ಮಾರುಕಟ್ಟೆಗೆ ಲಗ್ಗೆಯಿಟ್ಟ ಪಿಂಗಾಣಿ ಹಣತೆಗಳು

| Published : Oct 28 2024, 12:49 AM IST

ಸಾರಾಂಶ

ದೀಪಾವಳಿ ಹಬ್ಬದ ಪ್ರಯುಕ್ತ ಪಟ್ಟಣದ ಮಾರುಕಟ್ಟೆಗೆ ವಿವಿಧ ಬಗೆ ಬಗೆಯ ಹಣತೆಗಳು ಲಗ್ಗೆ ಇಟ್ಟಿದ್ದು, ಕುಂಬಾರರ ಮಣ್ಣಿನ ಹಣತೆಗಳಿಗೆ ಬೇಡಿಕೆ ಇಲ್ಲದಂತಾಗಿದೆ.

ದೀಪಾವಳಿ ಹಬ್ಬಕ್ಕೆ ದಿನಗಣನೆ । ಮಣ್ಣಿನ ಹಣತೆಗಿಂತ ಪ್ಲಾಸ್ಟಿಕ್‌ಗೆ ಬೇಡಿಕೆ

ಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ದೀಪಾವಳಿ ಹಬ್ಬದ ಪ್ರಯುಕ್ತ ಪಟ್ಟಣದ ಮಾರುಕಟ್ಟೆಗೆ ವಿವಿಧ ಬಗೆ ಬಗೆಯ ಹಣತೆಗಳು ಲಗ್ಗೆ ಇಟ್ಟಿದ್ದು, ಕುಂಬಾರರ ಮಣ್ಣಿನ ಹಣತೆಗಳಿಗೆ ಬೇಡಿಕೆ ಇಲ್ಲದಂತಾಗಿದೆ.

ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಜನತೆಯು ದೀಪಾವಳಿ ಹಬ್ಬ ಆಚರಿಸಲು ಸಂಭ್ರಮದಿಂದ ತಯಾರಿ ಆರಂಭಿಸಿದ್ದಾರೆ. ಹಬ್ಬದ ಪ್ರಯುಕ್ತ ವರ್ತಕರು ಅಂಗಡಿ-ಮುಂಗಟ್ಟುಗಳನ್ನು ಸ್ವಚ್ಛಗೊಳಿಸಿ ಸುಣ್ಣ ಬಣ್ಣ ಬಳಿದು ಲಕ್ಷ್ಮಿ ಪೂಜೆಗೆ ಸಜ್ಜುಗೊಳಿಸುತ್ತಿದ್ದಾರೆ. ಇತ್ತ ಮಾರುಕಟ್ಟೆಯಲ್ಲಿ ತಮಿಳುನಾಡು ಮೂಲದ ಪಿಂಗಾಣಿ ಹಣತೆಗಳು ಲಗ್ಗೆ ಇಟ್ಟಿವೆ.

ಈ ವರ್ಷ ಹಣತೆಗಳು ದುಬಾರಿಯಾಗಿವೆ. ತಳ್ಳುವ ಗಾಡಿಗಳ ಮೂಲಕ ಪಿಂಗಾಣಿ ಮತ್ತು ಮಣ್ಣಿನ ಹಣತೆ ಮಾರಾಟ ನಡೆಯುತ್ತಿದೆ. ಹಣತೆಗಳ ಗಾತ್ರಕ್ಕೆ ಅನುಗುಣವಾಗಿ ದರ ನಿಗದಿಯಾಗಿದೆ. ಅಧುನಿಕತೆಯ ಮೋಹಕ್ಕೆ ಸಿಲುಕಿರುವ ನಾಗರಿಕರು ಮಣ್ಣಿನ ಹಣತೆಗಿಂತ ಪಿಂಗಾಣಿ ಹಣತೆ ಖರೀದಿಗೆ ಹೆಚ್ಚಾಗಿ ಮುಂದಾಗುತ್ತಿದ್ದಾರೆ.ದುಬಾರಿಯ ಹಣತೆಗಳು:

ಆಧುನಿಕತೆಯ ಪರಿಣಾಮಕ್ಕೆ ಒಳಗಾದ ಸಾರ್ವಜನಿಕರು ಕುಲ ಕಸುಬುದಾರರಾದ ಕುಂಬಾರರು ಮಣ್ಣಿನಿಂದ ತಯಾರು ಮಾಡಿರುವಂತಹ ಮಣ್ಣಿನ ಹಣತೆಗಳ ಬದಲಿಗೆ ಪಿಂಗಾಣಿಯ ಹಣತೆಗಳನ್ನು ಖರೀದಿಸಲು ಮುಂದಾಗಿದ್ದು, ಅನಿವಾರ್ಯವಾಗಿ ದರ ಏರಿಕೆಯಾಗಿದೆ. ಗಾತ್ರದ ಆಧಾರದ ಮೇಲೆ ವಿವಿಧ ಬಗೆಯ ಹಣತೆಗಳು ಮಾರಾಟಕ್ಕಿದ್ದು, ₹30ರಿಂದ ಆರಂಭವಾಗಿ ₹500ರವರೆಗೆ ಮಾರಾಟವಾಗುತ್ತಿವೆ.ಕುಂಬಾರರ ಅಳಲು:

ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಕುಂಬಾರರು ಮಣ್ಣಿನ ಹಣತೆಗಳನ್ನು ತಯಾರು ಮಾಡುವ ಜತೆಗೆ ಪಿಂಗಾಣಿ ಹಣತೆಗಳನ್ನು ತರಿಸಿಕೊಂಡು ವ್ಯಾಪಾರ ಮಾಡುತ್ತಿದ್ದು, ಮಣ್ಣಿನಿಂದ ಮಾಡಿರುವ ಹಣತೆಗಳಿಗೆ ಬೆಲೆ ಇಲ್ಲದಂತಾಗಿದೆ.

ಅಗತ್ಯ ಪ್ರಮಾಣದ ಮಣ್ಣು, ನೀರು ಹಾಗೂ ಇತರ ಸೌಲಭ್ಯ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಈಗ ಹೊರಗಿನಿಂದ ಬಂದ ಪ್ಲಾಸ್ಟಿಕ್‌ ಪಿಂಗಾಣಿ ಹಣತೆಗಳನ್ನೇ ಜನ ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಈಗ ಕುಂಬಾರಿಕೆಗೆ ಬೆಲೆ ಇಲ್ಲದಂತಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಹಣತೆ ತಯಾರು ಮಾಡುವ ಜತೆಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಸಿಗುವಂತಹ ಪಿಂಗಾಣಿ ಹಣತೆಗಳನ್ನು ಖರೀದಿ ಮಾಡಿ ಮಾರಾಟ ಮಾಡುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಸಗರಪ್ಪ ಕುಂಬಾರ.