ಸಾರಾಂಶ
ಹೂವಿನಹಡಗಲಿ: ತಾಲೂಕಿನಲ್ಲಿ ಗುಡುಗು ಸಿಡಿಲಿನ ಅಬ್ಬರದ ನಡುವೆ, ಭಾರಿ ಪ್ರಮಾಣದ ಮಳೆಯಾಗುತ್ತಿದ್ದು, ಕಣ್ಮುಂದೆ ಚೆನ್ನಾಗಿ ಬೆಳೆದಿದ್ದ ಬೆಳೆ ಕೈ ಜಾರಿ ಹೋಯ್ತು. ಮಳೆ ನೀರಿನಲ್ಲಿ ನೆಂದ ಮೆಕ್ಕೆಜೋಳದ ತೆನೆಯೊಳಗೆ, ಮೊಳಕೆ ಬಂದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ನಿರಂತರ ಮಳೆಯಿಂದಾಗಿ ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಹಾನಿ ಪ್ರದೇಶಕ್ಕೆ ಭೇಟಿ ಬೆಳೆ ಹಾನಿ ಸಮೀಕ್ಷೆ ಮಾಡಲು ಆಗುತ್ತಿಲ್ಲ. ಈವರೆಗೂ ಯಾವ ಇಲಾಖೆಯಲ್ಲಿಯೂ ಬೆಳೆ ಹಾನಿಯ ಕುರಿತಾಗಿರುವ ನಿಖರ ಮಾಹಿತಿ ಇಲ್ಲ. ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ, ಹಾನಿಯಾಗುವ ಪ್ರದೇಶ ಹೆಚ್ಚಾಗುತ್ತಲೇ ಇದೆ.ಮೆಕ್ಕೆಜೋಳ ಕಾಳು ಕಟ್ಟುವ ಹಂತದಲ್ಲಿ ಬೆಂಕಿ ರೋಗ ಕಾಣಿಸಿಕೊಂಡಿತ್ತು. ಇದರಿಂದ ನಿಶ್ಯಕ್ತಿಯಾಗಿರುವ ಮೆಕ್ಕೆಜೋಳದ ತೆನೆಗಳು ನೆಲಕ್ಕೆ ಬಿದ್ದಿವೆ. ಮಳೆ ನೀರಿನಲ್ಲಿ ನೆನೆದಿರುವ ತೆನೆಗಳೊಳಗೆ ಮೊಳಕೆ ಒಡೆದು, ಸಂಪೂರ್ಣ ಬೆಳೆ ಹಾನಿಯನ್ನು ರೈತರು ಅನುಭವಿಸುತ್ತಿದ್ದಾರೆ.
ತಾಲೂಕಿನಲ್ಲಿ ಅಂದಾಜು 850 ಎಕರೆಗೂ ಹೆಚ್ಚು ಮೆಕ್ಕೆಜೋಳ ಬೆಳೆ ಹಾನಿಯಾಗಿದೆ. ಇನ್ನು ಸಾವಿರಾರು ಎಕ್ರೆ ಪ್ರದೇಶದಲ್ಲಿ ಮೆಕ್ಕೆಜೋಳ ಕೊಯ್ಲಿಗೆ ಬಂದಿದೆ. ಜಮೀನುಗಳಲ್ಲಿ ಕಾಲು ಇಡದಷ್ಟು ಮಳೆ ನೀರು ನಿಂತು, ಬೆಳೆ ಹಾನಿಯಾಗಲಿದೆ. ರಸ್ತೆಯ ಮೇಲೆ ಒಣಗಲು ಹಾಕಿದ್ದ ಮೆಕ್ಕೆಜೋಳ ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಕಾಳುಗಳು ಫಂಗಸ್ ಬಂದು ಕೆಟ್ಟು ಹೋಗಿವೆ. ಇಂತಹ ಮೆಕ್ಕೆಜೋಳ ಕಾಳುಗಳನ್ನು ತಿಪ್ಪೆಗೆ ಹಾಕಬೇಕಿದೆ, ಇದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ ಅನ್ನುತ್ತಾರೆ ರೈತರು.ಉಳಿದಂತೆ ತಾಲೂಕಿನ ವಿವಿಧ ಕಡೆಗಳಲ್ಲಿ ಒಟ್ಟು 150 ಎಕರೆಗೂ ಹೆಚ್ಚು ಈರುಳ್ಳಿ ಬೆಳೆ ಹಾನಿಯಾಗಿದೆ. ಈಗ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬಂದಿರುವ ಹಿನ್ನೆಲೆಯಲ್ಲಿ, ಲಾಭದ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ, ಮಳೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಬೆಳೆಯಲ್ಲಾ ಮಳೆ ನೀರಿಗೆ ಕೊಳೆತು ಹೋಗಿದೆ. ಒಟ್ಟಾರೆ ರೈತನ ಬದುಕು ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಭಾನುವಾರ ರಾತ್ರಿ ಸುರಿದ ಮಳೆಗೆ ದಾಸರಹಳ್ಳಿ, ನಾಗತಿಬಸಾಪುರ ಗ್ರಾಮದಲ್ಲಿ ತಲಾಯೊಂದು ಮನೆ ಹಾನಿಯಾಗಿದೆ. ಒಟ್ಟಾರೆ ಅಕ್ಟೋಬರ್ ತಿಂಗಳಿನಲ್ಲಿ ಈವರೆಗೂ 24 ಮನೆಗಳಿಗೆ ಹಾನಿಯಾಗಿದೆ. ಸೋಮವಾರ ಬೆಳಗಿನಿಂದಲೇ ಮಳೆ ಆರಂಭವಾಗಿತ್ತು.ಹೂವಿನಹಡಗಲಿ-ಹರಪನಹಳ್ಳಿ ರಸ್ತೆ ತುಂಬೆಲ್ಲಾ ಮಳೆ ನೀರು ಹೊರಕ್ಕೆ ಹೋಗಲು ದಾರಿ ಇಲ್ಲದೇ, ರಸ್ತೆ ಮೇಲೆಯೇ ನಿಂತಿತ್ತು. ಇದರಿಂದ ಶಾಲಾ ಕಾಲೇಜು ಹೋಗುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಚಾಗಿತ್ತು. ಮಳೆ ನೀರು ಹರಿದು ಹೋಗಲು ಪಕ್ಕದಲ್ಲಿ ಚರಂಡಿ ನಿರ್ಮಾಣ ಮಾಡಿದ್ದಾರೆ. ಆದರೆ ಆ ಚರಂಡಿ ತುಂಬೆಲ್ಲಾ ಕಸ ಹೂಳು ತುಂಬಿಕೊಂಡಿದ್ದು, ಇದರಿಂದ ನೀರು ಹೋಗಲು ದಾರಿಯೇ ಇಲ್ಲದಂತಾಗಿತ್ತು.
ಆರಂಭದಲ್ಲಿ ಮಳೆ ಚೆನ್ನಾಗಿ ಆಗಿದೆ ಎಂದು ಬ್ಯಾಂಕುಗಳಲ್ಲಿ ಸಾಲ ತಂದು, ಬಿತ್ತನೆ ಬೀಜ. ರಸಗೊಬ್ಬರ ಖರೀದಿಸಿ ಲಕ್ಷಾಂತರ ರುಗಳ ಬಂಡವಾಳ ಹಾಕಿದ್ದೇವೆ. ಆದರೆ ಮಳೆರಾಯನ ಅವಕೃಪೆಗೆ ಕೈಗೆ ಬಂದಿದ್ದ ಬೆಳೆ, ನೀರಿನಲ್ಲಿ ಕೊಳೆತು ಹೋಯ್ತು ಎನ್ನುತ್ತಾರೆ ರೈತರು.