ಮಾರ್ಚ್ 30ರ ಒಳಗೆ ಕಾಮಗಾರಿ ಪೂರ್ಣ ಆಗಲಿ: ಸಚಿವ ಬೋಸರಾಜು

| Published : Jan 04 2025, 12:31 AM IST

ಸಾರಾಂಶ

ಕುಕನೂರು ತಾಲೂಕಿನ ಭಾನಾಪುರ ಗ್ರಾಮದಲ್ಲಿ ಕೆರೆ ತುಂಬಿಸುವ ಯೋಜನೆಯ ಜಾಕ್ವೆಲ್‌ ಕಾಮಗಾರಿಯನ್ನು ಸಚಿವ ಎನ್.ಎಸ್. ಬೋಸರಾಜು ವೀಕ್ಷಣೆ ಮಾಡಿದರು.

ಕುಕನೂರು: ಕೆರೆ ತುಂಬಿಸುವ ಯೋಜನೆಯು ಕಳೆದ ೬ ವರ್ಷದಿಂದ ನಡೆಯುತ್ತಿದ್ದು, ತ್ವರಿತವಾಗಿ ಕಾಮಗಾರಿ ಕೈಗೊಂಡು ಪೂರ್ಣಗೊಳ್ಳಿಸುವಂತೆ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಎಂಜಿನಿಯರ್‌ಗೆ ಸೂಚನೆ ನೀಡಿದರು.

ತಾಲೂಕಿನ ಭಾನಾಪುರ ಗ್ರಾಮದಲ್ಲಿ ಕೆರೆ ತುಂಬಿಸುವ ಯೋಜನೆಯ ಜಾಕ್ವೆಲ್‌ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದರು. ಕೆರೆ ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಅನುಕೂಲವಾಗುತ್ತಿದ್ದು, ಯಲಬುರ್ಗಾ ಕ್ಷೇತ್ರದಲ್ಲಿ ೯ ಕೆರೆಗಳಿಗೆ ನೀರು ತುಂಬಲಿದೆ. ಇದೇ ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಯಂಕಣ್ಣ ಯರಾಶಿ, ಜಿಪಂ ಮಾಜಿ ಸದಸ್ಯರಾದ ಹನುಮಂತಗೌಡ ಚಂಡೂರು, ಕೆರಿಬಸಪ್ಪನಿಡಗುಂದಿ, ಅಶೋಕ ತೋಟದ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ, ಪಪಂ ಉಪಾಧ್ಯಕ್ಷ ಪ್ರಶಾಂತ ಆರ್‌ಬೆರಳಿನ್, ಪ್ರಮುಖರಾದ ಸಂಗಮೇಶ ಗುತ್ತಿ, ಶಿವನಗೌಡ ದಾನರಡ್ಡಿ, ತಿಮ್ಮಣ್ಣ ಚವಡಿ, ಮಂಜುನಾಥ ಯಡಿಯಾಪುರ, ಈಶಪ್ಪ ದೊಡ್ಡಮನಿ, ರಾಮಣ್ಣ ಬಂಕದಮನಿ, ಶಿವು ಆದಾಪುರ ಇತರರಿದ್ದರು.

ಎಂಜಿನಿಯರ್ ಗೆ ತರಾಟೆ

ಬೃಹತ್ ನೀರು ಪೂರೈಕೆ ಮಾಡುವ ಪೈಪ್‌ಲೈನ್‌ಗಳ ಜೋಡಣೆಗೆ ಬಳಸುವ ವಿಧಾನದ ಬಗ್ಗೆ ಸಚಿವ ಬೋಸರಾಜ ಅವರು ಕೆರೆ ತುಂಬಿಸುವ ಯೋಜನೆ ಉಸ್ತುವಾರಿ ನೋಡಿಕೊಳ್ಳುವ ಎಂಜಿನಿಯರ್‌ಗೆ ಪ್ರಶ್ನೆ ಮಾಡಿದರು. ಇದಕ್ಕೆ ಸ್ಥಳದಲ್ಲಿದ್ದ ಯಾವ ಒಬ್ಬ ಎಂಜಿನಿಯರ್ ಕೂಡ ಮಾಹಿತಿ ನೀಡಲಿಲ್ಲ. ಇದರಿಂದ ಸಚಿವರು ಇಂತಹ ಪ್ರಶ್ನೆಗಳಿಗೂ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಕೂಡಲೇ ಎಲ್ಲ ಪೈಪ್‌ಲೈನ್‌ಗಳ ಪರಿಶೀಲನೆ ನಡೆಸಿ, ತ್ವರಿತವಾಗಿ ಕಾಮಗಾರಿ ಕೈಗೊಳ್ಳುವಂತೆ ಸೂಚನೆ ನೀಡಿದರು.

ಹಿಂದಿನ ಸರ್ಕಾರದಿಂದ ಅವಾಂತರ

ಕಾಂಗ್ರೆಸ್ ಸರ್ಕಾರದಲ್ಲಿ ಯಾವ ಗುತ್ತಿಗೆದಾರರಿಗೆ ಬಿಲ್ ನೀಡದೆ ಸತಾಯಿಸಿಲ್ಲ. ಇದು ಹಿಂದಿನ ಬಿಜೆಪಿ ಸರ್ಕಾರ ಅನುದಾನಕ್ಕಿಂತ ಹೆಚ್ಚಿನ ಕಾಮಗಾರಿ ರಚಿಸಿ ಮಾಡಿದ್ದಕ್ಕೆ ಗುತ್ತಿಗೆದಾರರು ಹೆಣಗಾಡುತ್ತಿದ್ದಾರೆ. ನನ್ನ ಇಲಾಖೆಯಲ್ಲಿ 12 ಸಾವಿರ ಕೋಟಿಯ ಕಾಮಗಾರಿ ರಚಿಸಿದ್ದರು. ನನ್ನ ಇಲಾಖೆಗೆ ಇರುವುದು ಬರೀ 2 ಸಾವಿರ ಕೋಟಿ ಅನುದಾನ. ಈ ರೀತಿ ಹಣವಿಲ್ಲದೆ ಕಾಮಗಾರಿ ಮಾಡಿ ಬಿಜೆಪಿ ಸರ್ಕಾರ ತಪ್ಪು ಮಾಡಿದೆ ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ 683 ಗುತ್ತಿಗೆದಾರರಿಗೆ ಬಿಲ್ ಪಾವತಿಸಿದ್ದೇವೆ. ಬಾಣಂತಿಯರ ಸಾವಿಗೆ ಕಾರಣವಾಗುತ್ತಿರುವ ಔಷಧಿಯನ್ನ ರಾಜ್ಯ ಸರ್ಕಾರ ಬಂದ್‌ ಮಾಡಿದೆ ಬಾಣಂತಿಯರ ಸಾವು ಆಗದಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇದರ ಬಗ್ಗೆ ಯಾರೂ ರಾಜೀನಾಮೆ ಕೊಡುವ ಪ್ರಮೇಯ ಇಲ್ಲ ಎಂದರು.

ತುಂಗಭದ್ರಾ ಹೂಳೆತ್ತುವುದು ಅಸಾಧ್ಯ

ಯಾವ ಸರ್ಕಾರವಿದ್ದರೂ ತುಂಗಭದ್ರಾ ಹೂಳು ತೆಗೆಯುವುದು ಅಸಾಧ್ಯ. ಅಲ್ಲಿನ ಹೂಳು ಸಂಗ್ರಹ ಮಾಡಲು 60 ಸಾವಿರ ಎಕರೆ ಭೂಮಿಬೇಕು. ಹೀಗಾಗಿ, ಅದು ಅಸಾಧ್ಯ. ಈ ಕುರಿತು ಎಂ.ಬಿ. ಪಾಟೀಲರ ಅವಧಿಯಲ್ಲಿ ಗ್ಲೋಬಲ್ ಟೆಂಡರ್ ಕರೆಸಲಾಗಿತ್ತು. ಅದನ್ನು ಚೆನ್ನೈ ಅವರು ಮೈನ್ಸ್ ಗೆ ಬಳಕೆ ಮಾಡಿಕೊಳ್ಳುತ್ತೇವೆ ಎಂದರು. ಅವರಿಗೆ ನಷ್ಟ ಆಗುತ್ತದೆ ಎಂದು ಕೈ ಬಿಟ್ಟರು. ನವಲಿ ಸಮಾಂತರ ಜಲಾಶಯಕ್ಕೆ 15 ಸಾವಿರ ಎಕರೆ ಭೂಮಿ ಬೇಕು. ಈಗಿನ ಭೂಮಿ ಬೆಲೆ ಪ್ರಕಾರ 9 ಸಾವಿರ ಕೋಟಿ ನೀಡಬೇಕು. ರೈತರೂ ಭೂಮಿ ನೀಡಲು ಒಪ್ಪುವುದಿಲ್ಲ. ಡ್ಯಾಂ ನಿರ್ಮಾಣಕ್ಕೆ ₹6 ಸಾವಿರ ಕೋಟಿ ನೀಡಬೇಕು. ಡ್ಯಾಂ ಕಟ್ಟಿದಾಗ ಹಾಕಿದ ಲೆಕ್ಕಾಚಾರದಂತೆ ಪ್ರತಿವರ್ಷ ಅರ್ಧ ಟಿಎಂಸಿ ಹೂಳು ತುಂಬಿದೆ. ಇದರ ಬಗ್ಗೆ ಸರ್ಕಾರ ಸಹ ಗಮನ ಹರಿಸುತ್ತಿದೆ. ಪರ್ಯಾಯ ದಾರಿ ಹುಡುಕಲಾಗುವುದು ಎಂದು ಸಚಿವ ಬೋಸರಾಜು ಹೇಳಿದರು.