ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:"ಉಳ್ಳಾಗಡ್ಡಿಯೆಲ್ಲ ಹೊಲದಾಗ ಕೊಳ್ಯಾಕತ್ತಾವ್ ನೋಡ್ರಿ.. ಶೇಂಗಾ ಎಲ್ಲ ಮೊಳಕೆಯೊಡೆದಾವ್ ಏನ್ಮಾಡೋದ್ರಿ.. ಕೈಗೆ ಬಂದ ತುತ್ತು ಬಾಯಿಗೆ ಬರಲಾರದಂಗ ಆಗೈತಿ..! "
ಇದು ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ರೈತ ಶಿವಪ್ಪ ಹೊಲದಲ್ಲಿ ಕೊಳೆಯುತ್ತಿರುವ ಬೆಳೆಯ ನೋಡುತ್ತಾ ಕಣ್ಣೀರು ಸುರಿಸುತ್ತಾ ಹೇಳುವ ಮಾತು.ಧಾರವಾಡ ಜಿಲ್ಲೆಯ ಯಾವುದೇ ಹಳ್ಳಿಗೆ ಕಾಲಿಟ್ಟರೆ ಕಣ್ಣು ಹಾಯಿಸಿದರೆ ಖಾಲಿ ಹೊಲ ಅಥವಾ ನೀರಲ್ಲಿ ನಿಂತ ಹತ್ತಿ, ಶೇಂಗಾ, ಉಳ್ಳಾಗಡ್ಡಿ, ಮೆಕ್ಕೆಜೋಳದ ಬೆಳೆ ಕಾಣುತ್ತದೆ. ಹಾಗಂತ ಅದೇನೂ ಅತ್ಯಂತ ಸಮೃದ್ಧವಾಗಿ ಬೆಳೆದಿರುವ ಬೆಳೆ ಅಲ್ಲ. ಹಿಂಗಾರಿ ಮಳೆಯ ಅಬ್ಬರದಿಂದ ಕೊಳೆಯುತ್ತಿರುವ ಬೆಳೆಯೇ ಕಣ್ಣಿಗೆ ರಾಚುತ್ತದೆ. ಮುಂಗಾರಿನಲ್ಲಿ ಬಿತ್ತಿದ ಬೆಳೆಯೆಲ್ಲ ಇದೀಗ ಹಿಂಗಾರಿನ ಮಳೆ ಹೊಡೆತಕ್ಕೆ ನಲುಗಿದೆ. ಮುಂಗಾರಿನಲ್ಲಿ ಜಿಲ್ಲೆಯ ವಾಡಿಕೆ ಮಳೆ 514 ಮಿಮೀ. ಆದರೆ ಆಗ ಸುರಿದಿದ್ದು 522 ಮಿಮೀ. ಇನ್ನು ಹಿಂಗಾರು ಹಂಗಾಮು ಶುರುವಾಗುವುದೇ ಅಕ್ಟೋಬರ್‌ನಲ್ಲಿ. ಹಿಂಗಾರಿನಲ್ಲಿ ವಾಡಿಕೆ ಮಳೆ 75 ಮಿಮೀ. ಆದರೆ ಈವರೆಗೆ ಅಂದರೆ ಬರೋಬ್ಬರಿ 20 ದಿನಗಳಲ್ಲಿ ಸುರಿದಿರುವುದು ಬರೋಬ್ಬರಿ 168 ಮಿಮೀ. 20 ದಿನಗಳಲ್ಲೇ ಶೇ.200ಕ್ಕೂ ಅಧಿಕ ಹೆಚ್ಚುವರಿ ಮಳೆ ಸುರಿದಂತಾಗಿದೆ. ಅಕ್ಟೋಬರ್ ತಿಂಗಳು ಮುಗಿಯಲು ಇನ್ನೂ ಹತ್ತು ದಿನ ಇದೆ. ಇನ್ನೆಷ್ಟು ಮಳೆ ಸುರಿಯುತ್ತದೆಯೋ ಎಂಬ ಆತಂಕ ರೈತರದ್ದು.
ಕೊಳೆಯುತ್ತಿರುವ ಬೆಳೆ:ಮುಂಗಾರಿನಲ್ಲಿ ಬೆಳೆದ ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳನ್ನು ಈಗಾಗಲೇ ಕಟಾವ್ ಮಾಡಿಕೊಂಡು ಮಾರುಕಟ್ಟೆಗೆ ಸಾಗಿಸಿದವರು ಗೆದ್ದಂತಾಗಿದೆ. ಆದರೆ ಕಟಾವ್ ಮಾಡದೇ ಇನ್ಮೇಲೆ ಮಾಡಿದರಾಯ್ತು ಎಂದುಕೊಂಡು ಬಿಟ್ಟವರು ಅಥವಾ ಕಟಾವ್ ಮಾಡಿ ಹೊಲದಲ್ಲೇ ಬಿಟ್ಟವರ ಗೋಳು ಹೇಳತೀರದು ಎಲ್ಲ ಬೆಳೆಯೂ ಕೊಳೆತಿದೆ. ಶೇಂಗಾ ಮೊಳಕೆಯೊಡೆಯುತ್ತಿದ್ದರೆ, ಈರುಳ್ಳಿ ಕೊಳೆಯುತ್ತಿದೆ. ಕಟಾವಿಗೆ ಬಂದಿರುವ ಹತ್ತಿ, ಮೆಕ್ಕೆಜೋಳದ ಪರಿಸ್ಥಿತಿಯೂ ಇದೇ ರೀತಿ ಆಗಿದೆ. ಹೀಗಾಗಿ ಉತ್ತಮ ಫಸಲಿನ ನಿರೀಕ್ಷೆ ಇಟ್ಟುಕೊಂಡಿದ್ದ ರೈತನಿಗೆ ಈ ಸಲ ಮುಂಗಾರು ಹಂಗಾಮಿನಲ್ಲಿ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಹೊಲಗಳೆಲ್ಲ ಜಲಾವೃತವಾಗಿವೆ. ನೀರು ನಿಂತಿರುವ ಕಾರಣ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ರೈತರಿಲ್ಲದೇ ಬಣಗುಡುತ್ತಿವೆ. ಇನ್ನು ಕೆಲವೆಡೆ ರೈತರು ಹಾಳಾಗಿರುವ ಬೆಳೆ ತೆಗೆಯಿಸಲು ಆಳುಗಳನ್ನು ನೇಮಿಸಿ ಕೆಲಸ ಮಾಡಿಸುತ್ತಿದ್ದಾರೆ.ನಡೆದಿದೆ ಸಮೀಕ್ಷೆ:
ಮುಂಗಾರಿನಲ್ಲಿ ಬರೋಬ್ಬರಿ 2.77 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಅದರಲ್ಲಿ ಎಷ್ಟು ಪ್ರಮಾಣದ ಬೆಳೆ ಹಿಂಗಾರಿ ಮಳೆಗೆ ಹಾನಿಯಾಗಿದೆ ಎಂಬುದರ ಕುರಿತು ಸಮೀಕ್ಷೆಯನ್ನು ಕೃಷಿ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಕೈಗೊಳ್ಳುತ್ತಿದೆ. ಈ ಸಮೀಕ್ಷೆ ಮುಗಿಸಿದ ಬಳಿಕ ಪರಿಹಾರ ಕೊಡುವ ಕೆಲಸಕ್ಕೆ ಸರ್ಕಾರ ಕೈ ಹಚ್ಚಬೇಕಿದೆ. ಆದಷ್ಟು ಬೇಗನೆ ಸಮೀಕ್ಷೆ ಮುಗಿಸಿ ಪರಿಹಾರ ಕೊಡಬೇಕು ಎಂಬುದು ರೈತರ ಒಕ್ಕೊರಲಿನ ಆಗ್ರಹ.ಬೆಳೆಯೆಲ್ಲ ಕೊಳಿತಾ ಇರೋದನ್ನ್ ನೋಡಿದ್ರೆ ಕಣ್ಣೀರು ಕಪಾಳಕ್ ಬರ್ತಾವ್ ರ್ರಿ.. ಸಾಲಸೋಲ ಮಾಡಿ ಬಿತ್ತಿದ ಬೆಳೆಯೆಲ್ಲ ಕಣ್ಮುಂದ ಕೊಳಿತಾ ಇದೆ. ಕೈಕೈ ಹಿಚುಕಿಕೊಳ್ಳೋದು ಬಿಟ್ಟು ಏನ್ಮಾಡಾಕೂ ಆಗ್ತಾ ಇಲ್ಲ. ಸರ್ಕಾರ ಆದಷ್ಟು ಬೇಗ ಪರಿಹಾರ ಕೊಡಲಿ ಎಂದು ಬ್ಯಾಹಟ್ಟಿ ರೈತ ಶಿವಪ್ಪ ದೊಡ್ಡಗೌಡರ ಹೇಳಿದರು.