ಅಸಮಾನತೆ ಹೋಗಲಾಡಿಸಿದ ಸಂವಿಧಾನ

| Published : Dec 01 2024, 01:33 AM IST

ಸಾರಾಂಶ

ಸರ್ಕಾರ ಸಂವಿಧಾನದ ಮೂಲಕ ಕಾಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ಅಧಿಕಾರದ ವ್ಯಾಖ್ಯಾನ ಮಾಡುತ್ತದೆ. ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳನ್ನ ನಿರ್ದಿಷ್ಟಪಡಿಸುತ್ತದೆ. ಎಲ್ಲ ಕಾನೂನಿಗಿಂತ ಸಂವಿಧಾನವೇ ಮಿಗಿಲು. ಹೀಗಾಗಿ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕಾನೂನು ರೂಪಿಸಲು ಸಾಧ್ಯವಿಲ್ಲ

ಕನ್ನಡಪ್ರಭ ವಾರ್ತೆ ಕೋಲಾರಸಂವಿಧಾನ ಎಲ್ಲ ವರ್ಗದ ಜನರಿಗೆ ಸಮಾನತೆಯನ್ನು ಒದಗಿಸುವ ಜತೆಗೆ ತಾರತಮ್ಯ ತೊಡೆದುಹಾಕಲು ನೂರಾರು ಕಾನೂನುಗಳನ್ನು ರೂಪಿಸಿರುವ ಬೃಹತ್ ಸಂವಿಧಾನವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ ಎಸ್.ಹೊಸಮನಿ ತಿಳಿಸಿದರು.ನಗರದ ಬಸವಶ್ರೀ ಕಾನೂನು ಮಹಾವಿದ್ಯಾಲಯದ ಕಾಲೇಜಿನ ಆವರಣದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಸಂವಿಧಾನದವೇ ಶ್ರೇಷ್ಠ

ಸರ್ಕಾರ ಸಂವಿಧಾನದ ಮೂಲಕ ಕಾಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ಅಧಿಕಾರದ ವ್ಯಾಖ್ಯಾನ ಮಾಡುತ್ತದೆ. ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳನ್ನ ನಿರ್ದಿಷ್ಟಪಡಿಸುತ್ತದೆ. ಎಲ್ಲ ಕಾನೂನಿಗಿಂತ ಸಂವಿಧಾನವೇ ಮಿಗಿಲು. ಹೀಗಾಗಿ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕಾನೂನು ರೂಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಭಾರತವನ್ನು ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಗಣತಂತ್ರ ದೇಶ ಎಂದು ಸಂವಿಧಾನದಲ್ಲಿ ಘೋಷಿಸಲಾಗಿದೆ. ಇಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ ಒದಗಿಸಲಾಗಿದೆ. ಭಾರತದ ಸಂವಿಧಾನವನ್ನು ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ ಎಂದರು.ಸಂವಿಧಾನ ಶಿಲ್ಪಿ ಅಂಬೇಡ್ಕರ್‌

ಸಂವಿಧಾನ ರಚನಾ ಸಭೆಯಲ್ಲಿ ಹಲವಾರು ಸದಸ್ಯರು ಇದ್ದರಾದರೂ ಇದರ ಪ್ರಮುಖ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರಾಗಿದ್ದಾರೆ. ಹೀಗಾಗಿ, ಅವರನ್ನು ಸಂವಿಧಾನ ಕರ್ತೃ ಎಂದು ಹೇಳಲಾಗುತ್ತದೆ. ಜನಸಾಮಾನ್ಯರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು ಸಂವಿಧಾನ ದಿನವನ್ನು ಬಳಸಿಕೊಳ್ಳಲಾಗುತ್ತಿದೆ. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಡಾ. ಬಿ.ಆರ್ ಅಂಬೇಡ್ಕರ್ ರವರು ೬೯ ದೇಶ ಸುತ್ತಿ ಅಲ್ಲಿನ ಕಾನೂನಿನ ಸಮಗ್ರ ಅಧ್ಯಯನ ಮಾಡಿ, ಅನ್ಯ ದೇಶಗಳು ಮೆಚ್ಚಿಕೊಳ್ಳುವಂತ ಅನನ್ಯವಾದ ಭಾರತೀಯ ಸಂವಿಧಾನದ ಕೊಡುಗೆ ನೀಡಿದ್ದಾರೆ ಎಂದರು.

ಎಲ್ಲ ಧರ್ಮ ಗ್ರಂಥಗಳು ಆಯಾ ಧರ್ಮಿಯರು ಹೇಗೆ ಬಾಳಬೇಕು ಎಂಬುದನ್ನು ಹೇಳುತ್ತವೆ. ಆದರೆ ಎಲ್ಲ ಧರ್ಮಿಯರು ಹೇಗೆ ಬಾಳಬೇಕು ಎಂಬುದನ್ನು ನಮ್ಮ ಸಂವಿಧಾನ ಮಾತ್ರ ಹೇಳುತ್ತದೆ. ಭಾರತದ ಸಂವಿಧಾನದಲ್ಲಿ ೪೪೮ ವಿಧಿಗಳು, ೨೫ ಭಾಗಗಳು, ೧೨ ಶೆಡ್ಯೂಲ್, ೫ ಅನುಬಂಧಗಳು ಹಾಗೂ ೯೮ ತಿದ್ದುಪಡಿಗಳಿವೆ. ಸಂವಿಧಾನ ರಚನಾ ಸಮಿತಿಯಲ್ಲಿ ೨೮೪ ಮಂದಿ ಸದಸ್ಯರಿದ್ದರು. ಅವರಲ್ಲಿ ೧೫ ಮಂದಿ ಮಹಿಳಾ ಸದಸ್ಯರಿದ್ದರು. ಅದರ ಕರಡನ್ನು ೧೯೪೯ರ ನವೆಂಬರ್ ತಿಂಗಳಿನಲ್ಲಿ ಸಲ್ಲಿಸಲಾಯಿತು. ಸಲ್ಲಿಸಿದ ಬಳಿಕವೂ ಅದನ್ನು ಪೂರ್ಣಗೊಳಿಸಲು ಮೂರು ವರ್ಷಬೇಕಾಯಿತು ಎಂದರು..

ಕರ್ತವ್ಯಗಳನ್ನೂ ಪಾಲಿಸಬೇಕು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಸವಶ್ರೀ ಕಾನೂನು ಮಹಾವಿದ್ಯಾಲಯದ ಸಂಸ್ಥಾಪಕ ಡಾ.ತೊಂಟೆದಾರೆ ಒಡೆಯರ್ ಮಾತನಾಡಿ, ಸಂವಿಧಾನ ನಮಗೆ ಬದುಕಲು ಹಕ್ಕು ನೀಡಿದೆ, ಜೀವಿಸುವ ಹಕ್ಕಿನ ಜತೆಗೆ ಶಿಕ್ಷಣದ ಹಕ್ಕು ನೀಡಿದೆ ಎಂದ ಅವರು, ನಾವು ಹಕ್ಕುಗಳಿಗೆ ಮಾತ್ರ ಸೀಮಿತವಾಗದೇ ಸಂವಿಧಾನ ಸೂಚಿಸಿರುವ ಕರ್ತವ್ಯಗಳ ನಿರ್ವಹಣೆಯಲ್ಲೂ ಜವಾಬ್ದಾರಿ ಹೊರಬೇಕು ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ನಾಗರಾಜ್, ಅರೆಕಾಳಿಕ ಕಾನೂನು ಸ್ವಯಂಸೇವಕರಾದ ಹೂವಳ್ಳಿ ನಾಗರಾಜ್, ಶ್ಯಾಮಲ ಇದ್ದರು.