ಮನುಷ್ಯನ ಅಹಂಭಾವದಿಂದ ಜೀವ ವೈವಿಧ್ಯಕ್ಕೆ ನಷ್ಟ: ಡಾ. ಕುರಿಯನ್‌

| Published : Aug 31 2024, 01:41 AM IST

ಸಾರಾಂಶ

ಮಂಗಳೂರು ವಿವಿ ಕಾಲೇಜು, ಮಂಗಳೂರಿನ ಕಾರ್‌ಸ್ಟ್ರೀಟ್ ಕಾಲೇಜು ಹಾಗೂ ಭುವನೇಂದ್ರ ಕಾಲೇಜಿನಿಂದ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಈ ಭೂಮಿ ನಮಗಾಗಿಯೇ ನಿರ್ಮಾಣವಾಗಿದೆ ಎಂಬ ಮನುಷ್ಯನ ಅಹಂಭಾವ, ಮೂರ್ಖತನದ ಪರಮಾವಧಿಯಿಂದ ಜೀವ ವೈವಿಧ್ಯದ ಮೇಲೆ ಭರಿಸಲಾಗದ ನಷ್ಟ ಉಂಟಾಗುತ್ತಿದೆ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹೇಳಿದರು.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಎನರ್ಜಿ ಆ್ಯಂಡ್ ವೆಟ್‌ಲ್ಯಾಂಡ್ಸ್ ರಿಸರ್ಚ್ ಗ್ರೂಪ್‌ ಹಾಗೂ ಆಳ್ವಾಸ್ ಕಾಲೇಜಿನ ಸಸ್ಯಶಾಸ್ತ್ರ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಆಶ್ರಯದಲ್ಲಿ ಲೇಕ್‌ ಸಮ್ಮೇಳನದ ಪೂರ್ವಭಾವಿಯಾಗಿ ಆಯೋಜಿಸಿದ್ದ- ‘ಪ್ರೀ ಲೇಕ್ ಕಾರ್ಯಾಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾಗತಿಕ ತಾಪಮಾನ ಹಾಗೂ ಹವಾಮಾನದ ದುಷ್ಪರಿಣಾಗಳಿಂದಾಗಿ ಮಂಜುಗಡ್ಡೆಗಳು ಕರಗುತ್ತಿವೆ, ಓಝೋನ್ ಪದರ ಸವಕಳಿ ಹೊಂದುತ್ತಿದೆ, ವಾಯು ಮಾಲಿನ್ಯ ವಿಪರೀತ ಮಟ್ಟಕೇರಿದೆ. ತಾಪಮಾನ ತಡೆಗಟ್ಟುವ ಉಪಕ್ರಮ ರೂಪಿಸಬೇಕಿದೆ ಎಂದರು.

ಸಂಶೋಧಕ ವ್ರಿಜುಲಾಲ್ ಅವರು ಹಕ್ಕಿ ಹಾಗೂ ಚಿಟ್ಟೆಗಳ ಕುರಿತು, ಆಳ್ವಾಸ್‌ನ ಸ್ನಾತಕೋತ್ತರ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಪಕ ಡಾ. ಕೇಶವಚಂದ್ರ ಕೆ. ಸಸ್ಯಗಳ ಗುರುತಿಸುವ ಕುರಿತು, ಲೈಯಾನಾ ಟ್ರಸ್ಟ್‌ ಕ್ಷೇತ್ರ ಸಂಶೋಧಕಿ ಶರಣ್ಯ, ಕೆರೆ ಸಮ್ಮೇಳನ ೨೦೨೪ರ ಕಾರ್ಯದರ್ಶಿ ಡಾ ವಿನಯ್ ನೀರು ಹಾಗೂ ಜೀವ ಪರಿಸರ ವ್ಯವಸ್ಥೆಯ ಕುರಿತು, ಸಂತ ಅಲೋಷಿಯಸ್ ಡೀಮ್ಡ್ ಟುಬಿ ವಿವಿಯ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಪಕ ಕಿರಣ್ ವಾಟಿ ಕೀಟ ಹಾಗೂ ಜೇಡಗಳು- ಪ್ರಕೃತಿಯ ವಿಸ್ಮಯ ವಿಷಯದ ಕುರಿತು ಕಾರ್ಯಾಗಾರ ನಡೆಸಿಕೊಟ್ಟರು.

ಮಂಗಳೂರು ವಿವಿ ಕಾಲೇಜು, ಮಂಗಳೂರಿನ ಕಾರ್‌ಸ್ಟ್ರೀಟ್ ಕಾಲೇಜು ಹಾಗೂ ಭುವನೇಂದ್ರ ಕಾಲೇಜಿನಿಂದ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಆಳ್ವಾಸ್ ಕಾಲೇಜಿನ ಮೌಲ್ಯಾಮಾಪನ ಕುಲಸಚಿವ ಡಾ ನಾರಾಯಣ ಶೆಟ್ಟಿ, ಶೈಕ್ಷಣಿಕ ಕುಲಸಚಿವ ಡಾ ರವೀಂದ್ರನ್ ಪದವಿ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಪವಿತ್ರಾ ಉಪಸ್ಥಿತರಿದ್ದರು. ಸುನೈನಾ ಹಾಗೂ ಗಗನಾ ಲೋಕೇಶ್ ನಿರೂಪಿಸಿ, ವೈಶವಿ ಹಾಗೂ ಮೇಘಾ ಬಿವಿ ವಂದಿಸಿದರು.