ಸಾರಾಂಶ
ಜಗಳೂರು: ದೇವರಿಗೆ ಕನ್ನಡ ಕಲಿಸಿದ ಕನ್ನಡಿಗರಾದ ನಾವುಗಳೇ ಕನ್ನಡ ಉಳಿಸಿ ಬೆಳೆಸದಿದ್ದರೆ, ಮುಂದೊಂದು ದಿನ ಕನ್ನಡ ಭಾಷೆ ಆಡು ಭಾಷೆಯಾಗಿ ಉಳಿಯುವ ದಿನ ದೂರ ಇಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹಾಗೂ ಸಾಹಿತಿ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.
ಪಟ್ಟಣದಲ್ಲಿ ಶನಿವಾರ ಬಯಲು ರಂಗ ಮಂದಿರ ಆವರಣದಲ್ಲಿ ನಿರ್ಮಿಸಿರುವ ವಿದ್ಯಾರತ್ನ ಡಾ.ತಿಪ್ಪೇಸ್ವಾಮಿ ಸಭಾಂಗಣ ಹಾಗೂ ಮಹಾಲಿಂಗ ರಂಗ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ದಾವಣಗೆರೆ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ರಾಜ್ಯದ 17 ಸಾವಿರ ಶಾಲೆಗಳ ಹಕ್ಕುಪತ್ರ ಇಲ್ಲ. ಮುಚ್ಚಿದ ಕನ್ನಡ ಶಾಲೆಗಳಿಗೆ ಮೂಲ ಮಾಲೀಕರು ವಶಪಡಿಸಿಕೊಳ್ಳುತ್ತಾರೆ. ಯಾರಿಗೆ ಬೇಕು ಕನ್ನಡ ಎನ್ನುವ ಸ್ಥಿತಿಯಾಗಿದೆ. ಸರ್ಕಾರವಾಗಲಿ, ನಾವು ನೀವುಗಳೂ ಎಚ್ಚೆತ್ತುಕೊಳ್ಳದಿದ್ದರೆ ಕನ್ನಡ ಶಾಲೆಗಳು ಕಣ್ಮರೆಯಾದರೂ ಅಚ್ಚರಿ ಇಲ್ಲ ಎಂದರು.
ಸರ್ಕಾರ ಸರೋಜಿನಿ ಮಹಿಷಿ ವರದಿ ಜಾರಿ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಸಿ ಮತ್ತು ಡಿ ಗ್ರೂಪ್‌ಗಳಲ್ಲಿ ಶೇ.60ರಷ್ಟು ಉದ್ಯೋಗವನ್ನು ಸ್ಥಳೀಯ ಕನ್ನಡಿಗರಿಗೆ ಅವಕಾಶ ಕಲ್ಪಿಸಬೇಕು. ಹೊರಗುತ್ತಿಗೆ ನಡೆಸುವವರು ಶೇ.60 ಉದ್ಯೋಗ ಸ್ಥಳೀಯರಿಗೆ ನೀಡುವಂತ ಕೆಲಸ ಆಗಬೇಕಿದೆ ಎಂದರು.ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಚಿನ್ನ ಹಗರಿಯ ನುಡಿತೇರು ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿ ಮಾತನಾಡಿ, ಕೊಂಡುಕುರಿ ವನ್ಯಧಾಮ, ಕಣ್ವಕುಪ್ಪೆ ಗವಿಮಠ ಐತಿಹಾಸಿಕ ಪ್ರವಾಸಿ ತಾಣಗಳು, ಭವ್ಯ ಇತಿಹಾಸ ಹೊಂದಿರುವ ಜಗಳೂರು ತಾಲೂಕಿನಲ್ಲಿ ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನದ ಅಕ್ಷರದ ಜಾತ್ರೆ ನಡೆಯುತ್ತಿರುವುದು ನಮಗೆ ಹೆಮ್ಮೆ ತಂದಿದೆ ಎಂದರು.
ಸ್ಥಳೀಯ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಕನ್ನಡ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಕನ್ನಡ ಭಾಷೆ ಉಳಿಸುವ ನಿಟ್ಟಿನಲ್ಲಿ ರಾಜಕಾರಣಿಗಳಾದ ನಾವೂ ಕೈ ಜೋಡಿಸಬೇಕು. ಕನ್ನಡ ಭಾಷೆಯ ಬಗ್ಗೆ ಹೆಮ್ಮೆ ಇರಬೇಕು, ಶಾಲೆಗಳಲ್ಲಿ ಅಭಿಯಾನ ಮಾಡಬೇಕಿದೆ ಎಂದರು.ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲು ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳ ಜೊತೆ ಮಲ್ಲೇಶ್ ಸೇರಿದಂತೆ ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಪರಿಷತ್ತು ಜೊತೆಗೂಡಿ ನಿಯೋಗ ತೆರಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ನಿಯೋಗದ ಮನವಿಗೆ ಸ್ಪಂದಿಸಿರುವ ಸಿಎಂ ನಾವು ನಿಮ್ಮ ಜೊತೆಯಲ್ಲಿದ್ದೇವೆ ಎಂದು ಭರವಸೆ ನೀಡಿದ್ದಾರೆ ಎಂದರು. ಶಾಲೆಗಳ ಹಕ್ಕುಪತ್ರ ದಾಖಲೆ:
ಕನ್ನಡ ಭಾಷೆ ಬಗ್ಗೆ ಶ್ರೀಮಂತಿಕೆ ತೋರಿಸಬೇಕು. ಸಮಾವೇಶ ಮುಗಿದ ಮೇಲೆ ಹಕ್ಕುಪತ್ರ ಇಲ್ಲದ ಕನ್ನಡ ಶಾಲೆಗಳ ದಾಖಲೆ ಮಾಡುವಂತಹ ಕೆಲಸ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸುತ್ತೇವೆ. ಅನೇಕ ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೇ ಮುಚ್ಚುತ್ತಿವೆ ಎಂಬ ಮಾಹಿತಿ ಗಮನಕ್ಕೆ ಬಂದಿವೆ. ದಾವಣಗೆರೆ ಜಿಲ್ಲೆಯಲ್ಲಿ ಜಗಳೂರು, ಹರಿಹರ, ಮಲೇಬೆನ್ನೂರು ಪ್ರವಾಸಿ ತಾಣಗಳ ಬಗ್ಗೆ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಪ್ರವಾಸ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.ಶಾಸಕ ಬಿ.ದೇವೇಂದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮ ಮೇಲಿದೆ. 30 ವರ್ಷಗಳ ನಂತರ ಜಗಳೂರಿನಲ್ಲಿ ಎರಡನೇ ಬಾರಿಗೆ ಜಿಲ್ಲಾಮಟ್ಟದ ಸಮ್ಮೇಳನ ನಡೆಯಲು ಕನ್ನಡ ಅಭಿಮಾನಿಗಳಾದ ಜಗಳೂರು ಜನತೆಯ ಪ್ರೋತ್ಸಾಹವೇ ಕಾರಣ. ಕನ್ನಡದ ಬಗ್ಗೆ ಕೀಳರಿಮೆ ಬೇಡ. ನನ್ನ ಮಗ ಕನ್ನದಲ್ಲೇ ಐಎಎಸ್ ಪರೀಕ್ಷೆ ಬರೆದು ಪಾಸಾಗಿದ್ದಾರೆ. ಪೋಷಕರು ಸಂಸ್ಕಾರ ಇಲ್ಲದ ಶಿಕ್ಷಣ ಕಲಿಸದೇ, ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರಗಳನ್ನೂ ಕೊಡಬೇಕೆಂದು ಮನವಿ ಮಾಡಿದರು.
ಕ.ಸಾ.ಪ. ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಜಿಲ್ಲಾಮಟ್ಟದ ಸಮ್ಮೇಳನ ಜಗಳೂರಿನಲ್ಲಿ ಕನ್ನಡಾಭಿಮಾನಿಗಳ ಜನಸಾಗರದ ಮಧ್ಯೆ ಅದ್ಧೂರಿಯಾಗಿ ನಡೆದಿದೆ. ಈ ಹಿಂದೆ ನಡೆದಿದೆಯೋ, ಇಲ್ಲವೋ ಗೊತ್ತಿಲ್ಲ. ಮುಂದೆಯೂ ನಡೆಯುತ್ತದೆಯೋ ಇಲ್ಲವೋ ಅದೂ ಗೊತ್ತಿಲ್ಲ. ಅಷ್ಟರಮಟ್ಟಿಗೆ ಜಗಳೂರು ಸಮ್ಮೇಳನ ಶಾಸಕ ಬಿ.ದೇವೇಂದ್ರಪ್ಪರ ಸಹಕಾರದೊಂದಿಗೆ ಯಶಸ್ವಿಯಾಗಿ ಇತಿಹಾಸ ಸೃಷ್ಟಿಸಿದೆ ಎಂದರು.ವಿಶ್ವಮಟ್ಟದ 3ನೇ ಕನ್ನಡ ಸಮ್ಮೇಳನ ದಾವಣಗೆರೆಯಲ್ಲಿ ನಡೆಯಲು ಬಿ.ಎನ್.ಮಲ್ಲೇಶ್ ಅವರೊಂದಿಗೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಜಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ಮಾಡಲು ದೇಣಿಗೆ ಪಡೆಯಲು ಒತ್ತಾಯ ಮಾಡಿಲ್ಲ. 1300 ಜನರು ಸ್ವಯಂ ಪ್ರೇರಿತವಾಗಿ ದೇಣಿಗೆ ಕೊಟ್ಟಿದ್ದು, ಸಂಗ್ರಹಿಸಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಲೆಕ್ಕಪತ್ರವನ್ನು ಸಹ ನೀಡುತ್ತೇವೆ ಎಂದು ತಿಳಿಸಿದರು.
ಸಾಹಿತಿ ಡಾ.ದಾದಾಪೀರ್ ನವಲೇಹಾಳ್ ಸಮ್ಮೇಳನಾಧ್ಯಕ್ಷರ ಪರಿಚಯಿಸಿದರು. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಲೋಕೇಶ್, ತಹಸೀಲ್ದಾರ್ ಸಯಿದ್ ಕಲೀಂಉಲ್ಲಾ, ಕಸಾಪ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ನವೀನ್, ಸಾಹಿತಿ ಎನ್.ಟಿ. ಎರ್ರಿಸ್ವಾಮಿ, ಡಿಡಿಪಿಐ ಕೊಟ್ರೇಶ್, ತಾಪಂ ಇಒ ಕೆಂಚಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಇತರರು ಸಮ್ಮೇಳದಲ್ಲಿ ಪಾಲ್ಗೊಂಡಿದ್ದರು. ಹಿಂದಿ, ಇಂಗ್ಲಿಷ್ ಜೋಡಿ ರಾಕ್ಷಸರಿಂದ ಕನ್ನಡ ಮೇಲೆ ದಾಳಿ: ಸಮ್ಮೇಳನಾಧ್ಯಕ್ಷಸಮ್ಮೇಳನಾಧ್ಯಕ್ಷರೂ ಆಗಿರುವ ಸಾಹಿತಿ, ಸಂಸ್ಕೃತಿ ಚಿಂತಕ ಡಾ. ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಜಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ನನಗೆ ಸಿಗುತ್ತದೆ ಎಂದು ಯಾವುದೇ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಆಕಸ್ಮಿಕವಾಗಿ ಈ ಪದವಿ ಬಂದಿದೆ. ನಮ್ಮವ್ವನ ಪ್ರೀತಿಯನ್ನು ಜಗಳೂರಿನ ಜನತೆಯಲ್ಲಿ ಕಂಡೆ ಎಂದು ಮಾತು ಆರಂಭಿಸಿದರು.ಪಾಪನಾಯಕ್, ಇಮಾಂ ಸಾಹೇಬರ ಆಡಳಿತ ಮಾಡಿದ ಐತಿಹಾಸಿಕ ಪ್ರವಾಸಿ ತಾಣಗಳನ್ನು ಒಳಗೊಂಡ ಜಗಳೂರಿನಲ್ಲಿ ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿಕೊಂಡಿರುವುದು ಸಂತಸ ತಂದಿದೆ. ಕರ್ನಾಟಕದ ಕನ್ನಡ ಉಳಿಸುವ ನಿಟ್ಟಿನಲ್ಲಿ ಕೆಲಸ ಆಗಬೇಕಿದೆ. ಹಿಂದಿ ಹಾಗೂ ಇಂಗ್ಲಿಷ್ ಜೋಡಿ ರಾಕ್ಷಸರು ಕನ್ನಡದ ಮೇಲೆ ದಾಳಿ ಮಾಡುತ್ತಿದ್ದಾರೆ. ಕನ್ನಡಕ್ಕೆ ಹಿಂದೆಂದಿಗಿಂತ ಹೆಚ್ಚು ಆತಂಕವಾಗುತ್ತಿದೆ. ಕೋಮುವಾದದ ಸೋಂಕು ಒಳಪ್ರವೇಶಿಸಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕನ್ನಡ ನಮ್ಮಲ್ಲಿ ಇಲ್ಲ, ಬದಲಿಗೆ ಬಹುಕನ್ನಡಗಳಿವೆ. ಜನಭಾಷೆಯನ್ನು ಕನ್ನಡ ಭಾಷೆಯನ್ನಾಗಿ ಜಾರಿಗೆ ತರಬೇಕು. ತಾಲೂಕಿಗೊಂದು ಕನ್ನಡ ಭವನ, ಉದ್ಯೋಗವಕಾಶ, ಕೊಂಡುಕುರಿ ನಾಡಿನ ಬಗ್ಗೆ ಜಾಗೃತಿ, ಲಾಂಛನವನ್ನು ಕಡ್ಡಾಯಬಳಸಬೇಕು. ಸರೋಜಿನಿ ಮಹಿಷಿ ವರದಿ ಜಾರಿ, ದಾವಣಗೆರೆಯನ್ನು ಎರಡನೇ ರಾಜಧಾನಿ ಆಗಬೇಕು, ಮಹಾಲಿಂಗ ರಂಗ ಅಭಿವೃದ್ಧಿ, ಜಗಳೂರಿನಲ್ಲಿ ಇಮಾಂ ಸಾಹೇಬರ ಮನೆಯನ್ನು ಸ್ಮಾರಕ ಮಾಡಬೇಕೆಂದರು. ಮೆರವಣಿಗೆಗೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಚಾಲನೆವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಗಳೂರು ತಾಲೂಕು ಕಚೇರಿಯಿಂದ ಆವರಣದ ಕುವೆಂಪು ಪ್ರತಿಮೆಯಿಂದ ಪ್ರಾರಂಭಗೊಂಡ ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಮೆರವಣಿಗೆ ಚಾಲನೆ ನೀಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ.ಸಿ.ವಿ.ಪಾಟೀಲ್ ಅವರು ಸಮ್ಮೇಳಾಧ್ಯಕ್ಷರಿಗೆ ಕನ್ನಡದ ಧ್ವಜವನ್ನು ಹಸ್ತಾಂತರ ಮಾಡಿದರು.
ಉತ್ಸವದಲ್ಲಿ ವಿವಿಧ ಕಲಾತಂಡಗಳಿಂದ ಡೊಳ್ಳುಕುಣಿತ, ಹಗಲುವೇಷ, ಬೊಂಬೆಮೇಳ, ಉರುಮೆ, ತಪ್ಪಡೆ, ಕಹಳೆ, ವೀರಗಾಸೆ ಕರಡಿಮಜಲು, ನಂದಿಧ್ವಜ, ಭಜನೆ, ಕೋಲಾಟ, ಅಲಂಕೃತ ಎತ್ತಿನ ಗಾಡಿಗಳ ಮೆರವಣಿಗೆ, ಮಹಿಳೆಯರಿಂದ ಪೂರ್ಣಕುಂಭ ಮೇಳ, ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಮೆರವಣಿಗೆಗೆ ಮೆರಗು ನೀಡಿದವು.ಶಾಸಕ ಬಿ.ದೇವೇಂದ್ರಪ್ಪ ಅವರು ವಿವಿಧ ಕಲಾತಂಡಗಳ ತಾಳಕ್ಕೆ ಕುಣಿದು ಕುಪ್ಪಳಿಸಿದರು. ಇದೇ ವೇಳೆ ಕುವೆಂಪು ಪುತ್ಥಳಿಗೆ ಹಾಗೂ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.