ಸಾರಾಂಶ
- ತಾಲ್ಲೂಕು ಸ್ತ್ರೀಶಕ್ತಿ ಭವನದಲ್ಲಿ ಲಿಂಗ ಸಂವೇದನೆ ಕುರಿತ ಅರಿವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಸಮಾಜದ ಪ್ರತಿಯೊಬ್ಬ ಪ್ರಜೆಯೂ ಕೈಜೋಡಿಸಬೇಕು. ಇದನ್ನು ಸಮಾಜದಿಂದ ಸಂಪೂರ್ಣವಾಗಿ ತೊಲಗಿಸಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಹನುಮಂತಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ತಾಲೂಕು ಸ್ತ್ರೀಶಕ್ತಿ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಲಿಂಗ ಸಂವೇದನೆ ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀ ಸಂಕುಲವನ್ನು ಮೊದಲಿನಿಂದಲೂ ಪುರುಷ ತನ್ನ ಹತೋಟಿಯಲ್ಲಿಟ್ಟುಕೊಂಡಿದ್ದಾನೆ. ಹಿಂದಿನಿಂದಲೂ ಹೆಣ್ಣು, ಗಂಡು ಎಂಬ ತಾರತಮ್ಯ ನಡೆಯುತ್ತಲೇ ಇದೆ. ಅದನ್ನು ಸಂಪೂರ್ಣವಾಗಿ ನಮ್ಮ ಸಮಾಜದಿಂದ ತೊಲಗಿಸಬೇಕಿದೆ ಎಂದರು. ಆಗಿನ ಕಾಲಘಟ್ಟದಲ್ಲಿ ಕೆಲವೊಂದು ಪದನಿಮಿತ್ತ ಕ್ಷೇತ್ರ ಪುರುಷರಿಗೆ ಸೀಮಿತ ಎಂಬ ಮನೋಭಾವ ಇತ್ತು. ಆದರೆ, ಸಂವಿಧಾನ ರಚನೆಯಾದ ಮೇಲೆ ನಮ್ಮ ದೇಶ ಅತೀ ಹೆಚ್ಚು ಆಳ್ವಿಕೆ ನಡೆಸಿದ ಇಂದಿರಾ ಗಾಂಧಿ ಪ್ರಧಾನ ಮಂತ್ರಿಗಳಾ ಗಿದ್ದರು. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದಕ್ಕೆ ಉದಾಹರಣೆ ಅಧಿಕಾರಿ ವರ್ಗದಲ್ಲಿ ಮಹಿಳಾ ಪ್ರಧಾನವಾದ ನಮ್ಮ ಜಿಲ್ಲೆ. ಇದು ನಮ್ಮ ಹೆಮ್ಮೆ ಎಂದು ಹೇಳಿದರು.ಸಂವಿಧಾನದ ಆಶಯದಂತೆ ಹೆಣ್ಣು ಮಕ್ಕಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಇದೊಂದು ರೀತಿಯಲ್ಲಿ ಮಹಿಳೆಯರನ್ನು ಸಬಲರನ್ನಾಗಿ ಮಾಡುವ ಪ್ರಯತ್ನ. ಇಬ್ಬರಲ್ಲೂ ಬೇಧವಿಲ್ಲ, ತಾರತಮ್ಯವಿಲ್ಲ ಇಬ್ಬರೂ ಒಂದೇ ಎಂಬುದರ ಬಗ್ಗೆ ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಅರಿವು ಮೂಡಿಸಬೇಕು. ಈ ಕಾರ್ಯ ತಾಯಂದಿರಿಂದಲೇ ಮೊದಲು ಪ್ರಾರಂಭವಾಗಬೇಕು. ನಂತರ ನಮ್ಮ ಮನೆ, ಶಾಲೆ, ಅಂಗನವಾಡಿ ಕೇಂದ್ರಗಳಿಂದ ಪ್ರಾರಂಭವಾದರೆ ಮಾತ್ರ ಈ ತಾರತಮ್ಯ ಸಂಪೂರ್ಣವಾಗಿ ತೊಲಗಿಸಬಹುದು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಡಿ. ಸಂತೋಷ್ ಮಾತನಾಡಿ, ಲಿಂಗ ಸಮಾನತೆ ನಮ್ಮ ಮನೆಗಳಲ್ಲಿ, ಜೊತೆಗೆ ಹೆಣ್ಣು ಮತ್ತು ಗಂಡು ಇಬ್ಬರು ಇರುವ ಅಂಗನವಾಡಿ ಕೇಂದ್ರಗಳಲ್ಲಿ ಇಬ್ಬರಿಗೂ ಸಮಾನ ಅವಕಾಶ ನೀಡಬೇಕು. ಬೆಳೆಯುವ ಮಕ್ಕಳಲ್ಲಿ ನಾವು ಮೊದಲಿನಿಂದ ಈ ಬಗ್ಗೆ ಕಲಿಸಿದಲ್ಲಿ ಅದನ್ನು ಗ್ರಹಿಸುತ್ತಾರೆ. ಸಮಾಜದಲ್ಲಿ ಗಂಡು, ಹೆಣ್ಣು ಎಂಬ ಬೇಧಕ್ಕೆ ಅವಕಾಶವಿಲ್ಲ. ಎಲ್ಲರೂ ಸಮಾನರು ಎಂಬ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ರಂಗನಾಥ್ ಮಾತನಾಡಿ, ಲಿಂಗ ಸಂವೇದನೆ ಕುರಿತು ಅರಿವು ಮೂಡಿಸುವ ಮುಖಾಂತರ ಮಹಿಳೆಯರ ರಕ್ಷಣೆ, ಮಹಿಳೆಯರ ಸಮಾನತೆ ಇವುಗಳ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸಬೇಕು. ಸಂವಿಧಾನದಲ್ಲಿ ಲಿಂಗ ತಾರತಮ್ಯಕ್ಕೆ, ಅಸಮಾನತೆಗೆ ಅವಕಾಶವಿಲ್ಲ, ಹೀಗಿದ್ದರೂ ಹಿಂದಿನಿಂದಲೂ ಮಹಿಳೆಯರ ಶೋಷಣೆ ಹಾಗೂ ತಾರತಮ್ಯ ಮಾಡುವ ಮನಸ್ಥಿತಿ ಬೆಳೆದು ಬಂದಿದೆ. ಯಾರಿಂದ ತಾರತಮ್ಯವಾಗುತ್ತಿದೆಯೋ ಅಂಥವರಲ್ಲಿ ಅರಿವು ಮೂಡಿಸಬೇಕು. ಮನೆಗಳಲ್ಲಿ ಮನೆ ಕೆಲಸದಿಂದ ದೂರವಿಟ್ಟು ಗಂಡು ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಒದಗಿಸಲಾಗುತ್ತದೆ. ಅದೇ ಹೆಣ್ಣು ಮಕ್ಕಳನ್ನು ಮನೆ ಕೆಲಸಕ್ಕೆ ಹಚ್ಚಿ ಅವಕಾಶಗಳಿಂದ ವಂಚಿತರನ್ನಾಗಿಸಲಾಗುತ್ತಿದೆ. ಇದಕ್ಕೆ ಅಂಕುಶ ಹಾಕಿ ಮನೆಗಳಲ್ಲಿ ಇಬ್ಬರಿಗೂ ಸಮಾನ ಅವಕಾಶ ಕಲ್ಪಿಸಿದರೆ ಲಿಂಗ ಅಸಮಾನತೆ ತೊಲಗಿಸಬಹುದು ಎಂದರು. ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೂಪಾ ಕುಮಾರಿ, ಅಂಗನವಾಡಿ ಶಿಕ್ಷಕರು ಮತ್ತು ಕಾರ್ಯಕರ್ತೆಯರು ಭಾಗವಹಿಸಿದ್ದರು.4 ಕೆಸಿಕೆಎಂ 4ಚಿಕ್ಕಮಗಳೂರಿನ ತಾಲೂಕು ಸ್ತ್ರೀ ಶಕ್ತಿ ಭವನದಲ್ಲಿ ಗುರುವಾರ ಆಯೋಜಿಸಿದ್ದ ಲಿಂಗ ಸಂವೇದನೆ ಕುರಿತು ಅರಿವು ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಉದ್ಘಾಟಿಸಿದರು.