ಕರ್ನಾಟಕದಲ್ಲೇ ಕುಸಿಯುತ್ತಿರುವ ಕನ್ನಡ: ಡಾ. ಪುರುಷೋತ್ತಮ ಬಿಳಿಮಲೆ ಕಳವಳ

| Published : Nov 25 2024, 01:03 AM IST

ಕರ್ನಾಟಕದಲ್ಲೇ ಕುಸಿಯುತ್ತಿರುವ ಕನ್ನಡ: ಡಾ. ಪುರುಷೋತ್ತಮ ಬಿಳಿಮಲೆ ಕಳವಳ
Share this Article
  • FB
  • TW
  • Linkdin
  • Email

ಸಾರಾಂಶ

ಕರುನಾಡಿಗೆ ಬರುವ ವಲಸಿಗರಿಗೂ ಕನ್ನಡ ಕಲಿಸಿ ಕನ್ನಡ ಉಳಿಸುವ ಕೆಲಸ ಎಲ್ಲರಿಂದಲೂ ಆಗಬೇಕಿದೆ.

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವ ಸಮಾರಂಭ

ಕನ್ನಡಪ್ರಭ ವಾರ್ತೆ ಕೊಪ್ಪಳ

ವರ್ತಮಾನದಲ್ಲಿ ಕನ್ನಡ ಭಾಷೆ ಕುಸಿತ ಕಾಣುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಸಾಹಿತಿ ಗವಿಸಿದ್ದ ಎನ್. ಬಳ್ಳಾರಿ ವೇದಿಕೆ, ತಳಮಳ ಪ್ರಕಾಶನದಿಂದ ಜರುಗಿದ ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡವನ್ನು ನಾವೇ ಮಾತನಾಡದಿದ್ದರೆ, ಬಳಕೆ ಮಾಡದಿದ್ದರೆ ಉಳಿಯಲು ಹೇಗೆ ಸಾಧ್ಯ, ಕರುನಾಡಿಗೆ ಬರುವ ವಲಸಿಗರಿಗೂ ಕನ್ನಡ ಕಲಿಸಿ ಕನ್ನಡ ಉಳಿಸುವ ಕೆಲಸ ಎಲ್ಲರಿಂದಲೂ ಆಗಬೇಕಿದೆ. ಸರ್ಕಾರವೇ ಆಂಗ್ಲ ಶಾಲೆ ಆರಂಭ ಮಾಡುತ್ತಿದೆ. ಭಾರತೀಯ ಶಿಕ್ಷಣ ಕುಸಿಯುತ್ತಿದೆ. ಕನ್ನಡ ಭಾಷೆ ಕರ್ನಾಟಕದಲ್ಲೇ ಕುಸಿಯುತ್ತಿದೆ. ನಾವು ಕನ್ನಡ ಕಟ್ಟದಿದ್ದರೆ ಕನ್ನಡ ಮುಂದೊಂದು ದಿನ ಮಾತನಾಡಲು ಮಾತ್ರ ಉಳಿಯುತ್ತೆ. ಕನ್ನಡ ಉಳಿಸುವ ಮಾರ್ಗವೇನು ಎನ್ನುವುದು ನಾವು ತಿಳಿಯಬೇಕು ಎಂದರು.

ಈ ನೆಲದವರು ಹೋರಾಟ ಮಾಡಿದ ಬೆವರು ಇನ್ನೂ ಆರಿಲ್ಲ. ಈ ಹೊತ್ತಿನಲ್ಲಿ ಪ್ರತ್ಯೇಕತೆ ಕೂಗು ಕಾಣುತ್ತಿದೆ. ಈಗಾಗಲೇ ಕರ್ನಾಟಕ ವಿವಿಧ ಭಾಷೆಗಳ ಹೆಸರಲ್ಲಿ ವಿಭಾಗ ಆಗಿದೆ. ಈ ದೇಶಕ್ಕೆ ಸ್ವಾತಂತ್ರ್ಯ ದೊರೆತ ಮೇಲೆ ದೇಶ ಕಟ್ಟಿದ, ದೇಶಕ್ಕಾಗಿ ಹೋರಾಡಿದ ಗಾಂಧಿಯ ತತ್ವ ಅನುಕರಣೆ ಮಾಡಿದ ಜನರನ್ನು ನಾನು ನೋಡಿ ಹತ್ತಿರದಿಂದ ಬೆಳೆದವನು. ಈ ನೆಲದಲ್ಲಿ ೭೦-೮೦ರ ಸಂಕೇತವಾಗಿ ಜನಪರ ಚಳವಳಿಯಲ್ಲಿ ಬೆಳೆದರು. ಆಗ ಗವಿಸಿದ್ದ ಬಳ್ಳಾರಿ ಈ ಜನಪರ ಚಳುವಳಿಯಿಂದ ಸಾಹಿತ್ಯ ಕಟ್ಟಿ ಬೆಳೆಸಿದವರು. ಅವರಲ್ಲಿ ಕಾವ್ಯದ ಒಳಗುಟ್ಟು ಗೊತ್ತಿತ್ತು. ಕಾವ್ಯದ ಸೂಕ್ಷ್ಮ ಗೊತ್ತಿದ್ದವು. ಹಾಗಾಗಿ ಅವರಲ್ಲಿ ಗಟ್ಟಿ ಸಾಹಿತ್ಯ ಹೊರ ಹೊಮ್ಮಿತು ಎಂದರು.

ಹುಯಿಲಗೋಳ ನಾರಾಯಣ ರಾವ್ ಬರೆದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹಾಡಿಗೆ ಈಗ ನೂರು ವರ್ಷ. ಗಾಂಧೀಜಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾದ ನೆಲವಿದು. ಈ ಹಾಡಿಗೂ, ಗಾಂಧಿಗೂ ಸಂಪರ್ಕ ಮಾಡಿ ಸರ್ಕಾರ ಸಂಭ್ರಮ ಆಚರಿಸಲಿ ಎಂದು ಮನವಿ ಮಾಡಿದ್ದೇನೆ ಎಂದರು.

ಕೊಪ್ಪಳದಲ್ಲಿ ೧೯೮೦-೯೦ರ ಕಾಲಘಟ್ಟದಲ್ಲಿ ಜನರ ಚಳವಳಿ ಆರಂಭವಾದವು. ಆ ಮೂಲಕ ಸಾಹಿತ್ಯದ ಮಾಂತ್ರಿಕರಾದ ಕೊಪ್ಪಳದ ಕವಿ ಗವಿಸಿದ್ದ ಬಳ್ಳಾರಿ ಈ ನೆಲದ ಪರಿಸರ ಸಾಹಿತ್ಯವನ್ನು ದೂರದ ಜನರಿಗೆ ತಿಳಿಸಿ ಕೊಟ್ಟವರು. ಅವರನ್ನ ಈ ನೆಲದ ಕವಿ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದರು.

ಕೊಪ್ಪಳ ವಿವಿ ಉಪ ಕುಲಪತಿ ಡಾ. ಬಿ.ಕೆ. ರವಿ ಮಾತನಾಡಿ, ಗವಿಸಿದ್ದ ಬಳ್ಳಾರಿ ಕವಿ, ಸಾಹಿತಿ, ಓರ್ವ ಪತ್ರಕರ್ತರು ಹೌದು. ಅವರು ಈ ನೆಲಕ್ಕೆ ಕೊಟ್ಟ ಸಾಹಿತ್ಯದ ಕೊಡುಗೆ ಅಪಾರ. ಕೊಪ್ಪಳ ಜಿಲ್ಲೆಯಾಗಬೇಕು ಎಂದು ಚಳವಳಿ ರೂಪಿಸಿದ ಕೀರ್ತಿ ಬಳ್ಳಾರಿ ಅವರಿಗೆ ಸಲ್ಲುತ್ತದೆ ಎಂದರು.

ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ ಮಾತನಾಡಿದರು.

ಸಾಹಿತ್ಯೋತ್ಸವದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಎಚ್.ಎಸ್. ಪಾಟೀಲ್, ಬಸವರಾಜ ಬಳ್ಳೊಳ್ಳಿ, ರವಿ ಹಂಪಿ, ಚನ್ನಪ್ಪ ಅಂಗಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಇತರರಿದ್ದರು.

ಈ ವೇಳೆ ಆರು ಸಾಧಕರಿಗೆ ಸನ್ಮಾನ ನೆರವೇರಿತು. ಚನ್ನಪ್ಪ ಅಂಗಡಿ ಅವರ ಇನ್ನು ಕೊಟ್ಟೆನಾದೊಡೆ ಹಾಗೂ ನಾಗೇಶ ನಾಯಕ್ ಅವರ ಮನುಷ್ಯರಿಲ್ಲದ ನೆಲ ಎಂಬ ಕೃತಿಗಳು ಲೋಕಾರ್ಪಣೆಗೊಂಡವು.

ಆರ್.ಎಸ್.ಎಸ್ ಹೆಸರು ಪ್ರಸ್ತಾಪ, ವಿರೋಧ:

ಪುರುಷೋತ್ತಮ ಬಿಳಿಮಲೆ ತಮ್ಮ ಮಾತಿನಲ್ಲಿ ಆರ್‌ಎಸ್‌ಎಸ್ ಬಗ್ಗೆ ‌ಪ್ರಸ್ತಾಪಿಸಿದರು. ಸಭಿಕರ ಮಧ್ಯೆ ಕುಳಿತಿದ್ದ ಮೂವರು ಎದ್ದು ನಿಂತು ಇದು ಸಾಹಿತ್ಯ ಕಾರ್ಯಕ್ರಮ, ಸಾಹಿತ್ಯದ ಬಗ್ಗೆ ಮಾತಾಡಿ ಆರ್ ಎಸ್ ಎಸ್ ಬಗ್ಗೆ ಏಕೆ ಮಾತನಾಡುತ್ತಿರಿ ಎಂದು ವಿರೋಧ ವ್ಯಕ್ತಪಡಿಸಿದರು.

ಆಗ ಸಾಹಿತ್ಯೋತ್ಸವದ ಆಯೋಜಕರಾದ ಮಹೇಶ ಬಳ್ಳಾರಿ, ರಾಜೇಶ್ ಬಳ್ಳಾರಿ ವಿರೋಧ ವ್ಯಕ್ತಪಡಿಸಿದವರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಆಗ ಇನ್ನೊಂದು ಭಾಗದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು.

ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಕೂಡ ಅವರೆಲ್ಲರನ್ನು ಸುಮ್ಮನಿರುವಂತೆ ಹೇಳಿದರು.

ಕೊನೆಗೆ ಕುಳಿತಿದ್ದ ಕೆಲ ಸಾಹಿತಿಗಳು ಎದ್ದು ನೀವೇಕೆ ಬಂದಿರಿ, ಇಲ್ಲಿ ಯಾರು ನಿಮ್ಮನ್ನು ಕರೆದದ್ದು ಹೊರಗೆ ನಡಿರಿ ಎಂದಾಗ ಬಿಳಿಮಲೆಯವರಿಗೆ ವಿರೋಧ ವ್ಯಕ್ತಪಡಿಸಿದವರು ಹೊರನಡೆದರು.

1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನವನ್ನು ಮಹಾತ್ಮಾ ಗಾಂಧಿ ಉದ್ಘಾಟಿಸಿದರು. ಅಧಿವೇಶನದ ಶತಮಾನೋತ್ಸವ ಸ್ಮರಣಾರ್ಥ ಕಾರ್ಯಕ್ರಮ ಮಾಡಬೇಕು. ಕೆಲವರನ್ನು ಆರ್ ಎಸ್ ಎಸ್ ನವರು ವೈಭವಿಕರಿಸುತ್ತಾರೆ. ಅವರು ಗಾಂಧಿ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ ಎಂಬ ಮಾತಿಗೆ ಆಕ್ಷೇಪ ವ್ಯಕ್ತವಾಯಿತು.