ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕಾನೂನು ಇರುವುದು ಯಾರನ್ನೂ ಭಯಪಡಿಸಲು ಅಲ್ಲ. ಬದಲಿಗೆ ನೊಂದವರಿಗೆ ನ್ಯಾಯ ಕೊಡಿಸುವ ಮೂಲ ಉದ್ದೇಶ ಹೊಂದಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಹೇಳಿದರು.ನಗರದ ರೋಟರಿ ಬಾಲಭವನದಲ್ಲಿ ಶನಿವಾರ ವಾಲ್ಮೀಕಿ ಪ್ರತಿಷ್ಠಾನ, ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಸಮಿತಿಗಳ ಆಶ್ರಯದಲ್ಲಿ 3ನೇ ವರ್ಷದ ಶ್ರೀ ವಾಲ್ಮೀಕಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಜನಸಾಮಾನ್ಯರಿಗೆ ಕಾನೂನು ಸೇವೆಗಳ ಕುರಿತ ಮಾಹಿತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅನ್ಯಾಯವಾದಾಗ ನನಗೆ ನ್ಯಾಯ ಸಿಗುತ್ತದೆಯೋ ಇಲ್ಲವೋ ಎನ್ನುವ ಭಯಬಿಟ್ಟು, ಮೊದಲು ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿದರೆ ಉಚಿತ ಕಾನೂನು ನೆರವು ದೊರೆಯಲಿದೆ. ಹಾಗಾಗಿ, ಕಾನೂನು ಈ ದೇಶದ ಜನರ ನೆರವಿಗೆ ಇದೆಯೇ ಹೊರತು, ಭಯಪಡಿಸಲು ಅಲ್ಲ ಎಂದು ಹೇಳಿದರು.ಪ್ರತಿಯೊಬ್ಬರೂ ಕಾನೂನಿನ ತಿಳಿವಳಿಕೆ ಹೊಂದಿದಾಗ ಮಾತ್ರ ಅನ್ಯಾಯ ಪ್ರಶ್ನಿಸುವ ಗುಣ ಬರುತ್ತದೆ. ಆಗ ಸಮಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಭಾರತದ ಸಂವಿಧಾನ ರಚನೆಗೆ ರಾಮಾಯಣ, ಮಹಾಭಾರತದಂಥ ಮಹಾಕಾವ್ಯಗಳು ಮೂಲ ಪ್ರೇರಣೆಯಾಗಿವೆ. ಈ ಮಹಾಕಾವ್ಯಗಳಲ್ಲಿ ಬರುವ ನಮ್ಮ ಕೌಟುಂಬಿಕ ವ್ಯವಸ್ಥೆ, ನಮ್ಮ ಸಂಸ್ಕೃತಿ, ಆಚಾರ, ವಿಚಾರ, ಸಾಮಾಜಿಕ ಮೌಲ್ಯಗಳನ್ನು ನಮ್ಮ ಸಂವಿಧಾನ ಒಳಗೊಂಡಿದೆ. ಹಾಗಾಗಿ, ರಾಮಾಯಣವನ್ನು ಭಾರತೀಯ ಸಂಸ್ಕೃತಿಯ ಮೊದಲ ಸಂವಿಧಾನ ಎಂದರೆ ತಪ್ಪಾಗಲಾರದು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಮಾತನಾಡಿ, ಮನುಷ್ಯನಿಗೆ ಜೀವಿಸಲು ಹೇಗೆ ಆಹಾರ ಅಗತ್ಯವೋ ಸಮಾಜದಲ್ಲಿ ಬದುಕಲು ಕಾನೂನು ತಿಳಿವಳಿಕೆ ಕೂಡ ಅಷ್ಟೆ ಮುಖ್ಯ. ದೌರ್ಜನ್ಯ, ಅನ್ಯಾಯವಾದಾಗ ಪ್ರಶ್ನಿಸುವ ಗುಣವನ್ನು ಸಂವಿಧಾನ ನಮಗೆ ನೀಡಿದೆ. ಈ ರೀತಿಯ ಸಂವಿಧಾನ ಜಗತ್ತಿನ ಯಾವ ದೇಶದಲ್ಲಿಯೂ ಇಲ್ಲ ಎಂದರು.ಈ ರೀತಿಯ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾನೂನು ತಿಳಿವಳಿಕೆ ಪಡೆದು ಸಮಾಜದಲ್ಲಿ ತಮ್ಮ ಮೇಲೆ ನಡೆಯುವ ದಬ್ಬಾಳಿಕೆ, ದೌರ್ಜನ್ಯವನ್ನು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ಮಕ್ಕಳಿಗಾಗಿ ಮಕ್ಕಳ ಹಕ್ಕುಗಳಿವೆ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ನಿಷೇಧ ಮೊದಲಾದ ಕಾನೂನುಗಳ ಅರಿವು ಪಡೆಯಬೇಕು. ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ಕಾನೂನು ಕುರಿತು ಹೆಚ್ಚು ತಿಳಿವಳಿಕೆ ಹೊಂದಬೇಕೆಂದು ತಿಳಿಸಿದರು.
ಸಮಿತಿ ಮುಖಂಡ ಕರಿಯಪ್ಪ ನಾಯಕ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಬಿ.ಎಂ. ಹನುಮಂತಪ್ಪ, ಅಣ್ಣಾಪುರದ ಹೇಮಣ್ಣ, ಹಿರಿಯ ವಕೀಲ ಆಂಜನೇಯ ಗುರೂಜಿ, ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಸಮಿತಿ ಸದಸ್ಯೆ ನಳಿನಮ್ಮ, ರಾಮಚಂದ್ರಪ್ಪ, ಅಂತರ ರಾಷ್ಟ್ರೀಯ ಈಜುಪಟು ರೇವತಿ ನಾಯಕ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಸೀತಮ್ಮ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.