ಚುನಾಯಿತ ಸದಸ್ಯರಿಲ್ಲದೆ ಸೊರಗಿದ ಲಕ್ಷಾನಟ್ಟಿ ಗ್ರಾಮ ಪಂಚಾಯಿತಿ

| Published : Oct 17 2025, 01:04 AM IST

ಸಾರಾಂಶ

ಲೋಕಾಪುರ ಗ್ರಾಮ ಪಂಚಾಯತಿ ಚುನಾವಣೆ ನಡೆದು ನಾಲ್ಕು ವರ್ಷ ಸಮೀಪಿಸುತ್ತ ಬಂದರೂ ಲಕ್ಷಾನಟ್ಟಿ ಗ್ರಾಮ ಪಂಚಾಯತಿಗೆ ಮಾತ್ರ ಇದುವರೆಗೂ ಚುನಾವಣೆ ಭಾಗ್ಯ ಕೂಡಿ ಬಂದಿಲ್ಲ. ಅಧಿಕಾರ ವಿಕೇಂದ್ರೀಕರಣದಿಂದ ಗ್ರಾಮೀಣ ಪ್ರದೇಶದ ಅಭಿವೃದ್ಧಿಯಾಗುತ್ತದೆ ಎಂಬ ಲೆಕ್ಕಾಚಾರದಿಂದ ಪಂಚಾಯತಿ ಚುನಾವಣೆ ನಡೆಸಲಾಗುತ್ತದೆ.

ಶ್ರೀನಿವಾಸ ಬಬಲಾದಿ

ಕನ್ನಡಪ್ರಭ ವಾರ್ತೆ ಲೋಕಾಪುರ

ಗ್ರಾಮ ಪಂಚಾಯತಿ ಚುನಾವಣೆ ನಡೆದು ನಾಲ್ಕು ವರ್ಷ ಸಮೀಪಿಸುತ್ತ ಬಂದರೂ ಲಕ್ಷಾನಟ್ಟಿ ಗ್ರಾಮ ಪಂಚಾಯತಿಗೆ ಮಾತ್ರ ಇದುವರೆಗೂ ಚುನಾವಣೆ ಭಾಗ್ಯ ಕೂಡಿ ಬಂದಿಲ್ಲ. ಅಧಿಕಾರ ವಿಕೇಂದ್ರೀಕರಣದಿಂದ ಗ್ರಾಮೀಣ ಪ್ರದೇಶದ ಅಭಿವೃದ್ಧಿಯಾಗುತ್ತದೆ ಎಂಬ ಲೆಕ್ಕಾಚಾರದಿಂದ ಪಂಚಾಯತಿ ಚುನಾವಣೆ ನಡೆಸಲಾಗುತ್ತದೆ.

ಹಲವು ತಾಂತ್ರಿಕ ಕಾರಣದಿಂದಾಗಿ ಲಕ್ಷಾನಟ್ಟಿ ಗ್ರಾಮ ಪಂಚಾಯತಿಗೆ ಚುನಾವಣೆಯಾಗದ ಕಾರಣ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಹಳ್ಳಿಗಳ ಅಭಿವೃದ್ಧಿಗೆ ತೊಡಕುಂಟಾಗಿದೆ. ಪಟ್ಟಣ ಪಂಚಾಯತಿಗೆ ಸೇರ್ಪಡೆಗೊಂಡ ಹಳ್ಳಿಗಳು ೨೦೨೧ರಲ್ಲಿ ಲೋಕಾಪುರ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿತು. ಈ ಪಟ್ಟಣ ಪಂಚಾಯಿತಿಗೆ ಲಕ್ಷಾನಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದ ಎರಡು ಗ್ರಾಮಗಳು ಸೇರ್ಪಡೆಗೊಂಡಿದ್ದರಿಂದ ಇದೀಗ ಲಕ್ಷಾನಟ್ಟಿ ಗ್ರಾಮ ಪಂಚಾಯಿತಿ ಚುನಾವಣೆಗೆ ತೊಡಕುಂಟಾಗಿದೆ. ಲೋಕಾಪುರ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದಜೇಗೇರಿದ ಪರಿಣಾಮ ಲಕ್ಷಾನಟ್ಟಿ ಗ್ರಾಮ ಪಂಚಾಯಿತಿ ಸದಸ್ಯತ್ವ ಸಂಖ್ಯೆ ಕಡಿಮೆಯಾಯಿತು. ಇದರಿಂದ ಮೀಸಲಾತಿ ಸ್ಥಾನ ಹಂಚಿಕೆ ವಿಚಾರದಲ್ಲಿ ಗೊಂದಲ ಉಂಟಾಗುತ್ತಿರುವ ಕಾರಣ ಚುನಾವಣೆ ಪ್ರಕ್ರಿಯೆ ವಿಳಂಬವಾಗುತ್ತಿದೆ.

ಏಳು ಹಳ್ಳಿಗಳು, ಲೋಕಾಪುರ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರುವ ಮುನ್ನ ಲಕ್ಷಾನಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಕ್ಷಾನಟ್ಟಿ, ವರ್ಚಗಲ್, ಚೌಡಾಪುರ, ಜಾಲಿಕಟ್ಟಿ ಬಿ.ಕೆ. ಜಾಲಿಕಟ್ಟಿ ಕೆ.ಡಿ. ಪಾಲ್ಕಿಮಾನಿ, ನಾಗಣಾಪುರ, ಬ್ಯಾಡರ ಅರಳಿಕಟ್ಟಿ, ಜೇಡರ ಅರಳಿಕಟ್ಟಿ ಗ್ರಾಮಗಳು ಬರುತ್ತಿದ್ದವು. ಇದೀಗ ಜಾಲಿಕಟ್ಟಿ ಬಿ.ಕೆ. ಹಾಗೂ ಜಾಲಿಕಟ್ಟಿ ಕೆ.ಡಿ. ಗ್ರಾಮಗಳು ಲೋಕಾಪುರ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಸೇರ್ಪಡೆಗೊಂಡಿವೆ. ಇದೀಗ ೭ ಗ್ರಾಮಗಳನ್ನು ಒಳಗೊಂಡಿರುವ ಗ್ರಾಮ ಪಂಚಾಯಿತಿಗೆ ಆಡಳಿತ ಮಂಡಳಿಂಯಿಲ್ಲದೆ ಕೇವಲ ಅಧಿಕಾರಿಗಳ ಅಣತಿಯಂತೆ ಕಾರ್ಯನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸೀಟು ಹಂಚಿಕೆಯ ಗೊಂದಲ: ೯ ಹಳ್ಳಿಗಳನ್ನು ಹೊಂದಿದ ಲಕ್ಷಾನಟ್ಟಿ ಗ್ರಾಮ ಪಂಚಾಯಿತಿ ಒಟ್ಟು ೨೧ ಸ್ಥಾನ ಒಳಗೊಂಡಿತ್ತು. ಇದೀಗ ಜಾಲಿಕಟ್ಟಿ ಕೆ.ಡಿ. ಹಾಗೂ ಜಾಲಿಕಟ್ಟಿ ಬಿ.ಕೆ. ಗ್ರಾಮಗಳು ಗ್ರಾಮ ಪಂಚಾಯತಿಯಿಂದ ಹೊರಬರುವ ಕಾರಣ ಮೀಸಲಾತಿ ವಿಂಗಡಿಸಿ ಸ್ಥಾನ ಹಂಚಿಕೆಯ ಗೊಂದಲದಿಂದ ಚುನಾವಣೆ ಕಾರ್ಯಕ್ಕೆ ಮಂಕು ಕವಿದಂತಾಗಿದೆ.

ಅಭಿವೃದ್ಧಿ ಕಾರ್ಯ ನಿಧಾನ: ಗ್ರಾಮ ಪಂಚಾಯಿತಿಗೆ ಆಡಳಿತ ಮಂಡಳಿ ನಿರ್ಮಾಣವಾಗದ ಕಾರಣ ಏಳು ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳು ಮಂದಗತಿಯಲ್ಲಿ ಸಾಗಿವೆ ಎಂಬುವುದು ಸ್ಥಳೀಯರ ಆರೋಪ. ಅಧಿಕಾರಿಗಳಿಗೆ ಸ್ಥಳೀಯ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ಸಿಕ್ಕರೆ ಅಭಿವೃದ್ಧಿಗೆ ಹೆಚ್ಚಿನ ವೇಗ ದೊರೆಯುತ್ತದೆ. ಆದ್ದರಿಂದ ಶೀಘ್ರ ಚುನಾವಣೆ ನಡೆದರೆ ಒಳ್ಳೆಯದು. ಇಲ್ಲದಿದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಲಕ್ಷಾನಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

ಲಕ್ಷಾನಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಮೊದಲಿದ್ದ ಜಾಲಿಕಟ್ಟಿ ಕೆ.ಡಿ. ಮತ್ತು ಜಾಲಿಕಟ್ಟಿ ಬಿ.ಕೆ. ಹಳ್ಳಿಗಳು ಲೋಕಾಪುರ ಪಟ್ಟಣ ಪಂಚಾಯಿತಿಗೆ ಸೇರ್ಪಡೆಗೊಂಡ ಹಿನ್ನೆಲೆ ಚುನಾವಣೆ ತಡವಾಗಿದೆ. ಸರ್ಕಾರ ಮಟ್ಟದಲ್ಲಿ ನಿರ್ದೇಶನ ಬಂದ ಕೂಡಲೇ ಚುನಾವಣೆ ನಡೆಸುತ್ತೇವೆ.

- ಮಲ್ಲಿಕಾರ್ಜುನ ಅಂಬಿಗೇರ

ಆಡಳಿತಾಧಿಕಾರಿ ಲಕ್ಷಾನಟ್ಟಿ ಗ್ರಾಪಂ, ಒಇ ತಾಪಂ ಮುಧೋಳ

ಲಕ್ಷಾನಟ್ಟಿ ಗ್ರಾಮ ಪಂಚಾಯಿತಿ ಚುನಾವಣೆಗಿರುವ ಅಡತಡೆಗಳು ಶೀಘ್ರ ಬಗೆಹರಿದು ಚುನಾವಣೆ ನಡೆದರೆ ಆಡಳಿತ ಮಂಡಳಿಯಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಕ್ಕಂತಾಗುತ್ತದೆ.

-ಗೋಪಾಲಗೌಡ ಪಾಟೀಲ ಮಾಜಿ ಗ್ರಾಪಂ ಸದಸ್ಯರು, ಲಕ್ಷಾನಟ್ಟಿ