ಮುಂಡಗೋಡ ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ

| Published : Jun 30 2025, 12:34 AM IST

ಮುಂಡಗೋಡ ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ
Share this Article
  • FB
  • TW
  • Linkdin
  • Email

ಸಾರಾಂಶ

ಸೂಕ್ತ ಚಿಕಿತ್ಸೆ ಸಿಗದೇ ರೋಗಿಗಳು ಪರದಾಡುವಂತಾಗಿದೆ.

ಮುಂಡಗೋಡ: ನಗರದ ತಾಲೂಕು ಮಟ್ಟದ ೧೦೦ ಹಾಸಿಗೆ ಸಾಮರ್ಥ್ಯದ ಸರ್ಕಾರಿ ಆಸ್ಪತ್ರೆ ಮೂಲಭೂತ ಸೌಲಭ್ಯ ಹೊಂದಿದ್ದರೂ ಅಗತ್ಯ ವೈದ್ಯರಿಲ್ಲದೇ ಸೊರಗುತ್ತಿದೆ.

ಸೂಕ್ತ ಚಿಕಿತ್ಸೆ ಸಿಗದೇ ರೋಗಿಗಳು ಪರದಾಡುವಂತಾಗಿದೆ. ಆಸ್ಪತ್ರೆಯಲ್ಲಿ ಅಗತ್ಯ ಮೂಲಭೂತ ಅತ್ಯಾಧುನಿಕ ಸೌಲಭ್ಯಗಳಿವೆ. ಆದರೆ ಹೃದ್ರೋಗ ತಜ್ಞ, ಮಕ್ಕಳ ತಜ್ಞ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವೈದ್ಯರಿಲ್ಲದೇ ಇರುವುದರಿಂದ ಚಿಕಿತ್ಸೆ ಸಿಗದ ಕಾರಣ ಇಲ್ಲಿಯ ಜನ ಸಾವಿರಾರು ರುಪಾಯಿ ವೆಚ್ಚ ಮಾಡಿಕೊಂಡು ಹುಬ್ಬಳ್ಳಿ ಮುಂತಾದ ಕಡೆಗೆ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ.

ಪಟ್ಟಣ ಸೇರಿದಂತೆ ತಾಲೂಕು ಹಾಗೂ ಪಕ್ಕದ ಗಡಿ ಜಿಲ್ಲೆ ಹಾವೇರಿಯ ಶಿಗ್ಗಾಂವಿ, ಹಾನಗಲ್ಲ, ಧಾರವಾಡ ಜಿಲ್ಲೆ ಕಲಘಟಗಿ ತಾಲೂಕುಗಳ ಗ್ರಾಮೀಣ ಭಾಗದಿಂದ ನಿತ್ಯ ನೂರಾರು ಸಂಖ್ಯೆ ರೋಗಿಗಳು ಚಿಕಿತ್ಸೆ ಪಡೆಯಲೆಂದು ಇಲ್ಲಿಗೆ ಬರುತ್ತಾರೆ. ಆಸ್ಪತ್ರೆಯ ಬಹುತೇಕ ವಿಭಾಗದಲ್ಲಿ ವೈದ್ಯರಿಲ್ಲದ ಕಾರಣ ರೋಗಿಗಳು ಚಿಕಿತ್ಸೆ ಸಿಗದೇ ಬಂದ ದಾರಿಗೆ ಸುಂಕವಿಲ್ಲ ಎಂದು ಮರಳುವಂತಾಗಿದೆ.

ಅಗತ್ಯ ವೈದ್ಯರಿಲ್ಲದ ಕಾರಣ ಆಸ್ಪತ್ರೆಗೆ ಬರುವ ಬಹುತೇಕ ರೋಗಿಗಳನ್ನು ಹುಬ್ಬಳ್ಳಿ ಕಿಮ್ಸ್‌ಗೆ ಹೋಗುವಂತೆ ಸೂಚಿಸಲಾಗುತ್ತದೆ. ಇದರಿಂದಾಗಿ ರೋಗಿಗಳು ಖಾಸಗಿ ಆಸ್ಪತ್ರೆಗೆ ಅಥವಾ ಹುಬ್ಬಳ್ಳಿ ಕಿಮ್ಸ್‌ಗೆ ಹೋಗುವುದು ಅನಿವಾರ್ಯವಾಗಿದೆ.

ನೂರು ಹಾಸಿಗೆ ಆಸ್ಪತ್ರೆಗೆ ಆರೇ ವೈದ್ಯರು:

೧೪ ವೈದ್ಯರ ಮಂಜೂರು ಹುದ್ದೆಗಳಿವೆ. ಆದರೆ ಹಾಲಿ ಕಾರ್ಯ ನಿರ್ವಹಿಸುತ್ತಿರುವುದು ೬ ಜನ ಮಾತ್ರ. ಇನ್ನುಳಿದ ೪ ತಜ್ಞ, ೪ ವೈದ್ಯಾಧಿಕಾರಿ ಹುದ್ದೆ ಸೇರಿದಂತೆ ೮ ವೈದ್ಯರ ಹುದ್ದೆಗಳು ಖಾಲಿ ಇವೆ. ಬಹುತೇಕ ತಜ್ಞ ವೈದ್ಯರ ಹುದ್ದೆ ಖಾಲಿ ಇರುವುದರಿಂದ ವಿವಿಧ ಕಾಯಿಲೆಗೆ ಸ್ಥಳೀಯವಾಗಿ ಚಿಕಿತ್ಸೆ ಸಿಗದೇ ದೂರದ ಹುಬ್ಬಳ್ಳಿ, ಶಿರಸಿ ಮುಂತಾದ ಪಟ್ಟಣಗಳಿಗೆ ತೆರಳಿ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ರೋಗಿಗಳಿಗೆ ಬಂದೊದಗಿದೆ. ಆಸ್ಪತ್ರೆಗೆ ೨೦ ಸ್ಟಾಫ್‌ ನರ್ಸ್‌ ಹುದ್ದೆ ಮಂಜೂರಿ ಇದ್ದರೂ ಬಹುತೇಕ ನರ್ಸ್‌ಗಳ ಕೊರತೆ ಇರುವುದು ಕೂಡ ಗಮನಾರ್ಹ ವಿಷಯವಾಗಿದೆ.

ಸೌಲಭ್ಯದ ಕೊರತೆ:

ಸುತ್ತಮುತ್ತಲಿನ ತಾಲೂಕು ಆಸ್ಪತ್ರೆಗಳಿಗಿಂತ ಹೆಚ್ಚು ರೋಗಿಗಳು ಈ ಆಸ್ಪತ್ರೆಗೆ ಬರುತ್ತಾರೆ. ಆದರೆ ಅಗತ್ಯ ವೈದ್ಯರಿಲ್ಲದ ಕಾರಣ ೨-೩ ಜನರ ಹೊರೆ ಒಬ್ಬರ ಮೇಲೆ ಬೀಳುತ್ತಿದೆ. ಹೀಗಾಗಿ ಹೆಚ್ಚಿನ ವೈದ್ಯರು ಇಲ್ಲಿ ಕಾರ್ಯನಿರ್ವಹಿಸಲು ಮನಸ್ಸು ಮಾಡುತ್ತಿಲ್ಲ. ಇದು ಒಂದು ಕಡೆಯಾದರೆ ವೈದ್ಯರಿಗೆ ಉತ್ತಮ ಗುಣಮಟ್ಟದ ವಸತಿ ಗೃಹಗಳ ವ್ಯವಸ್ಥೆ ಇಲ್ಲದೇ ಇರುವುದರಿಂದ ಕುಟುಂಬ ಸಮೇತ ಇಲ್ಲಿ ನೆಲೆಸಲು ಹಲವರು ಇಷ್ಟಪಡುವುದಿಲ್ಲ.

ಹೆರಿಗೆ ಸಂಖ್ಯೆ ಕ್ಷೀಣ:

ಹಿಂದೆ ಈ ಆಸ್ಪತ್ರೆಯಲ್ಲಿ ತಿಂಗಳಿಗೆ ಸುಮಾರು ೮೦ರಿಂದ ೧೦೦ ಹೆರಿಗೆ ಮಾಡಲಾಗುತ್ತಿತ್ತು. ಆದರೆ ಈಗ ತಿಂಗಳಿಗೆ ಹೆರಿಗೆ ಆಗುವ ಸಂಖ್ಯೆ ಕೇವಲ ೨೫-೩೦ ಮಾತ್ರ. ಅಗತ್ಯ ವೈದ್ಯರ ಕೊರತೆಯಿಂದ ಬಹುತೇಕ ಗರ್ಭಿಣಿಯರು ಬೇರೆ ಕಡೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆರಿಗೆ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ.

ನಿತ್ಯ ೩೦೦-೪೦೦ ರೋಗಿಗಳು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬರುತ್ತಾರೆ. ತಜ್ಞ ವೈದ್ಯರಿಲ್ಲದ ಕಾರಣಕ್ಕೆ ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್‌ಗೆ ಕಳುಹಿಸುವುದು ಅನಿವಾರ್ಯವಾಗುತ್ತಿದೆ. ಸದ್ಯ ವೈದ್ಯರ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲಿ ಅಗತ್ಯ ವೈದ್ಯರು ಬರುವ ಸಾಧ್ಯತೆ ಇದೆ. ಸ್ವರೂಪರಾಣಿ, ತಾಲೂಕು ಆಡಳಿತ ವೈದ್ಯಾಧಿಕಾರಿ.