ಸಾರಾಂಶ
ಅಪಘಾತ ಪ್ರಕರಣದಲ್ಲಿ ಕಾಲು ಮುರಿದುಕೊಂಡು ನ್ಯಾಯಾಲಯದ ಮೆಟ್ಟಿಲು ಹತ್ತಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಕ್ಷಿದಾರನಿದ್ದ ಸ್ಥಳಕ್ಕೆ ನ್ಯಾಯಾಧೀಶರು ಆಗಮಿಸಿ ವಿಮೆ ಪರಿಹಾರ ಹಣ ಬಿಡುಗಡೆಗೆ ಆದೇಶ
ಮದ್ದೂರು : ಅಪಘಾತ ಪ್ರಕರಣದಲ್ಲಿ ಕಾಲು ಮುರಿದುಕೊಂಡು ನ್ಯಾಯಾಲಯದ ಮೆಟ್ಟಿಲು ಹತ್ತಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಕ್ಷಿದಾರನಿದ್ದ ಸ್ಥಳಕ್ಕೆ ನ್ಯಾಯಾಧೀಶರು ಆಗಮಿಸಿ ವಿಮೆ ಪರಿಹಾರ ಹಣ ಬಿಡುಗಡೆಗೆ ಆದೇಶ ನೀಡಿ ಮಂಡ್ಯ ಜಿಲ್ಲೆ ಮದ್ದೂರಿನ ಜೆಎಂಎಫ್ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಮಾನವೀಯತೆ ಮೆರೆದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಎಸ್.ಹರಿಣಿ ಅವರ ಕ್ರಮಕ್ಕೆ ವಕೀಲ ವೃಂದ ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಸಿ.ಎ.ಕೆರೆ ಹೋಬಳಿಯ ರೈತ ಮಾದೇಗೌಡ (58) ಅವರು ಕಳೆದ ಜೂನ್‌ನಲ್ಲಿ ರಸ್ತೆ ಬದಿ ನಡೆದು ಹೋಗುವಾಗ ಕಾರು ಡಿಕ್ಕಿ ಹೊಡೆದ ಕಾರಣ ಕಾಲು ಮುರಿದಿತ್ತು. ಮಾದೇಗೌಡ ವಿಮೆ ಪರಿಹಾರ ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಪ್ರಕರಣ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ವಿಚಾರಣೆಗೆ ಬಂದಿತ್ತು. ಮಾದೇಗೌಡಗೆ ಮೆಟ್ಟಿಲು ಹತ್ತಲು ಸಾಧ್ಯವಿಲ್ಲ ಎಂಬ ವಿಷಯ ತಿಳಿದ ಜಡ್ಜ್, ತಾವೇ ಕೆಳಗಿಳಿದು ಬಂದು ದಾಖಲಾತಿ ಪರಿಶೀಲನೆ ನಡೆಸಿ ವಿಮಾ ಕಂಪನಿಯಿಂದ 2.5 ಲಕ್ಷ ರು. ಪರಿಹಾರಕ್ಕೆ ಆದೇಶಿಸಿದರು.
ಆದರೆ, ಕಾಲು ಮುರಿದುಕೊಂಡಿದ್ದ ಮಾದೇಗೌಡ ಮೊದಲನೇ ಅಂತಸ್ತಿನ ಕಟ್ಟಡದಲ್ಲಿದ್ದ ಹಿರಿಯ ಸಿವಿಲ್ ನ್ಯಾಯಾಲಯದ ಮೆಟ್ಟಿಲು ಹತ್ತಲು ಸಾಧ್ಯವಾಗದೆ ನ್ಯಾಯಾಲಯದ ಆವರಣದಲ್ಲಿ ಕುಳಿತಿದ್ದರು. ಈ ವಿಚಾರ ತಿಳಿದ ನ್ಯಾ.ಎಂ.ಎಸ್.ಹರಿಣಿ ಅವರು ಮಾದೇಗೌಡ ಕುಳಿತಿದ್ದ ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದರು. ದಾಖಲಾತಿ ಪರಿಶೀಲನೆ ನಡೆಸಿದರು. ಎಸಿಕೆಒ ಜನರಲ್ ಇನ್ಷೂರೆನ್ಸ್ ಕಂಪನಿಯಿಂದ ₹2.50 ಲಕ್ಷ ಬಿಡುಗಡೆಗೆ ಸ್ಥಳದಲ್ಲೇ ಆದೇಶಿದರು.