ಭಾರತೀಯತೆ ನಮ್ಮ ಹೆಗ್ಗುರುತು: ಉಪ ರಾಷ್ಟ್ರಪತಿ ಜಗದೀಪ್ ಧನಕರ

| Published : Feb 08 2025, 12:32 AM IST

ಭಾರತೀಯತೆ ನಮ್ಮ ಹೆಗ್ಗುರುತು: ಉಪ ರಾಷ್ಟ್ರಪತಿ ಜಗದೀಪ್ ಧನಕರ
Share this Article
  • FB
  • TW
  • Linkdin
  • Email

ಸಾರಾಂಶ

ಐದು ಸಾವಿರ ವರ್ಷಗಳ ಪುರಾತನವಾದ ನಮ್ಮ ದೇಶದ ಸಂಸ್ಕೃತಿ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾಗಿದ್ದು, ಭಾರತೀಯತೆ ನಮ್ಮ ಹೆಗ್ಗುರುತಾಗಿದೆ. ಪಟ್ಟಭದ್ರ ಹಿತಾಸಕ್ತಿಗಳಿಗೆ ಜಾತಿ, ಪ್ರಾದೇಶಿಕತೆ ಆಧಾರದ ಮೇಲೆ ವಿಭಜಿಸಲು ಅವಕಾಶ ನೀಡುವುದಿಲ್ಲ ಎಂಬ ಸಂಕಲ್ಪವನ್ನು ದೇಶದ ಜನರು ಮಾಡಬೇಕು ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದರು.

ರಾಣಿಬೆನ್ನೂರು: ಐದು ಸಾವಿರ ವರ್ಷಗಳ ಪುರಾತನವಾದ ನಮ್ಮ ದೇಶದ ಸಂಸ್ಕೃತಿ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾಗಿದ್ದು, ಭಾರತೀಯತೆ ನಮ್ಮ ಹೆಗ್ಗುರುತಾಗಿದೆ. ಪಟ್ಟಭದ್ರ ಹಿತಾಸಕ್ತಿಗಳಿಗೆ ಜಾತಿ, ಪ್ರಾದೇಶಿಕತೆ ಆಧಾರದ ಮೇಲೆ ವಿಭಜಿಸಲು ಅವಕಾಶ ನೀಡುವುದಿಲ್ಲ ಎಂಬ ಸಂಕಲ್ಪವನ್ನು ದೇಶದ ಜನರು ಮಾಡಬೇಕು ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದರು. ನಗರದ ಕೆಎಲ್‌ಇ ಸಂಸ್ಥೆಯ ರಾಜ ರಾಜೇಶ್ವರಿ ಮಹಾವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಪರಿವರ್ತನ ಸಂಸ್ಥೆ ಆಯೋಜಿಸಿದ್ದ ಕರ್ನಾಟಕ ವೈಭವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸಂಸ್ಕೃತಿಯಲ್ಲಿ ಎಲ್ಲವೂ ಸಮ್ಮಿಲಿತವಾಗಿದೆ. ರಾಷ್ಟ್ರಹಿತಕ್ಕಿಂತ ಬೇರೊಂದಿಲ್ಲ. ಇಷ್ಟೊಂದು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ದೇಶದಲ್ಲಿ ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆಯ ಬಗ್ಗೆ ಚರ್ಚೆ ನಡೆಸಲು ಹೇಗೆ ಸಾಧ್ಯ ಎಂಬುದೇ ಅರ್ಥವಾಗುತ್ತಿಲ್ಲ. ಭಾರತೀಯತೆ ನಮ್ಮ ಗುರುತು, ದೇಶಭಕ್ತಿ ನಮ್ಮ ಪ್ರೀತಿ ಮತ್ತು ರಾಷ್ಟ್ರದ ಹಿತಾಸಕ್ತಿಗಿಂತ ಹೆಚ್ಚೇನೂ ಇಲ್ಲ. ರಾಷ್ಟ್ರೀಯತೆಯು ಎಲ್ಲರನ್ನೂ ಒಳಗೊಂಡ ಗಂಗೆ ಇದ್ದಂತೆ. ನಮ್ಮ ಪ್ರಾಚೀನ ಸಂಸ್ಕೃತಿಯು ನಮಗೆ ಒಂದೇ ಒಂದು ಸಂದೇಶವನ್ನು ನೀಡುತ್ತದೆ. ಅದು ಎಲ್ಲವನ್ನೂ ಒಳಗೊಂಡಿರುತ್ತದೆ. ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

ವಿಶ್ವವೇ ನಿಬ್ಬೆರಗಾಗಿದೆ: ಕಳೆದ ಹತ್ತು ವರ್ಷಗಳಲ್ಲಿ ಭಾರತದ ಅರ್ಥವ್ಯವಸ್ಥೆ ವಿಶ್ವದ ಐದನೇ ಶಕ್ತಿಯಾಗಿ ಹೊರಹೊಮ್ಮಿದೆ. ನಮ್ಮನ್ನಾಳಿದವರಿಗಿಂತಲೂ ಮುಂದೆ ಸಾಗಿದ್ದು ಮುಂದಿನ ದಿನಗಳಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನ ತಲುಪಲಿದ್ದೇವೆ. ಪ್ರಸ್ತುತ ಕಾಲಘಟ್ಟದಲ್ಲಿ ವಿಶ್ವದ ಯಾವುದೇ ದೇಶ ಇಂತಹ ಸಾಧನೆ ಮಾಡಿಲ್ಲ. ಸುಮಾರು ೩೫ ವರ್ಷಗಳ ಹಿಂದೆ ನಮ್ಮ ವಿದೇಶ ವಿನಿಮಯ ಭಂಡಾರ ಖಾಲಿಯಾಗಿದ್ದರಿಂದ ದೇಶದ ಚಿನ್ನವನ್ನು ಸ್ವೀಡ್ಜರ್‌ಲ್ಯಾಂಡ್ ದೇಶದಲ್ಲಿ ಒತ್ತೆ ಈಡಲಾಗಿತ್ತು. ಆದರೆ ಇಂದು ನಮ್ಮ ದೇಶದ ಅರ್ಥ ವ್ಯವಸ್ಥೆ ಬಲಿಷ್ಠವಾಗಿರುವುದರಿಂದ ವಿದೇಶ ವಿನಿಮಯ ಭಂಡಾರ ೭೦೦ ಪಟ್ಟು ಹೆಚ್ಚಾಗಿದೆ. ಕಾಶ್ಮೀರದಲ್ಲಿ ಇದೀಗ ಶಾಂತಿ ನೆಲೆಸಿದ್ದು ಕಳೆದ ವರ್ಷ ೨ ಕೋಟಿ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡಿದ್ದಾರೆ. ಇದಕ್ಕೆ ಅಲ್ಲಿ ಈ ಮೊದಲು ಇದ್ದ ೩೭0ನೇ ವಿಧಿ ರದ್ದುಪಡಿಸಿರುವುದು. ಮಹಿಳಾ ಸಶಕ್ತಿಕರಣ ಮಾಡಿರುವುದರಿಂದ ಅಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ. ರಾಷ್ಟ್ರೀಯ ಏಕತೆ, ರಾಷ್ಟ್ರೀಯ ಭಾವನೆ, ರಾಷ್ಟ್ರೀಯ ಚೇತನವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕಾಗಿದೆ ಎಂದರು. ೧೪೨ ಕೋಟಿ ಜನಸಂಖ್ಯೆ ಹೊಂದಿದ್ದರೂ ಭಾರತ ಅಭಿವೃದ್ಧಿ ಹೊಂದಲು ಹೇಗೆ ಸಾಧ್ಯವಾಗಿದೆ ಎಂದು ಇಡೀ ವಿಶ್ವ ನಿಬ್ಬೆರಗಾಗಿದೆ. ದೇಶದ ಮನೆ ಮನೆಗಳಲ್ಲಿ ಶೌಚಾಲಯ, ಅಡುಗೆ ಮನೆಯಲ್ಲಿ ಗ್ಯಾಸ್, ಸಮರ್ಪಕ ವಿದ್ಯುತ್, ಉತ್ತಮ ರಸ್ತೆಗಳನ್ನು ಕಾಣಬಹುದಾಗಿದೆ. ಪಾರದರ್ಶಕತೆ, ಉತ್ತರದಾಯಿತ್ವ, ಸರಳತೆ ಇದಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ವಿದೇಶಿಗರು ನಮ್ಮ ದೇಶದ ಮಾದರಿ ಅನುಸರಿಸಲು ಚಿಂತನೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೈಗೊಂಡ ಸಕಾರಾತ್ಮಕ ನೀತಿಗಳಿಂದ ದೇಶ ಪ್ರಗತಿ ಹೊಂದಲು ಸಾಧ್ಯವಾಗಿದೆ. ವಿಶ್ವದಲ್ಲಿಯೇ ಭಾರತವು ಪ್ರಗತಿ ಹೊಂದುತ್ತಿರುವ ದೇಶವಾಗಿದ್ದು ಇಲ್ಲಿ ಬಂಡವಾಳ ಹೂಡಬಹುದು ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಹಾಗೂ ವಿಶ್ವ ಬ್ಯಾಂಕ್‌ಗಳು ಸಲಹೆ ನೀಡಿವೆ. ಆದರೆ ದೇಶದ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಹಾಗೂ ದೇಶದ ಪ್ರಗತಿಯನ್ನು ಒಪ್ಪುತ್ತಿಲ್ಲ. ದೇಶಕ್ಕೆ ಬೆದರಿಕೆ ಒಡ್ಡುವ ಶಕ್ತಿಗಳಿಗೆ ಕಠಿಣವಾದ ಉತ್ತರ ನೀಡಬೇಕಾಗಿದೆ. ನಮ್ಮ ಸಂಸ್ಕೃತಿಯ ಮೇಲಿನ ದಾಳಿ ಸಹಿಸಬಾರದು ಎಂದರು. ಅಭಿವೃದ್ಧಿ ಹೊಂದಿದ ಭಾರತ ಒಂದು ಕನಸಲ್ಲ, ಅದು ನಮ್ಮ ಗುರಿಯಾಗಿದೆ. ಅದನ್ನು ತಲುಪುವುದು ನಿಶ್ಚಿತವಾಗಿದೆ. ೨೦೪೭ರಲ್ಲಿ ಭಾರತ ವಿಶ್ವದಲ್ಲಿಯೇ ಅತ್ಯಂತ ಪ್ರಭಾವಶಾಲಿ ದೇಶವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ. ಯುವ ಜನತೆ ದೇಶದ ಅಭಿವೃದ್ಧಿ ಪರ್ವ ಎಂಬ ಮ್ಯಾರಥಾನ್‌ದಲ್ಲಿ ಕೈ ಜೋಡಿಸಬೇಕು ಎಂದು ಕರೆನೀಡಿದರು.

ಸಂಸ್ಕೃತಿಯಲ್ಲಿ ಹೊಂದಾಣಿಕೆ: ರಾಜ್ಯಪಾಲ ಥಾವರ್‌ಚಂದ್ ಗೆಹಲ್ಲೋತ್‌ ಮಾತನಾಡಿ, ಕರ್ನಾಟಕ ರಾಜ್ಯವು ಸಾಹಿತ್ಯ, ಸಂಗೀತ, ಶಿಲ್ಪ ಕಲೆಯ ಭೂಮಿಯಾಗಿದೆ. ರಾಜ್ಯದ ಸಂಸ್ಕೃತಿ ಅತ್ಯಂತ ಸಮೃದ್ಧಿ ಹಾಗೂ ವಿವಿಧತೆಯಿಂದ ಕೂಡಿದೆ. ರಾಜ್ಯದ ಇತಿಹಾಸವೂ ಬಹಳ ಪುರಾತನ ಹಾಗೂ ಗೌರವಯುತವಾಗಿದೆ. ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ಹಂಪಿ ಪಟ್ಟಣವು ಇಂದಿಗೂ ತನ್ನ ಐತಿಹಾಸಿಕ ಹಿನ್ನೆಲೆಯ ಗತ ವೈಭವವನ್ನು ನೆನಪಿಸುತ್ತದೆ. ಕನ್ನಡ ಸಾಹಿತ್ಯದಲ್ಲಿ ಬಸವಣ್ಣ, ಕುಮಾರವ್ಯಾಸ, ಪಂಪ, ಕುವೆಂಪು ಮುಂತಾದ ಕವಿಗಳ ಕೊಡುಗೆ ಅಪಾರವಾಗಿದೆ. ಕರ್ನಾಟಕ ವೈಭವ ಕಾರ್ಯಕ್ರಮವು ರಾಜ್ಯ ಹಾಗೂ ದೇಶದ ಸಂಸ್ಕೃತಿಯಲ್ಲಿ ಹೊಂದಾಣಿಕೆ ಇರುವುದನ್ನು ಪ್ರತಿಬಿಂಬಿಸುತ್ತದೆ ಎಂದರು. ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಆಶಯ ಭಾಷಣ ಮಾಡಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ, ಈ ದೇಶ ಸೃಷ್ಟಿಯ ಅನೇಕ ವೈವಿಧ್ಯಮಯ ರೀತಿಯಲ್ಲಿ ರಚನೆಯಾಗಿದೆ. ಅನೇಕ ಸಂತರು, ಲೇಖಕರು, ಋಷಿಗಳು ದೇಶದಲ್ಲಿ ಶತಮಾನಗಳಿಂದ ಏಕತೆಯನ್ನು ಸಾರಿದ್ದಾರೆ. ಕರ್ನಾಟಕ ವೈಭವ ಪರಿಕಲ್ಪನೆ ರಾಜ್ಯಕ್ಕೆ ಬಹುದೊಡ್ಡ ಸಾಂಪ್ರದಾಯಿಕ, ಸಾಂಸ್ಕೃತಿಕ, ಧಾರ್ಮಿಕ ಕೊಡುಗೆ ನೀಡಿದೆ ಎಂದರು.

ಉಪರಾಷ್ಟ್ರಪತಿ ಪತ್ನಿ ಡಾ. ಸುದಿಶಾ ಧನಕರ್, ಮೀನುಗಾರಿಕೆ ಸಚಿವ ಮಂಕಾಳು ವೈದ್ಯ, ಪ್ರಜ್ಞಾ ಪ್ರವಾಹ ಅಖಿಲ ಭಾರತ ಸಂಯೋಜಕ ರಘುನಂದನ, ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಎಸ್.ವಿ. ಹಲಸೆ ಇದ್ದರು.