ಸಾರಾಂಶ
ತುಂಗಭದ್ರಾ ಜಲಾಶಯದ ಏಳು ಗೇಟ್‌ಗಳು ಬೆಂಡ್ (ಬಾಗಿವೆ) ಆಗಿವೆ ಎಂದು ಅಣೆಕಟ್ಟೆ ಸುರಕ್ಷತಾ ಪರಿಶೀಲನಾ ಕಮಿಟಿ ವರದಿ ನೀಡಿದೆ. ಕ್ರಸ್ಟ್ ಗೇಟ್ ನಂಬರ್ 4, 11, 18, 20, 24, 27 ಹಾಗೂ 28ನೇ ಗೇಟ್‌ಗಳು ಬಾಗಿವೆ (ಬೆಂಡ್).
ಹೊಸಪೇಟೆ\ಕೊಪ್ಪಳ : ತುಂಗಭದ್ರಾ ಜಲಾಶಯದ ಏಳು ಗೇಟ್‌ಗಳು ಬೆಂಡ್ (ಬಾಗಿವೆ) ಆಗಿವೆ ಎಂದು ಅಣೆಕಟ್ಟೆ ಸುರಕ್ಷತಾ ಪರಿಶೀಲನಾ ಕಮಿಟಿ ವರದಿ ನೀಡಿದೆ. ಕ್ರಸ್ಟ್ ಗೇಟ್ ನಂಬರ್ 4, 11, 18, 20, 24, 27 ಹಾಗೂ 28ನೇ ಗೇಟ್‌ಗಳು ಬಾಗಿವೆ (ಬೆಂಡ್). ಇದರಲ್ಲಿ, 6 ಗೇಟ್ಗಳನ್ನು ಮೇಲೆ ಎತ್ತಲು ಹಾಗೂ ಇಳಿಸಲು ಆಗುತ್ತಿಲ್ಲ. ಗೇಟ್ ನಂಬರ್ 4 ಅನ್ನು ಕೇವಲ ಎರಡು ಅಡಿ ಮಾತ್ರ ಮೇಲಕ್ಕೆ ಎತ್ತಬಹುದು. ಗೇಟ್ ನಂ.4 ಸೇರಿದಂತೆ ಒಟ್ಟು 7 ಗೇಟ್‌ಗಳು ಹಾನಿ ಆಗಿವೆ. ಈಗ ಜಲಾಶಯದಲ್ಲಿ 80 ಟಿಎಂಸಿ ನೀರು ಮಾತ್ರ ಸಂಗ್ರಹ ಮಾಡಲಾಗುತ್ತಿದೆ. ಜಲಾಶಯದ ಒಳಹರಿವು ಏರಿದರೆ ಅಪಾಯ ಉಂಟಾಗಬಹುದು ಎಂಬ ಆತಂಕ ಮನೆ ಮಾಡಿದೆ.
ಜಲಾಶಯದ 19ನೇ ಕ್ರಸ್ಟ್ ಗೇಟ್ ಕಳೆದ ವರ್ಷ ಆ.10ರ ರಾತ್ರಿ ಕಳಚಿ ಬಿದ್ದಿತ್ತು. ಪರಿಣತ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಕಳೆದ ವರ್ಷ ಆ.17ರಂದು ಸ್ಟಾಪ್ ಲಾಗ್ ಅಳವಡಿಸಲಾಗಿತ್ತು. ಇದುವರೆಗೆ ಈ ಗೇಟ್‌ಗೆ ಶಾಶ್ವತ ಗೇಟ್ ಅಳವಡಿಸಿಲ್ಲ. ಗೇಟ್ ನಿರ್ಮಾಣಗೊಂಡಿದ್ದರೂ ಅಳವಡಿಕೆಗೆ ಒಳಹರಿವು ತೊಡಕಾಗಿದೆ. ಈ ಕಡೆ ಏಳು ಗೇಟ್‌ಗಳು ಕಾರ್ಯಾಚರಿಸಲು ಆಗದೇ ಇರುವುದರಿಂದ ಒಮ್ಮೆಲೇ 2 ಲಕ್ಷ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬಂದರೆ ಪರಿಸ್ಥಿತಿ ಏನು ಎಂಬ ಆತಂಕವೂ ಅಧಿಕಾರಿಗಳ ವಲಯದಲ್ಲಿ ಮನೆ ಮಾಡಿದೆ.
ಈ ವರ್ಷ 1 ಲಕ್ಷ 50 ಸಾವಿರ ಕ್ಯುಸೆಕ್ ವರೆಗೆ ನೀರು ನದಿಗೆ ಹರಿಸಲಾಗಿದೆ. 2 ಲಕ್ಷ ಕ್ಯುಸೆಕ್ ಮೀರಿ ನೀರು ಒಮ್ಮೆಲೇ ಹರಿದು ಬಂದರೆ ನದಿಗೆ ಬಿಡುವಾಗ ಯಾವ ರೀತಿ ನಿರ್ವಹಣೆ ಮಾಡಬೇಕು? ಇರುವ 32 ಗೇಟ್‌ಗಳಲ್ಲಿ ಏಳು ಗೇಟ್‌ಗಳು ಬೆಂಡಾಗಿರುವುದರಿಂದ ಈ ಮಳೆಗಾಲದಲ್ಲಿ ಪ್ರವಾಹ ಉಂಟಾಗದಿದ್ದರೆ ಅಪಾಯದಿಂದ ಪಾರಾಗುತ್ತೇವೆ. ಈಗಾಗಲೇ ಗದಗ ಬಳಿ ಕ್ರಸ್ಟ್ ಗೇಟ್‌ಗಳ ನಿರ್ಮಾಣ ಕಾರ್ಯ ನಡೆದಿದೆ. ತುಂಗಭದ್ರಾ ಮಂಡಳಿ ಅಧಿಕಾರಿಗಳು ಹಾಗೂ ಪರಿಣತರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮಂಡಳಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಒಂದು ಕಡೆಯಲ್ಲಿ ಮಳೆ ಜೋರಾಗುತ್ತಿದೆ. ಇನ್ನೊಂದೆಡೆ ಈ ವರ್ಷ ಜಲಾಶಯ ಭರ್ತಿಯಾಗದಂತೆ ನೀರನ್ನು ಹರಿಬಿಡಲಾಗಿದೆ. ಇದರಿಂದ ಜಲಾಶಯಕ್ಕೆ ಬಾಗಿನ ಕೂಡ ಅರ್ಪಣೆ ಮಾಡಲಾಗಿಲ್ಲ. ಈ ನಡುವೆ ಏಳು ಗೇಟ್‌ಗಳು ಕೈಕೊಟ್ಟಿರುವುದು ಭಾರೀ ಚರ್ಚೆಗೀಡು ಮಾಡಿದೆ.
ಈ ಮಧ್ಯೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಕೊಪ್ಪಳದಲ್ಲಿ ಮಾತನಾಡಿ, 7 ಗೇಟ್‌ಗಳು ಬಾಗಿವೆ. ಹಾಗೂ ಇತರ ಗೇಟ್‌ನಲ್ಲಿ ಸಮಸ್ಯೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ತಜ್ಞರ ಸಮಿತಿ ನೀಡಿದ ವರದಿ ಹಿನ್ನೆಲೆಯಲ್ಲಿ ಈ ನಿಗಾ ಇಡಲಾಗಿದೆ. ಹೀಗಾಗಿ ಜಲಾನಯನ ಪ್ರದೇಶದಲ್ಲಿ ಎಡೆಬಿಡದೆ ಮಳೆಯಾದರೆ ಆತಂಕವಾಗದಿರಲಿ ಎಂದು ಕಡಿಮೆ ನೀರು ಸಂಗ್ರಹಿಸಲಾಗುತ್ತಿದೆ. ಆದರೂ ಈಗಿರುವ ಮುಂಗಾರು ಬೆಳೆಗೆ ನೀರಿನ ಸಮಸ್ಯೆ ಇಲ್ಲ. ಆದರೆ, ಹಿಂಗಾರು ಬೆಳೆ ಕುರಿತು ಈಗಲೇ ಹೇಳಲು ಆಗದು ಎಂದರು.
ಕೇಂದ್ರ ಸರ್ಕಾರ ನಿರ್ಲಕ್ಷ್ಯ
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಮುರಿದ ಮೇಲೆ ಸಮಸ್ಯೆ ಇರುವ ಉಳಿದ ಗೇಟ್ ದುರಸ್ತಿ ಮಾಡುವಲ್ಲಿ ತುಂಗಭದ್ರಾ ಬೋರ್ಡ್ ಮತ್ತು ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿದ್ದರಿಂದ ವಿಳಂಬವಾಗಿದೆ. ಹೀಗಾಗಿ ಈ ಕುರಿತು ಕೇಂದ್ರ ಸರ್ಕಾರಕ್ಕೆ ಹಲವಾರು ಬಾರಿ ಪತ್ರ ಬರೆದಿದ್ದೇವೆ.
-ಶಿವರಾಜ ತಂಗಡಗಿ, ಸಚಿವ.