ರೈತರು ಬಿತ್ತನೆ ಬೆಳೆಗೆ ತಪ್ಪದೇ ವಿಮಾ ಕಂತು ಪಾವತಿಸಲಿ: ಜಿಲ್ಲಾಧಿಕಾರಿ ವೈಶಾಲಿ

| Published : Jun 30 2024, 12:47 AM IST

ರೈತರು ಬಿತ್ತನೆ ಬೆಳೆಗೆ ತಪ್ಪದೇ ವಿಮಾ ಕಂತು ಪಾವತಿಸಲಿ: ಜಿಲ್ಲಾಧಿಕಾರಿ ವೈಶಾಲಿ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಬೆಳೆಗಳಿಗೆ ಪ್ರತ್ಯೇಕ ವಿಮಾ ಕಂತುಗಳನ್ನು ನಿಗದಿಪಡಿಸಲಾಗಿದೆ. ಅದರಂತೆ ವಿಮಾ ಕಂತು ಪಾವತಿಸಲು ಬೆಳೆಗಳಿಗೆ ಅನುಸಾರ ಪ್ರತ್ಯೇಕವಾಗಿ ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದು, ರೈತರು ಕೊನೆಯ ದಿನಾಂಕದ ವರೆಗೂ ಕಾಯದೇ ವಿಮಾ ಕಂತು ಪಾವತಿಸಬೇಕು ಎಂದು ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸೂಚಿಸಿದ್ದಾರೆ.

ಗದಗ: ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ತಪ್ಪದೇ ವಿಮಾ ಕಂತು ಪಾವತಿಸುವ ಮೂಲಕ ಪ್ರಕೃತಿ ವಿಕೋಪದಿಂದಾಗುವ ಆರ್ಥಿಕ ಸಂಕಷ್ಟದಿಂದ ಪಾರಾಗಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.

ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಬೆಳೆಗಳಿಗೆ ಪ್ರತ್ಯೇಕ ವಿಮಾ ಕಂತುಗಳನ್ನು ನಿಗದಿಪಡಿಸಲಾಗಿದೆ. ಅದರಂತೆ ವಿಮಾ ಕಂತು ಪಾವತಿಸಲು ಬೆಳೆಗಳಿಗೆ ಅನುಸಾರ ಪ್ರತ್ಯೇಕವಾಗಿ ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದು, ರೈತರು ಕೊನೆಯ ದಿನಾಂಕದ ವರೆಗೂ ಕಾಯದೇ ವಿಮಾ ಕಂತು ಪಾವತಿಸಬೇಕು ಎಂದರು.

ಮುಂಗಾರು ಹಂಗಾಮಿನ ಬೆಳೆಗಳಿಗೆ ರೈತರು ಆ್ಯಪ್ ಮೂಲಕ ಸಮೀಕ್ಷೆ ಕೈಗೊಳ್ಳಲು ಅವಕಾಶ ನೀಡಲಾಗಿದೆ. ಗೂಗಲ್ ಪ್ಲೇಸ್ಟೋರ್‌ನಿಂದ ಆ್ಯಪ್‌ ಡೌನ್‍ಲೋಡ್ ಮಾಡಿಕೊಂಡು ರೈತರು ಬೆಳೆ ವಿವರಗಳನ್ನು ದಾಖಲಿಸಬೇಕು. ಹೀಗೆ ವಿವರಗಳನ್ನು ದಾಖಲಿಸುವುದರಿಂದ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ, ಬೆಳೆ ವಿಮೆ ಯೋಜನೆ, ಬರಗಾಲ ಮತ್ತು ಪ್ರವಾಹ ಸಂದರ್ಭದಲ್ಲಿ ನಷ್ಟ ಪರಿಹಾರ ಪಡೆಯಲು, ಪಹಣಿಯಲ್ಲಿ ಬೆಳೆ ವಿವರಗಳನ್ನು ದಾಖಲಿಸಲು ಮತ್ತು ಬೆಳೆಸಾಲ ಪಡೆಯುವಲ್ಲಿ ರೈತರಿಗೆ ಅನುಕೂಲವಾಗುವುದು. ಬೆಳೆ ವಿವರಗಳನ್ನು ಅಪ್‍ಲೋಡ್ ಮಾಡದಿದ್ದಲ್ಲಿ ಸರ್ಕಾರದ ಯೋಜನೆಗಳ ಲಾಭದಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ. ರೈತರು ಇದನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ವಿವರಗಳನ್ನು ದಾಖಲಿಸಬೇಕು ಎಂದು ತಿಳಿಸಿದರು.

ಜಿಲ್ಲೆಯ ಪ್ರತಿಯೊಂದು ಬೀಜ ಹಾಗೂ ರಸಗೊಬ್ಬರಗಳ ಅಂಗಡಿಗಳಲ್ಲಿ ಲಭ್ಯವಿರುವ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ದರ ಹಾಗೂ ಪ್ರಮಾಣಗಳನ್ನು ಕಡ್ಡಾಯವಾಗಿ ಪ್ರಕಟಿಸಬೇಕು. ರೈತರು ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಖರೀದಿಸಿದ ಆನಂತರ ತಪ್ಪದೇ ಸಂಬಂಧಿತ ಅಂಗಡಿಗಳಿಂದ ರಸೀದಿ ಪಡೆದುಕೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ ನಿರ್ಲಕ್ಷ್ಯ ತೋರಬಾರದು ಎಂದು ಸೂಚಿಸಿದರು.

ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್. ಮಾತನಾಡಿ, ಜಿಲ್ಲೆಯಲ್ಲಿ ಜೂ. 28ಕ್ಕೆ ಕೊನೆಗೊಂಡಂತೆ 3,01,548 ಹೆಕ್ಟೇರ್ ಪ್ರದೇಶದ ಬಿತ್ತನೆ ಗುರಿ ಇದೆ. ಆ ಪೈಕಿ 2,78,239 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ರೈತರಿಗೆ ಈಗಾಗಲೇ 4,91,546 ಕ್ವಿಂಟಲ್ ಬಿತ್ತನೆ ಬೀಜ ವಿತರಣೆಯಾಗಿದ್ದು, ಇನ್ನೂ 1524 ಕ್ವಿಂಟಲ್ ಬಿತ್ತನೆ ಬೀಜ ಲಭ್ಯವಿದೆ. ರಸಗೊಬ್ಬರಕ್ಕೆ ಸಂಬಂಧಿಸಿದಂತೆ 32,375 ಮೆ. ಟನ್ ಮಾರಾಟವಾಗಿದ್ದು, ಇನ್ನೂ 18,021 ಮೆ. ಟನ್ ರಸಗೊಬ್ಬರ ಲಭ್ಯವಿದೆ. ಡಿಎಪಿ-9327 ಮೆ. ಟನ್ ಮಾರಾಟವಾಗಿದ್ದು, 2202 ಮೆಟ್ರಿಕ್ ಟನ್ ದಾಸ್ತಾನಿದೆ. ಅದರಂತೆ ಎಂಓಪಿ-480 ಮೆ. ಟನ್ ಮಾರಾಟವಾಗಿದ್ದು, 538 ದಾಸ್ತಾನು ಇದೆ. ಕಾಂಪ್ಲೆಕ್ಸ್ –10,046 ಮೆ. ಟನ್ ಮಾರಾಟವಾಗಿದ್ದು, 7,425 ದಾಸ್ತಾನು ಇದೆ. ಯೂರಿಯಾ-12,341 ಮಾರಾಟವಾಗಿ 7,698 ದಾಸ್ತಾನಿದೆ. ಎಸ್‍ಎಸ್‍ಪಿ-181 ಮಾರಾಟವಾಗಿ 158 ದಾಸ್ತಾನಿದೆ ಎಂದು ಮಾಹಿತಿ ನೀಡಿದರು.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಶಿಕಾಂತ ಕೋಟಿಮನಿ ಮಾತನಾಡಿ, ಗದಗ ಜಿಲ್ಲೆಗೆ ಓರಿಯಂಟಲ್ ಜನರಲ್ ಇನ್ಸೂರೆನ್ಸ್ ಕಂಪನಿಯವರು ಅನುಷ್ಠಾನ ವಿಮಾ ಸಂಸ್ಥೆಯಾಗಿದೆ. ರೈತರು ನೋಂದಣಿಗಾಗಿ ಕಡ್ಡಾಯವಾಗಿ ಫ್ರೂಟ್ಸ್ ಐಡಿ ಹೊಂದಿರಬೇಕು ಎಂದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಲಾಯಿತು.

ಗ್ರಾಪಂ ವ್ಯಾಪ್ತಿಯ ಪ್ರದೇಶಗಳಲ್ಲಿ ಮಳೆ ಮಾಪನ ಯಂತ್ರ ಅಳವಡಿಕೆ, ಜಿಲ್ಲೆಯಲ್ಲಿ ಕುಸುಬೆ ಬೆಳೆಯ ಬೆಂಬಲ ಬೆಲೆಯ ಕೇಂದ್ರ ನಿರ್ಮಾಣ, ರೈತರ ಆತ್ಮಹತ್ಯೆ ಪ್ರಕರಣಗಳು, ಆಕಸ್ಮಿಕ ಮರಣಗಳ ಪ್ರಕರಣಗಳು, ಬೆಂಕಿ ಬಣವೆ ಪ್ರಕರಣಗಳು ಸೇರಿದಂತೆ ಕೃಷಿ ಇಲಾಖೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲಾಯಿತು.

ಜಿಲ್ಲಾ ಸಂಖ್ಯಾಸಂಗ್ರಹಣಾಧಿಕಾರಿ ಎ.ಎ. ಕಂಬಾಳಿಮಠ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ತಾಲೂಕು ಅಧಿಕಾರಿಗಳು, ವಿವಿಧ ರೈತ ಸಮುದಾಯದ ಮುಖಂಡರು, ರೈತರು, ಇನ್ಸುರೆನ್ಸ್ ಕಂಪನಿಯ ಪ್ರತಿನಿಧಿಗಳು, ರಸಗೊಬ್ಬರದ ಅಂಗಡಿ ಮಾಲೀಕರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.