ಸಾರಾಂಶ
ಎಪಿಎಂಸಿ ಆವರಣದಲ್ಲಿರುವ ನೀರು ಸಂಗ್ರಹಣಾ ಟ್ಯಾಂಕ್ ನ ಸುತ್ತಮುತ್ತ ಕೊಚ್ಚೇ ನೀರು ನಿಂತುಕೊಂಡು ಸೊಳ್ಳೆಗಳ ಲಾರ್ವ ಉತ್ಪತ್ಪಿಯಾಗಿದೆ. ಇದನ್ನು ಸ್ವಚ್ಛಗೊಳಿಸಲಾಗದಷ್ಟು ಗುತ್ತಿಗೆದಾರನಿಗೆ ಸಮಸ್ಯೆ ಏನಿದೆ. ಇಂತಹ ಪ್ರದೇಶಗಳನ್ನೇ ಸ್ವಚ್ಛತೆ ಇಲ್ಲದಿದ್ದರೆ ಡೆಂಘೀ ನಿಯಂತ್ರಿಸುವುದಾದರೂ ಹೇಗೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸರ್ಕಾರದ ಅಧೀನದಲ್ಲಿರುವ ನೀರು ಪೊರೈಕೆಯ ನೀರು ಸಂಗ್ರಹಣಾ ಟ್ಯಾಂಕುಗಳು, ತೊಟ್ಟಿಗಳು ಹಾಗೂ ಸುತ್ತಮುತ್ತಲ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳದಷ್ಟು ಬಡತನದ ಪರಿಸ್ಥಿತಿ ಆಡಳಿತ ವ್ಯವಸ್ಥೆಗೆ ಇಲ್ಲ. ಸಂಬಂಧಪಟ್ಟವರು ನಿಯಮಿತವಾಗಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಸ್ವಚ್ಛತಾ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.ಶುಕ್ರವಾರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಯ ಆವರಣಕ್ಕೆ ಭೇಟಿ ನೀಡಿ ಅಲ್ಲಿನ ಅಸ್ವಚ್ಛತೆಯನ್ನು ಗಮನಿಸಿ ಸಂಬಂಧ ಪಟ್ಟ ಅಧಿಕಾರಿಗಳ ಮತ್ತು ಸಿಬ್ಬಂದಿಗೆ ಸೂಚನೆಗಳನ್ನು ನೀಡಿದರು.
ಗುತ್ತಿಗೆದಾರನಿಗೆ ತರಾಟೆಎಪಿಎಂಸಿ ಆವರಣದಲ್ಲಿರುವ ನೀರು ಸಂಗ್ರಹಣಾ ಟ್ಯಾಂಕ್ ನ ಸುತ್ತಮುತ್ತ ಕೊಚ್ಚೇ ನೀರು ನಿಂತುಕೊಂಡು ಸೊಳ್ಳೆಗಳ ಲಾರ್ವ ಉತ್ಪತ್ಪಿಯಾಗಿದೆ. ಇದನ್ನು ಸ್ವಚ್ಛಗೊಳಿಸಲಾಗದಷ್ಟು ಸಮಸ್ಯೆ ಏನಿದೆ. ಸಾವಿರಾರು ರೈತರು ಮಾರುಕಟ್ಟೆಗೆ ದಿನನಿತ್ಯ ಬಂದು ಹೋಗುತ್ತಾರೆ. ನೂರಾರು ವ್ಯಾಪಾರಿಗಳು, ಕಾರ್ಮಿಕರು ದಿನನಿತ್ಯ ಕೆಲಸ ಮಾಡುತ್ತಾರೆ. ಇಂತಹ ಜನಸಂದಣಿ ಪ್ರದೇಶಗಳನ್ನೇ ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ಡೆಂಘೀ ಜ್ವರವನ್ನು ನಿಯಂತ್ರಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಟ್ಯಾಂಕ್ ನ ನಳದಲ್ಲಿ ನೀರು ನಿರಂತರವಾಗಿ ಸೋರುತ್ತಿದೆ, ಟ್ಯಾಂಕ್ ನ ಸುತ್ತ ಅನುಪಯುಕ್ತ ವಸ್ತುಗಳು, ಪ್ಲಾಸ್ಟಿಕ್ ಚೀಲಗಳು, ಕೊಳೆತ ತರಕಾರಿಗಳು ಬಿದ್ದಿವೆ. ಇಷ್ಟು ಗಲೀಜು ನಿರ್ಮಾಣ ಆಗುವವರೆಗೆ ಸ್ವಚ್ಛತೆಯ ಕ್ರಮ ಏಕೆ ಕೈಗೊಂಡಿಲ್ಲ ಎಂದು ಗುತ್ತಿಗೆದಾರರ ರಮೇಶ ಅವರನ್ನು ತರಾಟೆಗೆ ತೆಗೆದುಕೊಂಡು ಸ್ಥಳದಲ್ಲೇ ಜಿಲ್ಲಾಧಿಕಾರಿಗಳು ನಿಂತು ಸ್ವಚ್ಛಗೊಳಿಸುವ ಕಾರ್ಯ ಮಾಡಿಸಿದರು.ಆಸ್ಪತ್ರೆ ಸ್ವಚ್ಛತೆ ಪರಿಶೀಲನೆ
ನಂತರ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ಅಲ್ಲಿನ ಸ್ವಚ್ಛತೆಯ ಬಗ್ಗೆ ಪರಿಶೀಲಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಅನಿಲ್, ಪೌರಾಯುಕ್ತ ಉಮಾಶಂಕರ್, ಆರೋಗ್ಯ ಶಿಕ್ಷಣಾಧಿಕಾರಿ ಹರೀಶ್, ಡಾ. ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಮತ್ತಿತರರು ಇದ್ದರು.