ಪಶ್ಚಿಮ ಘಟ್ಟ ಉಳಿಸಲು ಪ್ರೊ. ಮಾಧವ ಗಾಡೀಳ ವರದಿ ಜಾರಿಗೊಳಿಸಿ

| Published : Aug 22 2024, 12:47 AM IST

ಪಶ್ಚಿಮ ಘಟ್ಟ ಉಳಿಸಲು ಪ್ರೊ. ಮಾಧವ ಗಾಡೀಳ ವರದಿ ಜಾರಿಗೊಳಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಪಶ್ಚಿಮ ಘಟ್ಟ ಪ್ರದೇಶದ ಸೂಕ್ಷ್ಮತೆ ಮತ್ತು ಅದರ ಜಾಗತಿಕ ಮಹತ್ವ ಅಧ್ಯಯನ ಮಾಡಿ ಪ್ರೊ. ಮಾಧವ ಗಾಡೀಳ ಸಮಿತಿ ಸಲ್ಲಿಸಿದ ವರದಿಯಲ್ಲಿ ಹಾನಿ ಮಾಡುವ ಯಾವುದೇ ಚಟುವಟಿಕೆ ಅಲ್ಲಿ ಮಾಡಬಾರದು ಎಂದು ಹೇಳಲಾಗಿದೆ. ಆದರೂ ಅಲ್ಲಿ ಪರಿಸರಕ್ಕೆ ಹಾನಿ ಮಾಡಿದ್ದರಿಂದ ಭೂಕುಸಿತಗಳು ಉಂಟಾಗುತ್ತಿವೆ.

ಧಾರವಾಡ:

ಪಶ್ಚಿಮ ಘಟ್ಟ ಪ್ರದೇಶದ ಸೂಕ್ಷ್ಮತೆ ಮತ್ತು ಅದರ ಜಾಗತಿಕ ಮಹತ್ವವನ್ನು ಅಧ್ಯಯನ ಮಾಡಿ ಪ್ರೊ. ಮಾಧವ ಗಾಡೀಳ ಸಮಿತಿಯು 2011ರಲ್ಲಿ ಸಲ್ಲಿಸಿದ ವರದಿಯನ್ನು ರಾಜ್ಯ ಸರ್ಕಾರ ಕೂಡಲೇ ಜಾರಿಗೊಳಿಸಬೇಕೆಂದು ''''ಪರಿಸರಕ್ಕಾಗಿ ನಾವು ಸಂಘಟನೆ'''' ಹೆಸರಿನಲ್ಲಿ ನಗರದಲ್ಲಿ ಬುಧವಾರ ಪರಿಸರವಾದಿಗಳು ಜಾಥಾ ನಡೆಸಿದರು.

ಇಲ್ಲಿಯ ಆಲೂರು ವೆಂಕಟರಾವ್‌ ಭವನದಿಂದ ಜ್ಯುಬಿಲಿ ವೃತ್ತ, ಅಲ್ಲಿಂದ ಕೋರ್ಟ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಜಾಥಾ ನಡೆಸಿದ ಪರಿಸರವಾದಿಗಳು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಪರಿಸರವಾದಿ ಡಾ. ಸಂಜೀವ ಕುಲಕರ್ಣಿ, ಮಲೆನಾಡು, ಕರಾವಳಿ ಪ್ರದೇಶ, ಕೇರಳ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಭೂಕುಸಿತಗಳಾಗಿವೆ. ನೀರಿನ ಸಹಜವಾದ ಹರಿಯುವಿಕೆಗೆ ತಡೆ, ಜೀವ ವೈವಿಧ್ಯವುಳ್ಳ ಅರಣ್ಯ ತೆಗೆದು ನೆಡುತೋಪುಗಳಿಂದ ಭೂಕುಸಿತವಲ್ಲದೆ ಮಣ್ಣಿನ ಸವಕಳಿಗೂ ಕಾರಣವಾಗಿವೆ. ಪರಿಸರಕ್ಕೆ ತೀವ್ರ ಹಾನಿಯುಂಟು ಮಾಡುವ ಇಂತಹ ಮಾರಕ ಚಟುವಟಿಕೆ ತಡೆಯಲು ಸರ್ಕಾರಗಳು ಗಂಭೀರ ಪ್ರಯತ್ನ ಮಾಡುತ್ತಿಲ್ಲ. ದುರಂತ ಘಟಿಸಿದ ನಂತರ ಪರಿಹಾರ ನೀಡಿ ಜವಾಬ್ದಾರಿ ಮುಗಿಯಿತು ಎಂದು ಭಾವಿಸುವುದು ತಪ್ಪು ಎಂದರು.

ಪಶ್ಚಿಮ ಘಟ್ಟ ಪ್ರದೇಶದ ಸೂಕ್ಷ್ಮತೆ ಮತ್ತು ಅದರ ಜಾಗತಿಕ ಮಹತ್ವ ಅಧ್ಯಯನ ಮಾಡಿ ಪ್ರೊ. ಮಾಧವ ಗಾಡೀಳ ಸಮಿತಿ ಸಲ್ಲಿಸಿದ ವರದಿಯಲ್ಲಿ ಹಾನಿ ಮಾಡುವ ಯಾವುದೇ ಚಟುವಟಿಕೆ ಅಲ್ಲಿ ಮಾಡಬಾರದು ಎಂದು ಹೇಳಲಾಗಿದೆ. ಆದರೂ ವರದಿ ಜಾರಿಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪರಿಸರವಾದಿ ಶಾರದಾ ಗೋಪಾಲ ಮಾತನಾಡಿ, ನಾವು ಅಭಿವೃದ್ಧಿ ವಿರೋಧಿಸುತ್ತಿಲ್ಲ. ಪರಿಸರ ಜತೆಗೆ ಅಭಿವೃದ್ಧಿಯಾಗಬೇಕು ಹೊರತು ಪರಿಸರ ನಾಶದಿಂದಲ್ಲ. ಈ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಹಲವು ಬದಲಾವಣೆಯಾಗಬೇಕಿದೆ. ಪ್ರತಿ ಪಂಚಾಯ್ತಿ, ಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪರಿಸರ ಜೀವ ವೈವಿಧ್ಯ ಸಂರಕ್ಷಣಾ ಪಡೆ ರಚಿಸಬೇಕು. ಪ್ರತಿ ಪಂಚಾಯಿತಿಯಲ್ಲಿ ಜೀವ ವೈವಿಧ್ಯ ದಾಖಲಾತಿ ಆಗಬೇಕು. ಯಾವುದೇ ಯೋಜನೆಗೆ ಪರಿಸರ ಪರಿಣಾಮಗಳ ಮೌಲ್ಯಮಾಪನ ಮಾಡುವಾಗ ರಾಜಕೀಯೇತರ ತಜ್ಞರ ಉಸ್ತುವಾರಿಯಲ್ಲಿ ಅದು ನಡೆಯಬೇಕು ಎಂದರು.

ಸೂಕ್ಷ್ಮ ಪರಿಸರ ವಲಯಗಳಲ್ಲಿ ಗಣಿಗಾರಿಕೆ, ಕಲ್ಲು ಮತ್ತು ಮರಳು ಗಣಿಗಾರಿಕೆ ನಿಷೇಧಿಸುವುದು, ಸೂಕ್ಷ್ಮ ಪರಿಸರ ವಲಯಗಳಲ್ಲಿ ಕಟ್ಟಡ ನಿರ್ಮಾಣ, ಮೂಲ ಸೌಕರ್ಯ ನಿರ್ಮಾಣ ನಿರ್ಬಂಧಿಸಲು ಕಠಿಣ ಕ್ರಮಕೈಗೊಳ್ಳಬೇಕು. ಜೀವ ಜಲ, ಪ್ರಮುಖ ನದಿಗಳು ಪಶ್ಚಿಮ ಘಟ್ಟದಲ್ಲಿ ಹುಟ್ಟಿದ್ದು ಅವುಗಳ ದಾರಿ ತಪ್ಪಿಸುವ ಕಾರ್ಯವಾಗಬಾರದು ಎಂಬುದು ನಮ್ಮ ಉದ್ದೇಶ. ಈಗಾಗುತ್ತಿರುವ ಅನಾಹುತಗಳಿಂದ ನಾವಿನ್ನೂ ಪಾಠ ಕಲಿಯದಿದ್ದರೆ ಅದಕ್ಕೆ ಕ್ಷಮೆಯಿಲ್ಲ. ಇಂತಹ ಅನಾಹುತಗಳು ಮರುಕಳಿಸದಂತೆ ತಡೆಯುವ ಸಲುವಾಗಿ ಈ ಹೋರಾಟ ಎಂದು ಹೇಳಿದರು.

ಸಮಾಜ ವಿಜ್ಞಾನಿ ಡಾ. ಪ್ರಕಾಶ ಭಟ್‌, ಗಾಂಧಿವಾದಿ ಬಸವಪ್ರಭು ಹೊಸಕೇರಿ, ಪರಿಸರವಾದಿಗಳಾದ ಡಾ. ಗೋಪಾಲ ದಾಬಡೆ, ಅಶೋಕ ಹಡಪದ, ಸರಸ್ವತಿ ಪೂಜಾರ, ಶಂಕರ ಕುಂಬಿ, ಸುಭದ್ರಾ ಕುಲಕರ್ಣಿ, ಎಸ್‌.ಬಿ. ಪತ್ತಾರ, ಆರ್.ಜಿ. ತಿಮ್ಮಾಪೂರ, ಶಿವಾನಂದ ಶೆಟ್ಟರ್‌, ಕವಿತಾ ಎ.ಎಸ್‌., ಅಸೆಟ್‌ ಡಿಸಿಲ್ವಾ ಮತ್ತಿತರರು ಇದ್ದರು.