ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಕೀಟಗಳು ನಮ್ಮನ್ನಾಳುವ ಮುನ್ನ ಜಾಗೃತರಾಗಿ ಎಂದು ಜಿಲ್ಲಾ ಕೀಟ ಶಾಸ್ತ್ರಜ್ಞೆ ನಂದಿನಿ ಕಡಿ ಸಲಹೆ ನೀಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಚಿತ್ರದುರ್ಗ ನಗರದ ವಾರ್ಡ್ ಸಂಖ್ಯೆ 21ರಲ್ಲಿ ಗುಂಪು ಸಭೆ ನಡೆಸಿ, ಮಂಗಳವಾರದಿಂದ ಆರಂಭವಾದ ಮೂರು ದಿನಗಳ ಡೆಂಘೀ ನಿಯಂತ್ರಣಕ್ಕಾಗಿ ವಿಶೇಷ ಲಾರ್ವಾ ಸಮೀಕ್ಷೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಗರ ಪ್ರದೇಶಗಳಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿದ್ದರಿಂದ, ಜಿಲ್ಲಾ ಮಟ್ಟದ ಅಂತರ್ ಇಲಾಖಾ ಸಮನ್ವಯ ಸಭೆಯಲ್ಲಿ ಜಿಲ್ಲಾಧಿಕಾರಿಗಳವರ ಮಾರ್ಗದರ್ಶನ ದಂತೆ ಸೊಳ್ಳೆಗಳ ನಿಯಂತ್ರಣಕ್ಕಾಗಿ ಲಾರ್ವಾ ಸಮೀಕ್ಷೆ ಹಮ್ಮಿಕೊಂಡಿದೆ. ಚಿತ್ರದುರ್ಗ ನಗರದ 36 ವಾರ್ಡ್, 3 ನಗರ ಆರೋಗ್ಯ ಕೇಂದ್ರಗಳಿಂದ ಒಟ್ಟು 41117 ಮನೆ ಮನೆ ಭೇಟಿ ಲಾರ್ವಾ ಸಮೀಕ್ಷೆ, ಜ್ವರ ಪರೀಕ್ಷೆ, ಅಲ್ಲಲ್ಲಿ ಗುಂಪು ಸಭೆಯ ಮೂಲಕ ಡೆಂಗ್ಯೂ ನಿಯಂತ್ರಣ ಮಾಹಿತಿ ಶಿಕ್ಷಣ ನೀಡುವುದರ ಮೂಲಕ ಜನ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಮನೆಯ ಸುತ್ತ ಮುತ್ತಣ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಘನತ್ಯಾಜ್ಯ ವಸ್ತುಗಳನ್ನು ಸರಿಯಾದ ಜಾಗದಲ್ಲಿ ವಿಲೇವಾರಿ ಮಾಡಬೇಕು. ಹೆಂಚು, ಒಡೆದ ಮಡಕೆ, ಪ್ಲಾಸ್ಟಿಕ್ ಬಾಟಲ್, ಎಳನೀರಿನ ಚಿಪ್ಪು ಇವುಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸೊಳ್ಳೆಗಳ ಉತ್ಪತ್ತಿ ತಾಣಗಳಾಗದಂತೆ ಕಾಳಜಿವಹಿಸಿ ಹೂವಿನ ಗಿಡಗಳ ಕುಂಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದು ಹೇಳಿದರು.
ಡೆಂಘೀ ಬಗ್ಗೆ ಆತಂಕ ಭಯ ಬೇಡ. ವಾರಕ್ಕೊಮ್ಮೆಯಾದರೂ ನೀರು ಸಂಗ್ರಹಿಸುವ ತೊಟ್ಟಿ, ಟ್ಯಾಂಕ್ ಬ್ಯಾರೆಲ್ ಸ್ವಚ್ಛವಾಗಿ ತೊಳೆದು ಒಣಗಿಸಿ, ನೀರು ಸಂಗ್ರಹಿಸಿ ಮುಚ್ಚಳ ಮುಚ್ಚಿ. ತೀವ್ರ ಜ್ವರ, ತಲೆನೋವು, ಕಣ್ಣಿನ ಹಿಂಭಾಗ ನೋವು, ಮೈಕೈ ನೋವು ಕಂಡು ಬಂದಲ್ಲಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೇ ಹತ್ತಿರದ ನಗರ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷೆ, ಚಿಕಿತ್ಸೆ ಸಲಹೆ ಪಡೆದುಕೊಳ್ಳಿ ಎಂದರು.ಮಂಗಳವಾರದಿಂದ ಆರಂಭವಾದ ಮೂರು ದಿನಗಳ ಡೆಂಘೀ ನಿಯಂತ್ರಣಕ್ಕಾಗಿ ವಿಶೇಷ ಲಾರ್ವಾ ಸಮೀಕ್ಷೆ ಕಾರ್ಯಕ್ರಮದಲ್ಲಿ ಒಟ್ಟು 200 ತಂಡ 400 ಸಿಬ್ಬಂದಿ ಪಾಲ್ಗೊಳ್ಳಲಿ ದ್ದಾರೆ. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣಾ ನಾಯ್ಕ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಾನಕಿ, ಮಾರುತಿನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಯಶಸ್, ನಗರಸಭೆ ಆರೋಗ್ಯ ನಿರೀಕ್ಷಣಾಧಿಕಾರಿ ನಾಗರಾಜ್, ಆರೋಗ್ಯ ಇಲಾಖೆಯ ಆರೋಗ್ಯ ಸುರಕ್ಷತಾಧಿಕಾರಿಗಳಾದ ತಿಪ್ಪಮ್ಮ, ರೇಣುಕಾ, ಶೋಭಾ, ಶಿಲ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಂಗಾರೆಡ್ಡಿ, ಮಲ್ಲಿಕಾರ್ಜುನ, ನಾಗರಾಜ್, ತಿಪ್ಪೇಸ್ವಾಮಿ, ಶ್ರೀನಿವಾಸ್, ಪ್ರಶಾಂತ್, ಆಶಾ ಕಾರ್ಯಕರ್ತೆಯರು, ಭಾಗವಹಿಸಿದ್ದರು.