ಸೈಬರ್‌ ವಂಚಕರ ಬಹುದೊಡ್ಡ ಜಾಲ ಪತ್ತೆ

| Published : Jul 20 2024, 12:46 AM IST

ಸಾರಾಂಶ

ಬಂಧಿತ ಆರೋಪಿಗಳಲ್ಲಿ ನಿಖಿಲಕುಮಾರ ರೌನಿ ಮತ್ತು ಸಚಿನ ಬೋಲಾ ದೆಹಲಿಯವರಾಗಿದ್ದು, ಮತ್ತೊಬ್ಬ ಆರೋಪಿ ನಿಗಮ್ ಮುಂಬೈ ಮೂಲದವನಾಗಿದ್ದಾನೆ. ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ತೆರಳಿದ್ದ ಸೈಬರ್ ಇನ್‌ಸ್ಪೆಕ್ಟರ್ ಬಿ.ಕೆ. ಪಾಟೀಲ ನೇತೃತ್ವದ ತಂಡ ಎರಡು ದಿನಗಳ ಹಿಂದೆಯೇ ಆರೋಪಿಗಳನ್ನು ಬಂಧಿಸಿ, ಹುಬ್ಬಳ್ಳಿಗೆ ಕರೆತಂದು ನ್ಯಾಯಾಲಯಕ್ಕೆ ಒಪ್ಪಿಸಿದೆ.

ಹುಬ್ಬಳ್ಳಿ:

ಸೈಬರ್ ವಂಚಕರ ಬಹುದೊಡ್ಡ ಜಾಲವೊಂದನ್ನು ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆ ಪೊಲೀಸರು ಭೇದಿಸಿದ್ದಾರೆ. ದೇಶಾದ್ಯಂತ ಸೈಬರ್ ಮೂಲಕ ಸಾರ್ವಜನಿಕರನ್ನು ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಮುಂಬೈನಲ್ಲಿ ಬಂಧಿಸಿ, ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಕೆಲವು ಬ್ಯಾಂಕ್ ದಾಖಲೆ ವಶಪಡಿಸಿಕೊಂಡಿದ್ದಾರೆ. ಜತೆಗೆ ವಿವಿಧ ಬ್ಯಾಂಕ್‌ ಖಾತೆಗಳಿಂದ ₹60 ಲಕ್ಷವನ್ನು ಫ್ರೀಜ್ ಮಾಡಿದ್ದಾರೆ.

ಬಂಧಿತ ಆರೋಪಿಗಳಲ್ಲಿ ನಿಖಿಲಕುಮಾರ ರೌನಿ ಮತ್ತು ಸಚಿನ ಬೋಲಾ ದೆಹಲಿಯವರಾಗಿದ್ದು, ಮತ್ತೊಬ್ಬ ಆರೋಪಿ ನಿಗಮ್ ಮುಂಬೈ ಮೂಲದವನಾಗಿದ್ದಾನೆ. ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ತೆರಳಿದ್ದ ಸೈಬರ್ ಇನ್‌ಸ್ಪೆಕ್ಟರ್ ಬಿ.ಕೆ. ಪಾಟೀಲ ನೇತೃತ್ವದ ತಂಡ ಎರಡು ದಿನಗಳ ಹಿಂದೆಯೇ ಆರೋಪಿಗಳನ್ನು ಬಂಧಿಸಿ, ಹುಬ್ಬಳ್ಳಿಗೆ ಕರೆತಂದು ನ್ಯಾಯಾಲಯಕ್ಕೆ ಒಪ್ಪಿಸಿದೆ.

ಬಂಧಿತರಲ್ಲಿ ಇಬ್ಬರು ಆರೋಪಿಗಳು ಸಾಫ್ಟ್‌ವೇರ್ ಪರಿಣತರಾಗಿದ್ದು, ಡಾರ್ಕ್‌ನೆಟ್‌ನಲ್ಲಿ ಸಕ್ರಿಯರಾಗಿ ಕೋಡಿಂಗ್ ಮತ್ತು ಡಿ-ಕೋಡಿಂಗ್ ಮಾಡುವಲ್ಲಿ ಪರಿಣತರು. ಈ ಹಿಂದೆ ಐಟಿ ಕಂಪನಿಯಲ್ಲಿ ಕೆಲಸ ಮಾಡಿ, ಹೊರಬಂದವರಾಗಿದ್ದಾರೆ. ಮತ್ತೊಬ್ಬ ಆರೋಪಿ ಬಟ್ಟೆ ವ್ಯಾಪಾರಿ. ಈ ಮೂವರು ಕರ್ನಾಟಕ ಸೇರಿದಂತೆ ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ಅಸ್ಸಾಂ, ಮಧ್ಯಪ್ರದೇಶ, ತಮಿಳುನಾಡು, ದೆಹಲಿ ಹಾಗೂ ಇತರ ರಾಜ್ಯಗಳಲ್ಲಿ ಸಂಪರ್ಕ ಜಾಲ ವಿಸ್ತರಿಸಿಕೊಂಡು, ಆನ್‌ಲೈನ್ ಮೂಲಕ ವಂಚನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಆರೋಪಿಗಳು ಸರ್ಕಾರಿ ಹಾಗೂ ಖಾಸಗಿಯ ವಿವಿಧ ಬ್ಯಾಂಕ್‌ಗಳ 37 ಖಾತೆಗಳಿಗೆ ಸಾರ್ವಜನಿಕರನ್ನು ವಂಚಿಸಿ ಹಣ ವರ್ಗಾಯಿಸಿಕೊಳ್ಳುತ್ತಿದ್ದರು. ಆ ಹಣವನ್ನು ದೇಶದ ವಿವಿಧೆಡೆ ಇರುವ ಬರೋಬ್ಬರಿ 270ಕ್ಕೂ ಹೆಚ್ಚು ಬ್ಯಾಂಕ್‌ನ ನಕಲಿ ಖಾತೆಗೆ ವರ್ಗಾಯಿಸಿಕೊಂಡು, ಡ್ರಾ ಮಾಡಿಕೊಳ್ಳುತ್ತಿದ್ದರು. ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಅಂದಾಜು ₹90 ಕೋಟಿಗೂ ಅಧಿಕ ಹಣ ವರ್ಗಾವಣೆಯಾಗಿರುವ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ.

ಕೆಲ‌ ದಿನಗಳ ಹಿಂದೆ ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ₹ 5 ಲಕ್ಷ ಆನ್‌ಲೈನ್ ವಂಚನೆಯಾದ ಕುರಿತು ಪ್ರಕರಣವೊಂದು ದಾಖಲಾಗಿತ್ತು. ಅದರ ಜಾಡು ಹಿಡಿದ ಪೊಲೀಸರಿಗೆ, ವಂಚಕರ ಜಾಲ ದೇಶದೆಲ್ಲೆಡೆ ವಿಸ್ತರಿಸಿರುವುದು ತಿಳಿದು ಬಂದಿತ್ತು. ಹಣ ವರ್ಗಾವಣೆಯಾದ ಬ್ಯಾಂಕ್, ಸ್ಥಳ, ಖಾತೆ ವಿವರ, ವಿಳಾಸ, ಮೊಬೈಲ್ ಸಂಪರ್ಕ ಸಂಖ್ಯೆ ಮಾಹಿತಿ ಕಲೆಹಾಕಿ, ವಿಚಾರಣೆ ತೀವ್ರಗೊಳಿಸಿದ್ದರು. ಆಗ, ರಾಜ್ಯ ಸೇರಿ ವಿವಿಧ ರಾಜ್ಯಗಳಿಂದಲೂ ಸೈಬರ್ ಮೂಲಕ ವಂಚಿಸಿದ ಹಣ 37 ವಿವಿಧ ಬ್ಯಾಂಕ್‌ಗಳ‌ ಖಾತೆಗಳಿಗೆ ವರ್ಗಾವಣೆಯಾಗಿದ್ದು ಬೆಳಕಿಗೆ ಬಂದಿತ್ತು. ಅದರಾಳಕ್ಕೂ ತನಿಖೆ ಕೈಗೊಂಡಾಗ, 37 ಖಾತೆಗಳಿಂದ 270ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಕೋಟ್ಯಾಂತರ ರೂಪಾಯಿ ಸಕಾರಣವಿಲ್ಲದೆ ವಹಿವಾಟು ಆಗಿರುವುದು ಕಂಡು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.