ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಒಂದು ಕಾಲದಲ್ಲಿ ಗತವೈಭವದಿಂದ ಕೂಡಿದ್ದು ಮಾತ್ರವಲ್ಲದೆ ಜಿಐ ಟ್ಯಾಗ್ ಹೊಂದಿದ್ದ ಕೊಡಗಿನ ಕಿತ್ತಳೆ ಮರೆಯಾಗುತ್ತಿದೆ. ಇದೀಗ ಕೊಡಗಿನ ಕಿತ್ತಳೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಿಂದ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಮೂರು ಜಿಲ್ಲೆಯ ಸುಮಾರು ನೂರು ರೈತರಿಗೆ ಕೃಷಿ ಪರಿಕರಗಳನ್ನು ವಿತರಿಸಲಾಯಿತು.ಭಾರತೀಯ ತೋಟಗಾರಿಕಾ ಸಂಸ್ಥೆ, ಚೆಟ್ಟಳ್ಳಿ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಿಂದ ಸೋಮವಾರ ನಡೆದ ಕಿತ್ತಳೆ ಪುನಶ್ಚೇತನ ಹಾಗೂ ಕೃಷಿ ಪರಿಕರಗಳ ವಿತರಣೆಯಲ್ಲಿ ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ರೈತರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಈ ಯೋಜನೆಯ ಉದ್ದೇಶ, ರೈತರು ಕಿತ್ತಳೆ ಬೆಳೆಯಲ್ಲಿ ಅನುಸರಿಸಬೇಕಾದ ಕ್ರಮಗಳು, ಔಷಧಿ, ಗೊಬ್ಬರ, ನಿರ್ವಹಣೆ ಸೇರಿದಂತೆ ತಾಂತ್ರಿಕ ಸಲಹೆಗಳನ್ನು ವಿಜ್ಞಾನಿಗಳಿಂದ ನೀಡಲಾಯಿತು.
ಕಾರ್ಯಕ್ರಮದಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಟಿ.ಕೆ. ಬೆಹೆರ ಮಾತನಾಡಿ, ಕೊಡಗಿನ ಕಿತ್ತಳೆ, ಕೊಡಗಿನ ಜೇನಿನ ಮಹತ್ವದ ಬಗ್ಗೆ ನಾನು ಕಾಲೇಜು ದಿನಗಳಿಂದಲೇ ತಿಳಿದುಕೊಂಡಿದ್ದೆ. ಕೊಡಗಿನ ಕಿತ್ತಳೆಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯಿದೆ. ಆದರೆ ಉತ್ಪಾದನೆ ಪ್ರಮಾಣ ತೀರಾ ಕಡಿಮೆಯಿದೆ. ಕೇಂದ್ರದಿಂದ ಕಿತ್ತಳೆ ಪುನಶ್ಚೇತನ ಯೋಜನೆ ಮೂಲಕ ಮುಂದಿನ ದಿನಗಳಲ್ಲಿ ಕೊಡಗಿನ ಕಿತ್ತಳೆ ಬೆಳೆಯುವವರ ಸಂಖ್ಯೆ ಹೆಚ್ಚಾಗಬೇಕು. ಕೊಡಗಿನ ಕಿತ್ತಳೆಗೆ ಜಿಐ ಟ್ಯಾಗ್ ಪಡೆದಿದ್ದರೂ ನಾವು ರಫ್ತು ಮಾಡುತ್ತಿಲ್ಲ ಎಂದು ವಿಷಾದಿಸಿದ ಅವರು, ಈ ವಿಶೇಷ ಕಿತ್ತಳೆಯನ್ನು ಹೆಚ್ಚು ಬೆಳೆದು ರಫ್ತು ಮಾಡಿ ಆದಾಯ ಗಳಿಸಬೇಕೆಂದರು.ಕೇಂದ್ರದಲ್ಲಿ ಕೊಡಗಿನ ಕಿತ್ತಳೆ ಮಾತ್ರವಲ್ಲದೆ ಬೆಣ್ಣೆಹಣ್ಣು ಸೇರಿದಂತೆ ವಿದೇಶಿ ತಳಿಯ ಹಣ್ಣುಗಳನ್ನು ಬೆಳೆಯುತ್ತಿದೆ. ಅಲ್ಲದೆ ರೈತರಿಗೆ ಗಿಡಗಳನ್ನು ನೀಡುವ ಮೂಲಕ ಉತ್ತೇಜನೆ ನಿಡಲಾಗುತ್ತಿದೆ. ಕಿತ್ತಳೆ ಹಣ್ಣು ಬೆಳೆಯಲು ಹಲವು ಸವಾಲುಗಳಿದೆ. ಅಲ್ಲದೆ ಮಂಗಗಳ ಕಾಟ ಇದೆ. ಇದರ ನಿಯಂತ್ರಣ ಕ್ರಮ ಮುಂದಿನ ದಿನಗಳಲ್ಲಿ ಕೇಂದ್ರದಿಂದ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಬೆಂಗಳೂರು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಜಂಟಿ ನಿರ್ದೇಶಕರಾದ ದೀಪಜ ಮಾತನಾಡಿ, ಕೊಡಗಿನ ಕಿತ್ತಳೆ ಪುನಶ್ಚೇತನದ ಪ್ರಥಮ ಹೆಜ್ಜೆ ಆರಂಭವಾಗಿದೆ. ಕಿತ್ತಳೆ ಬೆಳೆಗಾರರು, ಮಾರುಕಟ್ಟೆ ಮಾಡಿ ಲಾಭದಾಯಕವಾಗಿ ಮಾಡುವುದು ನಮ್ಮ ಸವಾಲಾಗಿದೆ. ಕೊಡಗಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಆದ್ದರಿಂದ ಇದನ್ನು ಬ್ರ್ಯಾಂಡಿಂಗ್ ಮಾಡುವುದರೊಂದಿಗೆ ಉತ್ತಮ ಬೆಲೆ ದೊರಕಿಸುವಂತೆ ಮಾಡಬೇಕು ಎಂದು ಹೇಳಿದರು.ಕೃಷಿ ವಿಕಾಸ ಯೋಜನೆಯ ನೋಡೆಲ್ ಅಧಿಕಾರಿ ರವಿಶಂಕರ್ ಮಾತನಾಡಿ, ನಮ್ಮ ಊರು ನಮ್ಮ ಹೆಮ್ಮೆಯಂತೆ ಕೊಡಗಿನಲ್ಲಿ ಕೊಡಗಿನ ಕಿತ್ತಳೆ ಹಾಗೂ ಜೇನು ಪ್ರಸಿದ್ಧಿಯಾಗುತ್ತಿದೆ. ಕೊಡಗಿನ ಕಿತ್ತಳೆ ಎಲ್ಲೂ ಸಿಗುತ್ತಿಲ್ಲ. ಜಿಐ ಟ್ಯಾಗ್ ಪಡೆದುಕೊಂಡಿದ್ದರೂ ಕೂಡ ನಾವು ಹೆಚ್ಚು ಬೆಳೆಯಲಾಗುತ್ತಿಲ್ಲ. ಕಿತ್ತಳೆಯನ್ನು ಬ್ರ್ಯಾಂಡಿಂಗ್ ಮಾಡಬೇಕು. ಕೊಡಗಿನ ಕಿತ್ತಳೆ ಹೆಚ್ಚು ಬೆಳೆದು ಮುಂದಿನ ದಿನಗಳಲ್ಲಿ ರಫ್ತು ಮಾಡಲು ಚಿಂತನೆ ಮಾಡೋಣ ಎಂದು ತಿಳಿಸಿದರು.
ಸೋಮವಾರಪೇಟೆ ತಾಲೂಕು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಲಿಖಿತ ರಾಜ್ ಮಾತನಾಡಿ ರೈತರಲ್ಲಿ ಕಿತ್ತಳೆ ಪುನಶ್ಚೇತನಕ್ಕೆ ಆಸಕ್ತಿ ಕೊರತೆಯಿದೆ. ಈ ಕಾರ್ಯಕ್ರಮದ ಮೂಲಕ ಕಿತ್ತಳೆ ಪುನಶ್ಚೇತನ ಆಗುವ ಭರವಸೆಯಿದೆ ಎಂದು ಹೇಳಿದರು.ಕೊಡಗಿನ ಕಿತ್ತಳೆ ಕೃಷಿಯಲ್ಲಿ ಪ್ರಗತಿ ಸಾಧಿಸಿರುವ ರೈತ ಪ್ರಮೋದ್ ರೈ ಮಾತನಾಡಿ ಕೊಡಗಿನಲ್ಲಿ ಹವಾಮಾನ ವೈಪರೀತ್ಯದ ಪರಿಣಾಮದಿಂದ ಕೃಷಿಗೆ ಸಮಸ್ಯೆಯಾಗಿದೆ. ತಾನು 2012ರಿಂದ ಸುಮಾರು 1500 ಕಿತ್ತಳೆ ಗಿಡಗಳನ್ನು ನಾಟಿ ಮಾಡಿದ್ದು, 2020ರಲ್ಲಿ 25 ಟನ್ ಫಸಲು ಗಳಿಸಿದ್ದು ಕಿತ್ತಳೆ ಕೃಷಿಯನ್ನು ಲಾಭದಾಯಕವಾಗಿ ಮಾಡಿದ್ದೇನೆಂದು ತಮ್ಮ ಅನುಭವ ಹಂಚಿಕೊಂಡರು.
ಕಾರ್ಯಕ್ರಮದ ಸಂಚಾಲಕ ಮುರುಳೀಧರ್ ಮಾತನಾಡಿ, 1960ರಲ್ಲಿ ಕೊಡಗಿನಲ್ಲಿ ಸುಮಾರು 60 ಸಾವಿರ ಎಕರೆಯಲ್ಲಿ ಕಿತ್ತಳೆ ಬೆಳೆಯಲಾಗುತ್ತಿತ್ತು. ಪ್ರಸ್ತುತ 5 ಸಾವಿರ ಎಕರೆ ಮಾತ್ರ ಬೆಳೆಯಲಾಗುತ್ತಿದೆ. ಹಳದಿಯಿಂದ ಹಸಿರು, ಹಸಿರಿನಿಂದ ಫಸಲು ಎಂಬ ಧ್ಯೇಯೆ ಇಟ್ಟುಕೊಂಡು ಕೆಲಸ ಮಾಡಲು ಕೇಂದ್ರದಿಂದ ಕೆಲಸ ಮಾಡಲಾಗುತ್ತಿದೆ ಎಂದರು.ಜಿಲ್ಲೆಯಲ್ಲಿ ಕಾಫಿ, ಕಾಳು ಮೆಣಸು ಕೃಷಿಯೊಂದಿಗೆ ಕಿತ್ತಳೆ ಬೆಳೆಸಲಾಗುತ್ತಿದೆ. ಮೂರು ಜಿಲ್ಲೆಯ 100 ಮಂದಿ ರೈತರನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ಹಾಗೂ ಸಲಕರಣೆಗಳನ್ನು ನೀಡಲಾಗುತ್ತದೆ. ಇದರಿಂದ ಕಿತ್ತಳೆ ಪುನಶ್ಚೇತನ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕೊಡಗಿನ ಕಿತ್ತಳೆ ಕೃಷಿ ಹಾಗೂ ರೋಗಗಳು, ಕೀಟ ನಿರ್ವಹಣೆ ಪ್ರತಿಗಳನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.ಬೆಂಗಳೂರು ತೋಟಗಾರಿಕಾ ಸಂಶೋಧನಾ ಕೇಂದ್ರದ ಹಣ್ಣಿನ ವಿಭಾಗದ ಮುಖ್ಯಸ್ಥರಾದ ಶಂಕರ್, ಚೆಟ್ಟಳ್ಳಿ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಮುಖ್ಯಸ್ಥ ರಾಜೇಂದಿರನ್ ಪಾಲ್ಗೊಂಡಿದ್ದರು. ಕೀಟ ವಿಜ್ಞಾನಿ ರಾಣಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕೊಡಗಿನ ಕಿತ್ತಳೆ ತಳಿಯ ಪ್ರದರ್ಶನ, ಕೀಟ ಬಾಧೆಯ ಬಗ್ಗೆ ಪ್ರದರ್ಶನ ಆಯೋಜಿಸಲಾಗಿತ್ತು. ರೈತರು ಪ್ರದರ್ಶನವನ್ನು ಕುತೂಹಲದಿಂದ ವೀಕ್ಷಿಸಿದರು.
ಕೃಷಿ ಪರಿಕರಗಳ ವಿತರಣೆಕೊಡಗಿನ ಕಿತ್ತಳೆ ಪುನಶ್ಚೇತನ ಯೋಜನೆಯಲ್ಲಿ ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಸುಮಾರು ನೂರು ಮಂದಿ ಆಸಕ್ತ ರೈತರನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ಕಾರ್ಯಕ್ರಮದಲ್ಲಿ ಒಬ್ಬರಿಗೆ ತಲಾ 10 ಸಾವಿರಕ್ಕೂ ಅಧಿಕ ಮೌಲ್ಯದ ಕೃಷಿ ಪರಿಕರಗಳನ್ನು ವಿತರಿಸಲಾಯಿತು. ಕಿತ್ತಳೆ ಗಿಡ, ಗೊಬ್ಬರ, ಔಷಧಿ, ಕೃಷಿಗೆ ಬೇಕಾದ ಸಲಕರಣೆಗಳು ಸೇರಿದಂತೆ ವಿವಿಧ ಅಗತ್ಯ ವಸ್ತುಗಳನ್ನು ಕೇಂದ್ರದಿಂದ ನೀಡುವ ಮೂಲಕ ಕಿತ್ತಳೆ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.