ಕಾವ್ಯವು ಮನುಷ್ಯನ ನಡುವೆ ಬಾಂಧವ್ಯ ಬೆಸೆಯುವ ಸಾಧನವಾಗಲಿ

| Published : Sep 15 2024, 01:49 AM IST

ಕಾವ್ಯವು ಮನುಷ್ಯನ ನಡುವೆ ಬಾಂಧವ್ಯ ಬೆಸೆಯುವ ಸಾಧನವಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕ ಸಂದರ್ಭದ ಈ ವೇಳೆ ಕ್ರೌರ್ಯ ಎಲ್ಲೆಡೆ ವಿಜೃಂಭಿಸುತ್ತಿದೆ. ಆದ್ದರಿಂದ ಕಾವ್ಯ, ಮನುಷ್ಯ-ಮನುಷ್ಯರ ನಡುವೆ ಬಾಂಧವ್ಯ ಬೆಸೆಯುವ ಸಾಧನವಾಗಬೇಕೆಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಆಧುನಿಕ ಸಂದರ್ಭದ ಈ ವೇಳೆ ಕ್ರೌರ್ಯ ಎಲ್ಲೆಡೆ ವಿಜೃಂಭಿಸುತ್ತಿದೆ. ಆದ್ದರಿಂದ ಕಾವ್ಯ, ಮನುಷ್ಯ-ಮನುಷ್ಯರ ನಡುವೆ ಬಾಂಧವ್ಯ ಬೆಸೆಯುವ ಸಾಧನವಾಗಬೇಕೆಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ರೋಟರಿ ಕ್ಲಬ್ ಫೋರ್ಟ್, ಮುಕ್ತ ವೇದಿಕೆ ಸಂಯುಕ್ತಾಶ್ರಯದಲ್ಲಿ ಆದಿಶೇಷ ರೋಟರಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರ್ಥಿಕ ಚಿಂತಕ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪನವರ ಸತ್ಯವ್ರತಿಯ ಸ್ಪಷ್ಟಪದಿಗಳು ಗ್ರಂಥ ಲೋಕಾರ್ಪಣೆ ನೆರವೇರಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಸಮಾಜವನ್ನು ಸರಿದಾರಿಗೆ ತರಲು ಬಯಸಿದ ವಚನಕಾರರ ಪ್ರಯತ್ನಈ ಕೃತಿಯಲ್ಲಿ ಮುಂದುವರೆದಿದೆ ಎದರು.

ಆತಂಕದ ಕಾಲ ಇದಾಗಿರುವುದರಿಂದ ಈಗ ವಚನಕಾರರ ಅಗತ್ಯವಿದೆ. ಮನುಷ್ಯನ ಮನಸ್ಸು, ಅಭಿಪ್ರಾಯ, ಕಾರ್ಯಗಳು ಕ್ರೂರತ್ವದ ಕಡೆ ಹೋಗುತ್ತಿದೆ. ವಚನಕಾರರ ಪ್ರಯತ್ನ ಎಲ್ಲೆಡೆ ದಟ್ಟವಾಗಿ ಹರಡಬೇಕು ಎಂದರು.ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪನವರ ಸತ್ಯವ್ರತಿಯ ಸ್ಪಷ್ಟಪದಿಗಳು ಅಬ್ಬರ, ಬಿರುಸಿಲ್ಲದೆ ಮೌನ ನವಿರಾಗಿ ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಿದೆ. ದಾರ್ಶನಿಕರು ವಚನಕಾರರು ಬಯಸಿದಂತೆ ಕೆಟ್ಟ ಮನಸ್ಸುಗಳನ್ನು ಸರಿದಾರಿಗೆ ತರುವ ಪ್ರಯತ್ನ ಕೃತಿಯಲ್ಲಿದೆ. ಕಾಲ ಎಲ್ಲವನ್ನು ಹಿಂದಕ್ಕೆ ಸರಿಸುತ್ತಿದೆ. ಇದೊಂದು ಅನುಭಾವಿಯ ಕಾವ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಇತಿಹಾಸ ಸಂಶೋಧಕ ಡಾ.ಬಿ. ರಾಜಶೇಖರಪ್ಪ ಮಾತನಾಡಿ ಜಿ.ಎನ್. ಮಲ್ಲಿಕಾರ್ಜುನಪ್ಪನವರು ಪ್ರಾಧ್ಯಾಪಕರಾಗಿದ್ದುಕೊಂಡು ಕವನ, ಕಾವ್ಯ, ನಾಟಕಗಳನ್ನು ಬರೆಯಲು ಆರಂಭಿಸಿದರು. ಸಾಹಿತ್ಯವನ್ನು ನಾನಾ ಅಂಗಗಳಲ್ಲಿ ತೊಡಗಿಸಿಕೊಂಡವರು. ಸಾಹಿತಿಗಳು ಆಶ್ಚರ್ಯ ಪಡುವ ರೀತಿಯಲ್ಲಿ ಕೃತಿ ರಚಿಸಿದ್ದಾರೆ. ನಡೆ ನುಡಿಯಲ್ಲಿ ಸತ್ಯವಾಗಿ ನಡೆಯಬೇಕೆಂದು ಬಯಸಿದವರು ಸತ್ಯವ್ರತಿ ಎನ್ನುವುದು ಕೃತಿಯ ಸಾರಾಂಶ. ಒಂದು ರೀತಿಯಲ್ಲಿ ಈ ಗ್ರಂಥ ವಚನಗಳನ್ನು ಹೋಲುತ್ತದೆ. ಭೂಮಿಯಲ್ಲಿರುವ ಎಲ್ಲಾ ವಿಚಾರಗಳನ್ನು ಕೃತಿ ಒಳಗೊಂಡಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಾನಪದ ವಿದ್ವಾಂಸ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಮಾತನಾಡಿ, ವಚನಗಳ ರೂಪದಲ್ಲಿ ಅನ್ವೇಷಣೆ, ಅಭಿವ್ಯಕ್ತಿ, ಮಾನವೀಯ ಅಂತಃಕರಣ ಮೌಲ್ಯಗಳು ಬರಹಗಾರನಿಗಿರಬೇಕು. ಇಲ್ಲದಿದ್ದರೆ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸಲು ಸಾಧ್ಯವಿಲ್ಲ. ಮನುಷ್ಯ-ಮನುಷ್ಯನ ಸಂಬಂಧ, ಪ್ರೀತಿ ವಿಶ್ವಾಸದ ಬಗ್ಗೆ ದೊಡ್ಡ ಕಲ್ಪನೆಯಿಟ್ಟುಕೊಂಡು ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಕೃತಿಯನ್ನು ಬರೆದಿದ್ದಾರೆ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಕೆ.ಎಂ. ವೀರೇಶ್ ಮಾತನಾಡಿ, ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದುಕೊಂಡು ದಕ್ಷ ಆಡಳಿವನ್ನು ನಡೆಸಿದವರು. ಅನೇಕ ಕಥೆ, ಕವನ, ನಾಟಕ, ಕೃತಿಗಳನ್ನು ರಚಿಸಿದ್ದಾರೆ. ಇದೊಂದು ಅಪರೂಪದ ಸಾಹಿತ್ಯ. ನಾವು ಸರ್ವಜ್ಞನ ವಚನಗಳನ್ನು ಕೇಳಿದ್ದೇವೆ. ಸಾಹಿತ್ಯವೆಂದರೆ ಪ್ರತಿಬಿಂಬದ ಕನ್ನಡಿಯಿದ್ದಂತೆ. ಸಾಹಿತ್ಯ ಬರೆಯುವ, ಓದುವವರ ಸಂಖ್ಯೆಯೂ ವಿರಳವಾಗುತ್ತಿದೆ ಎಂದು ವಿಷಾದಿಸಿದರು.

ಕನ್ನಡ ವಿಶ್ವವಿದ್ಯಾನಿಲಯ ಹಂಪಿಯ ಶೈಕ್ಷಣಿಕ ನಿರ್ದೇಶಕರಾದ ಡಾ. ಎಸ್.ವೈ. ಸೋಮಶೇಖರ್ ಮಾತನಾಡಿ, ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ಸತ್ಯವನ್ನು ಸ್ಪಷ್ಟವಾಗಿ ಪದಗಳ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ಎಂದರು. ಮುಕ್ತ ವಿಚಾರ ವೇದಿಕೆ ಸಂಚಾಲಕ ಹಾಗೂ ವಿಶ್ರಾಂತ ಪ್ರಾಂಶುಪಾಲ ಪ್ರೊ. ಸಿ. ಬಸವರಾಜಪ್ಪ, ಕೃತಿಕಾರ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಜಿಲ್ಲಾ ರೋಟರಿ ಗೌರ್ವನರ್ ಎಂ.ಕೆ. ರವೀಂದ್ರ, ರೇಖಾ ಚಿತ್ರಕಾರ ಜಬೀವುಲ್ಲಾ ಎಂ. ಅಸದ್ ವೇದಿಕೆಯಲ್ಲಿದ್ದರು.ರಂಗ ನಿರ್ದೇಶಕ ಕೆ.ಪಿ. ಎಂ. ಗಣೇಶಯ್ಯ ಪ್ರಾರ್ಥಿಸಿದರು. ವಿಶ್ರಾಂತ ಪ್ರಾಂಶುಪಾಲದ ಡಾ.ಸಿ.ಶಿವಲಿಂಗಪ್ಪ ಸ್ವಾಗತಿಸಿದರು. ಸಾಹಿತಿ ಹುರಳಿ ಬಸವರಾಜ್ ನಿರೂಪಿಸಿದರು. ಸಾಹಿತಿ ಡಾ. ಲೋಕೇಶ್ ಅಗಸನಕಟ್ಟೆ, ಜಿ.ಎಸ್. ಉಜ್ಜಿನಪ್ಪ, ಪ್ರೊ. ಎಚ್. ಲಿಂಗಪ್ಪ ಇದ್ದರು.