ಹುಬ್ಬಳ್ಳಿ: ನಿರಂತರ ಮಳೆಗೆ ಹೈರಾಣಾದ ಜನತೆ

| Published : Jun 09 2024, 01:40 AM IST

ಸಾರಾಂಶ

ಹುಬ್ಬಳ್ಳಿಯ ಕೆಲವು ವಾರ್ಡ್‌ಗಳಲ್ಲಿ ಮುಖ್ಯ ರಸ್ತೆ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತರೆ, ಇನ್ನು ಕೆಲವು ಮನೆಗಳಿಗೆ ನೀರು ನುಗ್ಗಿ ಅವಂತಾರ ಸೃಷ್ಟಿಸಿದೆ.

ಹುಬ್ಬಳ್ಳಿ:

ಮುಂಗಾರು ಮಳೆಗೆ ಹುಬ್ಬಳ್ಳಿ ಜನತೆ ಹೈರಾಣಾಗಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ನಗರದ ಕೆಲವು ವಾರ್ಡ್‌ಗಳಲ್ಲಿ ಮುಖ್ಯ ರಸ್ತೆ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತರೆ, ಇನ್ನು ಕೆಲವು ಮನೆಗಳಿಗೆ ನೀರು ನುಗ್ಗಿ ಅವಂತಾರ ಸೃಷ್ಟಿಸಿದೆ. ಶನಿವಾರ ಬೆಳಗ್ಗೆಯೇ ಅರ್ಧಗಂಟೆಗೂ ಹೆಚ್ಚುಕಾಲ ಧಾರಾಕಾರವಾಗಿ ಸುರಿದ ಮಳೆ ಕೆಲ ನಿಮಿಷಗಳ ನಂತರ ಮತ್ತೆ ತುಂತುರು ಮಳೆ ಮುಂದುವರಿಯಿತು. ಸಂಜೆ ಗಂಟೆಗೂ ಹೆಚ್ಚುಕಾಲ ಭಾರಿ ಗಾಳಿಯೊಂದಿಗೆ ಧಾರಾಕಾರ ಮಳೆ ಸುರಿಯಿತು.

ಹಲವೆಡೆ ಅವಾಂತರ:

ನಿರಂತರ ಮಳೆಯಿಂದಾಗಿ ಹಲವು ವಾರ್ಡ್‌ಗಳಲ್ಲಿ ಚರಂಡಿಗಳು ಬಂದಾಗಿ ರಸ್ತೆ ಮೇಲೆ ನೀರು ಹರಿಯಿತು. ಹಳೇ ಹುಬ್ಬಳ್ಳಿ, ಕೊಪ್ಪಿಕರ ರಸ್ತೆ, ಶಾಹ ಬಜಾರ, ಆನಂದ ನಗರ, ಗಣೇಶ ನಗರ, ಜನತಾ ಬಜಾರ, ಗೋಪನಕೊಪ್ಪ, ಕಮರಿಪೇಟೆ, ದುರ್ಗದ ಬೈಲ್‌ ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ನೀರು ರಸ್ತೆ ಮೇಲೆ ಹರಿದು ಜನರು ಸಂಚರಿದಂತಹ ಪರಿಸ್ಥಿತಿ ನಿರ್ಮಾಣವಾಯಿತು.

ಮನೆಗೆ ನುಗ್ಗಿದ ನೀರು:

ಇಲ್ಲಿನ ಗೋಕುಲಧಾಮ ಸಾಂಬ್ರೆ ಸ್ಕೂಲ್‌ ಪಕ್ಕದ ಬುರಾನಿ ಪ್ಲಾಟ್‌ನಲ್ಲಿ 10ಕ್ಕೂ ಅಧಿಕ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಅಲ್ಲದೇ ಹಳೇ ಹುಬ್ಬಳ್ಳಿಯ ಹಲವು ಭಾಗಗಳಲ್ಲಿ 15ಕ್ಕೂ ಅಧಿಕ ಮನೆಗಳಿಗೆ ಚರಂಡಿ ನೀರು ನುಗ್ಗಿದರೆ, ಇತ್ತ ತರಕಾರಿ ಮಾರುಕಟ್ಟೆಯಲ್ಲಿ ಎಲ್ಲೆಂದರಲ್ಲಿ ಕೊಳಚೆ ನೀರು ನಿಂತಿದೆ.