ಬೆಳ್ಳಂ ಬೆಳಗ್ಗೆ ಸ್ಕೂಲ್ ಬಸ್ ಅನ್ನು ಒಂಟಿ ಸಲಗವೊಂದು ಅಟ್ಟಾಡಿಸಿಕೊಂಡು ಬಂದ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಮಾಲ್ದಾರೆ ವ್ಯಾಪ್ತಿಯಲ್ಲಿ ನಡೆದಿದ್ದು , ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಚಿರಾಡಿ ಭಯಭೀತರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಬೆಳ್ಳಂ ಬೆಳಗ್ಗೆ ಸ್ಕೂಲ್ ಬಸ್ ಅನ್ನು ಒಂಟಿ ಸಲಗವೊಂದು ಅಟ್ಟಾಡಿಸಿಕೊಂಡು ಬಂದ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಮಾಲ್ದಾರೆ ವ್ಯಾಪ್ತಿಯಲ್ಲಿ ನಡೆದಿದ್ದು , ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಚಿರಾಡಿ ಭಯಭೀತರಾಗಿದ್ದಾರೆ. ಮಾಲ್ದಾರೆ ಗ್ರಾಮ ಪಂಚಾಯಿತಿಗೆ ಒಳಪಡುವ ಬಾಡಗ ಬಾಣಂಗಾಲ ಹಾಗೂ ಮಠ ಭಾಗದಲ್ಲಿನ ಬಿಜಿಎಸ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳನ್ನು ಶಾಲಾ ಬಸ್ಸಿನಲ್ಲಿ ಕರೆದುಕೊಂಡು ಬರುತ್ತಿದ್ದ ಸಂದರ್ಭ ಈ ಘಟನೆ ನಡೆದಿದ್ದು, ಒಂಟಿ ಸಲಗ ಶಾಲಾ ವಾಹನವನ್ನು ಹಿಂಬಾಲಿಸಿ ಅಟ್ಟಿಸಿಕೊಂಡು ಬಂದ ದೃಶ್ಯವನ್ನು ಶಾಲಾ ಬಸ್ಸಿನಲ್ಲಿದ್ದ ಚಾಲಕ ಸುನಿಲ್ ರವರ ಪುತ್ರಿ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.ಬಣಂಗಾಲ ಮಠ ನಡುವೆ ಇರುವ "ಇವೊಲ್ವ್ ಬ್ಯಾಕ್ " ಸಂಸ್ಥೆಗೆ ಸೇರಿದ ಕಾಫಿ ತೋಟದಿಂದ ಏಕಾಏಕಿ ರಸ್ತೆಗಿಳಿದ ಕಾಡಾನೆ ಶಾಲಾ ವಾಹನವನ್ನು ಅಟ್ಟಿಸಿ ಬಂದಿದೆ.ಘಟನೆ ನಡೆದ ಅಲ್ಪ ದೂರದಲ್ಲೇ ಸುಮಾರು 10 ಮಂದಿ ವಿದ್ಯಾರ್ಥಿಗಳು ಶಾಲಾ ವಾಹನಕ್ಕಾಗಿ ಕಾದು ಕುಳಿತಿದ್ದರು ಎನ್ನಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಮಾಹಿತಿ ತಿಳಿದು ಆತಂಕಗೊಂಡಿರುವ ವಿದ್ಯಾರ್ಥಿಗಳ ಪೋಷಕರು ಹಾಗೂ ಸ್ಥಳೀಯ ನಿವಾಸಿಗಳು ಕೂಡಲೇ ಘಟನೆ ಕುರಿತು ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಆಲಿ ರವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿರುವ ಅವರು ದಾಂದಲೆ ನಡೆಸಿರುವ ಕಾಡಾನೆಯನ್ನು ಕಾಡಿಗೆ ಅಟ್ಟಿಸುವಂತೆ ಆಗ್ರಹಿಸಿದ್ದಾರೆ.ಬೆಳಗ್ಗೆ ಎಂದಿನಂತೆ ಮಕ್ಕಳನ್ನು ಕರೆದುಕೊಂಡು ಬಾಣಂಗಾಲ ಕಡೆಯಿಂದ ಮಠ ಕಡೆ ತೆರಳುತ್ತಿದ್ದ ಸಂದರ್ಭ ಕಾಡಿನ ಮಧ್ಯೆ ಇದ್ದ ಒಂಟಿ ಆನೆ ಏಕಾಏಕಿ ರೋಡಿಗೆ ಬಂದು ಶಾಲಾ ವಾಹನವನ್ನು ಅಟ್ಟಿಸಿಕೊಂಡು ಬಂತು. ಇದನ್ನು ಕಂಡ ಬಸ್ಸಿನಲ್ಲಿದ್ದ ಮಕ್ಕಳು ಗಾಬರಿಗೊಂಡು ಆತಂಕದಲ್ಲಿ ಚೀರಾಡಿದರು. ಆನೆ ಓಡಿಸಿಕೊಂಡು ಬಂದ ದೃಶ್ಯವನ್ನು ನನ್ನ ಮಗಳು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾಳೆ. ಕೊಂಚ ದೂರದಲ್ಲೆ ಮತ್ತಷ್ಟು ಮಕ್ಕಳು ಬಸ್ಸಿಗೆ ಕಾದು ಕುಳಿತಿದ್ದರು. ದಯವಿಟ್ಟು ಅರಣ್ಯ ಇಲಾಖೆ ಈ ಭಾಗದಲ್ಲಿರುವ ಆನೆಗಳನ್ನು ಮತ್ತೆ ಅರಣ್ಯಕ್ಕೆ ಅಟ್ಟಿಸಲು ಕ್ರಮ ಕೈಗೊಳ್ಳಬೇಕು. । ಸುನಿಲ್, ಶಾಲಾ ಬಸ್ ಚಾಲಕ, ಬಿಜಿಎಸ್ ವಿದ್ಯಾ ಸಂಸ್ಥೆ