ಕೆರೆಗಳ ಭರ್ತಿ ಯೋಜನೆ ಸಾಕಾರಗೊಳ್ಳಲಿ

| Published : Jun 20 2024, 01:03 AM IST

ಸಾರಾಂಶ

ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹೂವಿನಹಡಗಲಿ ಭಾಗದ ಕೆರೆ ತುಂಬಿಸಿ ನೀರಾವರಿ ಯೋಜನೆ ಸಾಕಾರಗೊಳಿಸಬೇಕಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ವಿಜಯನಗರ ಜಿಲ್ಲೆಯ ಕೆರೆಗಳನ್ನು ಭರ್ತಿ ಮಾಡಲು ಹೊಸದಾಗಿ ಯೋಜನೆಗಳನ್ನು ರೂಪಿಸಿ ಹಾಗೂ ಈಗ ಚಾಲ್ತಿಯಲ್ಲಿರುವ ಕೆರೆ ತುಂಬಿಸುವ ಯೋಜನೆಗಳಿಗೆ ವೇಗ ನೀಡಿದರೆ, ಜಿಲ್ಲೆಯ ಮಳೆ ಆಶ್ರಿತ ಪ್ರದೇಶದ ರೈತರ ಬದುಕು ಹಸನಾಗಲಿದೆ. ಈ ಭಾಗದ ರೈತರು ಸಿಎಂ ಸಿದ್ದರಾಮಯ್ಯ ಬಳಿ ಕೆರೆ ತುಂಬಿಸುವ ಯೋಜನೆ ಸಾಕಾರಗೊಳಿಸಲು ಒತ್ತಾಯಿಸಲು ಸಜ್ಜಾಗಿದ್ದಾರೆ. ಹೊಸಪೇಟೆಗೆ ಸಿಎಂ ಆಗಮಿಸುತ್ತಿರುವ ಹಿನ್ನೆಲೆ ಕೆರೆ ತುಂಬಿಸುವ ಯೋಜನೆ ಸಾಕಾರಗೊಳ್ಳಲಿದೆಯೇ? ಎಂದು ಎದುರು ನೋಡುತ್ತಿದ್ದಾರೆ. ತುಂಗಭದ್ರಾ ನದಿ, ಜಲಾಶಯದ ನೀರು ಬಳಸಿ ಕೆರೆ ತುಂಬಿಸುವ ಕಾರ್ಯ ಆಗಲಿ ಎಂಬುದು ರೈತರ ಒತ್ತಾಯವಾಗಿದೆ.

ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹೂವಿನಹಡಗಲಿ ಭಾಗದ ಕೆರೆ ತುಂಬಿಸಿ ನೀರಾವರಿ ಯೋಜನೆ ಸಾಕಾರಗೊಳಿಸಬೇಕಿದೆ. ಕೆಲ ಯೋಜನೆಗಳು ಚಾಲ್ತಿಯಲ್ಲಿದ್ದು, ಈ ಯೋಜನೆಗಳಿಗೆ ತ್ವರಿತ ಅನುದಾನ ಒದಗಿಸಬೇಕಿದೆ.

ಮೈಕ್ರೋ ಡ್ರಿಪ್‌ ಇರಿಗೇಷನ್‌:

ತುಂಗಭದ್ರಾ ಡ್ಯಾಂನಲ್ಲಿ 105.788 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಡ್ಯಾಂ ಭರ್ತಿಯಾದರೆ 200ರಿಂದ 300 ಟಿಎಂಸಿ ನೀರು ನದಿ ಪಾಲಾಗಿ ಸಮುದ್ರ ಸೇರುತ್ತದೆ. ಬದಲಾಗಿ ಡ್ಯಾಂ ಹಿನ್ನೀರು, ನದಿಯಿಂದಲೇ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ನಡೆಯಬೇಕು. ಇದರಿಂದ ಅಂತರ್ಜಲ ಮಟ್ಟ ಸುಧಾರಿಸಲಿದೆ. ತರಕಾರಿ, ಹಣ್ಣು ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆ ಬೆಳೆದು ಆದಾಯ ಹೆಚ್ಚಿಸಿಕೊಳ್ಳಲಿದ್ದಾರೆ ಎನ್ನುತ್ತಾರೆ ರೈತ ಸಂಘದ ಜಿಲ್ಲಾಧ್ಯಕ್ಷ ಜೆ.ಎನ್‌. ಕಾಳಿದಾಸ.

ಈ ಹಿಂದೆ ಜಿಲ್ಲೆಯ ಕೆರೆಗಳನ್ನು ಭರ್ತಿ ಮಾಡಲು ಒತ್ತಾಯಿಸಿ ರೈತ ಸಂಘದ ನೇತೃತ್ವದಲ್ಲಿ ಸಮಾನ ಮನಸ್ಕರು ಹರಪನಹಳ್ಳಿಯಿಂದ ಹೊಸಪೇಟೆವರೆಗೂ ಪಾದಯಾತ್ರೆ ನಡೆಸಿದ್ದರು. ಇದಕ್ಕೆ ವಿವಿಧ ಮಠಾಧೀಶರು ಧ್ವನಿಗೂಡಿಸಿದ್ದರು. ಆದರೆ ಜನಪ್ರತಿನಿಧಿಗಳ ಇಚ್ಛಾಸಕ್ತಿ ಕೊರತೆಯಿಂದ ಸರ್ಕಾರದ ಗಮನ ಸೆಳೆಯುವಲ್ಲಿ ಸಫಲವಾಗಿರಲಿಲ್ಲ. ಆದರೆ, ಈಗ ಹೊಸ ಜಿಲ್ಲೆಗೆ ಸಿಎಂ ಪ್ರಗತಿ ಪರಿಶೀಲನಾ ಸಭೆ ನಡೆಸಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರೈತರಲ್ಲೂ ಹೊಸ ಆಸೆ ಚಿಗುರಿದೆ.

ತುಂಗಾಭದ್ರ ನದಿಯಿಂದ ನೀರು ತುಂಬಿಸುವ ₹670 ಕೋಟಿ ವೆಚ್ಚದ ಮಹತ್ವದ ಯೋಜನೆ ಕೂಡ್ಲಿಗಿಯಲ್ಲಿ ಜಾರಿಗೆ ಬಂದಿದೆ. ಯೋಜನೆಯಿಂದ 74 ಕೆರೆ ತುಂಬಿಸುವ ಕಾರ್ಯ ನಡೆದಿದೆ. ತಾಲೂಕಿನ ಪಾಲಯ್ಯನಕೋಟೆ ಹತ್ತಿರ ಈ ಮಹತ್ವಾಕಾಂಕ್ಷಿ ಯೋಜನೆಯ ಭೂಮಿಪೂಜೆ ಮಾಡಲಾಗಿದೆ. ಕೂಡ್ಲಿಗಿ ತಾಲೂಕು ಬರದಿಂದ ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕೊಳವೆಬಾವಿಗಳಲ್ಲೂ ಅಪಾಯಮಟ್ಟದ ಪ್ಲೋರೈಡ್ ಅಂಶವಿದ್ದು, ರೈತರು ಬೆಳೆ ಬೆಳೆಯಲು ಸಹ ನೀರಿನ ಅಭಾವವಿದೆ. ₹670 ಕೋಟಿ ವೆಚ್ಚದ 74 ಕೆರೆಗಳಿಗೆ ಹಿಂದಿನ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತು.

ಕೂಡ್ಲಿಗಿ ಮೂರ್ತಿನಾಯಕನಹಳ್ಳಿ, ಹಿರೇವಡೇರಹಳ್ಳಿ, ಸುಂಕದಕಲ್ಲು, ಟಿ.ಬಸಾಪುರ, ತುಪ್ಪಾಕನಹಳ್ಳಿ, ಬಡೇಲಡಕು, ಗಜಾಪುರ, ಉಜ್ಜಿನಿ, ಹನುಮನಹಳ್ಳಿ, ಉಜ್ಜಿನಿ, ಮಂಗಾಪುರ, ಬೆನಕನಹಳ್ಳಿ ಸೇರಿ 16 ಕೆರೆಗಳಿಗೆ ಈ ಯೋಜನೆಯಡಿ ನೀರು ತುಂಬಿಸಲಾಗುತ್ತದೆ.

ಎರಡನೇ ಹಂತದಲ್ಲಿ 58 ಕೆರೆ ತುಂಬಿಸಲಾಗುತ್ತದೆ. ಚಿಕ್ಕಜೋಗಿಹಳ್ಳಿ, ಇಮಡಾಪುರ, ಹುರುಳಿಹಾಳ್, ಹುಲಿಕುಂಟೆ, ಎರ್ರಗುಂಡಲಹಟ್ಟಿ, ಮಹದೇವಪುರ, ನಿಂಬಳಗೆರೆ, ಅಗ್ರಹಾರ, ಗುಣಸಾಗರ, ಬಣವಿಕಲ್ಲು, ಕಂಚೋಬನಹಳ್ಳಿ, ಕುರಿಹಟ್ಟಿ, ಗುಂಡಮುಣಗು, ಮಡಕಲಕಟ್ಟೆ, ಕೊರಚರಹಟ್ಟಿ, ಮ್ಯಾಸರಹಟ್ಟಿ, ಗಂಡಬೊಮ್ಮನಹಳ್ಳಿ, ಎಂ.ಬಿ.ಅಯ್ಯನಹಳ್ಳಿ, ಹೊಸಹಳ್ಳಿ, ಹುಲಿಕೆರೆ, ವೀರಗೊಂಡನಹಳ್ಳಿ, ಲೋಕಿಕೆರೆ 2, ತಾಂಡಹಟ್ಟಿ, ತಿಪ್ಪೆಹಳ್ಳಿ ವಿವಿಧ ಕೆರೆಗಳನ್ನು ತುಂಬಿಸಲಾಗುತ್ತದೆ.

ಪಾಪಿನಾಯಕನಹಳ್ಳಿ ಕೆರೆ ಯೋಜನೆ:

ಮಾಜಿ ಶಾಸಕ ಆನಂದ ಸಿಂಗ್‌ ಹೊಸಪೇಟೆಯ ಪಾಪಿನಾಯಕನಹಳ್ಳಿಯಲ್ಲಿ ಏತ ನೀರಾವರಿ ಯೋಜನೆ ರೂಪಿಸಿ 23 ಕೆರೆ ತುಂಬಿಸುವ ಯೋಜನೆಗೆ ಹಿಂದಿನ ಸರ್ಕಾರದಲ್ಲಿ ₹240 ಕೋಟಿಯ ಕಾಮಗಾರಿ ನಡೆಸಿದ್ದರು. ಇದಕ್ಕೆ ತುಂಗಭದ್ರಾ ನದಿಯಿಂದ ನೀರು ಪಡೆಯಲಾಗುತ್ತಿದೆ. ಈ ಕಾಮಗಾರಿಗೆ ಇನ್ನಷ್ಟು ಅನುದಾನ ನೀಡಬೇಕಿದೆ. ಹರಪನಹಳ್ಳಿಯ ಗರ್ಭಗುಡಿಯ ಬ್ರಿಡ್ಜ್‌ ಕಂ ಬ್ಯಾರೇಜ್‌ ಯೋಜನೆ ನನೆಗುದಿಗೆ ಬಿದ್ದಿದೆ. ಹಡಗಲಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ತಾಲೂಕುಗಳ ಕೆರೆ ತುಂಬಿಸುವ ಯೋಜನೆಗಳು ಕೂಡ ಸಾಕಾರಗೊಳ್ಳಬೇಕಿದೆ.

ಸಿಎಂ ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೆರೆ ತುಂಬಿಸುವ ಯೋಜನೆಗಳ ಸಾಕಾರಕ್ಕೆ ಒತ್ತಾಯಿಸಲಾಗುವುದು. ಜಿಲ್ಲೆಯ 2.95 ಲಕ್ಷ ಹೆಕ್ಟೇರ್‌ ಪ್ರದೇಶ ಮಳೆ ಆಶ್ರಿತ ಪ್ರದೇಶವಾಗಿದೆ. ಕೆರೆಗಳನ್ನು ಭರ್ತಿ ಮಾಡಿ, ಮೈಕ್ರೋ ಡ್ರಿಪ್‌ ಇರಿಗೇಷನ್‌ ಮಾಡಿದರೆ ಶೇ.40 ಭಾಗ ನೀರಾವರಿ ಆಗಲಿದೆ ಎನ್ನುತ್ತಾರೆ ರೈತ ಸಂಘ-ಹಸಿರುಸೇನೆ ಜಿಲ್ಲಾಧ್ಯಕ್ಷ ಜೆ.ಎನ್‌. ಕಾಳಿದಾಸ.