ಇ-ಆಸ್ತಿ ನೋಂದಣಿ ವಿಚಾರದಲ್ಲಿ ಮಹಾನಗರ ಪಾಲಿಕೆ ವಿಫಲ

| Published : Feb 16 2025, 01:45 AM IST

ಸಾರಾಂಶ

ಶಿವಮೊಗ್ಗ: ಇ-ಆಸ್ತಿ ನೋಂದಣಿ ವಿಚಾರದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಸಂಪೂರ್ಣ ವಿಫಲಗೊಂಡಿದೆ. ಈ ಹಿನ್ನೆಲೆಯಲ್ಲಿ ಇ-ಆಸ್ತಿ ತಂತ್ರಾಂಶವನ್ನು ಕಡ್ಡಾಯ ಮಾಡಿರುವುದನ್ನು ಕಂದಾಯ ಇಲಾಖೆ ಕನಿಷ್ಠ ಆರು ತಿಂಗಳು ಮುಂದೂಡಬೇಕು ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್‌ ಆಗ್ರಹಿಸಿದರು.

ಶಿವಮೊಗ್ಗ: ಇ-ಆಸ್ತಿ ನೋಂದಣಿ ವಿಚಾರದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಸಂಪೂರ್ಣ ವಿಫಲಗೊಂಡಿದೆ. ಈ ಹಿನ್ನೆಲೆಯಲ್ಲಿ ಇ-ಆಸ್ತಿ ತಂತ್ರಾಂಶವನ್ನು ಕಡ್ಡಾಯ ಮಾಡಿರುವುದನ್ನು ಕಂದಾಯ ಇಲಾಖೆ ಕನಿಷ್ಠ ಆರು ತಿಂಗಳು ಮುಂದೂಡಬೇಕು ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್‌ ಆಗ್ರಹಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಾದ್ಯಂತ ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿಗಳನ್ನು ಅಳವಡಿಸಲು ಸೂಕ್ತ ನಿರ್ದೇಶನ ನೀಡಲಾಗಿದ್ದು, ಈ ನಿರ್ದೇಶನದ ಪ್ರಕಾರ ಕೆಎಂಡಿಎಸ್ (ಕರ್ನಾಟಕ ಮುನ್ಸಿಪಲ್ ಡೇಟಾ ಸೊಸೈಟಿ)ಯಿಂದ ಅಭಿವೃದ್ಧಿಪಡಿಸಿದ ತಂತ್ರಾಂಶದಲ್ಲಿಯೇ ಆಸ್ತಿಗಳ ನೋಂದಣಿಗಳ ಗಣಕೀಕರಣಗೊಳಿಸಲು ಇಲಾಖೆಯಿಂದ ಸೂಚಿಸಲಾಗಿತ್ತು. ಆದರೆ ಮಹಾನಗರ ಪಾಲಿಕೆ ಈ ನಿರ್ದೇಶನ ಪಾಲಿಸದೆ ಬೇರೆ ಬೇರೆ ತಂತ್ರಾಂಶಗಳಲ್ಲಿ ಅಂದರೆ ಎಂಆರ್‌ಸಿ ತಂತ್ರಾಂಶದಲ್ಲಿ ನಮೂದು ಮಾಡಿತ್ತು. ಇದು ಅನಧೀಕೃತ ತಂತ್ರಾಂಶವಾಗಿದ್ದು ಇಲ್ಲಿ ಮಾಡಿರುವ ನಮೂನೆ-2, ನಮೂನೆ-3ನ್ನು ಕಂದಾಯ ಇಲಾಖೆಯ ಕಾವೇರಿ ತಂತ್ರಾಂಶಕ್ಕೆ ಅಳವಡಿಸಲು ಸಾಧ್ಯವಾಗದೇ ಇರುವುದರಿಂದ ಇದುವರೆಗೂ ಇ-ಆಸ್ತಿ ಯೋಜನೆ ಅಡಿಯಲ್ಲಿ ಪಡೆದ ನಮೂನೆ 2, 3 ವ್ಯರ್ಥವಾಗಿದೆ ಎಂದು ದೂರಿದರು.ಶಿವಮೊಗ್ಗ ಮಹಾನಗರ ಪಾಲಿಕೆ ಇ-ಆಸ್ತಿಗೆ ಅಗತ್ಯವಾದ ನಮೂನೆ 2, 3ನ್ನು ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಆಯುಕ್ತರೂ ಸೇರಿದಂತೆ ಇಲ್ಲಿನ ಅಧಿಕಾರಿ ವರ್ಗ ಇ-ಆಸ್ತಿ ನೋಂದಣಿ ವಿಚಾರದಲ್ಲಿ ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಮಹಾನಗರ ಪಾಲಿಕೆಯ ಆಡಳಿತಕ್ಕೇ ದೊಡ್ಡ ಸರ್ಜರಿಯ ಅವಶ್ಯಕತೆ ಇದೆ ಎಂದರು.ಇದಕ್ಕೆ ಸಂಬಂಧಿಸಿದಂತೆ ನಾವು ಸಾರ್ವಜನಕ ಸಭೆಯನ್ನು, ಅಧಿಕಾರಿಗಳ ಸಭೆಯನ್ನು ಮಾಡಿದ್ದೇವೆ. ಇ-ಆಸ್ತಿಗೆ ಸಂಬಂಧಿಸಿದಂತೆ ದಾಖಲೆಗಳೆಲ್ಲವೂ ಬೇಕು ಎಂದೇನೂ ಇಲ್ಲ. ಆದರೆ, ಪಾಲಿಕೆಯವರು ವಿನಾಕಾರಣ ಸಾರ್ವಜನಿಕರಿಗೆ ಬೇಡವಾದ ದಾಖಲೆಗಳನ್ನು ಬೇಕು ಎಂದು ಕೇಳುತ್ತಿದ್ದಾರೆ. ಇಷ್ಟು ಹೊತ್ತಿಗೆ ಸಾರ್ವಜನಿಕರಿಗೆ ಯಾವ ಖರ್ಚೂ ಇಲ್ಲದೆ ಕೇವಲ 100 ರು. ಶುಲ್ಕದಲ್ಲಿ ಇ-ಖಾತೆಯನ್ನು ಅಧಿಕಾರಿಗಳು ನೀಡಬಹುದಿತ್ತು. ಆದರೆ ಪಾಲಿಕೆಯ ಅಧಿಕಾರಿಗಳ ವೈಖರಿ ನೋಡಿದರೆ ಅವರು ಇ-ಆಸ್ತಿ ನೀಡಲು ಸಂಪೂರ್ಣ ವಿಫಲವಾಗಿದ್ದಾರೆ. ಶಿವಮೊಗ್ಗದಲ್ಲಿ ಸುಮಾರು 1.7 ಲಕ್ಷ ಖಾತೆದಾರರಿದ್ದಾರೆ. ಇದರಲ್ಲಿ ಶೇ.30ರಷ್ಟು ಖಾತೆಗಳು ಕೂಡ ಇ-ಆಸ್ತಿ ಪಡೆದಿಲ್ಲ ಎಂದು ಹೇಳಿದರು.ಈಗ ನೀಡಿರುವ ಇ-ಆಸ್ತಿ ದಾಖಲೆ ಕೂಡ ಅಧೀಕೃತ ತಂತ್ರಾಂಶದಿಂದ ನೀಡಿರುವ ದಾಖಲೆ ಅಲ್ಲವೇ ಅಲ್ಲ. ಒಟ್ಟಾರೆ ಈ ದಿನದ ವರೆಗೆ ಪಾಲಿಕೆಯ ಪ್ರಗತಿ ಶೂನ್ಯವಾಗಿದೆ. ಈಗ ಪಡೆದಿರುವುದೂ ಕೂಡ ಸರಿಯಲ್ಲ ಎಂದಾದರೆ ಇ-ಆಸ್ತಿ ಪಡೆದಿರುವವರು ಕೂಡ ಮತ್ತೆ ತೊಂದರೆ ಅನುಭವಿಸಬೇಕಾಗುತ್ತದೆ. ಪಾಲಿಕೆ ಆಡಳಿತ ಇ-ಆಸ್ತಿಗೆ ಸಂಬಂಧಿಸಿದಂತೆ ಹೊರಡಿಸಿದ ಸುತ್ತೋಲೆಗಳನ್ನು ಗಮನಿಸಲೇ ಇಲ್ಲ. ಅನುಷ್ಠಾನದಲ್ಲಂತೂ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದರು.ಈಗ ಉಳಿದಿರುವ ಸುಮಾರ ಶೇ.65ರಷ್ಟು ಡಿಜಿಟಲಿಕರಣ ಕಾಮಗಾರಿಗೆ ಮಾ.10 ಕೊನೆಯ ದಿನವಾಗಿದೆ. ಈ ಅವಧಿಯಲ್ಲಿ ಇದು ಅಸಾಧ್ಯದ ಮಾತಾಗಿದೆ. ಶೇ.35ರಷ್ಟು ಪ್ರಗತಿ ಕಾಣಲು 6 ವರ್ಷ ಸಮಯ ತೆಗೆದುಕೊಂಡಿದೆ. ಇನ್ನು ಉಳಿದ 65ಷ್ಟು ಪ್ರಗತಿಯನ್ನು ಒಂದು ತಿಂಗಳಲ್ಲಿ ಮುಗಿಸುವುದು ಅಸಾಧ್ಯದ ಮಾತು. ಆದ್ದರಿಂದ ನೋಂದಾವಣೆಗೆ ಕಡ್ಡಾಯ ಮಾಡಿರುವ ಇ-ಆಸ್ತಿ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಕನಿಷ್ಠ 6 ತಿಂಗಳಾದರೂ ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಡಾ.ಸತೀಶ್ ಕುಮಾರ ಶೆಟ್ಟಿ, ಎಸ್.ಆರ್.ಗೋಪಾಲ್, ಎಸ್.ಬಿ.ಅಶೋಕಕುಮಾರ, ಸೀತಾರಾಮ್, ಎಸ್.ಎಸ್.ಜ್ಯೋತಿಪ್ರಕಾಶ್ ಇದ್ದರು.