ಸಾರಾಂಶ
ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭವಾರ್ತೆ, ಚಿತ್ರದುರ್ಗಮಳೆಯಿಂದಾಗಿ ವೇದಾವತಿ ನದಿಯಲ್ಲಿ ಉಂಟಾಗುವ ಪ್ರವಾಹವ ನಿಯಂತ್ರಿಸುವ ಸಂಬಂಧ ವಾಣಿ ವಿಲಾಸ ಸಾಗರ ಜಲಾಶಯದ ಕೋಡಿ ಬಳಿ ಕ್ರಸ್ಟ್ ಗೇಟ್ ಅಳವಡಿಸಲು ತಜ್ಞರ ತಂಡ ಸಲಹೆ ಮಾಡಿದ್ದು ಈ ಸಂಬಂಧ ಕೇಂದ್ರ ಜಲ ಆಯೋಗಕ್ಕೆ ವರ್ಷದ ಹಿಂದೆಯೇ 61 ಕೋಟಿ ರುಪಾಯಿ ವೆಚ್ಚದ ಪ್ರಸ್ತಾವ ಸಲ್ಲಿಸಲಾಗಿದೆ. ಆಯೋಗ ಕೆಲ ತಾಂತ್ರಿಕ ಮಾಹಿತಿ ಕೇಳಿದ್ದು, ಅದು ಪೂರೈಕೆಯಾದ ನಂತರ ಅನುಮತಿ ದೊರೆಯಲಿದೆ.
2022ರಲ್ಲಿ ಸುರಿದ ಭಾರೀ ಮಳೆಯಿಂದಾಗಿ 89 ವರ್ಷಗಳ ನಂತರ ವಿವಿ ಸಾಗರ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿತ್ತು. ಒಂದು ಹಂತದಲ್ಲಿ ಅಪಾಯ ಮಟ್ಟದಲ್ಲಿ ನೀರು ಸಂಗ್ರಹವಾಗಿತ್ತು. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಕ್ರಸ್ಟ್ ಗೇಟ್ ಅಳವಡಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಎಫ್ಆರ್‌ಎಲ್ (ಫುಲ್ ರಿಜರ್ವಾಯರ್ ಲೆವೆಲ್ ) ಮಟ್ಟದಲ್ಲಿ ಕ್ರಸ್ಟ್ ಗೇಟ್ ಅಳವಡಿಸಲಾಗುತ್ತದೆ. ಹಾಗೊಂದು ವೇಳೆ ಪ್ರವಾಹ ಬಂದಲ್ಲಿ ಈ ಗೇಟ್ ಗಳ ಮೂಲಕ ನದಿಗೆ ನೀರು ಬಿಡಲಾಗುತ್ತದೆ.ವಿವಿ ಸಾಗರ ಜಲಾಶಯದಲ್ಲಿ 130 ಅಡಿ ವರೆಗೆ ನೀರು ಸಂಗ್ರಹಿಸುವ ಅವಕಾಶವಿದ್ದು, ಇದೇ ಎತ್ತರಕ್ಕೆ ಕೋಡಿ ಅಳವಡಿಸಲಾಗಿದೆ. 2022 ರಲ್ಲಿ ಪ್ರವಾಹ ಬಂದಾಗ ನೀರು ಸಂಗ್ರಹದ ಪ್ರಮಾಣ 135 ಅಡಿ ತನಕ ಹೋಗಿತ್ತು. ಡ್ಯಾಂ ಎತ್ತರ 140 ಅಡಿಯಷ್ಟಿದೆ. ಹಾಗೇನಾದರೂ ಪ್ರವಾಹ ಮುಂದುವರಿದಿದ್ದರೆ ಡ್ಯಾಂ ಮೇಲ್ಭಾಗದಿಂದ ನೀರು ಧುಮ್ಮಿಕ್ಕುವ ಸಾಧ್ಯತೆಗಳಿದ್ದವು. ಜಲಾಶಯದಲ್ಲಿ 135 ಅಡಿ ನೀರು ಸಂಗ್ರಹವಾದಾಗ ಹೊಸದುರ್ಗ ತಾಲೂಕಿನಲ್ಲಿ ಎರಡು ಸಾವಿರ ಎಕರೆಯಷ್ಟು ರೈತರ ಭೂಮಿ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದವು. ಒಂದೇ ದಿನ 18 ಸಾವಿರ ಕ್ಯೂಸೆಕ್ಸ್ (ಒಂದುವರೆ ಟಿಎಂಸಿ) ನೀರು ಹರಿದು ಬಂದಿದ್ದರಿಂದ ಪ್ರವಾಹ ಸೃಷ್ಟಿಯಾಗಿತ್ತು.ಕ್ರಸ್ಟ್ ಗೇಟ್‌ಗಳು ಹೇಗಿರುತ್ತವೆ: ತಜ್ಞರ ವರದಿ ಅನ್ವಯ ಕ್ರಸ್ಟ್ ಗೇಟ್ (ಗೇಟೆಡ್ ಸ್ಪಿಲ್ ವೇ-gated spiil1 way)ಗಳನ್ನು ಕೋಡಿ ಬಳಿ ಅಳವಡಿಸಲಾಗುತ್ತದೆ. ನೆಲದಿಂದ ಮೂರು ಮೀಟರ್ ಎತ್ತರ ಹಾಗೂ 12 ಮೀಟರ್ ಉದ್ದದ ವಿನ್ಯಾಸವ ಈ ಕ್ರಸ್ಟ್ ಗೇಟ್ ಗಳು ಒಳಗೊಂಡಿವೆ. ಒಟ್ಟು ಇಂತಹ 12 ಗೇಟ್‌ಗಳ ಅಳವಡಿಸಲಾಗುತ್ತಿದೆ. ಪ್ರವಾಹ ಬಂದಾಗ ಮಾತ್ರ ಒಳ ಹರಿವು ಪ್ರಮಾಣಕ್ಕೆ ತಕ್ಕಂತೆ ಇವುಗಳ ಓಪನ್ ಮಾಡಲಾಗುತ್ತದೆ. ಹಾಗೊಂದು ವೇಳೆ ಪ್ರವಾಹ ಬಾರದಿದ್ದರೆ ಕ್ರಸ್ಟ್ ಗೇಟ್‌ಗಳ ಉಸಾಬರಿಗೆ ಹೋಗುವುದಿಲ್ಲ. ಹಾಲಿ ಜಲಾಶಯದಿಂದ ಕೃಷಿಗಾಗಿ ಕಾಲುವೆ ಮೂಲಕ ನೀರು ಹಾಯಿಸುವ ವ್ಯವಸ್ಥೆ ಇದೆ. ಒಂದು ಸಾವಿರ ಕ್ಯಾಸೆಕ್ಸ್ ನಷ್ಟು ನೀರನ್ನು ತೂಬು ಮೂಲಕ ಹೊರ ಹಾಕಬಹುದಾಗಿದೆ. ಕ್ರಸ್ಟ್ ಗೇಟ್ ಅಳವಡಿಸುವಾಗ ಯಾವುದೇ ಕಾರಣದಿಂದ ಎಫ್ಆರ್‌ಎಲ್ ಕಡಿಮೆ ಮಾಡಲಾಗುವುದಿಲ್ಲ. ಕೆಇಆರ್ ಎಸ್ ಅಧ್ಯಯನ ನಡೆಸಿತ್ತು: 2022 ರಲ್ಲಿ ಪ್ರವಾಹ ಬಂದಾಗ ಭವಿಷ್ಯದಲ್ಲಿ ಆಗುವ ಅನಾಹುತಗಳ ತಪ್ಪಿಸುವ ಸಂಬಂಧ ಕರ್ನಾಟಕ ಇಂಜಿನಿಯರಿಂಗ್ ರೀಸರ್ಚ್ ಸ್ಟೇಷನ್ (ಕೆಇಆರ್‌ಎಸ್) ಅಧ್ಯಯನ ಕೈಗೊಂಡು ಕೆಲ ಶಿಫಾರಸು ಮಾಡಿತ್ತು. ಹಾಲಿ ಕೋಡಿಯಲ್ಲಿ 991 ಕ್ಯುಮೆಕ್ಸ್ ನಷ್ಟು ನೀರು ಹೊರ ಹೋಗುವ ಅವಕಾಶವಿದೆ. 10,292 ಕ್ಯುಮೆಕ್ ಒಳಹರಿವಿದ್ದು, ಪ್ರವಾಹದ ಗರಿಷ್ಠ ಮೌಲ್ಯ ಇದಾಗಿದ್ದು ಅಣೆಕಟ್ಟು ಜಲವಿಜ್ಞಾನದ ದೃಷ್ಟಿಯಿಂದ ಸುರಕ್ಷಿತವಲ್ಲವೆಂಬುದು ತಜ್ಞರ ಅಭಿಪ್ರಾಯ. ಹಾಗಾಗಿ ಹಾಲಿ ಇರುವ 991 ಕ್ಯುಮೆಕ್ಟ್ ಕೋಡಿಯನ್ನು ಹತ್ತು ಪಟ್ಟು ಹೆಚ್ಚಿಸಬೇಕಾಗಿದೆ. ಅಸ್ತಿತ್ವದಲ್ಲಿರುವ ಕೋಡಿ ಬದಲಿಗೆ ವಿಶಾಲವಾದ ಗೇಟೆಡ್ ಸ್ಪಿಲ್ ವೇ ಪ್ರಸ್ತಾಪಿಸಲಾಗಿದೆ
ಗೇಟೆಡ್ ಸ್ಪಿಲ್‌ವೇಯನ್ನು ಅಳವಡಿಸುವುದರಿಂದ ಒಳ ಹರಿವಿನ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ಅಣೆಕಟ್ಟು ವೈಫಲ್ಯ ಅಥವಾ ರಚನಾತ್ಮಕ ಹಾನಿಯ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ. ಪ್ರವಾಹದ ಹೆಚ್ಚುವರಿ ನೀರನ್ನು ನಿಯಂತ್ರಿಸಲು ಔಟ್‌ಲೆಟ್ ಒದಗಿಸಿ ಒಟ್ಟಾರೆ ಅಣೆಕಟ್ಟು ತನ್ನ ಸುರಕ್ಷತೆ ಪ್ರಮಾಣ ಹೆಚ್ಚಿಸಿಕೊಳ್ಳುತ್ತದೆ ಎಂಬುವುದು ತಜ್ಞರ ಅಭಿಮತ.ಜಲವಿಜ್ಞಾನದ ಮಾದರಿಗಳು ಮತ್ತು ಹವಾಮಾನ ಪರಿಸ್ಥಿತಿಗಳು ಕಾಲಾನಂತರದಲ್ಲಿ ಬದಲಾಗಬಹುದು. ಇದು ಪ್ರವಾಹದ ಪ್ರಮಾಣ ಮತ್ತು ಆವರ್ತನಗಳಲ್ಲಿ ವ್ಯತ್ಯಾಸಗಳಿಗೆ ಕಾರಣವಾಗುತ್ತದೆ. ಪಿಎಂಎಫ್ ಮೌಲ್ಯವನ್ನು ಆಧರಿಸಿ ಸ್ಪಿಲ್‌ವೇ ಸಾಮರ್ಥ್ಯವನ್ನು ವಿನ್ಯಾಸಗೊಳಿಸುವ ಮೂಲಕ, ಭವಿಷ್ಯದ ಸಂಭಾವ್ಯ ಅನಿಶ್ಚಿತತೆಗಳಿಗೆ ಉತ್ತರ ಕಂಡುಕೊಳ್ಳಲಾಗುತ್ತದೆ. ಈ ವಿಧಾನವು ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯ ಮಟ್ಟವನ್ನು ಒದಗಿಸುತ್ತದೆ. ಇದಲ್ಲದೇ ಗೇಟೆಡ್ ಸ್ಪಿಲ್ ವೇಗಳು ಚಾನಲ್‌ನ ಕೆಳಗಿರುವ ಜೀವಗಳು, ಆಸ್ತಿ ಮತ್ತು ಪರಿಸರವನ್ನು ರಕ್ಷಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯ.
ಇತ್ತೀಚೆಗಷ್ಟೇ ಇಂಡಿಯನ್ ಇನ್‌ಸ್ಟಿಟ್ಯೂಟ್ ತಜ್ಞರು ಡ್ಯಾಂ ಪ್ರದೇಶಕ್ಕೆ ಭೇಟಿ ನೀಡಿ ಅಧ್ಯಯನ ಮಾಡಿದ್ದಾರೆ. ಅವರಿಂದ ವರದಿ ನೀರೀಕ್ಷಿಸಲಾಗುತ್ತಿದೆ. ವರದಿ ನೀಡಿದ ನಂತರ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿ ಕ್ರಸ್ಟ್ ಗೇಟ್ ಅಳವಡಿಕೆ ಪ್ರಸ್ತಾವಕ್ಕೆ ಅನುಮೋದನೆ ಪಡೆಯಾಗುವುದು. ಯಾವುದೇ ಕಾರಣದಿಂದ ಜಲಾಶಯದ ಕೋಡಿ ಕಡಿಮೆ ಮಾಡುವ ಸಾಧ್ಯತೆಗಳಿಲ್ಲ.- ವಿಜಯ ಕುಮಾರ್, ಕಾರ್ಯಪಾಲಕ ಇಂಜಿನಿಯರ್, ಭದ್ರಾ ಮೇಲ್ದಂಡೆ