ಆರೋಗ್ಯ, ತಂತ್ರಜ್ಞಾನಕ್ಕೆ ಕೆಎಲ್‌ಇ ಕೊಡುಗೆ ಅಪಾರ: ಸಚಿವ ಎಂ.ಬಿ. ಪಾಟೀಲ

| Published : Aug 31 2024, 01:32 AM IST

ಆರೋಗ್ಯ, ತಂತ್ರಜ್ಞಾನಕ್ಕೆ ಕೆಎಲ್‌ಇ ಕೊಡುಗೆ ಅಪಾರ: ಸಚಿವ ಎಂ.ಬಿ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಕೆಎಲ್ಇ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ಆ್ಯಂಡ್‌ ರಿಸರ್ಚ್ ಕರ್ನಾಟಕದ ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರೀಮಂತ ಪರಂಪರೆ ಹೊಂದಿದೆ. ಗುಣಮಟ್ಟದ ಶಿಕ್ಷಣ ಒದಗಿಸುವ ಮತ್ತು ಸಂಶೋಧನೆ ಉತ್ತೇಜಿಸುವ ದೂರದೃಷ್ಟಿಯೊಂದಿಗೆ ಬೇರೂರಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೆಎಲ್ಇ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ಆ್ಯಂಡ್‌ ರಿಸರ್ಚ್ ಕರ್ನಾಟಕದ ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರೀಮಂತ ಪರಂಪರೆ ಹೊಂದಿದೆ. ಗುಣಮಟ್ಟದ ಶಿಕ್ಷಣ ಒದಗಿಸುವ ಮತ್ತು ಸಂಶೋಧನೆ ಉತ್ತೇಜಿಸುವ ದೂರದೃಷ್ಟಿಯೊಂದಿಗೆ ಬೇರೂರಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಕೆಎಲ್ಇ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ಆ್ಯಂಡ್‌ ರಿಸರ್ಚ್‌ನ ಇನ್‌ಕ್ಯುಬೇಶನ್ ಹಾಗೂ ಇನ್ನೊವೇಶನ್‌ ಸೆಂಟರ್‌ ಬೆಳಗಾವಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮೆಡಟೆಕ್ ಹ್ಯಾಕಥಾನ್‌-2024 ಉದ್ಘಾಟಿಸಿ ಮಾತನಾಡಿದ ಅವರು, ಕೆಎಲ್ಇ ಸಂಸ್ಥೆ ದೇಶಾದ್ಯಂತ ತಮ್ಮದೇ ಆದ ಶೈಕ್ಷಣಿಕ ಸಂಸ್ಥೆಗಳ ಸಂಪರ್ಕ ಹೊಂದಿರುವುದರಿಂದ ಸಂಪನ್ಮೂಲಗಳನ್ನು ಒಟ್ಟುಗೂಡಿಸುತ್ತದೆ. ವಿಶೇಷವಾಗಿ ಆರೋಗ್ಯ ಮತ್ತು ತಂತ್ರಜ್ಞಾನದಲ್ಲಿ ಈ ಭಾಗದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿದೆ. ಅತ್ಯಾಧುನಿಕ ಸಂಶೋಧನಾ ಸೌಲಭ್ಯಗಳ ಮೂಲಕ ಬಯೋಮೆಡಿಕಲ್ ಎಂಜಿನಿಯರಿಂಗ್‌ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ. ನಾವೀನ್ಯತೆ ಮತ್ತು ವಿವಿಧ ಸಂಸ್ಥೆಗಳ ಸಹಯೋಗದದೊಂದಿಗೆ ಒಳ್ಳೆಯ ಪರಿಸರ ವ್ಯವಸ್ಥೆ ರೂಪಿಸಿಕೊಂಡಿದೆ ಎಂದು ಅಭಿಪ್ರಾಯಪಟ್ಟರು.

ವೈದ್ಯಕೀಯ ತಂತ್ರಜ್ಞಾನದಲ್ಲಿ ಕರ್ನಾಟಕ ಒಳ್ಳೆಯ ಪರಿಸರ ವ್ಯವಸ್ಥೆ ಹೊಂದಿದ್ದು, ಸಂಶೋಧನಾ ಸಂಸ್ಥೆಗಳು, ಸ್ಟಾರ್ಟ್‌ ಅಪ್‌ಗಳು ಮತ್ತು ಆರೋಗ್ಯ ಪೂರೈಕೆದಾರರ ಅಗಾಧವಾದ ಜಾಲ ಹೊಂದಿದೆ. ರಾಜ್ಯದ ನೀತಿಗಳು ಮತ್ತು ಕ್ರಮಗಳು ನಾವೀನ್ಯತೆಗೆ ಅನುಕೂಲಕರವಾದ ವಾತಾವರಣ ಹೊಂದಿರುವುದರಿಂದ ಮೆಡ್‌ಟೆಕ್ ಅಭಿವೃದ್ಧಿಯ ಕೇಂದ್ರವಾಗಿದೆ. ಸ್ಟಾರ್ಟ್‌ಅಪ್‌ಗಳು ಮತ್ತು ಸಂಶೋಧಕರಿಗೆ ವಿಶ್ವದರ್ಜೆಯ ಸೌಲಭ್ಯಗಳು ಲಭಿಸುತ್ತಿವೆ ಎಂದು ಹೇಳಿದರು.

ಕರ್ನಾಟಕದ ಆರೋಗ್ಯ ಮತ್ತು ಮೆಡ್‌ಟೆಕ್‌ ಪರಿಸರ ವ್ಯವಸ್ಥೆ ಕ್ರಿಯಾತ್ಮಕ ಮತ್ತು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದ್ದು, ಭಾರತದ ವೈದ್ಯಕೀಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡುತ್ತಿದೆ. ದೇಶದ ವೈದ್ಯಕೀಯ ಮತ್ತು ದಂತ ಉಪಕರಣಗಳ ವಲಯದಲ್ಲಿನ ಒಟ್ಟು ಉತ್ಪಾದನೆಯ ಶೇ.25ರಷ್ಟನ್ನು ರಾಜ್ಯ ಹೊಂದಿದ್ದು, 350ಕ್ಕೂ ಅಧಿಕ ವೈದ್ಯಕೀಯ ಸಾಧನಗಳ ತಯಾರಿಕೆ ಮತ್ತು ಪೂರೈಕೆಯ ನೆಲೆಯಾಗಿದೆ ಎಂದು ವಿವರಿಸಿದರು.

ಕರ್ನಾಟಕದಲ್ಲಿ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಕಾಲೇಜುಗಳಿಂದ ನುರಿತ ವೃತ್ತಿಪರರು ಹೊರಬರುತ್ತಿರುವುದರಿಂದ ವೈದ್ಯಕೀಯ ತಂತ್ರಜ್ಞಾನ ಕಂಪನಿಗಳಿಗೆ ಅಗತ್ಯವಿರುವ ಪ್ರತಿಭೆಗಳು ಸುಲಭವಾಗಿ ಸಿಗುತ್ತಿವೆ. ವೈದ್ಯಕೀಯ, ಐಟಿ, ಪಿಸಿಆರ್‌ ಯಂತ್ರಗಳು, ಹೃದಯ ಸ್ಟೆಂಟ್‌ಗಳು, ಇನ್ಸುಲಿನ್‌ ಸೈನ್ಸ್‌ ಸೇರಿದಂತೆ ಅನೇಕ ಸಾಧನಗಳನ್ನು ತಾಯಾರಿಸುವ ಕೇಂದ್ರವಾಗಿದೆ. ವೈದ್ಯಕೀಯ ಸಾಧನಗಳು, ರೋಗ ನಿರ್ಣಯ, ಡಿಜಿಟಲ್ ಆರೋಗ್ಯ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಭಿವೃದ್ಧಿಪಡಿಸುತ್ತಿರುವ ಮೆಡ್‌ಟೆಕ್‌ ಸ್ಟಾರ್ಟ್‌ಅಪ್‌ಗಳಿಗೆ ಕರ್ನಾಟಕ ನೆಲೆಯಾಗಿದೆ. ನಾವೀನ್ಯತೆ ಮತ್ತು ಸಹಯೋಗದ ಮನೋಭಾವ ಅಳವಡಿಸಿಕೊಳ್ಳೋಣ. ತಂತ್ರಜ್ಞಾನ ಮತ್ತು ಸಂಶೋಧನೆಯ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ, ನಾವು ವೈದ್ಯಕೀಯ ಆವಿಷ್ಕಾರದ ಭವಿಷ್ಯವನ್ನು ಮುನ್ನಡೆಸಬಹುದು ಮತ್ತು ಜನರ ಜೀವನವನ್ನು ಸುಧಾರಿಸಬಹುದು. ಮೆಡ್‌ಟೆಕ್‌ ಪ್ರಗತಿಯಲ್ಲಿ ಕರ್ನಾಟಕವನ್ನು ಜಾಗತಿಕ ನಾಯಕನನ್ನಾಗಿ ಮಾಡಬಹುದು ಎಂದು ಭರವಸೆ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಅಥವಾ ಹುಬ್ಬಳ್ಳಿಯಲ್ಲಿ ಸ್ಟಾರ್ಟ್‌ ಅಪ್‌ ಪಾರ್ಕ್‌ ನಿರ್ಮಾಣಕ್ಕೆ ಸಕಲ ರೂಪರೇಷೆಯನ್ನು ಅಂತಿಮಗೊಳಿಸಿ ಇನ್ನು ಮೂರು ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. ಈ ಭಾಗದಲ್ಲಿ ಅನೇಕ ವೈದ್ಯಕೀಯ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯಗಳಿದ್ದು, ಅವುಗಳ ಮೂಲಕ ವೈದ್ಯಕೀಯ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಬೇಕಿದೆ. ಸಂಶೋಧನೆಗೆ ಹೆಚ್ಚಿನ ಒತ್ತು ನೀಡಿ, ಸ್ವಾಲಂಬನೆ ಸಾಧಿಸಬೇಕಾಗಿದೆ ಎಂದವರು ಹೇಳಿದರು.

ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಕಾಹೆರನ ಕುಲಪತಿ ಡಾ.ಪ್ರಭಾಕರ ಕೋರೆ ಮಾತನಾಡಿ, ಸಂಶೋಧನೆಗೆ ಒತ್ತು ನೀಡಿ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಈಗ ಇನಕ್ಯೂಬೇಶನ್‌ ಮೂಲಕ ವೈದ್ಯಕೀಯ ತಂತ್ರಜ್ಞಾನದಲ್ಲಿ ಉದ್ದಿಮೆ ಸ್ಥಾಪಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಸಹಾಯ, ಸಲಹೆ ನೀಡಲಾಗುತ್ತಿದೆ. ಆದ್ದರಿಂದ ಯುವಕರು ಉದ್ದಿಮೆ ಸ್ಥಾಪಿಸಲು ಮಂದಾಗಬೇಕೆಂದು ಕರೆ ನೀಡಿದರು.

ದೆಹಲಿ ಐಐಟಿಯ ವ್ಯವಸ್ಥಾಪಕ ನಿರ್ದೇಶಕ ಡಾ. ನಿಖಿಲ ಅಗರವಾಲ ಮಾತನಾಡಿ, ಭಾರತದಲ್ಲಿ ಸ್ಟಾರ್ಟ್‌ ಅಪ್‌ 2016ರಲ್ಲಿ ವೇಗ ಪಡೆದುಕೊಂಡಿದೆ. ಭಾರತದಲ್ಲಿ 131 ಯನಿಕಾರ್ನ್‌ಗಳಿವೆ. ನಂತರ ಸಾವಿರ ಯುನಿಕಾರ್ನ್‌, ಮಿಲಿಯನ್‌ ಸ್ಟಾರ್ಟ್‌ ಅಪ್‌ಗಳು ಆರಂಭವಾಗಲಿವೆ. ದೇಶದ ಶೇ.80ರಷ್ಟು ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಬೇರೆ ದೇಶಗಳಿಗೆ ತೆರಳುತ್ತಾರೆ. ಹಲವು ಬಿಲ್ ಗೇಟ್ಸ್‌ ರನ್ನು ತಯಾರಿಸುವ ತಾಕತ್ತು ಭಾರತಕ್ಕಿದೆ. ಅದನ್ನು ಯುವಕರು ಅರಿಯಬೇಕು. ಭಾರತ ಶೇ.80ರಷ್ಟು ವೈದ್ಯಕೀಯ ಸಲಕರಣೆಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಪ್ರತಿಯೊಂದು ವಿಮಾನ ನಿಲ್ದಾಣಗಳಲ್ಲಿ ಶೆ.95ರಷ್ಟು ಸಲಕರಣೆಗಳು ವೈದ್ಯಕೀಯ ಸಲಕರಣೆಗಳಾಗಿವೆ. ಆದ್ದರಿಂದ ಅದು ತಪ್ಪಲು ವೈದ್ಯಕೀಯ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಉದ್ದಿಮೆಗಳು ಬರಬೇಕು ಎಂದು ಪ್ರತಿಪಾದಿಸಿದರು.

ಕಾಹೆರನ ಉಪಕುಲಪತಿ ಡಾ.ನಿತಿನ ಗಂಗಾಣೆ, ಭಾರತ ಸರಕಾರದ ವಿಜ್ಞಾನಿ ಡಾ.ಅರವಿಂದಕುಮಾರ, ಸಿಡ್ ಬಿ ಹಿರಿಯ ಪ್ರಧಾನ ವ್ಯವಸ್ಥಾಪಕ ಸತ್ಯ ಪ್ರಕಾಶ ಸಿಂಗ ಮಾತನಾಡಿದರು. ಇದೇ ವೇಳೆ ಕಾನ್ಪುರ್‌ ಐಐಟಿಯ ಕೆಐಐಸಿ ಮತ್ತು ಎಸ್‌ಐಐಸಿ ಹಾಗೂ ಗಾಜಿಯಾಬಾದ್‌ನ ಯಶೋಧಾ ಆಸ್ಪತ್ರೆಯೊಂದಿಗೆ ಕೆಎಲ್‌ಇ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡವು. ವೇದಿಕೆ ಮೇಲೆ ರಿತೇಶ್‌ ದೇಶಪಾಂಡೆ ಇದ್ದರು. ಕಾಹೆರ ಕುಲಸಚಿವ ಡಾ.ಎಂ.ಎಸ್‌. ಗಣಾಚಾರಿ ಪ್ರಸ್ತಾವಿಕವಾಗಿ ಮಾತನಾಡಿದರು. ಡಾ.ರಾಜೇಶ ಪವಾರ ಸ್ವಾಗತಿಸಿದರು. ಡಾ.ನೇಹಾ ಧಡೇದ ಹಾಗೂ ಡಾ.ಸೌಮ್ಯಾ ಮಾಸ್ತೆ ನಿರೂಪಿಸಿದರು.