ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ/ ಶಿಡ್ಲಘಟ್ಟ
ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಬಳಿ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡಲು 2,863 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಭೂ ಸ್ವಾಧೀನಕ್ಕೆ ರೈತರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.ಉದ್ದೇಶಿತ ಯೋಜನೆಯ ಅನುಷ್ಠಾನಕ್ಕೆ ಉಂಟಾಗಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಜಂಗಮ ಕೋಟೆಯ ಜ್ಯೋತಿ ಕಾಲೇಜು ಅವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ರೈತ ಸಭೆ ನಡೆಸಿದ ನಂತರ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಹೂಡಿಕೆದಾರರಿಗೆ ಉತ್ತಮ ಪ್ರದೇಶಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಸಮೀಪವಿರುವ ಜಂಗಮಕೋಟೆ ಹೋಬಳಿ ಪ್ರದೇಶದ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಿದ್ದೇ ಆದಲ್ಲಿ ಹೂಡಿಕೆದಾರರು ಈ ಭಾಗಕ್ಕೆ ಹೆಚ್ಚಾಗಿ ಬರುವ ನಿರೀಕ್ಷೆ ಇದೆ. ಜೊತೆಗೆ ಈ ಭಾಗದ ಜನರಿಗೆ ಅನುಕೂಲವಾಗುವಂತೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಾನಾ ರೀತಿಯ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದು ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪೂರಕವಾಗಲಿದೆ.
ಈಗಾಗಲೇ ರೈತರನ್ನು ಕರೆಯಿಸಿ ಅವರು ಸ್ವಯಂಪ್ರೇರಿತರಾಗಿ ಭೂಮಿ ನೀಡಿ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿ ಮನವೊಲಿಸುವ ಪ್ರಯತ್ನಗಳು ನಡೆದಿವೆ. ಆದರೆ, ರೈತರ ನಿರ್ಧಾರವೇ ಅಂತಿಮ. ಕೆಲವು ರೈತರು ಭೂಮಿ ನೀಡಲು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಇನ್ನು ಹಲವು ರೈತರು ಭೂಮಿ ನೀಡುವುದಿಲ್ಲ. ಜೀವನೋಪಾಯ ಹಾಗೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಭೂಮಿಯನ್ನು ಬಿಟ್ಟುಕೊಡಲು ಆಗುವುದಿಲ್ಲವೆಂಬ ಅಭಿಪ್ರಾಯ ಮುಂದಿಟ್ಟಿದ್ದಾರೆ.ರೈತರ್ದು ತೀರ್ಮಾನವೇ ಅಂತಿಮ
ಈ ಭಾಗದ ಭೂಸ್ವಾಧೀನ ವಿಚಾರವಾಗಿ ಸರ್ಕಾರ ಎಲ್ಲ ಆಯಾಮಗಳಿಂದಲೂ ಪರಿಶೀಲಿಸಿ ರೈತರಿಗೆ ತೊಂದರೆಯಾದಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕೈಗಾರಿಕಾ ಪ್ರದೇಶಾಭಿವೃದ್ಧಿಯೂ ಮುಖ್ಯವಾಗಿದೆ. ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಭೂಮಿ ನೀಡುವುದರಿಂದ ರೈತರಿಗೆ ಆರ್ಥಿಕವಾಗಿ ದೊರೆಯುವ ಪ್ರಯೋಜನಗಳ ಜೊತೆಗೆ, ಅವರ ಕುಟುಂಬದ ಸದಸ್ಯರೊಬ್ಬರಿಗೆ ಉದ್ದೇಶಿತ ಕೈಗಾರಿಕೆಗಳಲ್ಲಿ ವಿದ್ಯಾರ್ಹತೆಗೆ ತಕ್ಕ ಉದ್ಯೋಗವೊಂದನ್ನು ನೀಡುವ ವಿಚಾರವನ್ನೂ ಅವರ ಮುಂದಿಡಲಾಗಿದೆ. ತೀರ್ಮಾನ ಅಂತಿಮವಾಗಿ ಅವರಿಗೇ ಬಿಟ್ಟಿದ್ದಾಗಿದೆ.ಈಗಾಗಲೇ ಈ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು ಪ್ರವೇಶಿಸಿ ರೈತರನ್ನು ದಿಕ್ಕು ತಪ್ಪಿಸಿ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ. ಭೂಮಿಯ ಅಧಿಕೃತ ಮಾಲೀಕ ರೈತರನ್ನು ಗುರುತಿಸಿ, ಹಂತ ಹಂತವಾಗಿ ಸಭೆಗಳನ್ನು ನಡೆಸಿ ಚರ್ಚಿಸಿ ಮುಕ್ತ ಅಭಿಪ್ರಾಯಗಳನ್ನು ಪಡೆಯಲಾಗುತ್ತಿದೆ. ಭೂಸ್ವಾಧೀನ ವಿಚಾರದಲ್ಲಿ ಯಾವುದೇ ಬಲವಂತ ಮತ್ತು ಒತ್ತಡದ ಪ್ರಶ್ನೆಯೇ ಇಲ್ಲ.
ಬೀಳಿ- ಕೆಂಪು ಪೇಪರ್ ಮೇಲೆ ಸಹಿರೈತರು ತಮ್ಮ ಭವಿಷ್ಯ ಮತ್ತು ಜಿಲ್ಲೆಯ ಅಭಿವೃದ್ಧಿ ಹಾಗೂ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಸ್ವಯಂಪ್ರೇರಿತರಾಗಿ ಭೂಮಿ ನೀಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಿದ್ದಾರೆ. ಎಲ್ಲಾ ರೈತರನ್ನೂ ಮತ್ತು ಭೂಮಿ ಹಕ್ಕುದಾರರನ್ನು ವಿಶ್ವಾಸಕ್ಕೆ ಪಡೆದುಕೊಂಡೇ ಮುಂದಿನ ಹೆಜ್ಜೆ ಇಡಲಿದೆ. ಎಲ್ಲಾ ಸಾಧಕ ಬಾಧಕಗಳನ್ನೂ ರೈತರ ಮುಂದಿಡಲಾಗಿದ್ದು, ಇಂದಿನ ಸಭೆಯಲ್ಲಿ ಭೂಮಿ ನೀಡುವವರು ಬಿಳಿ ಹಾಳೆಯ ಮೇಲೆ ಹಾಗೂ ಅದಕ್ಕೆ ಒಪ್ಪಿಗೆ ಇಲ್ಲದವರು ಕೆಂಪು ಹಾಳೆ ಮೇಲೆ ಬರೆದು ಸಹಿ ಹಾಕಿಕೊಟ್ಟಿದ್ದಾರೆ.
ಈ ಎಲ್ಲವನ್ನೂ ಸರ್ಕಾರ ಪರಿಶೀಲಿಸಲಿದ್ದು ಹೆಚ್ಚಿನ ರೈತರು ಯಾವ ಅಭಿಪ್ರಾಯ ವ್ಯಕ್ತಪಡಿಸುತ್ತಾರೋ ಅದರಂತೆ ಕ್ರಮ ವಹಿಸಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳೂ ಪಾರದರ್ಶಕವಾಗಿ ನಡೆಯಲಿವೆ ಎಂದರು. ಸಭೆಯಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್,ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಮಹೇಶ್, ತಹಸೀಲ್ದಾರ್ ಸ್ವಾಮಿ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಹೇಮಾವತಿ ಹಾಗೂ ರೈತ ಸಂಘಟನೆಗಳ ಮುಖಂಡರು ಇದ್ದರು.