24ರಿಂದ ಲಾಲ್‍ಬಾಗ್‍ನಲ್ಲಿ ಮಾವು-ಹಲಸು ಮೇಳ

| Published : May 14 2024, 01:03 AM IST / Updated: May 14 2024, 08:34 AM IST

ಸಾರಾಂಶ

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ, ಮಾರುಕಟ್ಟೆ ನಿಗಮದಿಂದ ಸಸ್ಯಕಾಶಿಯಲ್ಲಿ ಮೇ 24ರಿಂದ ಜೂನ್‌ 10ರವರೆಗೆ ಮಾವು ಮತ್ತು ಹಲಸು ಮೇಳವನ್ನು ಆಯೋಜನೆ ಮಾಡಲಾಗಿದೆ.

  ಬೆಂಗಳೂರು :   ಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಮೇ 24ರಿಂದ ಜೂನ್‌ 10ರವರೆಗೆ ಮಾವು ಮತ್ತು ಹಲಸು ಮೇಳ ನಡೆಸಲು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಮುಂದಾಗಿದೆ.

ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ ಮಾವು ಬೆಳೆಗಾರರು ಮಾವು ಮೇಳದಲ್ಲಿ ಭಾಗವಹಿಸಲಿದ್ದಾರೆ. ಗ್ರಾಹಕರಿಗೆ ಹೆಚ್ಚಿನ ರಿಯಾಯಿತಿ ದರದಲ್ಲಿ ಮಾವು ಲಭ್ಯವಾಗುವುದು ಅನುಮಾನ. ಆದರೆ, ನೈಸರ್ಗಿಕವಾಗಿ ಮಾಗಿದ ಹಣ್ಣುಗಳು ಸಿಗಲಿವೆ.

ಹವಾಮಾನದ ವೈಪರಿತ್ಯದಿಂದ ಈ ಬಾರಿ ಮಾವು ಇಳುವರಿ ಭಾರೀ ಪ್ರಮಾಣದಲ್ಲಿ ಕುಸಿದಿದ್ದು, ರಾಜ್ಯಾದ್ಯಂತ ಕೇವಲ ಶೇ.30ರಷ್ಟು ಮಾತ್ರ ಮಾವು ಇಳುವರಿ ಬಂದಿದೆ. ಆದ್ದರಿಂದ ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜ ಮಾವಿನ ಅಬ್ಬರ ಕಾಣುತ್ತಿಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿ ಇರುವ ಹಣ್ಣುಗಳನ್ನು ತಿನ್ನಬೇಕೋ ಬೇಡವೋ ಎಂಬ ಗೊಂದಲದಲ್ಲೇ ಜನರಿದ್ದಾರೆ. ಹೆಚ್ಚು ಬಿಸಿಲು ಇರುವುದರಿಂದ ಹಣ್ಣನ್ನು ಖರೀದಿ ಮಾಡುವವರ ಸಂಖ್ಯೆಯೂ ಸಾಕಷ್ಟಿಲ್ಲ.

ಹೀಗಾಗಿ ಈ ಬಾರಿ ಮಾವು ಇಳುವರಿ ಕಡಿಮೆಯಿರುವ ಕಾರಣ ಮೇಳ ಆಯೋಜನೆ ಬಗ್ಗೆಯೂ ಸ್ಪಷ್ಟತೆ ಇರಲಿಲ್ಲ. ಇದೀಗ ಮೇಳ ನಡೆಸಲು ನಿಗಮ ನಿರ್ಧರಿಸಿದೆ.

ಮಾವಿನೊಂದಿಗೆ ಹಲಸು ಮೇಳ

ಮೇಳದಲ್ಲಿ ಐಐಎಚ್‍ಆರ್, ಜಿಕೆವಿಕೆ ಮತ್ತಿತರ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಹಲಸಿನ ತಳಿಗಳು, ರೈತರು ಬೆಳೆದು ನಾನಾ ತಳಿಯ ಹಲಸಿನ ಹಣ್ಣನ್ನು ಮಾರಾಟ ಮಾಡಲಾಗುತ್ತದೆ. ಮಾವು ಮೇಳದಲ್ಲಿ ಬಾದಾಮಿ, ರಸಪುರಿ, ಸೇಂಧೂರ, ಮಲಗೋವ, ನೀಲಂ, ಮಲ್ಲಿಕಾ, ಆಮ್ರಪಾಲಿ, ಬಂಗನಪಲ್ಲಿ, ತೋತಾಪುರಿ, ಸಕ್ಕರೆಗುತ್ತಿ ಸೇರಿದಂತೆ ವಿವಿಧ ತಳಿಯ ಹಣ್ಣುಗಳು ಮಾರಾಟವಾಗಲಿವೆ. ಉಪ್ಪಿನಕಾಯಿ ಸೇರಿದಂತೆ ಮಾವಿನಿಂದ ತಯಾರಿಸಿದ ನಾನಾ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ರಿಯಾಯಿತಿ ಇಲ್ಲ!: ಈ ಬಾರಿ ರಾಜ್ಯದಲ್ಲಿ ಸುಮಾರು 15 ಲಕ್ಷ ಟನ್ ಮಾವು ಉತ್ಪಾದನೆ ನಿರೀಕ್ಷಿಸಲಾಗಿತ್ತು. ಆದರೆ, ಸಕಾಲದಲ್ಲಿ ಮಳೆ ಆಗದೇ ಇರುವುದು ಹಾಗೂ ಅಧಿಕ ತಾಪಮಾನದಿಂದಾಗಿ ಕೇವಲ 4-5 ಲಕ್ಷ ಟನ್‍ನಷ್ಟು ಮಾವು ಉತ್ಪಾದನೆಯಾಗಿದೆ. ಹೀಗಾಗಿ ಮೇಳದಲ್ಲಿ ಹಣ್ಣಿನ ಮಾರಾಟ ಪ್ರಮಾಣವೂ ಕುಗ್ಗಲಿದೆ. ಜತೆಗೆ ಬೆಲೆ ಕೂಡ ಏರಿಕೆಯಾಗಲಿವೆ. ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಮಾವು ಸಿಗುವುದು ಅನುಮಾನ. ಒಂದು ವೇಳೆ ಮಾವು ಬೆಳೆಗಾರರು ರಿಯಾಯಿತಿ ನೀಡಿದರೆ ಒಳ್ಳೆಯದು ಎನ್ನುತ್ತಾರೆ ಮಾವು ಅಭಿವೃದ್ಧಿ ನಿಗಮದ ಅಧಿಕಾರಿಗಳು.