ಸಾರಾಂಶ
ಕುರುಗೋಡು: ಮೊದಲು ಕನ್ನಡ ಎಂಬುದು ಕಾವೇರಿಯಿಂದ ಗೋದಾವರಿವರೆಗೆ ಹರಡಿತ್ತು. ಕರುನಾಡು ದೊಡ್ಡ ಸಾಮ್ರಾಜ್ಯವಾಗಿತ್ತು ಎಂದು ತಹಶೀಲ್ದಾರ್ ನರಸಪ್ಪ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಶ್ರೀದೊಡ್ಡ ಬಸವೇಶ್ವರ ದೇವಸ್ಥಾಣದ ಆವರಣದಲ್ಲಿ ಕನ್ನಡ ತಾಯಿ ಭುವನೇಶ್ವರಿ ರಥಯಾತ್ರೆಗೆ ಪೂಜೆ ಸಲ್ಲಿಸಿ ಮಾತನಾಡಿದರು.ಭಾಷಾವಾರು ವಿಂಗಡಣೆ ನಂತರ ಕನ್ನಡ ಭಾಷೆಯನ್ನು ಅತ್ಯಂತ ಹೆಚ್ಚಾಗಿ ಉಳಿಸಿಕೊಂಡ ಬಂದಿರುವ ನಮ್ಮ ಗಡಿನಾಡು ಬಳ್ಳಾರಿ ಜಿಲ್ಲೆಯ ವಿಶೇಷತೆ. ಕನ್ನಡದ ಅಸ್ಮಿತೆ ಉಳಿಸಿ ಬೆಳೆಸಿದ ಗಡಿಭಾಗದ ಬಳ್ಳಾರಿ ಜಿಲ್ಲೆಯಲ್ಲಿ ನಾವು ಜೀವಿಸುತ್ತಿರುವುದೇ ಪೂರ್ವಜನ್ಮದ ಸುಕೃತದ ಫಲ ಎಂದು ಬಣ್ಣಿಸಿದರು.
ನಾಡು-ನುಡಿ, ನೆಲ-ಜಲದ ವಿಷಯ ಬಂದಾಗ ಎಲ್ಲರೂ ಪಕ್ಷ, ಜಾತಿ-ಮತ ಪಂಥ ಮರೆತು ಶ್ರಮಿಸಬೇಕುಎಂದು ಸಲಹೆ ನೀಡಿದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ ಮಾನತಾಡಿ, ಕನ್ನಡ ತಾಯಿ ಭುವನೇಶ್ವರಿ ರಥಯಾತ್ರೆಗೆ ಪ್ರತಿ ತಾಲೂಕಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿದೆ. ಮಂಡ್ಯ ನಗರದಲ್ಲಿ ಜರುಗುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರು ಭಾಗವಹಿಸಿ ಎಂದು ಹೇಳಿದರು.
೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಪಟ್ಟಣದಕ್ಕೆ ಭಾನುವಾರ ಆಗಮಿಸಿದಾಗ ಕನ್ನಡತಾಯಿ ಭುವನೇಶ್ವರಿ ರಥಯಾತ್ರೆಗೆ ಅದ್ದೂರಿ ಸ್ವಾಗತ ದೊರೆಯಿತು.ತಾಲೂಕು ಆಡಳಿತ, ಪುರಸಭೆ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು ಕನ್ನಡತಾಯಿ ಭುವನೇಶ್ವರಿ ರಥಯಾತ್ರೆಯನ್ನು ಪಟ್ಟಣದ ಗೆಣಿಕೆಹಾಳು ರಸ್ತೆಯ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಸಂಭ್ರಮದಿಂದ ಸ್ವಾಗತಿಸಿದರು.
ನಂತರ ರಥಯಾತ್ರೆ ಮೆರವಣಿಗೆಗೆ ತಹಶೀಲ್ದಾರ್ ನರಸಪ್ಪ ಕೆಂಪು ಮತ್ತು ಹಳದಿ ಬಣ್ಣದ ನಾಡಧ್ವಜ ಬೀಸುವ ಮೂಲಕ ಚಾಲನೆ ನೀಡಿದರು.ಗೆಣಿಕೆಹಾಳು ರಸ್ತೆಯಿಂದ ಪ್ರಾರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳ ಸಂಚರಿಸಿ ಪಟ್ಟಣದ ಐತಿಹಾಸಿಕ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಮಾವೇಶಗೊಂಡಿತು.
ರಾಮ್ಡೋಲ್, ತಾಸಿರಾಮ್, ಡೊಳ್ಳು, ಮಂಗಳ ವಾದ್ಯ ಭಾಗವಹಿಸಿ ಮೆರವಣಿಗೆಯ ಮೆರಗು ಹೆಚ್ಚಿಸಿದ್ದವು.ಕನ್ನಡ ತಾಯಿ ಭುವನೇಶ್ವರಿ ರಥಯಾತ್ರೆ ಸಾಗಿ ಬಂದ ರಸ್ತೆಯ ಎರಡೂ ಬದಿಯಲ್ಲಿ ನಿಂತಿದ್ದ ಸಾವಿರಾರು ಸಂಖ್ಯೆಯ ಜನರು ಮೆರವಣಿಗೆ ಸೊಬಗು ಕಣ್ತುಂಬಿಕೊ೦ಡು ಸಂಭ್ರಮಿಸಿದರು.
ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಅಧ್ಯಕ್ಷ ನಾಗರಾಜ ಮುಸೂತಿ, ಸಿಡಿಪಿಒ ಮೋಹನ್ ಕುಮಾರಿ, ವಿವಿಧ ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.