ಮಂಗಳೂರು ರೈಲ್ವೆ ಸಮಸ್ಯೆ ಇತ್ಯರ್ಥಕ್ಕೆ ಉನ್ನತಾಧಿಕಾರಿಗಳ ಸಮಿತಿ: ಬ್ರಿಜೇಶ್‌ ಚೌಟ

| Published : Jul 21 2024, 01:18 AM IST

ಮಂಗಳೂರು ರೈಲ್ವೆ ಸಮಸ್ಯೆ ಇತ್ಯರ್ಥಕ್ಕೆ ಉನ್ನತಾಧಿಕಾರಿಗಳ ಸಮಿತಿ: ಬ್ರಿಜೇಶ್‌ ಚೌಟ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ಸುಬ್ರಹ್ಮಣ್ಯದ ಹಳೆ ರೈಲನ್ನು ಸಂಸದ ಕ್ಯಾ. ಬ್ರಿಜೇಶ್‌ ಚೌಟರವರು ಪುನರಾರಂಭಿಸುವಂತೆ ಕೋರಿದಾಗ, ಸುಬ್ರಹ್ಮಣ್ಯ ಯಾರ್ಡ್‌ನಲ್ಲಿ ವಿದ್ಯುದೀಕರಣ ಬಾಕಿ ಇದೆ. ಬಳಿಕ ಸಮಯವನ್ನು ನಿಗದಿಪಡಿಸಿ ಕ್ರಮ ವಹಿಸಲಾಗುವುದು ಎಂದು ರೈಲ್ವೆ ಅಧಿಕಾರಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರನ್ನು ಒಂದು ರೈಲ್ವೆ ವಿಭಾಗವಾಗಿ ಪರಿವರ್ತಿಸುವ ದಿಶೆಯಲ್ಲಿ ಹಾಗೂ ವಿವಿಧ ಸಮಸ್ಯೆಗಳ ಇತ್ಯರ್ಥಕ್ಕೆ ದಕ್ಷಿಣ, ಕೊಂಕಣ ಹಾಗೂ ನೈಋತ್ಯ ಈ ಮೂರು ರೈಲ್ವೆ ವಿಭಾಗಗಳ ಉನ್ನತಾಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ.

ಮಂಗಳೂರು ಕೇಂದ್ರಿತ ರೈಲ್ವೆ ಕುಂದುಕೊರತೆಗಳನ್ನು ನಿವಾರಿಸಲು ಈ ಮೂರು ವಿಭಾಗಗಳ‍ು ಮುಂದೆ ಕಾರ್ಯಪ್ರವೃತ್ತವಾಗಲಿವೆ. ಅದಕ್ಕಾಗಿ ಮೂರು ವಿಭಾಗಗಳ ಉನ್ನತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಮುಖ್ಯ ಸಮಿತಿ ಹಾಗೂ ಇತರೆ ಹಿರಿಯ ಅಧಿಕಾರಿಗಳು, ರೈಲ್ವೆ ಬಳಕೆದಾರರ ಸಮಿತಿಯ ಪದಾಧಿಕಾರಿಗಳುಳ್ಳ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ ಎಂದು ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಹೇಳಿದ್ದಾರೆ.

ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅಧ್ಯಕ್ಷತೆಯಲ್ಲಿ ಶನಿವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೂರು ರೈಲ್ವೆ ವಿಭಾಗಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಒಳಗೊಂಡ ಕುಂದುಕೊರತೆ ಸಭೆ ನಡೆಯಿತು.

ಉನ್ನತ ಮಟ್ಟದ ಸಮಿತಿಯು ಸಂಸದರು, ಮೂರು ರೈಲ್ವೆ ವಿಭಾಗಗಳ ಮುಖ್ಯ ಅಧಿಕಾರಿಗಳು, ಸ್ಥಳೀಯ ಮೂವರು ಶಾಸಕರು, ಜಿಲ್ಲಾಧಿಕಾರಿ, ಇಬ್ಬರು ಎಸಿಗಳು, ಪೊಲೀಸ್‌ ಆಯುಕ್ತರು ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಒಳಗೊಂಡಿರುತ್ತದೆ. ಇದು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಿದೆ.

ಕಾರ್ಯಕಾರಿ ಸಮಿತಿಯು ಮೂರು ವಿಭಾಗದ ಹಿರಿಯ ಅಧಿಕಾರಿಗಳು, ಹಿರಿಯ ಎಂಜಿನಿಯರ್‌ಗಳು, ವಿಭಾಗೀಯ ವ್ಯವಸ್ಥಾಪಕರು, ಕೆಸಿಸಿಐ ಸೇರಿದಂತೆ ಇತರ ರೈಲ್ವೆ ಬಳಕೆದಾರರ ಸಂಘಟನೆಗಳಿಂದ ಒಬ್ಬ ಸದಸ್ಯರನ್ನು ಹೊಂದಿರಲಿದ್ದು, ಪ್ರತಿ ತಿಂಗಳು ಸಭೆ ನಡೆಸಲಿದೆ ಎಂದರು.

ವಿಶ್ವದರ್ಜೆ ನಿಲ್ದಾಣ ಕಾಮಗಾರಿ ಮಾರ್ಚ್‌ಗೆ: ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣವನ್ನು ಸುಮಾರು 310 ಕೋಟಿ ರು.ಗಳಲ್ಲಿ ಮೇಲ್ದರ್ಜೆಗೇರಿಸಲು ಮಾಸ್ಟರ್‌ ಪ್ಲಾನ್‌ ತಯಾರಿಸಲಾಗುತ್ತಿದ್ದು, 2025 ಮಾಚ್‌ರ್ನೊಳಗೆ ಟೆಂಡರ್‌ ಪ್ರಕ್ರಿಯೆ ನಡೆದು ಕಾಮಗಾರಿ ಆರಂಭಗೊಳ್ಳಲಿದೆ. ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ನೂತನ ಯೋಜನೆಗಾಗಿ ಸೆಂಟ್ರಲ್‌ ರೈಲು ನಿಲ್ದಾಣದ 56.74 ಎಕರೆ ಜಾಗವನ್ನು ಬಳಕೆ ಮಾಡಲಾಗುತ್ತಿದ್ದು, 1,200 ಕಾರು ಪಾರ್ಕಿಂಗ್‌ನೊಂದಿಗೆ ಆಧುನಿಕ ಸೌಲಭ್ಯಗಳನ್ನು ಅಳವಡಿಸಲಾಗುತ್ತದೆ ಎಂದು ದಕ್ಷಿಣ ರೈಲ್ವೆ ಪಾಲ್ಘಾಟ್‌ ವಿಭಾಗದ ಡಿಆರ್‌ಎಂ ಅರುಣ್‌ ಚತುರ್ವೇದಿ ಮಾಹಿತಿ ನೀಡಿದರು.

ಗೂಡ್ಸ್‌ಶೆಡ್‌ ಗೇಟ್‌ ಸಮಸ್ಯೆ: ಪಾಂಡೇಶ್ವರದಲ್ಲಿ ಗೂಡ್‌ಶೆಡ್‌ಗೆ ರೈಲುಗಳ ಸಂಚಾರದ ವೇಳೆ ದಿನಕ್ಕೆ ಸುಮಾರು 15ಕ್ಕೂ ಅಧಿಕ ಬಾರಿ ಗೇಟ್‌ ಹಾಕಲಾಗುತ್ತದೆ. ಪ್ರತಿ ಬಾರಿಯೂ ಸುಮಾರು 20 ನಿಮಿಷಗಳ ಕಾಲ ಗೇಟ್‌ ಬಂದ್‌ ಮಾಡಲಾಗುತ್ತದೆ. ಇದರಿಂದ ಸ್ಥಳೀಯರು ತೊಂದರೆ ಅನುಭವಿಸುವಂತಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್‌, ಮಾಜಿ ಮೇಯರ್‌ಗಳಾದ ದಿವಾಕರ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ ಮೊದಲಾದವರು ಆಗ್ರಹಿಸಿದರು.

2014-15ನೇ ಸಾಲಿನಲ್ಲಿ ಈ ಭಾಗದಲ್ಲಿ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಪಾಲಿಕೆ ವತಿಯಿಂದ ನಕ್ಷೆ ನೀಡಲಾಗಿತ್ತು. ಅದು ಸಿಕ್ಕರೆ ಉತ್ತಮ. ಇಲ್ಲವಾದಲ್ಲಿ ರೈಲ್ವೆ ವತಿಯಿಂದಲೇ ಮಾಡುವ ಬಗ್ಗೆ ಕ್ರಮ ವಹಿಸಲಾಗುವುದು. ಅಲ್ಲಿ ರೈಲ್ವೆ ಕೆಳ ಸೇತುವೆ ನಿರ್ಮಾಣ ಅಸಾಧ್ಯ ಎಂದು ಡಿಆರ್‌ಎಂ ಅರುಣ್‌ ಚತುರ್ವೇದಿ ಹೇಳಿದರು.

ಪಾಂಡೇಶ್ವರ ರೈಲ್ವೆ ಗೇಟ್‌ ಬಳಿ ಮೇಲ್ಸೇತುವೆ ನಿರ್ಮಾಣದವರೆಗೆ ಅಲ್ಲಿ ರಸ್ತೆ ಅಗಲೀಕರಣ ಹಾಗೂ ಗೇಟ್‌ ಬಂದ್‌ ಆಗುವ ಸಮಯವನ್ನು ಕಡಿಮೆ ಮಾಡಿಕೊಂಡು ತಾತ್ಕಾಲಿಕ ಪರಿಹಾರಕ್ಕೆ ಕ್ರಮ ವಹಿಸುವಂತೆ ಶಾಸಕ ವೇದವ್ಯಾಸ ಕಾಮತ್‌ ಆಗ್ರಹಿಸಿದರು.

ರೈಲ್ವೆ ಬಳಕೆದಾರರ ಪರವಾಗಿ ಮಾತನಾಡಿದ ಹನುಮಂತ ಕಾಮತ್‌, ಸಿಎಸ್‌ಟಿ ಮುಂಬೈ- ಮಂಗಳೂರು ರೈಲು ಮಂಗಳೂರು ಸೆಂಟ್ರಲ್‌ಗೆ ಮಂಜೂರಾಗಿದ್ದರೂ, ಮಂಗಳೂರು ಜಂಕ್ಷನ್‌ನಲ್ಲಿ ನಿಲುಗಡೆಯಾಗುತ್ತಿದೆ. ಅದನ್ನು ವಿಸ್ತರಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಪೊಲೀಸ್‌ ಆಯುಕ್ತ ಅನುಪಮ್‌ ಅಗ್ರವಾಲ್‌, ಕೊಂಕಣ ರೈಲ್ವೆ ಪ್ರಾದೇಶಿಕ ವ್ಯವಸ್ಥಾಪಕ ಬಿ.ಬಿ. ನಿಕಂ, ನೈರುತ್ಯ ರೈಲ್ವೆ ಮೈಸೂರು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ವ್ಯವಸ್ಥಾಪಕಿ ಮಲ್ಲಿಕಾ ಇದ್ದರು.

ಮಂಗಳೂರು- ಸುಬ್ರಹ್ಮಣ್ಯ ರೈಲು ಪುನರಾರಂಭಕ್ಕೆ ಒತ್ತಾಯಮಂಗಳೂರು ಸುಬ್ರಹ್ಮಣ್ಯದ ಹಳೆ ರೈಲನ್ನು ಸಂಸದ ಕ್ಯಾ. ಬ್ರಿಜೇಶ್‌ ಚೌಟರವರು ಪುನರಾರಂಭಿಸುವಂತೆ ಕೋರಿದಾಗ, ಸುಬ್ರಹ್ಮಣ್ಯ ಯಾರ್ಡ್‌ನಲ್ಲಿ ವಿದ್ಯುದೀಕರಣ ಬಾಕಿ ಇದೆ. ಬಳಿಕ ಸಮಯವನ್ನು ನಿಗದಿಪಡಿಸಿ ಕ್ರಮ ವಹಿಸಲಾಗುವುದು ಎಂದು ರೈಲ್ವೆ ಅಧಿಕಾರಿ ಹೇಳಿದರು.