ಸಾರಾಂಶ
ಶಿವಾನಂದ ಅಂಗಡಿ
ಹುಬ್ಬಳ್ಳಿ: ನಾಡಹಬ್ಬ ನವರಾತ್ರಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಉತ್ಸವದ 9 ದಿನ ದೇವಿಯ ಪೂಜೆ, ನಾನಾ ಮಂಗಲ ಕಾರ್ಯಗಳಿಗೆ ಯಥೇಚ್ಛವಾಗಿ ಬಳಸುವ ಲಿಂಬೆ ಹಣ್ಣಿನ ಅಭಾವ ತಲೆದೋರಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಮೂಡಿಸಿದೆ.
ಹುಬ್ಬಳ್ಳಿಯ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸಾವಿರ ಲಿಂಬೆಹಣ್ಣು ತುಂಬಿದ ಚೀಲವೊಂದಕ್ಕೆ ₹4ರಿಂದ 5 ಸಾವಿರ ವರೆಗೂ ಮಾರಾಟವಾಗುತ್ತಿದೆ. ಇಲ್ಲಿಯ ದುರ್ಗದಬೈಲ, ಜನತಾ ಬಜಾರ, ಹಳೆಹುಬ್ಬಳ್ಳಿ ಸೇರಿದಂತೆ ವಿವಿಧ ವಾರ್ಡ್ ಸಂತೆ, ಚಿಲ್ಲರೆ ಮಾರುಕಟ್ಟೆಯಲ್ಲಿ ₹6 ದಿಂದ 7 ವರೆಗೂ ಮಾರಾಟವಾಗುತ್ತಿದೆ. ಕಾರವಾರ ಸೇರಿದಂತೆ ಕರಾವಳಿ ಪ್ರದೇಶದ ಸಂತೆ ಮಾರುಕಟ್ಟೆಯಲ್ಲಿ 1 ಲಿಂಬೆಹಣ್ಣಿಗೆ ₹10 ವರೆಗೂ ಮಾರಾಟವಾಗಿದೆ.
ರಾಜ್ಯದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಲಿಂಬೆ ಹಣ್ಣುಗಳನ್ನು ಹೇರಳವಾಗಿ ಬೆಳೆಯುತ್ತಾರೆ. ಇಂಡಿ ತಾಲೂಕಿನಲ್ಲೇ ಜಿಲ್ಲೆಯ ಶೇ. 50ರಷ್ಟು ಲಿಂಬು ತೋಟಗಳಿವೆ. ವಿಜಯಪುರ, ಸಿಂದಗಿ, ಮುದ್ದೇಬಿಹಾಳ, ಬಸವನಬಾಗೇವಾಡಿ ಹೀಗೆ ನಾನಾ ತಾಲೂಕುಗಳಲ್ಲಿ ಶೇ. 50ರಷ್ಟು ಲಿಂಬು ತೋಟಗಳಿವೆ. ಇಲ್ಲಿಂದಲೇ ಗುಜರಾತ್, ದೆಹಲಿ, ಗೋವಾ, ಬೆಂಗಳೂರು, ಗದಗ, ಬಾಗಲಕೋಟೆ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ವಿವಿಧೆಡೆ ನಿಂಬೆಹಣ್ಣು ರವಾನೆಯಾಗುತ್ತದೆ.
ಆಂಧ್ರಪ್ರದೇಶದಿಂದಲೂ ರಾಜ್ಯಕ್ಕೆ ಲಿಂಬೆಹಣ್ಣುಗಳು ರವಾನೆಯಾಗುತ್ತಿದ್ದು, ಅವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಸ ಇರುವುದಿಲ್ಲ. ಅವು ಬಹುತೇಕ ಕಾಯಿ ರೂಪದಲ್ಲಿದ್ದು, ಆ ಲಿಂಬೆಹಣ್ಣು ಖರೀದಿಸಿದ ಗ್ರಾಹಕರು ಶಪಿಸುತ್ತಾರೆ. ವಿಜಯಪುರದ ಜವಾರಿ ಲಿಂಬೆಹಣ್ಣುಗಳಿಗೆ ಭಾರೀ ಬೇಡಿಕೆ ಇದ್ದು, ವಾರಗಟ್ಟಲೇ ಅವು ಕೆಡುವುದಿಲ್ಲ.
ಬೆಲೆ ಹೆಚ್ಚಳವಾದರೂ ಗ್ರಾಹಕರು ಖರೀದಿಸುತ್ತಾರೆ ಎನ್ನುತ್ತಾರೆ ಹುಬ್ಬಳ್ಳಿ ವ್ಯಾಪಾರಸ್ಥರು.
ಮೂರು ದಶಕ ಮೋಸವಿಲ್ಲ:
ಒಮ್ಮೆ ನಾಟಿ ಮಾಡಿದ ಲಿಂಬೆಹಣ್ಣು ಗಿಡ 30 ವರ್ಷಕ್ಕೂ ಅಧಿಕ ಕಾಲ ಬಾಳುತ್ತದೆ. ಹೀಗಾಗಿ ಲಿಂಬೆ ಕೃಷಿ ಮಾಡಿಕೊಂಡು ಬಂದವರಿಗೆ ಯಾವುದೇ ಮೋಸವಿಲ್ಲ. ಬೇಸಿಗೆ ಸಂದರ್ಭದಲ್ಲಂತೂ ತಂಪು ಪಾನೀಯ ಅಂಗಡಿಗಳ ಮಾಲೀಕರು ಭಾರೀ ಪ್ರಮಾಣದಲ್ಲಿ ಖರೀದಿಸುತ್ತಾರೆ. ಹೀಗಾಗಿ ₹10 ದಾಟಿ ಲಿಂಬೆಹಣ್ಣು ಮಾರಾಟವಾಗುತ್ತವೆ. ಇದು ಆರೋಗ್ಯ ವರ್ಧನೆಗೂ ಹೆಚ್ಚಿನ ಪ್ರಮಾಣದಲ್ಲಿ ಸಹಕಾರಿಯಾಗಿದ್ದು, ಲಿಂಬು ಪಾನಕ, ಶರಬತ್ ಸೇವನೆ ದೇಹ ನಿರ್ಜಲೀಕರಣ ತಡೆಯುವುದರ ಜತೆಗೆ ಉತ್ಸಾಹ ಮೂಡಿಸುತ್ತದೆ. ಬಿಸಿನೀರಿನ ಜತೆ ಲಿಂಬೆರಸ ಸೇವಿಸಿ ಹಲವಾರು ಉಪಯೋಗಗಳನ್ನು ಪಡೆಯುತ್ತಾರೆ.
ಮಳೆಗಾಲದಲ್ಲಿ ಸಾಮಾನ್ಯವಾಗಿ ಹತ್ತು ರುಪಾಯಿಗೆ ಮೂರ್ನಾಲ್ಕು ನಿಂಬೆಹಣ್ಣು ಕೊಡುತ್ತಾರೆ. ಆದರೆ, ಮೃಗಶಿರಾ (ಜೂನ್ ) ಮಳೆ ವೇಳೆ ಈ ಬಾರಿ ಲಿಂಬೆ ತೋಟಗಳಲ್ಲಿ ಹೂವು ಬಿಡಲಿಲ್ಲ. ಹೂವು ಬಿಟ್ಟ ಮೇಲೆ ಕಾಯಿಯಾಗಿ ಹಣ್ಣುಗಳನ್ನು ಕೀಳಲು 3 ತಿಂಗಳು ಸಮಯ ಬೇಕು. ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಮಾರುಕಟ್ಟೆಗೆ ಬರುವ ಹಣ್ಣು ಬಾರದೇ ಅಭಾವ ಉಂಟಾಗಿದೆ ಎನ್ನುತ್ತಾರೆ ಬೆಳೆಗಾರರು.
ಆಹಾರ ತಯಾರಿಕೆ ಸೇರಿದಂತೆ ಮಾಂಸಾಹಾರಿ ಹೋಟೆಲ್‌ಗಳಿಗೂ ಲಿಂಬೆ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗವಾಗುತ್ತಿದ್ದು, ಅಕ್ಟೋಬರ್ 3ರಿಂದ ಆರಂಭವಾಗುವ ನವರಾತ್ರಿ ಸಂದರ್ಭದಲ್ಲಿ ಇನ್ನು ಹೆಚ್ಚು ಅಭಾವ ಉಂಟಾಗುವ ಸಾಧ್ಯತೆ ಇದೆ.