ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಸುರಪುರ ತಾಲೂಕಿನ ದೇವಿಕೇರಾದಲ್ಲಿ ಇದೇ ಡಿ.18ರಿಂದ ಎರಡು ದಿನಗಳ ಕಾಲ ನಡೆಯುವ ಗ್ರಾಮ ದೇವತೆ ಜಾತ್ರೆ ವೇಳೆ ಅಂಸಖ್ಯಾತ ಕುರಿ-ಕೋಣಗಳ ಬಲಿ ನೀಡಲಾಗುತ್ತಿದ್ದು, ಇದನ್ನು ತಡೆಯಬೇಕು ಎಂಬ ದಲಿತ ಸಂಘರ್ಷ ಸಮಿತಿಯ ಮನವಿ ಹಿನ್ನೆಲೆಯಲ್ಲಿ ಹಾಗೂ ದಲಿತ ಸಮುದಾಯದ ಒಂದು ವರ್ಗಕ್ಕೆ ಬಲಿ ಮಾಂಸ ತಿನ್ನುವಂತೆ ಒತ್ತಡ ಹೇರುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಪ್ರಾಣಿ ಬಲಿ ತಡೆಯುವ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸ್ಥಳದಲ್ಲಿ ಭಾರಿ ಪೊಲೀಸ್ ಕಾವಲು ಹಾಕಲಾಗಿದೆ.ಈ ಮಧ್ಯೆ, ಬೆಂಗಳೂರಿನಿಂದ ಗ್ರಾಮಕ್ಕಾಗಮಿಸಿರುವ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ದಯಾನಂದ ಸ್ವಾಮೀಜಿ, ಪ್ರಾಣಿ ಬಲಿ ತಡೆ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ನಿರಂತರ ಯತ್ನಕ್ಕಿಳಿದಿದ್ದರು.
ಸೋಮವಾರ ಜಿಲ್ಲೆಯ ವಿವಿಧ ಭಾಗಗಳಿಂದ ದೇವಿಕೇರಾ ಗ್ರಾಮಕ್ಕೆ ಆಗಮಿಸಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಾಣಿಬಲಿ ತಡೆ ಕುರಿತು ಎಚ್ಚರಿಕೆ ನೀಡಿದರು. ಎಸ್ಪಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ, ಇಬ್ಬರು ಸರ್ಕಲ್ ಇನ್ಸಪೆಕ್ಟರುಗಳು, ಇಬ್ಬರು ಪಿಎಸೈಗಳು, ಐವರು ಎಎಸೈಗಳು ಹಾಗೂ 25ಕ್ಕೂ ಹೆಚ್ಚು ಹೆಡ್ ಕಾನ್ಸಟೇಬಲ್ ಹಾಗೂ ಕಾನ್ಸಟೇಬಲ್‌ಗಳು ಗ್ರಾಮದಲ್ಲಿ ಕಾವಲು ಹಾಕಿದ್ದರು. ಇಡೀ ಗ್ರಾಮದಲ್ಲಿ ಪೊಲೀಸ್ ಬೂಟುಗಾಲಿನ ಸಪ್ಪಳ ಪ್ರತಿಧ್ವನಿಸುತ್ತಿತ್ತು. ಯಾವುದೇ ಕಾರಣಕ್ಕೆ ಪ್ರಾಣಿ ಬಲಿ ನೀಡದೆ, ಜಾತ್ರೆ ಮಹೋತ್ಸವ ಆಚರಿಸುವಂತೆ ತಿಳವಳಿಕೆ ನೀಡುತ್ತಿದ್ದ ಅಧಿಕಾರಿಗಳು, ತಪ್ಪದಲ್ಲಿ ಕಾನೂನು ಶಿಕ್ಷೆಗೆ ಗುರಿಯಾಗುವ ಎಚ್ಚರಿಕೆಯನ್ನೂ ನೀಡುತ್ತಿದ್ದರು.ಜಾತ್ರೆಯ ವಿಚಾರವಾಗಿ ಕಳೆದೆರಡು ದಿನಗಳಿಂದ ಸೂಕ್ಷ್ಮವೆಂದೆನಿಸಿದ್ದ ದೇವಿಕೇರಾದಲ್ಲಿ ಗುಂಪುಗಳ ಮಧ್ಯೆ ಗಲಾಟೆ ಸಾಧ್ಯತೆ ಬಗ್ಗೆ ಮಾಹಿತಿ ಅರಿತ ಜಿಲ್ಲಾಧಿಕಾರಿ ಡಾ. ಬಿ.ಸುಶೀಲಾ, ಅಲ್ಲಿ ಶಾಂತಿಸಭೆ ನಡೆಸುವಂತೆ ಹಾಗೂ ಪ್ರಾಣಿಬಲಿ ತಡೆಗೆ ಪೊಲೀಸ್ ಬಂದೋಬಸ್ತ್‌ಗೆ ಸೂಚಿಸಿದ್ದರು. ಅದರಂತೆ, ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಶಾಂತಿ ಸಭೆ ನಡೆಸಿದ್ದರು. ಯಾವುದೇ ಗದ್ದಲ ಹಾಗೂ ಗೊಂದಲವಿಲ್ಲದಂತೆ ಜಾತ್ರೆ ನಡೆಸಬೇಕೆಂದು ಸೂಚಿಸಿದ್ದರು.
ದೇವಿಕೇರಾ ಗ್ರಾಮದ ಮಾರೆಮ್ಮ, ಮಲ್ಕಮ್ಮ ಹಾಗೂ ದೇವೆಮ್ಮ ಜಾತ್ರೆಯ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರಾಣಿ ಬಲಿ ನೀಡಲಾಗುತ್ತಿದ್ದು ಇದನ್ನು ತಡೆಯಬೇಕು ಎಂದು ಮನವಿ ಮಾಡಲಾಗಿತ್ತು. ಜೊತೆಗೆ, ಹಳೆಯ ವೈಷಮ್ಯದಿಂದಾಗಿ ಸಮುದಾಯಗಳ ಮಧ್ಯೆ ಕಂದಕ ಏರ್ಪಟ್ಟಿದ್ದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿಂತತ್ತಿತ್ತು. ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಲ್ಲಿಕಾರ್ಜುನ್ ಕ್ರಾಂತಿ ಈ ಬಗ್ಗೆ ದೂರು ನೀಡಿದ್ದರು.ಮೂಕಪ್ರಾಣಿಗಳ ಕೊಲ್ಲಬೇಡ್ರಪ್ಪಾ: ದಯಾನಂದ ಸ್ವಾಮೀಜಿ ತಾಯಿ ಸ್ಥಾನದಲ್ಲಿರುವ ದೇವತೆ ಪ್ರಾಣಿಬಲಿ ನೀಡಿ ಎಂದು ಭಕ್ತರಿಗೆ ಎಂದೂ ಬಯಸುವುದಿಲ್ಲ. ಅಂಧಶ್ರದ್ಧೆ, ಮೌಢ್ಯಕ್ಕೆ ಜನ ಇಂತಹ ಆಚರಣೆಗಳನ್ನು ಕೈಬಿಡಬೇಕು, ಮೂಕಪ್ರಾಣಿಗಳ ಕೊಲ್ಲಬೇಡ್ರಪ್ಪಾ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ದಯಾನಂದ ಸ್ವಾಮೀಜಿ ದೇವಿಕೇರಾ ಗ್ರಾಮಸ್ಥರ ಮನವೊಲೈಸುತ್ತಿದ್ದರು.ಪ್ರಾಣಿಬಲಿ ಮಾಹಿತಿ ಅರಿತ ಅವರು, ಬೆಂಗಳೂರಿನಿಂದ ಇಲ್ಲಿಗಾಗಮಿಸಿದ್ದಾರೆ. ಇದನ್ನು ತಡೆಯುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದ ಸ್ವಾಮೀಜಿ, ಬಲಿ ಕಂಡುಬಂದರೆ ಹೈಕೋರ್ಟ್ ಆದೇಶವನ್ನು ಜಿಲ್ಲಾಡಳಿತ ಉಲ್ಲಂಘಿಸಿದಂತಾಗುತ್ತದೆ ಎಂದು ಎಚ್ಚರಿಸಿದ್ದರು. ಸೋಮವಾರ ಮಧ್ಯಾಹ್ನ ದೇವಿಕೇರಾಗೆ ತೆರಳಿದ ದಯಾನಂದ ಸ್ವಾಮೀಜಿ, ಅಲ್ಲಿನ ಜನ ಜಾಗೃತಿಗೆ ನಿಂತರು. ಬೀದಿ ಬೀದಿಗಳಲ್ಲಿ, ಮನೆ ಮನೆಗಳಿಗೆ ತಿರುಗಾಡಿ ಪ್ರಾಣಿಬಲಿ ನೀಡಬಾರದೆಂದು ಮನವಿ ಮಾಡುತ್ತಿರುವುದು ಕಂಡು ಬಂತು. ಎರಡೂ ದಿನಗಳ ಕಾಲ ಗ್ರಾಮದಲ್ಲೇ ಇರುವುದಾಗಿ ಸ್ವಾಮೀಜಿ ತಿಳಿಸಿದ್ದಾರೆ.