ಸಾರಾಂಶ
ಮೇಳದಲ್ಲಿ ಕೃಷಿ ಸಂಬಂಧಿತ ವಿಷಯ ಹೊರತುಪಡಿಸಿದ ಪ್ರದರ್ಶನಗಳೇ ರಾರಾಜಿಸುತ್ತಿವೆ. ಅಧಿಕೃತವಾಗಿ ಕೃಷಿಯೇತರ ವಸ್ತು ಪ್ರದರ್ಶನ ಸಾಲು ಹುಟ್ಟಿಕೊಂಡಿದೆ. ಜತೆಗೆ ಪ್ಲಾಸ್ಟಿಕ್ ವಸ್ತುಗಳ ಭರಾಟೆ ಜೋರಾಗಿದೆ.
ಧಾರವಾಡ:
ಇತ್ತೀಚಿನ ವರ್ಷಗಳಲ್ಲಿ ಕೃಷಿ ಮೇಳವು ಸಾವಕಾಶವಾಗಿ ವಾಣಿಜ್ಯ ಮೇಳವಾಗಿ ಪರಿವರ್ತನೆಯಾಗುತ್ತಿದೆ ಎನ್ನುವ ಭಾವನೆ ಮೇಳಕ್ಕೆ ಬಂದವರಲ್ಲಿ ಮೂಡುತ್ತಿದೆ.ಮೇಳದಲ್ಲಿ ಕಾಣುವ ಬಹುತೇಕರ ತಲೆ ಮೇಲೊಂದು, ಕೈಯಲ್ಲೊಂದು ಪ್ಲಾಸ್ಟಿಕ್ ಬುಟ್ಟಿ, ಬಿಂದಿಗೆ, ಕಸದ ಮೊರ, ಚಾಪೆಗಳೇ ಕಾಣ ಸಿಗುತ್ತಿವೆ...! ಜನರು ಸಹ ಕೃಷಿ ಸಂಬಂಧಿತ ಪ್ರದರ್ಶನಗಳ ಬರೀ ಕಣ್ಣು ಹಾಯಿಸಿ ಇಂತಹ ಪ್ಲಾಸ್ಟಿಕ್ ವಸ್ತುಗಳ ಖರೀದಿಗೆ ಮುಗಿ ಬೀಳುತ್ತಿರುವ ದೃಶ್ಯ ಮೇಳಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.
ಕಳೆದ ಹಲವು ವರ್ಷಗಳಿಂದೀಚೆ ಮೇಳದಲ್ಲಿ ಕೃಷಿ ಸಂಬಂಧಿತ ವಸ್ತು ಪ್ರದರ್ಶನ, ಕೃಷಿ ಹಾಗೂ ರೈತರ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ, ಅವುಗಳಿಗೆ ಸಮರ್ಪಕ ಪರಿಹಾರ ಎಷ್ಟರ ಮಟ್ಟಿಗೆ ನಡೆಯುತ್ತಿವೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಲಕ್ಷಾಂತರ ಜನರು ಮೇಳಕ್ಕೆ ಆಗಮಿಸುತ್ತಿದ್ದಾರೆಯೇ ಹೊರತು ಈ ಪೈಕಿ ಎಷ್ಟು ರೈತರು, ಜನರು ಮೇಳದ ಸಂಪೂರ್ಣ ಲಾಭ ಪಡೆದಿದ್ದಾರೆ? ಮೇಳದ ಪರಿಣಾಮ ಏನು ಎಂಬ ಅಧ್ಯಯನವೂ ಇಲ್ಲ. ಇಷ್ಟು ವರ್ಷದ ಕೃಷಿ ಮೇಳದ ಪರಿಣಾಮದ ಬಗ್ಗೆ ಅಧ್ಯಯನ ಆಗಿದೆಯೇ ಎಂದು ಕೃಷಿ ಮೇಳದ ಉದ್ಘಾಟನೆ ಸಮಯದಲ್ಲಿ ಸಚಿವ ಸಂತೋಷ ಲಾಡ್ ಕೇಳಿದ ಪ್ರಶ್ನೆ ಯಾವಾಗ ಕೃಷಿ ವಿಜ್ಞಾನಿಗಳ ಕಿವಿಗೆ ರಿಂಗಣಿಸುತ್ತದೆಯೋ ಕಾದು ನೋಡಬೇಕಿದೆ.ಮೇಳದಲ್ಲೇನೇನಿದೆ?
ಇಡೀ ಮೇಳದಲ್ಲಿ ಕೃಷಿ ಸಂಬಂಧಿತ ವಿಷಯ ಹೊರತುಪಡಿಸಿದ ಪ್ರದರ್ಶನಗಳೇ ರಾರಾಜಿಸುತ್ತಿವೆ. ಅಧಿಕೃತವಾಗಿ ಕೃಷಿಯೇತರ ವಸ್ತು ಪ್ರದರ್ಶನ ಸಾಲು ಹುಟ್ಟಿಕೊಂಡಿದೆ. ಜತೆಗೆ ಪ್ಲಾಸ್ಟಿಕ್ ವಸ್ತುಗಳ ಭರಾಟೆ ಜೋರಾಗಿದ್ದು, ಇವುಗಳೊಂದಿಗೆ ತರಹೇವಾರಿ ಕಂಪನಿಗಳ ಐಸ್ ಕ್ರೀಂ, ತಿಂಡಿ-ತಿನಿಸು, ಬಟ್ಟೆ, ಗೋಬಿ ಮಂಚೂರಿ ಮಸಾಲಾ, ಪ್ಲಾಸ್ಟಿಕ್ ಬಂದೂಕುಗಳ ಮಾರಾಟ, ಆಲೂಗಡ್ಡೆ, ಈರುಳ್ಳಿ ಹೆಚ್ಚುವ ಕಟರ್, ಆಟಿಕೆ ವಸ್ತುಗಳು ಜನರನ್ನು ಕೈ ಬೀಸಿ ಕರೆಯುತ್ತಿವೆ.ಕೃಷಿ ಮೇಳಕ್ಕೆ ರಾಜ್ಯದ ಎಲ್ಲೆಡೆಯಿಂದ ಬರುವ ರೈತರು ಹಾಗೂ ಜನರಲ್ಲಿ ಬಹುತೇಕರ ತಲೆ ಮೇಲೆ, ಕೈಯಲ್ಲಿ ಒಂದೊಂದು ಪ್ಲಾಸ್ಟಿಕ್ ಬುಟ್ಟಿ, ಚಾಪೆ, ಹೂವಿನ ಕುಂಡ, ಕೊಡ ಕಾಣಸಿಗುತ್ತಿವೆ. ಮೇಳಕ್ಕೆ ಬರುವ ರೈತರು ಎಷ್ಟರ ಮಟ್ಟಿಗೆ ತಮ್ಮ ಕೃಷಿಯನ್ನು ಬಲಪಡಿಸಬೇಕು? ತಮ್ಮ ಹೊಲದ ಮಣ್ಣು ಗುಣಮಟ್ಟದ್ದಾಗಿಯೇ? ಇನ್ನುಷ್ಟು ಉಪಚಾರ ಮಾಡಬೇಕೆ? ಹವಾಮಾನ ತಕ್ಕಂತೆ ಯಾವ ಬೆಳೆ ಬೆಳೆಯಬೇಕು. ಇಂತಹ ಕೃಷಿ ಸಂಬಂಧಿತ ಮಾರ್ಗದರ್ಶನ ಪಡೆಯುವವರು ಬೆರಳೆಣಿಕೆ ಎಂಬುದು ಸೋಜಿಗದ ಸಂಗತಿ.
ಮುಖ್ಯ ವೇದಿಕೆಯಲ್ಲಿ ಕೃಷಿ ಸಮಸ್ಯೆಗಳು, ಪರಿಹಾರ, ಹವಾಮಾನ ವೈಪರೀತ್ಯ ಅಂತಹ ಗಂಭೀರ ಚಿಂತನೆಗಳಿಲ್ಲ. ಇದ್ದರೂ ಅದನ್ನು ಕೇಳಲು ರೈತರೂ ಇಲ್ಲ. ಲಕ್ಷಗಟ್ಟಲೇ ಜನರು ಮೇಳಕ್ಕೆ ಆಗಮಿಸುತ್ತಿದ್ದಾರೆ ಆದರೆ, ಗೋಷ್ಠಿ, ಉಪನ್ಯಾಸ, ಸಂವಾದದಲ್ಲಿ ಹೇಳಿಕೊಳ್ಳುವ ರೈತರು ಭಾಗಿಯಾಗುತ್ತಿಲ್ಲ ಎಂಬುದು ಖಾಲಿ ಕುರ್ಚಿಗಳನ್ನು ನೋಡಿದರೆ ಗೊತ್ತಾಗುತ್ತಿದೆ. ಧಾರವಾಡ ಕೃಷಿ ವಿವಿ ಈ ಮೇಳಕ್ಕೆ ಕೋಟಿಗಟ್ಟಲೇ ವೆಚ್ಚ ಮಾಡಿದರೂ ಸರ್ಕಾರದಿಂದ ನಯಾಪೈಸೆ ಅನುದಾನ ಪಡೆಯುತ್ತಿಲ್ಲ. ಆದರೆ, ನೂರಾರು ವಾಣಿಜ್ಯ ಮಳಿಗೆಗಳೇ ಮೇಳಕ್ಕೆ ಪ್ರಮುಖ ಆದಾಯ. ಹೀಗಾಗಿ ವರ್ಷದಿಂದ ವರ್ಷಕ್ಕೆ ಕೃಷಿ ಮೇಳ ವಾಣಿಜ್ಯ ಮೇಳವಾಗಿ ಪರಿವರ್ತನೆ ಆಗುತ್ತಿದೆ ಎನ್ನುವುದು ಮಾತ್ರ ಸ್ಪಷ್ಟ.ಕೃಷಿಮೇಳವು ಪರಿಸರ ಸ್ನೇಹಿಯಾಗಿರಬೇಕಿತ್ತೇ ಹೊರತು ಪ್ಲಾಸ್ಟಿಕ್ ಸ್ನೇಹಿ ಅಲ್ಲ. ಈ ಬಾರಿಯ ಕೃಷಿ ಮೇಳದ ಘೋಷವಾಕ್ಯ ಹವಾಮಾನ್ಯ ವೈಪರೀತ್ಯ ನಿಯಂತ್ರಣ ಎಂದಿದ್ದು, ಕೃಷಿ ವಿವಿ ಈ ನಿಟ್ಟಿನಲ್ಲಿ ಏನು ಕ್ರಮಕೈಗೊಂಡಿದೆ. ಬರೀ ಪ್ಲಾಸ್ಟಿಕ್ ವಸ್ತುಗಳ ಮಾರಾಟ, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕಸ ನೋಡಿ ಬೇಸತ್ತು ಈ ಬಾರಿ ಮೇಳಕ್ಕೆ ಆಗಮಿಸಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಕೃಷಿ ವಿವಿ ಈ ವಿಷಯದಲ್ಲಿ ಮುತುವರ್ಜಿಯಿಂದ ವರ್ತಿಸಬೇಕಿತ್ತು. ಸಾಧ್ಯವಾದಷ್ಟು ಪ್ಲಾಸ್ಟಿಕ್ ಮುಕ್ತ, ಸ್ಥಳೀಯ ಆಹಾರ ಪದ್ಥತಿಗೆ ಒತ್ತು ಕೊಡುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕಿತ್ತು ಎನ್ನುತ್ತಾರೆ ಗ್ರಾಮೀಣಾಭಿವೃದ್ಧಿ ತಜ್ಞ ಡಾ. ಪ್ರಕಾಶ ಭಟ್.