕೃಷಿಗಾಗಿ ಅಡಕೆ ತೋಟದಲ್ಲಿ ೫ ಜೇನುಗೂಡು ಇಟ್ಟಿದ್ದೇವೆ, ೫ ತಿಂಗಳಾಯಿತು, ಇನ್ನೂ ಜೇನು ತುಪ್ಪ ತೆಗೆದಿಲ್ಲ. ಆದರೆ ಇದರ ನಿರ್ವಹಣೆ ಹಾನಗಲ್ಲ ಪ್ರದೇಶದಲ್ಲಿ ಕಷ್ಟ. ಇಲ್ಲಿಯ ವಾತಾವರಣವೂ ಜೇನುಕೃಷಿಗೆ ಸಹಕರಿಸಲ್ಲ ಎನಿಸುತ್ತಿದೆ. ಆದರೂ ಜೇನು ಕೃಷಿ ಆರಂಭಿಸಿದ್ದೇವೆ. ಇನ್ನೂ ಕೆಲವು ತಿಂಗಳು ನೋಡಿ ಮುಂದಿನ ನಿರ್ಣಯ ಮಾಡುತ್ತೇವೆ ಎಂದು ಕುಂಟನಹೊಸಳ್ಳಿ ಜೇನು ಕೃಷಿಕ ಸತೀಶ ಅರಳೇಶ್ವರ ಹೇಳುತ್ತಾರೆ.ಪ್ರಸ್ತುತ ಕೃಷಿ ವರ್ಷದಲ್ಲಿ ಜೇನುಕೃಷಿ ಆರಂಭಿಸಿದ ಕುಂಟನಹೊಸಳ್ಳಿಯ ರೈತರು ಅತ್ಯಂತ ಆಸಕ್ತಿಯಿಂದ ಜೇನುಕೃಷಿಯಲ್ಲಿ ತೊಡಗಿದ್ದಾರೆ. ಇನ್ನೂ ಜೇನುಕೊಯ್ಲು ಆಗಿಲ್ಲ. ಅವರಿಗೆ ಅಗತ್ಯ ಮಾರ್ಗದರ್ಶನಕ್ಕೆ ನಾವು ಮುಂದಾಗಿದ್ದೇವೆ. ಹಾನಗಲ್ಲ ತಾಲೂಕಿನಲ್ಲಿ ಅಷ್ಟು ದೊಡ್ಡ ಪ್ರಮಾಣದ ಜೇನುಕೃಷಿ ಇಲ್ಲ. ಆದರೆ ಅತ್ಯುತ್ತಮ ಲಾಭ ತರುವ, ಅತ್ಯಂತ ಕಡಿಮೆ ವೆಚ್ಚದ ಕೃಷಿ ಇದಾಗಿದೆ ಎಂದು ಹಾನಗಲ್ಲ ತೋಟಗಾರಿಕೆ ಸಹಾಯಕ ಅಧಿಕಾರಿ ಶಿವಕುಮಾರ ಬಿರಾದಾರ ಹೇಳಿದರು.