ಸಾರಾಂಶ
ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಹತ್ತು ವರ್ಷದಿಂದ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್ ಬಾಬು ಎಂಬಾತ ಜಿಲ್ಲಾಸ್ಪತ್ರೆಯ ಇ.ಎನ್.ಟಿ ವಿಭಾಗದ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ.
ಕೋಲಾರ : ಸದ್ಯಕ್ಕೆ ಮದುವೆ ಬೇಡ ಎನ್ನುತ್ತಿದ್ದ ಆ ಹುಡುಗನಿಗೆ ಪ್ರೀತಿಸಿದ್ದ ಹುಡುಗಿಯವರ ಸಂಬಂಧಿಕರ ಮುಂದಾಳತ್ವದಲ್ಲಿ ಬುಧವಾರ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ಮಾಡಲಾಗಿತ್ತು. ಮನೆ ಕಟ್ಟಿ ಮದುವೆಯಾಗ್ತಿನಿ ಎನ್ನುತ್ತಿದ್ದವನಿಗೆ ಮದುವೆ ಮಾಡಿದ್ದೇ ಎಡವಟ್ಟಾಯಿತ್ತೋ ಏನೋ, ಆತ ಜಿಲ್ಲಾಸ್ಪತ್ರೆಯಲ್ಲಿ ತಡರಾತ್ರಿ ಮದ್ಯ ಸೇವಿಸಿ ನೇಣಿಗೆ ಶರಣಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಹತ್ತು ವರ್ಷದಿಂದ ಡೇಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್ ಬಾಬು(೩೩) ಎಂಬಾತ ಜಿಲ್ಲಾಸ್ಪತ್ರೆಯ ಇ.ಎನ್.ಟಿ ವಿಭಾಗದ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ.
ಆತ್ಮಹತ್ಯೆ ಬಗ್ಗೆ ಅನುಮಾನ
ಬಂಗಾರಪೇಟೆ ತಾಲೂಕಿನ ನಾಯಕರಹಳ್ಳಿ ಹರೀಶ್ ಬಾಬು ಸಾವಿನ ಹಿಂದೆ ಸಾಕಷ್ಟು ಅನುಮಾನ ಮೂಡಿಸಿದೆ. ನಿನ್ನೆಯಷ್ಟೇ ಸಹೋದ್ಯೋಗಿ ಪ್ರಿಯತಮೆ ಶಿವರಂಜಿನಿ ಜತೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದ ಹರೀಶ್ ನೇಣಿಗೆ ಶರಣಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ..
ಹರೀಶ್‌ಬಾಬು ಮತ್ತು ಶಿವರಂಜಿನಿ ನಡೆವೆ ಈ ಹಿಂದೆ ಮನಸ್ತಾಪ ಉಂಟಾಗಿತ್ತು. ಈ ಕಾರಣದಿಂದಲೇ ಶಿವರಂಜಿನಿ ಹರಿಶ್ ಬಾಬುನನ್ನು ಮದುವೆಯಾಗುವಂತೆ ಕೇಳಿದ್ದಾಳೆ ಇದಕ್ಕೆ ಹರೀಶ್ ಬಾಬು ಆಷಾಢಮಾಸ ಮುಗಿಯಲಿ ಎಂದಿದ್ದಾನೆ. ಇದಕ್ಕೆ ಶಿವರಂಜಿನಿ ಒಪ್ಪದ ಕಾರಣ ಸಂಬಂಧಿಕರು ಸೇರಿ ಕೋಲಾರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇಬ್ಬರಿಗೂ ಮದುವೆ ಮಾಡಿಸಿದ್ದಾರೆ.
ಮದ್ಯ ಸೇವಿಸಿ ಆತ್ಮಹತ್ಯೆ
ಮದುವೆ ಮುಗಿದ ನಂತರ ಎಲ್ಲರೂ ಮನೆಗೆ ವಾಪಸ್ ಹೋಗಿದ್ದಾರೆ. ಹರೀಶ್ ಬಾಬು ತನ್ನ ತಾಯಿಯನ್ನು ಊರಿಗೆ ಬಿಟ್ಟು ವಾಪಸ್ ಕೋಲಾರಕ್ಕೆ ಬಂದಿದ್ದ ನಂತರ ಸುಮಾರು ಹನ್ನೊಂದು ಗಂಟೆ ಸುಮಾರಿಗೆ ಮದ್ಯದ ಬಾಟಲಿಯೊಂದಿಗೆ ಜಿಲ್ಲಾಸ್ಪತ್ರೆಯ ಕೊಠಡಿಗೆ ಬಂದವನೇ ಮದ್ಯ ಸೇವಿಸಿ ನಂತರ ಅಲ್ಲೇ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಲವಂತದ ಮದುವೆಯೇ ಆತ್ಮಹತ್ಯೆಗೆ ಕಾರಣ ಕಾರಣ ಎಂದು ಹರೀಶ್ ಬಾಬು ಸಂಬಂಧಿಕರು ಆರೋಪಿಸಿದ್ದಾರೆ.