ಸಾರಾಂಶ
ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‌ಗೆ ಸೇರಿಸಬೇಕು ಮತ್ತು ವಿಶ್ವರಾಷ್ಟ್ರ ಸಂಸ್ಥೆಯ ಭಾಷೆಗಳಲ್ಲಿ ಒಂದಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ವಿಶ್ವ ಸಂಸ್ಥೆಯ (ಯುಎನ್‌ಒ) ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಅಂಗವಾಗಿ ಮಡಿಕೇರಿಯಲ್ಲಿ ಸತ್ಯಾಗ್ರಹ ನಡೆಸಿದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ, ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ ಗೆ ಸೇರಿಸಬೇಕು ಮತ್ತು ವಿಶ್ವರಾಷ್ಟ್ರ ಸಂಸ್ಥೆಯ ಭಾಷೆಗಳಲ್ಲಿ ಒಂದಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿತು.ಶಾಂತಿಯುತ ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಮಾತನಾಡಿ, ಅತ್ಯಂತ ವಿಶಿಷ್ಟವಾದ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಕೊಡವ ಭಾಷೆಯನ್ನು ಸಂರಕ್ಷಿಸುವ ಅಗತ್ಯವಿದ್ದು, ಸಂವಿಧಾನದ 8ನೇ ಶೆಡ್ಯೂಲ್ ನಲ್ಲಿ ಗುರುತಿಸಿಕೊಳ್ಳುವುದು ಅನಿವಾರ್ಯವಾಗಿದೆ. ಯುನೇಸ್ಕೋದ 2025 ರ ಘೋಷವಾಕ್ಯದಂತೆ ‘ಲ್ಯಾಂಗ್ವೇಜಸ್ ಮ್ಯಾಟರ್ : ಸ್ವಿಲ್ವರ್ ಜುಬ್ಲಿ ಸೆಲಬ್ರೇಷನ್ ಆಫ್ ಇಂಟರ್ ನ್ಯಾಷನಲ್ ಮದರ್ ಲ್ಯಾಂಗ್ವೇಜ್-ಡೇ’ ಯಂದು ಸಿಎನ್‌ಸಿ ಸತ್ಯಾಗ್ರಹ ನಡೆಸಿದ್ದು, ಕಳೆದ 26 ವರ್ಷಗಳಿಂದ ಈ ಹೋರಾಟವನ್ನು ನಡೆಸಿಕೊಂಡು ಬರುತ್ತಿದೆ ಎಂದರು. ಆದಿಮಸಂಜಾತ ಕೊಡವ ತಕ್ಕ್ ಮತ್ತು ಕೊಡವ ಬುಡಕಟ್ಟು ಜನಾಂಗವನ್ನು ಅಳಿವಿನಿಂದ ರಕ್ಷಿಸಲು ಸಾಂವಿಧಾನಿಕವಾಗಿ ರಕ್ಷಿಸಲು ನಮ್ಮ ಸತತ ಸರ್ಕಾರಗಳ ಉದ್ದೇಶಪೂರ್ವಕ ವಿಫಲತೆಯನ್ನು ಸಹಿಸಲಾಗುವುದಿಲ್ಲ. ತತ್ವಜ್ಞಾನಿ ಜಾರ್ಜ್ ಬರ್ನಾರ್ಡ್ ಶಾ ಅವರ ಆತಂಕಕಾರಿ ಉಲ್ಲೇಖವೆಂದರೆ - ಯಾವುದೇ ಸರ್ಕಾರವು ಯಾವುದೇ ನಿರ್ದಿಷ್ಟ ಜನಾಂಗ ಅಥವಾ ಬುಡಕಟ್ಟನ್ನು ಸಂಪೂರ್ಣವಾಗಿ ನಾಶಮಾಡಲು ಬಯಸಿದರೆ, ಅದು ನಿರ್ದಿಷ್ಟ ಜನರ ಭಾಷೆ ಮತ್ತು ಅದು ಮಾತನಾಡುವ ಅವರ ಅಂತರ್ಗತ ಭೂಮಿಯನ್ನು ತೊಡೆದು ಹಾಕುತ್ತದೆ ಎಂದು ಎನ್.ಯು.ನಾಚಪ್ಪ ಪ್ರತಿಪಾದಿಸಿದರು. ಆದಿಮಸಂಜಾತ ಕೊಡವ ಜನಾಂಗವನ್ನು ನಿಯಮಿತ ಭಾಷಾ ಸೂಕ್ಷ್ಮ ಜನಾಂಗ ಎಂದು ಗುರುತಿಸಿ ಕೊಡವರು ಕರ್ನಾಟಕದಲ್ಲಿ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗೂ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯ ಟ್ಯಾಗ್ ನೀಡಬೇಕು. ಕೊಡವ ಬುಡಕಟ್ಟು ಜನಾಂಗದ ಜನಪದೀಯ ಹಬ್ಬಗಳಾದ ಪುತ್ತರಿ, ಕೈಲ್‌ಪೊಳ್ದ್, ಕಾವೇರಿ ಚಂಗ್ರಾಂದಿ, ಎಡಮ್ಯಾರ್, ಕಕ್ಕಡ ಪದ್‌ನೆಟ್‌ಗಳನ್ನು ಇತರ ಮಾನ್ಯತೆ ಪಡೆದ ಹಬ್ಬಗಳಿಗೆ ಸಮಾನವಾಗಿ ರಾಜ್ಯ ರಜಾದಿನಗಳೆಂದು ಘೋಷಿಸಬೇಕು. ವಿಶ್ವಾದ್ಯಂತ 2ನೇ ಮಹಾಯುದ್ಧದಲ್ಲಿ ವಿವಿಧ ಭಾರತೀಯ ರೆಜಿಮೆಂಟ್‌ಗಳು ಹುತಾತ್ಮರಾದುದನ್ನು ಚಿತ್ರಿಸುವ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಯುಕೆ ಯುನೈಟೆಡ್ ಕಿಂಗ್ ಡಮ್ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ಯುದ್ಧ ಸ್ಮಾರಕದಲ್ಲಿ ಕೂರ್ಗ್ ರೆಜಿಮೆಂಟ್ ಮತ್ತು ಕೊಡವರ ಶೌರ್ಯದ ಬಗ್ಗೆ ವಿಶೇಷ ಉಲ್ಲೇಖ ಮಾಡಬೇಕು. ಕೊಡವ ಭಾಷಾ ಸಾಫ್ಟ್ವೇರ್ ಸಿಸ್ಟಮ್ ಅನ್ನು ತಕ್ಷಣದ ಪರಿಣಾಮದೊಂದಿಗೆ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿರುವ ಮನವಿ ಪತ್ರವನ್ನು ಎನ್.ಯು.ನಾಚಪ್ಪ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.ಕಲಿಯಂಡ ಮೀನಾ ಕಾರ್ಯಪ್ಪ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ರೇಖಾ ನಾಚಪ್ಪ, ಪಟ್ಟಮಾಡ ಲಲಿತಾ ಗಣಪತಿ, ಮುದ್ದಿಯಡ ಲೀಲಾವತಿ, ಚೋಳಪಂಡ ಜ್ಯೋತಿ ನಾಣಯ್ಯ, ಕರವಂಡ ಸರಸು, ಕಲಿಯಂಡ ಪ್ರಕಾಶ್ ಮತ್ತಿತರರು ಹಾಜರಿದ್ದರು.