ಗದಗ ಮಹಿಳೆಯರಿಂದಲೇ ಲಿಜ್ಜತ್ ಪಾಪಡ್ ತಯಾರಿಕೆ!

| Published : Apr 27 2025, 01:54 AM IST

ಸಾರಾಂಶ

ಲಿಜ್ಜತ್ ಪಾಪಡ್ ಹೆಸರು ಕೇಳದವರಿಲ್ಲ. ಗುಜರಾತಿನಲ್ಲಿ 1959ರಲ್ಲಿ 7 ಜನ ಮಹಿಳೆಯರು 80 ರುಪಾಯಿದಿಂದ ಪ್ರಾರಂಭಿಸಿದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಸಾವಿರಾರು ಕೋಟಿ ವಹಿವಾಟು ನಡೆಸುತ್ತಿದೆ. ಈ ಬೃಹತ್ ಕಂಪನಿಯಲ್ಲಿ ಗದಗ ಬೆಟಗೇರಿಯ 100 ಜನ ಮಹಿಳೆಯರು ಸಹ ಪಾಲುದಾರರಾಗಿ ಲಿಜ್ಜಿತ್ ಪಾಪಡ್ ಉತ್ಪಾದನೆ ಪ್ರಾರಂಭಿಸಿದ್ದಾರೆ.

ಶಿವಕುಮಾರ ಕುಷ್ಟಗಿ

ಕನ್ನಡಪ್ರಭ ವಾರ್ತೆ ಗದಗ

ಲಿಜ್ಜತ್ ಪಾಪಡ್ ಹೆಸರು ಕೇಳದವರಿಲ್ಲ. ಗುಜರಾತಿನಲ್ಲಿ 1959ರಲ್ಲಿ 7 ಜನ ಮಹಿಳೆಯರು 80 ರುಪಾಯಿದಿಂದ ಪ್ರಾರಂಭಿಸಿದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಸಾವಿರಾರು ಕೋಟಿ ವಹಿವಾಟು ನಡೆಸುತ್ತಿದೆ. ಈ ಬೃಹತ್ ಕಂಪನಿಯಲ್ಲಿ ಗದಗ ಬೆಟಗೇರಿಯ 100 ಜನ ಮಹಿಳೆಯರು ಸಹ ಪಾಲುದಾರರಾಗಿ ಲಿಜ್ಜಿತ್ ಪಾಪಡ್ ಉತ್ಪಾದನೆ ಪ್ರಾರಂಭಿಸಿದ್ದಾರೆ.

ಹೊಸ ಕ್ರಾಂತಿ:ಗೃಹ ಉದ್ಯಮದಲ್ಲಿ ವಿಶೇಷ ಕ್ರಾಂತಿಯನ್ನೇ ಮಾಡಿರುವ ಲಿಜ್ಜತ್ ಸಂಸ್ಥೆ ಈಗಾಗಲೇ ಬೆಂಗಳೂರು, ನಿಪ್ಪಾಣಿ, ಕಾರವಾರ ಸಹಿತ ರಾಜ್ಯದ 6 ಕಡೆಗಳಲ್ಲಿ ಮಹಿಳೆಯರಿಗೆ ಮನೆಯಿಂದಲೇ ಹಪ್ಪಳ ತಯಾರಿಕೆ ಮಾಡಿಕೊಡಲು ಅವಕಾಶ ಕಲ್ಪಿಸಿದೆ. ಅದರ 7ನೇ ಶಾಖೆ ಈಗ ಗದಗ ನಗರದಲ್ಲಿ ಆರಂಭವಾಗಿದೆ.

100 ಜನ ಮಹಿಳೆಯರು ಈಗಾಗಲೇ ನೋಂದಣಿ ಮಾಡಿಕೊಂಡು ಹಪ್ಪಳ ತಯಾರಿಕೆಯಲ್ಲಿ ತೊಡಗಿದ್ದು, ಇನ್ನು 500 ಕ್ಕೂ ಹೆಚ್ಚಿನ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವತ್ತ ಈ ಯೋಜನೆ ದಾಪುಗಾಲು ಹಾಕುತ್ತಿದೆ.

ಉತ್ತಮ ಆದಾಯ:ಮಹಿಳೆಯರು ತಮ್ಮ ಬಿಡುವಿನ ಸಮಯದಲ್ಲಿ ಕೆಲಸ ಮಾಡಿ ತಿಂಗಳಿಗೆ 6ರಿಂದ 10 ಸಾವಿರ ಗಳಿಸಬಹುದಾಗಿದೆ. ಒಂದು ಕೆಜಿ ಹಪ್ಪಳ ತಯಾರಿಕೆಗೆ ಸಂಸ್ಥೆ 55 ರುಪಾಯಿ ನಿಗದಿ ಮಾಡಿದ್ದು, ಒಬ್ಬ ಮಹಿಳೆ ಸರಾಸರಿ 5 ಕೆಜಿ ವರೆಗೂ ಹಪ್ಪಳ ತಯಾರಿಸಲು ಸಾಧ್ಯವಿದೆ. ಇದರಿಂದಾಗಿ ಮಾಸಿಕ 6ರಿಂದ 8 ಸಾವಿರ ಗಳಿಕೆ ಮಾಡಲು ಅವಕಾಶವಿದ್ದು, ಇದರೊಟ್ಟಿಗೆ ವರ್ಷಕ್ಕೆರಡು ಬಾರಿ ಸಂಸ್ಥೆ ಬೋನಸ್ ಕೊಡುವುದರಿಂದ ಒಬ್ಬ ಮಹಿಳೆ ತಿಂಗಳಿಗೆ 10 ಸಾವಿರ ದೊರೆಯಲಿದೆ.

ತಯಾರಿಕೆ ಹೇಗೆ?:ಗದಗ ಮಹಿಳೆಯರು ಲಿಜ್ಜತ್ ಪಾಪಡ್ ಅದೇಗೆ ತಯಾರಿಸುತ್ತಾರೆ ಎಂದು ಸಹಜವಾಗಿಯೇ ಎಲ್ಲರೂ ಹುಬ್ಬೇರಿಸುತ್ತಾರೆ. ಆದರೆ ಸಂಸ್ಥೆಯ ಪಾಲುದಾರಿಕೆಯಲ್ಲಿ ಹೆಸರು ನೊಂದಾಯಿಸಿಕೊಂಡ ಮಹಿಳೆಯರಿಗೆ ಲಿಜ್ಜತ್ ಸಂಸ್ಥೆಯೇ ಪಾಪಡ್ ತಯಾರಿಕೆ ಬೇಕಾಗುವ ಕಲಸಿದ ಹಿಟ್ಟನ್ನು ಒದಗಿಸುತ್ತದೆ. ಮಹಿಳೆಯರು ಆ ಹಿಟ್ಟನ್ನು ಮನೆಗೆ ತೆಗೆದುಕೊಂಡು ಹೋಗಿ ಬಿಡುವಿನ ವೇಳೆಯಲ್ಲಿ ಹಪ್ಪಳ ಮಾಡಿ, ಒಣಗಿಸಿ ಮರಳಿ ತಂದು ಕೊಡಬೇಕು. ಮಹಿಳೆಯರನ್ನು ಕರೆತಂದು, ಕರೆದೊಯ್ಯಲು ವಾಹನ ವ್ಯವಸ್ಥೆಯೂ ಕಲ್ಪಿಸಿದೆ. ಹಪ್ಪಳ ತಯಾರಿಕೆಗೆ ತರಬೇತಿಯನ್ನೂ ಉಚಿತವಾಗಿ ನೀಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಖಾದಿ ಗ್ರಾಮೋದ್ಯೋಗದಿಂದ ಮಾನ್ಯತೆ ಪಡೆದಿರುವ ಲಿಜ್ಜತ್ ಪಾಪಡ್ ಸಂಸ್ಥೆಯ ಗದಗ ಶಾಖೆಯ ಆರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರೇ ಪ್ರಮುಖ ಕಾರಣ, ಸಂಸ್ಥೆಯ ಚೇರ್ಮನ್ ಸ್ವಾತಿ ಪರಾಡಕರ್ ಜೊತೆ ಚರ್ಚಿಸಿ, ಗದಗದಲ್ಲಿ ಕರ್ನಾಟಕದ 7ನೇ ಶಾಖೆ ಆರಂಭ ಮಾಡಿಸಿದ್ದಾರೆ. ಕನಿಷ್ಠ 500 ಜನರಿಗೆ ಉದ್ಯೋಗ ಸಿಗಬೇಕು ಎನ್ನುವ ಗುರಿ ಹೊಂದಲಾಗಿದೆ ಎಂದು ಲಿಜ್ಜತ್ ಪಾಪಡ್ ತಯಾರಿಸುವ ಮಹಿಳೆಯರು ಹೇಳುತ್ತಾರೆ.

ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ದಾರಿಯಾಗಿರುವ ಮತ್ತು ಮಹಿಳೆಯರಿಂದಲೇ ಸ್ಥಾಪನೆಗೊಂಡಿರುವ ಗೃಹೋದ್ಯಮ ಲಿಜ್ಜತ್ ಪಾಪಡ್ ಗದಗ ಕೆಲಸ ಪ್ರಾರಂಭಿಸಿರುವುದು ಸಂತಸದ ವಿಷಯ.. ಇದರಿಂದಾಗಿ ಗದಗ -ಬೆಟಗೇರಿ ಅವಳಿ ನಗರದ 500 ಜನ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿ ಅವರನ್ನು ಆರ್ಥಿಕವಾಗಿ ಸ್ವಾವಲಂಬಿ ಮತ್ತು ಸದೃಢ ಮಾಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.