ಸಾರಾಂಶ
ಸಿರುಗಪ್ಪ: ಸಿಂಧೂ ಸರಸ್ವತಿ ಸಂಸ್ಕೃತಿಯನ್ನು ಕಟ್ಟಿದ ಅನೇಕ ಬುಡಕಟ್ಟು ಜನರಲ್ಲಿ ಕನ್ನಡಿಗರೂ ಇದ್ದರು. ಜರ್ಮನ್‌ನ ಇತಿಹಾಸ ತಜ್ಞ ಈ ಮಾತನ್ನು ಪ್ರಸ್ತಾಪಿಸಿದ್ದು, ಖ್ಯಾತ ಸಂಶೋಧಕ ಎಸ್.ಆರ್.ರಾವ್ ಸಿಂಧೂ ಸರಸ್ವತಿ ಸಂಸ್ಕೃತಿಯಲ್ಲಿ ಕನ್ನಡಿಗರ ಅಸ್ವಿತ್ವದ ಬಗ್ಗೆ ವೈಜ್ಞಾನಿಕವಾಗಿ ನಿರೂಪಿಸಿದ್ದಾರೆ ಎಂದು ಹಿರಿಯ ಚಿಂತಕ, ಲೇಖಕ ಡಾ.ನಾ.ಸೋಮೇಶ್ವರ ತಿಳಿಸಿದರು.
ಸಿರುಗುಪ್ಪದಲ್ಲಿ ಶನಿವಾರ ಜರುಗಿದ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಜರ್ಮನ್ ಇತಿಹಾಸತಜ್ಞ ಫಾ.ಹೆರಾಸ್ ಸಿಂಧೂ ಸರಸ್ವತಿ ಸಂಸ್ಕೃತಿಯಲ್ಲಿ ಕನ್ನಡದ ಬುಡಕಟ್ಟು ಸಮುದಾಯ ಇತ್ತು ಎಂದು ಹೇಳಿದ್ದು, ಈ ನೆಲೆಯಲ್ಲಾದ ಸಂಶೋಧನೆಗಳಿಂದ ಕನ್ನಡದ ಅಸ್ವಿತ್ವ ಅತ್ಯಂತ ಪುರಾತನದ್ದು ಎಂದು ತಿಳಿದು ಬರುತ್ತದೆ.
ಸಿಂಧೂ ಸರಸ್ವತಿ ಸಂಸ್ಕೃತಿಯಲ್ಲಿ ದೊರೆತ ಮುದ್ರೆಗಳಿಂದ ಕನ್ನಡಿಗರ ಮೂಲ ಬುಡಕಟ್ಟಾದ ಕಣ್ಣರ್ ಕುರಿತು ಖಚಿತ ದಾಖಲೆ ಸಿಗುತ್ತದೆ. ಇದನ್ನು ಪರಿಶೀಲಿಸಿ, ವಿಶ್ಲೇಷಿಸಿರುವ ಮಂಜೇಶ್ವರ ಗೋವಿಂದ ಪೈ ಸಿಂಧೂ ಸಂಸ್ಕೃತಿ ಕಟ್ಟಿದವರ ಪೈಕಿ ಕನ್ನಡಿಗರ ಬುಡಕಟ್ಟು ಸಮುದಾಯ ಇತ್ತು ಎಂಬುದನ್ನು ಖಚಿತಪಡಿಸಿದ್ದಾರೆ ಎಂದರು.ಸಿಂಧೂ ಸರಸ್ವತಿ ಸಂಸ್ಕೃತಿಯ ಉತ್ಖನನ ನಡೆಸಿದಾಗ ಅನೇಕ ಚಿನ್ನದ ಆಭರಣಗಳು ದೊರೆತಿವೆ. ಅವುಗಳನ್ನು ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿ, ರಾಸಾಯನಿಕ ವಿಶ್ಲೇಷಣೆ ಮಾಡಿದಾಗ ಅದರಲ್ಲಿ ಶೇ.11ರಷ್ಟು ಬೆಳ್ಳಿ ಬೆರೆತಿರುವ ವಿಚಾರ ತಿಳಿದು ಬರುತ್ತದೆ. ಜಗತ್ತಿನ ಯಾವುದೇ ಗಣಿಯಲ್ಲಿ ದೊರೆಯುವ ಚಿನ್ನದಲ್ಲಿ ಶೇ.11ರಷ್ಟು ಬೆಳ್ಳಿ ಬೆರೆತಿಲ್ಲ. ಅದು ಬೆರೆತಿರುವುದು ಕೋಲಾರದ ಹಟ್ಟಿಯ ಚಿನ್ನದ ಗಣಿಗಳಲ್ಲಿ ಮಾತ್ರ. ಹಾಗಾಗಿ ಸಿಂಧೂಸರಸ್ವತಿ ಸಂಸ್ಕೃತಿಯಲ್ಲಿ ದೊರೆತಿರುವ ಎಲ್ಲ ಚಿನ್ನದ ಆಭರಣಗಳು ನಮ್ಮ ಕರ್ನಾಟಕದ ಕೋಲಾರದ ಚಿನ್ನದ ಗಣಿಯಿಂದ ಹೋಗಿದ್ದು ಎಂದು ಖ್ಯಾತ ಸಂಶೋಧಕ ಎಸ್.ಆರ್.ರಾವ್ ಪುರಾವೆ ಸಮೇತ ನಿರೂಪಿಸಿದ್ದಾರೆ. ಇದರಿಂದ ಕನ್ನಡಿಗರಿಗೆ ಕನಿಷ್ಠ 5 ಸಾವಿರ ವರ್ಷಗಳ ಇತಿಹಾಸವಿದೆ ಎಂಬುದು ಗೊತ್ತಾಗುತ್ತದೆ ಎಂದು ವಿಶ್ಲೇಷಿಸಿದರು.
ಕರ್ನಾಟಕದಲ್ಲಿ ಭುವನೇಶ್ವರಿಯ ದೇಗುಲವಿಲ್ಲ:ಭುವನೇಶ್ವರಿ ಯಾರು ಎಂದು ತಿಳಿದುಕೊಳ್ಳಲು ದೇವಿ ಮಹಾತ್ಮೆಯನ್ನು ಓದಬೇಕಾಗುತ್ತದೆ. ದೇವಿ ಮಹಾತ್ಮೆಯಲ್ಲಿ 10 ದೊಡ್ಡ ವಿದ್ಯೆಗಳ ಪ್ರಸ್ತಾಪವಾಗುತ್ತದೆ. ಈ ಪೈಕಿ ನಾಲ್ಕನೇ ವಿದ್ಯೆಯೇ ಭುವನೇಶ್ವರಿಯಾಗಿದ್ದಾಳೆ. ಮೂರು ಲೋಕವನ್ನು ಆಳುವ ಶಕ್ತಿ ಹಾಗೂ ಸಾಮರ್ಥ್ಯ ಇರುವ ದೇವಿಯೇ ಭುವನೇಶ್ವರಿ. ವಿಪರ್ಯಾಸ ಸಂಗತಿ ಎಂದರೆ ಕರ್ನಾಟಕದ ಶಿರಸಿ- ಸಿದ್ದಾಪುರ ರಸ್ತೆಯಲ್ಲಿ ಬರುವ ಭುವನಗಿರಿ ಎಂಬ ಬೆಟ್ಟದಲ್ಲಿರುವ ಭುವನೇಶ್ವರಿಯ ದೇವಾಲಯ ಬಿಟ್ಟರೆ ಉಳಿದಂತೆ ಎಲ್ಲೂ ಭುವನೇಶ್ವರಿಯ ದೇವಾಲಯಗಳು ಕಂಡು ಬರುವುದಿಲ್ಲ. ನೆರೆಯ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಅಸ್ಸಾಂನಲ್ಲಿ ಅನೇಕ ಕಡೆಗಳಲ್ಲಿ ಭುವನೇಶ್ವರಿಯ ಆಲಯಗಳನ್ನು ನಿರ್ಮಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಈ ಬಗ್ಗೆ ಉದಾಸೀನ ತೋರಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಹಿತ್ಯ ಸಮ್ಮೇಳನಗಳು ಬರೀ ಜಾತ್ರೆಗಳಾಗಬಾರದು. ಸಾಹಿತ್ಯದ ಬಗ್ಗೆ ಚರ್ಚೆಗಳಾಗಬೇಕು. ಐದು ಪುಸ್ತಕಗಳಾದರೂ ಲೋಕಾರ್ಪಣೆಗೊಳ್ಳಬೇಕು. ಉತ್ತಮ ಲೇಖಕರು ಹಾಗೂ ಸಾಧಕರನ್ನು ಸನ್ಮಾನಿಸುವ ಕೆಲಸಗಳಾಗಬೇಕು. ಅತ್ಯುತ್ತಮ ಗ್ರಂಥಗಳ ಪರಿಚಯಗಳಾಗಬೇಕು. ಮನೆಮನೆಯಲ್ಲೂ ಕನ್ನಡದ ಕೈಂಕರ್ಯಗಳು ನಡೆಯಬೇಕು ಎಂದು ಹೇಳಿದರು.