ಕಬ್ಬು ಬೀಜಕ್ಕೆ ಹೆಚ್ಚಿದ ಬೇಡಿಕೆ, ದರವೂ ದುಪ್ಪಟ್ಟು

| Published : May 29 2024, 12:55 AM IST

ಸಾರಾಂಶ

ಜಮಖಂಡಿ ತಾಲೂಕಿನಾದ್ಯಂತ ಕಬ್ಬು ನಾಟಿ ಕೆಲಸ ಭರದಿಂದ ಸಾಗಿದೆ. ಕಬ್ಬಿನ ಬೀಜದ ಬೆಲೆ ₹ 3500 ರಿಂದ ₹ 4500ರ ಗಡಿ ದಾಟಿದೆ.

ಕೇಶವ ಕುಲಕರ್ಣಿ

ಕನ್ನಡಪ್ರಭ ವಾರ್ತೆ ಜಮಖಂಡಿ

ತಾಲೂಕಿನಾದ್ಯಂತ ಕಬ್ಬು ನಾಟಿ ಕೆಲಸ ಭರದಿಂದ ಸಾಗಿದೆ. ಕಬ್ಬಿನ ಬೀಜದ ಬೆಲೆ ₹ 3500 ರಿಂದ ₹ 4500ರ ಗಡಿ ದಾಟಿದೆ. ಬೀಜಕ್ಕೆಂದು ಕಬ್ಬು ಬೆಳೆದ ರೈತರಿಗೆ ಲಾಟರಿ ಹೊಡೆದಂತಾಗಿದೆ. ಕಬ್ಬು ಬೆಳೆಯುತ್ತಿದ್ದ ರೈತರು ತೀವ್ರ ಬರದಿಂದ ನೀರು ಕಡಿಮೆಯಾಗಿ ಕಬ್ಬು ಬೆಳೆ ತೆಗೆದು ಬೇರೆ ಅಲ್ಪಾವಧಿ ಬೆಳೆಗಳತ್ತ ಮುಖ ಮಾಡಿದ್ದರು. ಆದರೆ, ಈ ಬಾರಿ ಮುಂಗಾರು ಪೂರ್ವ ಮಳೆ ಉತ್ತಮವಾಗಿರುವುದರಿಂದ ರೈತರು ಮತ್ತೆ ಕಬ್ಬು ನಾಟಿಗೆ ಮನಸು ಮಾಡುತ್ತಿದ್ದಾರೆ.

ಭೀಕರ ಬರದಿಂದ ಅಂತರ್ಜಲಮಟ್ಟ ಕುಸಿದು ಬೋರ್‌ವೆಲ್‌ಗಳು ಬರಿದಾಗಿ ಕಬ್ಬಿನ ಬೆಳೆ ಒಣಗಿ ಹೋಗಿತ್ತು. ಕಬ್ಬು ಕಟಾವು ಮಾಡಿದ್ದ ರೈತರು ಕುಳಿ ಕಬ್ಬನ್ನು ಉಳಿಸಿಕೊಳ್ಳಲಾಗದೆ ಅನಿವಾರ್ಯವಾಗಿ ಗಳೆ ಹೊಡೆದು, ಜಮೀನು ಹದಗೊಳಿಸಿ ಮಳೆಗಾಗಿ ಕಾಯುತ್ತಿದ್ದರು. ಈಗ ಮಳೆಯಾಗುತ್ತಿರುವುದರಿಂದ ರೈತರಲ್ಲಿ ಆಶಾವಾದ ಮೂಡಿದ್ದು, ಕಬ್ಬು ನಾಟಿಗೆ ಮುಂದಾಗಿದ್ದಾರೆ.

ತಾಲೂಕಿನಲ್ಲಿ ಕಬ್ಬು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಪ್ರತಿವರ್ಷ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಜಮಖಂಡಿ ತಾಲೂಕಿನಲ್ಲಿ ನಾಲ್ಕು ಸಕ್ಕರೆ ಕಾರ್ಖಾನೆಗಳಿವೆ. ಅಲ್ಲದೆ ಮೆಕ್ಕೆಜೋಳ, ಗೋದಿ, ಜವೆಗೋದಿ, ಜೋಳ, ಕಡಲೆ, ಹೆಸರು ಅಲಸಂದಿ, ತೊಗರಿ, ಸೂರ್ಯಕಾಂತಿ, ಅರಿಷಿಣ ಬೆಳೆಗಳನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ.

ಕಬ್ಬಿನ ಬೀಜಕ್ಕೆ ಡಿಮ್ಯಾಂಡ್:ತಾಲೂಕಿನಲ್ಲಿ ಕಬ್ಬಿನ ಬೀಜಕ್ಕೆ ಬೇಡಿಕೆ ಹೆಚ್ಚಾಗಿದೆ. ಬರದ ಮಧ್ಯೆಯೂ ಕಷ್ಟಪಟ್ಟು ಬೀಜ ಉಳಿಸಿಕೊಂಡಿದ್ದ ರೈತರಿಗೆ ದುಪ್ಪಟ್ಟು ಲಾಭವಾಗುತ್ತಿದೆ. ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದರೆ ಕಾರ್ಖಾನೆಗಳು ನಿಗದಿ ಮಾಡಿದ ಬೆಲೆಗೆ ಮಾರಾಟ ಮಾಡಬೇಕು. ಜೊತೆಗೆ ಕಬ್ಬು ಕಳಿಸಿ ಬಿಲ್‌ಗಾಗಿ ಕಾರ್ಖಾನೆಗೆ ಅಲೆಯಬೇಕು. ತೂಕದಲ್ಲೂ ಹೆಚ್ಚು ಕಡಿಮೆ ಮಾಡಿ ವಂಚಿಸಲಾಗುತ್ತದೆ. ಆದರೆ, ಬೀಜದ ವಿಷಯದಲ್ಲಿ ಹಾಗಿಲ್ಲ. ರೈತರೇ ದರ ನಿಗದಿ ಮಾಡುತ್ತಾರೆ. ಕಟಾವು ಮಾಡಿ ರವದಿ ಸಹಿತ ತೂಕಮಾಡಿ ಮಾರಾಟ ಮಾಡುತ್ತಾರೆ. ಇದರಿಂದ ಬೀಜ ಮಾರಿದ ರೈತರು ಉತ್ತಮ ಲಾಭ ಗಳಿಸುತ್ತಿದ್ದಾರೆ. ಬಿಲ್‌ಗಾಗಿ ಕಾಯುವ ಸಮಸ್ಯೆಯೂ ಇರಲ್ಲ. ಹಣ ಪಡೆದು ಬೀಜ ಪೂರೈಸಲಾಗುತ್ತದೆ.

ಹೊಸತಳಿಗೆ ಬೇಡಿಕೆ:

ಮುಂಚೆ ತಾಲೂಕಿನಲ್ಲಿ ಗಂಗಾವತಿ, ಸಂಕೇಶ್ವರ, 256 ಕಬ್ಬಿನ ತಳಿಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಮೀರಾ, ಬಿಳಿ ಕಬ್ಬು ಎಂದು ಕರೆಯಲ್ಪಡುವ 1001. 10,008 ಮುಂತಾದ ಹೊಸತಳಿಯ ಕಬ್ಬಿನ ಬೀಜಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಕಬ್ಬು 10 ತಿಂಗಳಿನಲ್ಲಿ ಕಟಾವಿಗೆ ಬರುತ್ತದೆ ಮತ್ತು ಇಳುವರಿಯೂ ಹೆಚ್ಚು. ಹೀಗಾಗಿ ಈ ಬೀಜಕ್ಕೆ ಬೇಡಿಕೆ ಹೆಚ್ಚಾಗಿದೆ. ಜೂನ್‌ನಲ್ಲಿ ನಾಟಿ ಮಾಡಿದ ಕಬ್ಬು 10 ತಿಂಗಳಿಗೆ ಕಾರ್ಖಾನೆಗೆ ಪೂರೈಸಲು ಯೋಗ್ಯವಾಗುತ್ತದೆ.

ರಿಂಗ್‌ ಪಿಟ್‌ ಪದ್ಧತಿಯ ಮೊರೆ:

ಮೊದಲಿನಿಂದಲೂ ರೈತರು 3 ರಿಂದ 4 ಅಡಿ ಅಂತರದ ಸಾಲು ಬಿಟ್ಟು ಕಬ್ಬು ನಾಟಿ ಮಾಡಲಾಗುತ್ತಿದ್ದರು. ಪಟ್ಟಾಪದ್ಧತಿ, ಸಾಲು ಬಿಟ್ಟು ಸಾಲು ಕಬ್ಬುನಾಟಿ ಜತೆಗೆ ಮಾಡುತ್ತಿದ್ದರು. ಈಚೆಗೆ ರಿಂಗ್‌ಪಿಟ್ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳುತ್ತಿದ್ದಾರೆ. ಹೊಲದಲ್ಲಿ ಗುಂಡಿಗಳನ್ನು ನಿರ್ಮಿಸಿ ಕಬ್ಬು ಬೆಳೆಯುವ ಕ್ರಮಕ್ಕೆ ರಿಂಗ್‌ಪಿಟ್ ಎನ್ನುತ್ತಾರೆ. ಕಬ್ಬು ನಾಟಿಗೆ ಸಾಲು ಬಿಡಬೇಕಿಲ್ಲ, ಅದರ ಬದಲು ಸಾಲಿನಿಂದ ಸಾಲಿಗೆ 5 ಅಡಿ ಅಂತರದಲ್ಲಿ ಚಿಕ್ಕ ಚಿಕ್ಕ ಗುಂಡಿಗಳನ್ನು ನಿರ್ಮಿಸಿ ಕಬ್ಬು ನಾಟಿ ಮಾಡಲಾಗುತ್ತದೆ. ಒಂದು ಎಕರೆ ಪ್ರದೇಶದಲ್ಲಿ 2500 ಗುಂಡಿ ನಿರ್ಮಿಸಬಹುದಾಗಿದೆ. ಗುಂಡಿಯೊಂದರಲ್ಲಿ 15 ರಿಂದ 20 ಕಬ್ಬು ಬೆಳೆದರೂ 40 ಕೆಜಿ ತೂಕ ಬರುತ್ತದೆ, 2500 ಗುಂಡಿ ಗಳಲ್ಲಿ ಕಮ್ಮಿ ಎಂದರೂ 100 ಟನ್ ಇಳುವರಿ ಪಡೆಯಬಹುದು. ಇದಕ್ಕೆ ಗೊಬ್ಬರದ ಖರ್ಚು ಕಡಿಮೆ ಗುಂಡಿಗಳಿಗೆ ನೇರವಾಗಿ ರಸಗೊಬ್ಬರ ನಿಡುವುದರಿಂದ ಗೊಬ್ಬರ ಬಳಕೆ ಪ್ರಮಾಣ ಕಡಿಮೆಯಾಗಿ ಹೆಚ್ಚು ಲಾಭ ಬರುತ್ತದೆ ಎಂಬುದು ರೈತರ ವಾದ.

ಮಾಹಿತಿ ಕೊರತೆ: ಹೊಸತಳಿಗಳು ಮತ್ತು ಬಿತ್ತನೆ ಕ್ರಮ, ರಸಗೊಬ್ಬರ ಬಳಕೆ ಮತ್ತು ಪ್ರಮಾಣ ಮುಂತಾದ ಮಾಹಿತಿಯ ಕೊರತೆಯಿಂದ ರೈತರು ನಿರೀಕ್ಷಿತ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ. ಕಬ್ಬು ಬೆಳೆಯುವ ರೈತರು ಯಾರೋ ಅನುಸರಿಸಿದ ಕ್ರಮ ಅನುಸರಿಸಿ ಬೇಸಾಯ ಮಾಡಿ ನಷ್ಟಕ್ಕೊಳಗಾದ ಉದಾಹರಣೆಗಳಿವೆ. ಕೃಷಿ ಇಲಾಖೆ ವತಿಯಿಂದ ಮಾಹಿತಿ ನೀಡುವ ಕೆಲಸವಾಗಬೇಕಿದೆ. ತಾಲೂಕಿನಲ್ಲಿ ಕಬ್ಬು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಸಮರ್ಪಕ ಮಾಹಿತಿಯಿಂದ ರೈತರಿಗೆ ಹೆಚ್ಚಿನ ಲಾಭವಾಗಲಿದೆ.

ಮಿಶ್ರಬೆಳೆ : ಕಬ್ಬಿನ ಸಾಲಿನಲ್ಲಿ ಈರುಳ್ಳಿ, ಹಸಿಮೆಣಸು, ಸೋಯಾಬೀನ್‌, ಬದನೆ, ಕಡಲೆ, ಸೇಂಗಾ, ತರಕಾರಿ ಸೇರಿದಂತೆ ಮಿಶ್ರಬೆಳೆ ಬೆಳೆ ಅನುಸರಿಸಲಾಗುತ್ತಿದೆ. ಕೆಲ ರೈತರು ಮೇವಿಗಾಗಿ ಮೆಕ್ಕೆಜೋಳ ಬೆಳೆಯುತ್ತಾರೆ. ಮಿಶ್ರಬೆಳೆಯಿಂದ ಹಚ್ಚು ಲಾಭ ಮತ್ತು ಬೆಳೆಯುವ ಕ್ರಮಗಳ ಸರಿಯಾದ ಮಾಹಿತಿ ನೀಡುವ ಕೆಲಸವಾಗಬೇಕಿದೆ. ಪ್ರತಿಬಾರಿ ತಾವು ಬೆಳೆದ ಕಬ್ಬನ್ನು ಹತ್ತಿರದ ಕಾರ್ಖಾನೆಗೆ ಕಳುಹಿಸುತ್ತಿದ್ದೇವು. ಈ ಬಾರಿ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಉತ್ತಮ ದರವೂ ಸಿಗುತ್ತಿರುವುದರಿಂದ ಉತ್ತಮ ಆದಾಯ ಬಂದಿದೆ. ಕಾರ್ಖಾನೆಗೆ ಕಬ್ಬು ಕಳಿಸಿ ಬಿಲ್‌ಗಾಗಿ ಕಾಯಬೇಕಾಗುತ್ತಿತ್ತು. ಆದರೆ, ಬೀಜ ಮಾರಾಟದಿಂದ ರೈತರು ಹಣ ಕೊಟ್ಟು ಖರೀದಿ ಮಾಡುವುದರಿಂದ ಹೆಚ್ಚನ ಆದಾಯ ಜೊತೆಗೆ ಸಮಯವೂ ಉಳಿಯುತ್ತದೆ.

-ರಾಮು ಡವಳೇಶ್ವರ, ಕಬ್ಬು ಬೆಳೆದ ರೈತ ಹಿರೇಪಡಸಲಗಿಬೀಜಕ್ಕೆಂದು ಕಬ್ಬು ಮಾರಾಟ ಮಾಡಿದ್ದು, ಸಕ್ಕರೆ ಕಾರ್ಖಾನೆಗೆ ಕಳಿಸಿದ್ದಕ್ಕಿಂತ ಹೆಚ್ಚಿನ ಲಾಭ ಬಂದಿದೆ. ಆದರೆ ಬರದ ಕಾರಣ ಈ ಬಾರಿ ಕಬ್ಬು ರಕ್ಷಿಸಿಕೊಳ್ಳುವುದು ಸವಾಲಿನ ಕಲಸವಾಗಿತ್ತು. ಸ್ವಲ್ಪ ಕಬ್ಬಿಗೆ ಹನಿ ನೀರಾವರಿ ಅಳವಡಿಸಿ ಉಳಿಸಿಕೊಂಡಿದ್ದು, ಉತ್ತಮ ದರ ಸಿಕ್ಕಿದ್ದರಿಂದ ಹಾನಿ ತಪ್ಪಿದೆ.

-ದಾಶಿವ ಬಿರಾದಾರ ಕಬ್ಬು ಬೆಳೆಗಾರ ಅಡಿಹುಡಿ