ಸಮಗ್ರ ಕೃಷಿ ಮಾಡಿ ಮಾದರಿಯಾದ ಕೃಷ್ಣಾಬಾಯಿ

| Published : May 21 2024, 12:44 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಕುಡಿಯೋಕೆ ನೀರಿಲ್ಲ, ಭೀಕರ ಬರದ ಮಧ್ಯೆ ಕುಡಿಯೋದಕ್ಕೆ ನೀರು ಸಿಕ್ಕರೆ ಸಾಕೆಂದು ಜನರು ಪರದಾಟ ನಡೆಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯೊಬ್ಬಳು ಸಮಗ್ರ ಕೃಷಿ ಮಾಡುವ ಮೂಲಕ ಕೃಷಿ ಮಾಡುವ ಮೂಲಕ ರೈತರೇ ಹುಬ್ಬೇರುವಂತೆ ಮಾಡಿದ್ದಾಳೆ. ಕೃಷಿ ನಂಬಿದವರನ್ನು ಕೈಬಿಟ್ಟಿಲ್ಲ ಎನ್ನುವುದಕ್ಕೆ ಈ ಮಹಿಳೆಯೇ ಸಾಕ್ಷಿ ಎನ್ನಬಹುದು. 54 ವರ್ಷದ ಕೃಷ್ಣಾಬಾಯಿ ಶಿವಾಜಿ ಸಾಳುಂಕೆ ಎಂಬ ರೈತ ಮಹಿಳೆ ಈ ಸಾಧನೆಗೆ ಸಾಕ್ಷಿಯಾದವರು.

ಖಾಜಾಮೈನುದ್ದೀನ್ ಪಟೇಲ್

ಕನ್ನಡಪ್ರಭ ವಾರ್ತೆ ವಿಜಯಪುರ

ಕುಡಿಯೋಕೆ ನೀರಿಲ್ಲ, ಭೀಕರ ಬರದ ಮಧ್ಯೆ ಕುಡಿಯೋದಕ್ಕೆ ನೀರು ಸಿಕ್ಕರೆ ಸಾಕೆಂದು ಜನರು ಪರದಾಟ ನಡೆಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯೊಬ್ಬಳು ಸಮಗ್ರ ಕೃಷಿ ಮಾಡುವ ಮೂಲಕ ಕೃಷಿ ಮಾಡುವ ಮೂಲಕ ರೈತರೇ ಹುಬ್ಬೇರುವಂತೆ ಮಾಡಿದ್ದಾಳೆ. ಕೃಷಿ ನಂಬಿದವರನ್ನು ಕೈಬಿಟ್ಟಿಲ್ಲ ಎನ್ನುವುದಕ್ಕೆ ಈ ಮಹಿಳೆಯೇ ಸಾಕ್ಷಿ ಎನ್ನಬಹುದು. 54 ವರ್ಷದ ಕೃಷ್ಣಾಬಾಯಿ ಶಿವಾಜಿ ಸಾಳುಂಕೆ ಎಂಬ ರೈತ ಮಹಿಳೆ ಈ ಸಾಧನೆಗೆ ಸಾಕ್ಷಿಯಾದವರು.

ವಿಜಯಪುರ ಜಿಲ್ಲೆಯಲ್ಲಿರುವ ಪಂಚ ನದಿಗಳು ಕೂಡ ಬತ್ತಿ, ಬೋರ್‌ವೆಲ್‌ಗಳು ಕೈಕೊಟ್ಟು ರೈತರು ಬೆಳೆಗಳನ್ನು ಬೆಳೆಯಲಾಗದೇ ಕಂಗಾಲಾಗಿದ್ದಾರೆ. ಇದರ ನಡುವೆ ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಇಂತಹದ್ದರಲ್ಲಿ ಕೃಷ್ಣಾ ಬಾಯಿ ಸಾಳುಂಕೆ ಇರುವ 4 ಎಕರೆ ಜಮೀನಿನಲ್ಲಿ ತರಹೇವಾರಿ ಬೆಳೆಗಳನ್ನು ಬೆಳೆದಿದ್ದಾರೆ. ಅತಾಲಟ್ಟಿ ಬಳಿ ರಸ್ತೆಯಲ್ಲಿರುವ ಜಮೀನಿನಲ್ಲಿ ಸಮಗ್ರ ಕೃಷಿ ಮಾಡಿ ಯಶಸ್ಸು ಕಂಡಿದ್ದಾರೆ. ಅವರದ್ದು ಸಂಪೂರ್ಣ ನೈಸರ್ಗಿಕ ಕೃಷಿಯಾಗಿದ್ದು, ಯಾವುದೇ ರಾಸಾಯನಿಕ ಬಳಸದೆ ಮಿಶ್ರ ಬೆಳೆಯನ್ನೇ ಅಳವಡಿಸಿಕೊಂಡಿದ್ದಾರೆ.

ಬರದಲ್ಲಿ ಬೋರ್‌ವೆಲ್‌ಗಳೇ ಆಧಾರ:

ನಾಲ್ಕು ಎಕರೆ ಜಮೀನಿನಲ್ಲಿ ಎರಡು ಬೋರ್‌ವೆಲ್‌ಗಳನ್ನು ಬಳಸಿ ಸಾವಯವ ಕೃಷಿಯನ್ನೇ ಪ್ರಧಾನವಾಗಿಸಿ ದುಡಿಯುತ್ತಿದ್ದಾರೆ. ಅಕ್ಷರ ಜ್ಞಾನ ಇಲ್ಲ. ಆದರೂ, ಕೃಷಿ ತಜ್ಞರಂತೆ ಹೆಚ್ಚಿನ ಅನುಭವ ಹೊಂದಿದ್ದಾರೆ. ಕೃಷಿ ಕೆಲಸವೇ ಉಸಿರು, ಸಂಪೂರ್ಣ ನೈಸರ್ಗಿಕ ಪದ್ಧತಿ ಮೂಲಕವೇ ಬೆಳೆ ಬೆಳೆದು ಸಾಕಷ್ಟು ಲಾಭ ಗಳಿಸಿದ್ದಾರೆ. ಇವರ ಜಮೀನಿನಲ್ಲಿ ಹಣ್ಣಿನ ಮರಗಳು, ಅರಣ್ಯ ಕೃಷಿ, ರೇಷ್ಮೆ ಕೃಷಿ, ತರಕಾರಿ ಬೆಳೆಗಳು, ತೆಂಗು ಜೊತೆಗೆ ಹೈನುಗಾರಿಕೆ, ಕುರಿ, ಕೋಳಿ, ದೇಸಿ ಹಸು ಸಾಕಾಣಿಕೆ, ಎರೆಹುಳು ಗೊಬ್ಬರ ತಯಾರಿಕೆ ಘಟಕ ಮಾಡುತ್ತಿದ್ದು ಮಣ್ಣಿನ ಸಂರಕ್ಷಣೆ ಜೊತೆಗೆ ನೀರಿನ ಸಂರಕ್ಷಣೆ ಕೂಡ ಮಾಡುತ್ತಿದ್ದಾರೆ.

ಇವರೇ ಆಳು, ಇವರೇ ಮಾಲಕಿ:

ಜಮೀನಿನಲ್ಲಿ ಪ್ರತಿಯೊಂದು ಕೆಲಸವನ್ನು ಇವರೇ ಮಾಡುತ್ತಾರೆ. ಯಾವುದೇ ಆಳು ತೆಗೆದುಕೊಳ್ಳದೆ ತಾವೇ ಸ್ವತಃ ಕೆಲಸ ಮಾಡುತ್ತಾರೆ. ಟ್ರ್ಯಾಕ್ಟರ್ ಚಾಲನೆ, ರಂಟೆ ಹೊಡೆಯುವುದು, ಜಮೀನು ಹರಗುವುದು ಸೇರಿದಂತೆ ಜಮೀನಿಗೆ ಬೇಕಾದ ಎಲ್ಲ ಕೆಲಸಗಳನ್ನು ಮಾಡುತ್ತಾರೆ. ಹಾಗೇ, ಬೆನ್ನಿಗೆ ಪಂಪ್ ಕಟ್ಟಿಕೊಂಡು ಬೆಳೆಗಳಿಗೆ ಔಷಧ ಕೂಡ ಸಿಂಪಡಣೆ ಮಾಡುತ್ತಾರೆ. ಅಷ್ಟೇ ಅಲ್ಲ, ಬೆಳೆಗಳಿಗೆ ನೀರುಣಿಸುವುದರಿಂದ ಹಿಡಿದು ಎಲ್ಲ ಕೃಷಿ ಕೆಲಸಗಳನ್ನು ಇವರೇ ಮಾಡುತ್ತಾರೆ.ಈ ಕೃಷಿ ಪದ್ಧತಿಯಲ್ಲಿ ಒಂದು ಬೆಳೆ ನಷ್ಟವಾದರೂ ಮತ್ತೊಂದು ಬೆಳೆಯಿಂದ ಆದಾಯ ಬರುತ್ತದೆ. ಜಮೀನಿನಲ್ಲಿ ಅನೇಕ ಹೊಸ ಹೊಸ ಪ್ರಯೋಗಗಳನ್ನು ಮಾಡಿ ತರಕಾರಿಗಳು ಏಕಕಾಲದಲ್ಲಿ ಕಡಿಮೆ ಖರ್ಚಿನಲ್ಲಿ ಬೆಳೆಯುತ್ತಾರೆ. ಯಾವ ತರಕಾರಿ ಯಾವಾಗ ಬೆಳೆಯಬೇಕು, ಹೇಗೆ ಮಾರಾಟ ಮಾಡಬೇಕು ಎಂಬ ಬಗ್ಗೆ ಮಾರುಕಟ್ಟೆಯವರಿಂದ ಮಾಹಿತಿ ಪಡೆದು ಅದೇ ರೀತಿ ಅನುಸರಣೆ ಮಾಡುತ್ತಿದ್ದಾರೆ.

ಹೈನುಗಾರಿಕೆ ಬೇರೆ:

ಇಂದು ಕೃಷಿಯಲ್ಲಿ ಒಂದೇ ಪದ್ಧತಿ ಅಳವಡಿಸಿದರೆ ನಷ್ಟ ಸಾಧ್ಯತೆ ಹೆಚ್ಚು. ಅದಕ್ಕೆ ಸಮಗ್ರ ಕೃಷಿ ಆಯ್ದುಕೊಂಡಿದ್ದು, ಹೈನುಗಾರಿಕೆ ಹೆಚ್ಚಿನ ಬೇಡಿಕೆ ಬಂದಿದೆ. ಅದಕ್ಕಾಗಿ ಕೃಷ್ಣಾಬಾಯಿ ನಾಲ್ಕು ಎಮ್ಮೆ, ಎರಡು ಆಕಳು, 12 ಕುರಿ ಸೇರಿದಂತೆ ಕೋಳಿ, ನಾಯಿ ಸಾಕಾಣಿಕೆಯನ್ನು ಮಾಡುತ್ತಿದ್ದಾರೆ. ಇವರ ಬಳಿ ಗಿರಿರಾಜ, ಕಕ್ಕೇರಿ, ಜವಾರಿ ತಳಿಯ ಕೋಳಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಕನ್ಹೇರಿ ಮಠದ ಕಾಡಸಿದ್ದೇಶ್ವರ ಶ್ರೀ ಪ್ರೇರಣೆ:

ಕೃಷ್ಣಾಬಾಯಿ ಇಷ್ಟೊಂದು ಅಚ್ಚುಕಟ್ಟಾಗಿ ಸಮಗ್ರ ಕೃಷಿ ಮಾಡಬೇಕಾದರೆ ಕನ್ಹೇರಿ ಮಠದ ಕಾಡಸಿದ್ದೇಶ್ವರ ಶ್ರಿಗಳೇ ಪ್ರೇರಣೆಯಂತೆ. ಕಾಡಸಿದ್ದೇಶ್ವರ ಸ್ವಾಮೀಜಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಮಗ್ರ ಕೃಷಿ ಹಾಗೂ ಬೇಸಾಯದ ಬಗೆಗಿನ ವಿಡಿಯೋ ನೋಡಿ ಬಳಿಕ ಸ್ವಾಮೀಜಿಗಳನ್ನು ಭೇಟಿ ಮಾಡಿ ಸಮಗ್ರ ಕೃಷಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರಂತೆ. ಅದೇ ಮಾದರಿಯಲ್ಲಿ ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದು, ಇದೀಗ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾಳೆ.

------

ಕೋಟ್

ಭೂಮಿ ತಾಯಿ ನಂಬಿದವರನ್ನು ಯಾವತ್ತು ಯಾರನ್ನು ಕೈ ಬಿಟ್ಟಿಲ್ಲ. ಶ್ರದ್ಧೆಯಿಂದ ಮಹಿಳೆಯರು ಸಹಿತ ಕೃಷಿಯಲ್ಲಿ ಆದಾಯ ಗಳಿಸಬಹುದು. ಇದರಿಂದಲೇ ನಾನು ನನ್ನ ಮಕ್ಕಳಗಿಂತ ಹೆಚ್ಚು ಆದಾಯ ಗಳಿಸುತ್ತಿದ್ದೇನೆ. ಅವರ ಸಹಾಯ ನನಗೆ ಬೇಕಿಲ್ಲ. ನಾನೇ ಸ್ವತಃ ಬೇಸಾಯ ಮಾಡುತ್ತೇನೆ.

- ಕೃಷ್ಣಾಬಾಯಿ ಸಾಳುಂಕೆ, ಮಾದರಿ ರೈತ ಮಹಿಳೆ.

----------------

ಬಾಕ್ಸ್‌

ಮಕ್ಕಳ ಸಂಬಂಳಕ್ಕಿಂತ ಅಧಿಕ ಆದಾಯ

ಕೃಷಿಯಲ್ಲಿ ತೊಡಗಿರುವ ಕೃಷ್ಣಾಬಾಯಿ ಸಾಳುಂಕೆಗೆ ಇಬ್ಬರು ಗಂಡು ಮಕ್ಕಳಿದ್ದು, ಇಬ್ಬರು ಸ್ಥಳೀಯ ಕೆಇಬಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳು ನೌಕರಿಯಲ್ಲಿದ್ದರೂ ತಾವು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಬೇಕು ಎಂಬ ಆಸೆಯಿಂದ ಕೃಷ್ಣಾಬಾಯಿ ಕಳೆದ 14 ವರ್ಷಗಳಿಂದ ಈ ಕೃಷಿ ಆಯ್ದುಕೊಂಡಿದ್ದಾರೆ. ಇದರಿಂದಲೇ ಮಕ್ಕಳ ಸಂಬಳಕ್ಕಿಂತ ಅಧಿಕ ಆದಾಯವನ್ನು ಪಡೆಯುತ್ತಿದ್ದು, ಮಕ್ಕಳ ಸಹಕಾರವೇ ಬೇಡ ಎನ್ನುತ್ತಾರೆ. ತಾನು ಈ ಭೂಮಿ ತಾಯಿ ಸೇವೆ ಮಾಡುತ್ತಿದ್ದೇನೆ, ಒಟ್ಟು ನಾಲ್ಕು ಎಕರೆ ಜಮೀನಿನಲ್ಲಿ 1400 ಮಹಾಘನಿ ಗಿಡ, 60 ಸಾಗವಾನಿ, 30 ರಕ್ತ ಚಂದನ, 80 ತೆಂಗಿನ ಮರ, 50 ಸೀತಾಫಲ, 60 ಮಾವು, 60 ಪೇರು ಗಿಡಗಳು ಸೇರಿದಂತೆ ವಿವಿಧ ಹಣ್ಣಿನ ಗಿಡಗಳು ನಡೆಲಾಗಿದ್ದು, ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ.