ಮಾತೃಭಾಷೆ ಕಲಿಕೆಯಲ್ಲಿ ಹಿಂದುಳಿಯುವಿಕೆ ಆತಂಕಕಾರಿ

| Published : Nov 23 2025, 01:15 AM IST

ಸಾರಾಂಶ

ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಏಕೈಕ ಭಾಷೆ ಕನ್ನಡ ಅಂತಹ ಕನ್ನಡ ಭಾಷೆಯ ಸೊಗಡನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಮತ್ತು ಪಸರಿಸುವ ಕಾರ್ಯವೇ ಕನ್ನಡ ರಾಜ್ಯೋತ್ಸವ ಎಂದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿದ್ಯಾರ್ಥಿಗಳಿಗೆ ಮಾತೃಭಾಷೆ ಶಿಕ್ಷಣ ನೀಡುವುದರಿಂದ ಮಾತೃ ಭಾಷೆಗೆ ಹೆಚ್ಚಿನ ಮಹತ್ವ ನೀಡಿದಂತಾಗುವುದರೊಂದಿಗೆ ಮಕ್ಕಳಲ್ಲಿ ಕಲಿಕೆ ಸರಳವಾಗುತ್ತದೆ. ಆದರೆ ಮಾತೃಭಾಷೆ ಕಲಿಕೆಯಲ್ಲಿ ಇಂದಿನ ವಿದ್ಯಾರ್ಥಿಗಳು ಹಿಂದುಳಿಯುತ್ತಿರುವುದು ಆತಂಕವಾಗಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಮಂಗಳಾನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರ ಹೊರವಲಯದ ಅಗಲಗುರ್ಕಿಯ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಕಾಲೇಜು ವಾರ್ಷಿಕೋತ್ಸವ ಸಂಭ್ರಮ- 2025 ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಏಕೈಕ ಭಾಷೆ ಕನ್ನಡ ಅಂತಹ ಕನ್ನಡ ಭಾಷೆಯ ಸೊಗಡನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಮತ್ತು ಪಸರಿಸುವ ಕಾರ್ಯವೇ ಕನ್ನಡ ರಾಜ್ಯೋತ್ಸವ ಎಂದರು.

ನ. 1 ಎಂಬುದೇ ಕನ್ನಡಿಗರಿಗೆ ದೊಡ್ಡ ಹಬ್ಬ ಈ ಹಬ್ಬವನ್ನು ಕನ್ನಡ ಅಭಿಮಾನಿಗಳಲ್ಲದೆ ಇಡೀ ಪ್ರಪಂಚದಾದ್ಯಂತ ಹೆಮ್ಮೆಯಿಂದ ಆಚರಣೆ ಮಾಡುವ ಮುಖಾಂತರ ಎಲ್ಲಾ ಸಂಘ ಸಂಸ್ಥೆಗಳು ಮತ್ತು ಜನರಲ್ಲಿ ಕನ್ನಡ ಭಾಷೆ ಐಕ್ಯತೆಯನ್ನು ತಂದಿದೆ. ಅಂತಹ ಕನ್ನಡ ರಾಜ್ಯೋತ್ಸವವನ್ನು ನಾವು ಇಂದು ಆಚರಿಸುತ್ತಿದ್ದೇವೆ. ಈ ಭಾಷೆ ಕಲಿಯಲು ಹಿಂಜರಿಕೆ ಏಕೆ, ಕನ್ನಡದ ಮೂಲಕ ಸಾಧನೆ ಮಾಡಿದ ಸಾಧಕರನ್ನು ನೆನೆದು ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಆಶೀರ್ವಚನ ನೀಡಿದರು.

2024-25 ನೆ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಕಿರುಕಾಣಿಕೆಯನ್ನು ವಿತರಿಸಿ, ಪ್ರಸ್ತುತ ಸಾಲಿನ ವಿದ್ಯಾರ್ಥಿಗಳಗೆ ಭಾಷಾ ವಿಷಯದಲ್ಲಿ ಉತ್ತಮ ಅಂಕ ಪಡೆಯಲ್ಲೂ ಕಾರ್ಯಕ್ರಮದ ಅತಿಥಿಗಳು ಮನವರಿಕೆ ಮಾಡಿದರು.

ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಡಾ.ಎನ್. ಶಿವರಾಮರೆಡ್ಡಿ ಮಾತನಾಡಿ, ಒಂದು ಜನಾಂಗವನ್ನು ನಿರ್ಮಾಣ ಮಾಡುವ ಮುನ್ನ ಒಂದು ಭಾಷೆ, ಸಾಹಿತ್ಯ, ಸಂಸ್ಕೃತಿಗಳನ್ನು ಬೆಳೆಸಬೇಕು. ಕನ್ನಡ ಭಾಷೆಯ ಅರ್ಥ ಮತ್ತು ಪ್ರಯೋಗ ಪರಿಣಿತಿ, ಸಾಮರಸ್ಯವು ಜಗತ್ತಿನ ಯಾವ ಭಾಷೆಗೂ ಕಡಿಮೆ ಇಲ್ಲ ಎಂದರು.

ಖ್ಯಾತ ಜನಪದ ಗಾಯಕ ವೆ.ಚಿ. ಅರುಣ್‌ಕುಮಾರ್ ಕೆಲವು ಚಿತ್ರಗೀತೆಗಳನ್ನು ಹಾಡುವುದರ ಮುಖಾಂತರ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಈ ಕಾರ್ಯಕ್ರಮದಲ್ಲಿ ಬಿಜಿಎಸ್ ಪಿಯು ಕಾಲೇಜುಗಳ ಡೀನ್ ಡಾ.ಎನ್. ಮಧುಸೂಧನ್, ಕಾಲೇಜಿನ ಪ್ರಾಂಶುಪಾಲ ಎಚ್. ಬಿ. ರಮೇಶ್, ವಿಜ್ಞಾತಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ರವಿಕುಮಾರ್ ರೆಡ್ಡಿ , ಉಪ ಪ್ರಾಂಶುಪಾಲರಾದ ಜೆ. ಚಂದ್ರಮೋಹನ್, ಜ್ಯೋತಿ ಕಿರಣ್, ಬಿಜಿಎಸ್ ಶಾಲೆಯ ಮುಖ್ಯೋಪಾಧ್ಯಾಯ ಡಿ.ಸಿ.ಮೋಹನ್ ಕುಮಾರ್ ಉಪಸ್ಥಿತರಿದ್ದರು.

ಸಿಕೆಬಿ-3 ನಗರ ಹೊರವಲಯದ ಅಗಲಗುರ್ಕಿಯ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಕಾಲೇಜು ವಾರ್ಷಿಕೋತ್ಸವ ಸಂಭ್ರಮ- 2025 ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣವನ್ನು ಮಂಗಳಾನಾಥ ಸ್ವಾಮೀಜಿ ನೆರವೇರಿಸಿದರು.