ಸಾರಾಂಶ
ಸುಮಾರು ರು.7 ಕೋಟಿ ವೆಚ್ಚದಲ್ಲಿ ಜರ್ಮನ್ ತಂತ್ರಜ್ಞಾನದಲ್ಲಿ ನಡೆದ ತಡೆಗೋಡೆ ಕಾಮಗಾರಿ ಕಳಪೆ ಕಾಮಗಾರಿಯಾಗಿದೆ ಎಂದು ಅಂದಿನ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಆರೋಪ ನಡೆಸಿ ಹೋರಾಟ ಮಾಡಿತ್ತು. ಇದೀಗ ಪರಿಶೀಲನೆ ಬಳಿಕ ತಡೆಗೋಡೆ ಕೆಡಹಲು ಸಿದ್ಧತೆ ನಡೆದಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಭಾರಿ ಚರ್ಚೆಗೆ ಗ್ರಾಸವಾಗಿದ್ದ ಕೊಡಗು ಜಿಲ್ಲಾಡಳಿತ ತಡೆಗೋಡೆ ಕೆಡವಲು ಕ್ಷಣಗಣನೆ ಆರಂಭಗೊಂಡಿದೆ. ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಮಾನಪ್ಪ ಲಮಾಣಿ ನೇತೃತ್ವದಲ್ಲಿ ಸಮಿತಿ ಸದಸ್ಯರು ಗುರುವಾರ ತಡೆಗೋಡೆ ಪರಿಶೀಲನೆ ನಡೆಸಲಿದ್ದಾರೆ.ಸುಮಾರು ರು.7 ಕೋಟಿ ವೆಚ್ಚದಲ್ಲಿ ಜರ್ಮನ್ ತಂತ್ರಜ್ಞಾನದಲ್ಲಿ ನಡೆದ ತಡೆಗೋಡೆ ಕಾಮಗಾರಿ ಕಳಪೆ ಕಾಮಗಾರಿಯಾಗಿದೆ ಎಂದು ಅಂದಿನ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಆರೋಪ ನಡೆಸಿ ಹೋರಾಟ ಮಾಡಿತ್ತು.
ಅಂದು ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ತಮ್ಮ ಚುನಾವಣೆ ಪ್ರಚಾರದಲ್ಲಿ ಅವೈಜ್ಞಾನಿಕವಾಗಿರುವ ಈ ಜರ್ಮನ್ ಟೆಕ್ನಾಲಜಿಯ ತಡೆಗೋಡೆ ಕೆಡವಿ ಇಂಡಿಯನ್ ಟೆಕ್ನಾಲಜಿಯ ಸುಭದ್ರ ತಡೆಗೋಡೆ ನಿರ್ಮಿಸುವುದಾಗಿ ಜನತೆಗೆ ಭರವಸೆ ನೀಡಿದ್ದರು.ತಡೆಗೋಡೆ ನಿರ್ವಹಣೆ ಹೊತ್ತ ಇಂಜಿನಿಯರ್ ಅಮಾನತಿಗೆ ಒಳಗಾದರೆ ಈ ಕಾಮಗಾರಿಗೆ ಸಂಬಂಧಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸೂಪರಿಂಟೆಂಡೆಂಟ್ ಇಂಜಿನಿಯರ್, ಚೀಫ್ ಇಂಜಿನಿಯರ್ ವರ್ಗಾವಣೆ ಶಿಕ್ಷೆಗೆ ಒಳಪಟ್ಟರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಪ್ರಥಮ ಅಧಿವೇಶನದಲ್ಲಿ ಡಿ.ಸಿ.ಕಚೇರಿ ತಡೆಗೋಡೆ ಅವೈಜ್ಞಾನಿಕವಾಗಿದ್ದು ಯಾವತ್ತಾದರೂ ಬಿದ್ದು ಅನಾಹುತ ಸಂಭವಿಸಲಿರುವುದರಿಂದ ಸುಭದ್ರ ತಡೆಗೋಡೆ ನಿರ್ಮಾಣಕ್ಕೆ ಸದನದಲ್ಲಿ ಒತ್ತಾಯಿಸಿದ್ದರು.ಇದೀಗ ಸರ್ಕಾರ ನವೀನ ತಂತ್ರಜ್ಞಾನವನ್ನು ಉಪಯೋಗಿಸಿ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದೆ ಎನ್ನಲಾಗುತ್ತಿದ್ದು, ಉಪ ವಿಧಾನ ಸಭಾ ಅಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ನೇತೃತ್ವದಲ್ಲಿ ಶಾಸಕರಾದ ಎಸ್.ಸುರೇಶ್ ಕುಮಾರ್,ಈ ತುಕಾರಾಮ್, ಎ.ಮಂಜು, ಸುರೇಶ್ ಬಾಬು ತಂಡ ಗುರುವಾರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿವೀಕ್ಷಣೆ ಮಾಡಲಿದೆ.