ಹೊಸ ಹೊಸ ಆವಿಷ್ಕಾರಗಳತ್ತ ವಿದ್ಯಾರ್ಥಿಗಳ ಚಿತ್ತವಿರಲಿ : ಡಾ. ಹೆಚ್.ಪಿ ಪಾಟೀಲ

| Published : Apr 03 2024, 01:39 AM IST / Updated: Apr 03 2024, 08:51 AM IST

ಹೊಸ ಹೊಸ ಆವಿಷ್ಕಾರಗಳತ್ತ ವಿದ್ಯಾರ್ಥಿಗಳ ಚಿತ್ತವಿರಲಿ : ಡಾ. ಹೆಚ್.ಪಿ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

 ಹೊಸ ಹೊಸ ಆವಿಷ್ಕಾರಗಳು ಹುಟ್ಟಿಕೊಳ್ಳುತ್ತಿದ್ದು, ತಾಂತ್ರಿಕ ವಿದ್ಯಾರ್ಥಿಗಳಾದ ನೀವು ನವನವೀನ ತಾಂತ್ರಿಕತೆಯ ಅರಿವು, ಜ್ಞಾನವನ್ನು ಪಡೆದುಕೊಂಡು ದೇಶದ ಸರ್ವತೋಮುಖ ಪ್ರಗತಿಗೆ ಪೂರಕವಾದ ಸಂಶೋಧನೆಗಳನ್ನು ಮಾಡುವತ್ತ ಕಾರ್ಯೋನ್ಮುಖರಾಗಬೇಕೆಂದು ಡಾ. ಹೆಚ್.ಪಿ ಪಾಟೀಲರು ತಿಳಿಸಿದರು.

  ತಿಪಟೂರು :  ಆಧುನಿಕ ಜಗತ್ತಿನಲ್ಲಿ ಪ್ರತಿನಿತ್ಯ ಹೊಸ ಹೊಸ ಆವಿಷ್ಕಾರಗಳು ಹುಟ್ಟಿಕೊಳ್ಳುತ್ತಿದ್ದು, ತಾಂತ್ರಿಕ ವಿದ್ಯಾರ್ಥಿಗಳಾದ ನೀವು ನವನವೀನ ತಾಂತ್ರಿಕತೆಯ ಅರಿವು, ಜ್ಞಾನವನ್ನು ಪಡೆದುಕೊಂಡು ದೇಶದ ಸರ್ವತೋಮುಖ ಪ್ರಗತಿಗೆ ಪೂರಕವಾದ ಸಂಶೋಧನೆಗಳನ್ನು ಮಾಡುವತ್ತ ಕಾರ್ಯೋನ್ಮುಖರಾಗಬೇಕೆಂದು ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ ಗಣಿತ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಹೆಚ್.ಪಿ ಪಾಟೀಲರು ತಿಳಿಸಿದರು.

ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ವಿಜ್ಞಾನ ದಿನವನ್ನು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಸ್ಥಳೀಯ ತಂತ್ರಜ್ಞಾನಗಳು ಎಂಬ ವಿಷಯದಡಿಯಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿ ಮಾತನಾಡಿ, ಅಂತರಾಷ್ಟ್ರೀಯ ವಿಜ್ಞಾನ ದಿನವು ಭಾರತೀಯ ವಿಜ್ಞಾನಿಗಳ ಸಾಧನೆಗಳು ಮತ್ತು ವೈಜ್ಞಾನಿಕ ಪ್ರಗತಿಗೆ ಅವರ ಕೊಡುಗೆಗಳನ್ನು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ವೃತ್ತಿ ಜೀವನವನ್ನು ಮುಂದುವರಿಸಲು ಯುವ ಜನರನ್ನು ಪ್ರೇರಪಿಸುವುದಾಗಿರುತ್ತದೆ.

೨೦೨೪ರ ಥೀಮ್‌ನಂತೆ ಭಾರತದಲ್ಲಿ ವೈಜ್ಞಾನಿಕ ಜ್ಞಾನ ಮತ್ತು ಹೊಸ ಆವಿಷ್ಕಾರ, ತಂತ್ರಜ್ಞಾನಗಳು ದೇಶಗಳ ಮೇಲೆ ಪರಿಣಾಮ ಬೀರುವ ಅನೇಕ ಸಮಸ್ಯೆಗಳನ್ನು ನಿಭಾಯಿಸಲು ಹೇಗೆ ಸಹಾಯ ಮಾಡುತ್ತವೆ. ಯಾವುದೇ ಅಭಿವೃದ್ಧಿ ಹೊಂದುತ್ತಿರುವ ಮತ್ತು ವಿಕಸನಗೊಳ್ಳುತ್ತಿರುವ ನಾಗರೀಕತೆಯು ಅಗತ್ಯವಾದ ತಾಂತ್ರಿಕ ಆವಿಷ್ಕಾರದ ತಂತ್ರಜ್ಞಾನವು ಸಮಾಜದ ನಡವಳಿಕೆ ಮತ್ತು ಕಾರ್ಯಚರಣೆಯನ್ನು ಬದಲಾಯಿಸುತ್ತವೆ. ಆ ಮೂಲಕ ಅವರ ಸಾಮಾಜಿಕ, ಆರ್ಥಿಕ, ಪರಿಸರದಲ್ಲಿ ಬದಲಾವಣೆಯನ್ನು ತರುತ್ತವೆ ಎಂದ ಅವರು ಗಣಿತವು ಹೇಗೆ ತಾಂತ್ರಿಕ ವಿಷಯಗಳಲ್ಲಿ ತನ್ನ ಪ್ರಾಮುಖ್ಯತೆಯನ್ನು ಪಡೆದಿದೆ ಎಂದು ಸವಿವರವಾಗಿ ಅರ್ಥೈಸಿದರು. 

ಅಧ್ಯಕ್ಷತೆ ವಹಿಸಿದ್ದ ಕೆವಿಎಸ್ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು, ಮಾತನಾಡುತ್ತಾ ಅವಶ್ಯಕತೆಯು ಆವಿಷ್ಕಾರದ ತಾಯಿ ಎಂಬ ಗಾದೆ ಮಾತಿನಂತೆ, ಎಲ್ಲಾ ತಾಂತ್ರಿಕ ಆವಿಷ್ಕಾರಗಳು ಸಮಾಜಕ್ಕೆ ಅಗತ್ಯತೆ ಇದೆ. ತಂತ್ರಜ್ಞಾನವು ಜನಸಂಖ್ಯೆಯನ್ನು ಬದುಕಲು ಮತ್ತು ದಕ್ಷತೆಯನ್ನು ಹೆಚ್ಚಿಸುವ ಮೂಲಕ ಊಹಿಸಲಾಗದ ವೇಗದಲ್ಲಿ ಪ್ರಗತಿಗೆ ಸಹಾಯ ಮಾಡುತ್ತದೆ ಎಂದರು.

ಕಾರ್ಯದರ್ಶಿ ಎಂ.ಆರ್. ಸಂಗಮೇಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಆಧುನಿಕ ಜಗತ್ತಿನಲ್ಲಿ ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಲಭ್ಯತೆಯಿಂದ ಕಲಿಕೆಯು ರೂಪಾಂತರಗೊಂಡಿದೆ. ವಿದ್ಯಾರ್ಥಿಗಳು ಇವುಗಳ ಸದುಪಯೋಗ ಪಡೆದುಕೊಂಡು ಉನ್ನತ ಮಟ್ಟವನ್ನು ತಲುಪಲಿ ಎಂದು ಹಾರೈಸಿದರು. 

ಕೆಐಟಿ ಪ್ರಭಾರ ಪ್ರಾಂಶುಪಾಲ ಡಾ. ಟಿ.ಎಸ್ ಕಿರಣ್ ಮಾತನಾಡಿ, ಸ್ಥಳೀಯ ತಂತ್ರಜ್ಞಾನವನ್ನು ಬೆಳೆಸುವುದರಿಂದ ಆ ಭಾಗಗಳಲ್ಲಿನ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ. ಕಳೆದ 10 ವರ್ಷಗಳಲ್ಲಿ ಭಾರತ ದೇಶವು ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಪ್ರಮುಖ ಬದಲಾವಣೆ ಖಂಡಿದೆ. ಅಲ್ಲದೆ ಭಾರತವು ಸಂಶೋಧನೆಗಳಲ್ಲೂ ಜಗತ್ತಿನ ಮುಂದುವರೆದ ರಾಷ್ಟ್ರಗಳಿಗೆ ಪೈಪೋಟಿ ನೀಡುತ್ತಿದೆ. ಹಾಗಾಗಿ ಇಂದಿನ ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಸಾಮಾಜಿಕ ಸಮಸ್ಯೆಗಳನ್ನು ಅಧ್ಯಯನ ಮಾಡುವುದರ ಮೂಲಕ ಅವುಗಳಿಗೆ ಉತ್ತಮ ಪರಿಹಾರಗಳನ್ನು ನೀಡುವಲ್ಲಿ ಯಶಸ್ವಿಯಾಗಬೇಕು ಎಂದರು.

 ಮೂಲಭೂತ ವಿಜ್ಞಾನದ ವಿಭಾಗಗಳ ಸೈನ್ಸ್ ಫೋರಂ ಅಡಿಯಲ್ಲಿ ವಿದಾರ್ಥಿಗಳಿಗೆ ಹಲವು ಸ್ಪರ್ಧೆಗಳನ್ನು ನಡೆಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ಪತ್ರ ನೀಡಲಾಯಿತು. ಅಲ್ಲದೆ ವಿಜ್ಞಾನ ವಿಷಯಗಳಲ್ಲಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಈ ವೇಳೆ ವಿಜ್ಞಾನ ವಿಭಾಗ ಮುಖ್ಯಸ್ಥರಾದ ಡಾ. ಸಿ.ವೇದಮೂರ್ತಿ, ಡಾ. ಹೆಚ್.ಎನ್ ಚಂದ್ರಕಲಾ, ಡಾ.ಪಿ.ವಿ ನಿರ್ಮಲದೇವಿ ಸೇರಿದಂತೆ ಕಾಲೇಜಿನ ಬೋದಕ ಮತ್ತು ಬೋದಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.