ಸಾರಾಂಶ
ಕನ್ನಡವನ್ನು ಉಳಿಸಿಕೊಳ್ಳಲು ಪರ್ಯಾಯ ಮಾರ್ಗವಾಗಿ ಕಲೆಗಳಲ್ಲಿ ಕನ್ನಡವನ್ನು ತುಂಬಿ ತುಳುಕಿಸಿ ಬೆಳಸಬೇಕಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ತಿಳಿಸಿದರು.
ಮೈಸೂರು : ಕನ್ನಡವನ್ನು ಉಳಿಸಿಕೊಳ್ಳಲು ಪರ್ಯಾಯ ಮಾರ್ಗವಾಗಿ ಕಲೆಗಳಲ್ಲಿ ಕನ್ನಡವನ್ನು ತುಂಬಿ ತುಳುಕಿಸಿ ಬೆಳಸಬೇಕಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ತಿಳಿಸಿದರು.
ನಗರದ ಜೆಎಲ್ ಬಿ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ತಾಯಂದಿರಿಂದ ಕನ್ನಡ ಶಿಕ್ಷಣಕ್ಕೆ ಆತಂಕ ಎದುರಾಗಿದೆ. ತಮ್ಮ ಮಕ್ಕಳು ಎಲ್ಲೋ ಬಸ್ ಹತ್ತಿ ಇಂಗ್ಲಿಷ್ ಕಲಿತರೆ ಜಗತ್ತಿನಲ್ಲಿ ದೊಡ್ಡವರಾಗುತ್ತಾರೆ ಎಂಬ ನಂಬಿಕೆ. ಅವರ ಆಶಯ ಸಂವಿಧಾನದಿಂದ ಜಾರಿಗೆ ಬರುತ್ತದೆ. ಕನ್ನಡದ ಉಳಿವಿಗೆ ಪರ್ಯಾಯ ಮಾರ್ಗ ಹುಡುಕಬೇಕಿದೆ ಎಂದರು.
ಕರ್ನಾಟಕದಲ್ಲಿ ಕನ್ನಡೇತರರು ಹೆಚ್ಚಿದ್ದಾರೆ. ಅವರೆಲ್ಲರೂ ಕನ್ನಡವನ್ನು ಹಾಡಬೇಕು, ಆರಾಧಿಸಬೇಕು ಮತ್ತು ಕುಣಿಯುವಂತಾಗಬೇಕು. ಅದಕ್ಕೆ ಕಲೆಗಳಲ್ಲಿ ಕನ್ನಡವನ್ನು ತುಂಬಬೇಕು. ಇದು ಎಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು.
ಕರ್ನಾಟಕ ನಾಮಕರಣಗೊಂಡ ಕವಿವಾಣಿಯು ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂದಿತು. ಅದನ್ನು ಈಗ ಉಸಿರಾಯಿತು ಕರ್ನಾಟಕ ಬದುಕಾಗಲಿ ಕನ್ನಡ ಬದಲಿಸಿಕೊಳ್ಳಬೇಕಿದೆ. ಪ್ರತಿಧ್ವನಿ ಮತ್ತು ಪ್ರತಿಭಟನೆಯ ಮಾಧ್ಯಮವಾದ ನಾಟಕ ನಿಂತ ನೀರಾಗಿದೆ. ಅದಕ್ಕೆ ಮರು ಚಾಲನೆ ನೀಡಲು ಸಂವಿಧಾನವನ್ನು ರಂಗಕ್ಕೆ ತರಬೇಕಿದೆ. ಆ ಮೂಲಕ ರಾಷ್ಟ್ರ ಬಯಸುತ್ತಿರುವ ಭಾತೃತ್ವದ ಭಾವನೆಯನ್ನು ಪ್ರತಿನಿಧಿಸುವಂತಾಗಬೇಕು ಎಂದರು.
ಶೀಲ, ಸುಶೀಲ, ಪಂಚಶೀಲ, ಸಪ್ತ ಶೀಲ ಮತ್ತು ಪ್ರಗತಿಶೀಲ ಭಾರತ ದೇಶಕ್ಕೆ ಬೇಕಾಗಿರುವುದು. ಬುದ್ಧ ಹೇಳಿದ ಪಂಚ ಶೀಲವನ್ನು ಕನ್ನಡೀಕರಿಸಿದವನು ಬಸವಣ್ಣ. ಕನ್ನಡ ಯಾವತ್ತೂ ಪ್ರಗತಿಶೀಲವಾಗಲೆಂದು ಹಾರೈಸುತ್ತೇನೆ ಎಂದರು.
ಸಂಗೀತ ವಿವಿ ಸಂಶೋಧನ ವನ. ಚಟುವಟಿಕೆಗಳ ಶಾಸ್ತ್ರಗಳ ಪಾಠಶಾಲೆ, ಸಂಗೀತ ಮತ್ತು ಪ್ರದರ್ಶನ ಕಲೆಗಳ ಸಮೀಕರಣ ಮಾಡುವುದು ಬಹಳ ಕಷ್ಟ. ಪ್ರತಿ ಕಲೆಗೂ ಶಾಸ್ತ್ರ ನಿರ್ಮಾಣ ಕಾರ್ಯಕ್ಕೆ ಸಂಗೀತ ವಿವಿ ಅಡುಗೆ ಮನೆಯಂತಿದೆ. ಐದನಿ ಸಂಗೀತದ 18 ವರ್ಷಗಳ ವನವಾಸಕ್ಕೆ ಡಿ.ಲೀಟ್ ಪದವಿ ನೀಡಿ ಮುಕ್ತಿಗೊಳಿಸಿತು ಎಂದರು.
ಪ್ರಶಸ್ತಿ ಪ್ರದಾನ:
ಇದೇ ವೇಳೆ ಸಾಹಿತಿ ಡಾ.ಕೆ. ಮರುಳಸಿದ್ದಪ್ಪ, ಸಂಗೀತ ವಿದ್ವಾಂಸ ಪ್ರೊ.ಎಸ್.ಸಿ. ಶರ್ಮ, ಹಿಂದೂಸ್ತಾನಿ ಸಂಗೀತ ಗಾಯಕ ಡಾ. ನಾಗರಾಜ ರಾವ್ ಹವಾಲ್ದಾರ್ ಮತ್ತು ಜಾನಪದ ವಿದ್ವಾಂಸ ಮುಖವೀಣೆ ಅಂಜನಪ್ಪ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಜಾನಪದ ನೃತ್ಯ, ಡೊಳ್ಳು ಕುಣಿತ, ಕಂಸಾಳೆ ನೃತ್ಯ, ಪುಷ್ಪಾಂಜಲಿ ನೃತ್ಯ, ಹಿಂದೂಸ್ತಾನಿ ಸಂಗೀತ ಗಾಯನ, ಕನ್ನಡ ಶ್ರೀಮಂತಿಕೆಯ ಬಿಂಬಿಸುವ ನಾಟಕ, ಕರ್ನಾಟಕ ವಾದ್ಯ ಸಂಗೀತ, ಗೌಂಡೇಲಿ ನೃತ್ಯ, ಭಾವಗೀತೆ ನೃತ್ಯ, ಐದನಿ ಶಾಸದ ಕರ್ನಾಟಕ ಸಾಹಿತ್ಯ ಪರಂಪರೆ ಹಾಡುಗಾರಿಕೆ, ಹಿಂದೂಸ್ತಾನಿ ಸಂಗೀತ, ಡೋಲು ಮತ್ತು ನಾದಸ್ವರ ಪ್ರದರ್ಶನ ಜರುಗಿತು.
ಸಾಹಿತಿ ಪ್ರೊ. ಕಾಳೇಗೌಡ ನಾಗವಾರ, ಸಂಗೀತ ವಿವಿ ಕುಲಪತಿ ಡಾ. ನಾಗೇಶ್ ವಿ. ಬೆಟ್ಟಕೋಟೆ, ಕುಲಸಚಿವ ಪ್ರೊ.ಜಿ.ವಿ. ವೆಂಕಟರಮಣ, ಹಣಕಾಸು ಅಧಿಕಾರಿ ಕೆ.ಎಸ್. ರೇಖಾ ಇದ್ದರು.ಉಸಿರಾಗಲಿ ಕನ್ನಡ ಘೋಷಣೆಯಾಗಿ ಉಳಿದಿದೆ. ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಪ್ರಾಶಸ್ತ್ಯ ಕೊಟ್ಟು ಆರೋಗ್ಯ ಕ್ಷೇತ್ರವನ್ನು ಸಬಲಗೊಳಿಸಿದಾಗ ಕನ್ನಡ ಉಸಿರಾಡುತ್ತದೆ. ಪ್ರಾಚೀನ ಸಾಹಿತ್ಯದಲ್ಲಿ ತಮಿಳು ನಂತರದ ಸ್ಥಾನವನ್ನು ಕನ್ನಡ ಪಡೆದಿದೆ. ಭಾಷೆಯಾಗಿ ಕನ್ನಡ ತಮಿಳಿಗಿಂತ ಪ್ರಾಚೀನತೆ ಇದೆ. ಅದಕ್ಕಾಗಿ ನಾವೆಲ್ಲರೂ ಹೆಮ್ಮೆ ಪಡಬೇಕು. ನಮ್ಮ ಮಕ್ಕಳು ಹೆಮ್ಮೆ ಪಡಬೇಕು. ಇಂಗ್ಲಿಷ್ ಕಲಿತರೆ ಉದ್ಯೋಗ ಸಿಗುತ್ತದೆಂಬ ಭ್ರಮೆ ಬಿಡಬೇಕು. ಸರ್ಕಾರ ಕನ್ನಡ ಸರ್ಕಾರಿ ಶಾಲೆಗಳನ್ನು ಸುಧಾರಿಸುವ ಸದ್ಬುದ್ಧಿ ಕೊಡಲಿ.
- ಡಾ.ಕೆ. ಮರುಳಸಿದ್ದಪ್ಪ, ಸಾಹಿತಿನ್ಯಾಕ್ ಸಮಿತಿಯಲ್ಲಿ ಕೆಲಸ ಮಾಡುವಾಗ ಪ್ರದರ್ಶಕ ಕಲೆಗಳಿಗೆ ಮಾನದಂಡ ರೂಪಿಸುವುದು ಕಷ್ಟಕರ. ಏಕೆಂದರೆ ಈಗ ನುಡಿಸಿದ ಆಲಾಪನೆ, ಮತ್ತೆ ನುಡಿಸುವಾಗ ಬದಲಾಗುತ್ತದೆ. ಸಂಗೀತ ವಿವಿಯಲ್ಲಿ ಪ್ರದರ್ಶಕ ಕಲೆಗಳ ನಾವೀನ್ಯ ಸಂಶೋಧನೆಗೆ ವೇದಿಕೆಯಾಗಿದೆ.
- ಪ್ರೊ.ಎಸ್.ಸಿ. ಶರ್ಮ, ನ್ಯಾಕ್ ಮಾಜಿ ನಿರ್ದೇಶಕ