ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಸಮೀಪದ ಗೊಂದಿಬಸವನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘದ ವತಿಯಿಂದ ನಿರ್ಮಿಸಿರುವ ಸಂಘದ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ನಡೆಯಿತು.ಮಡಿಕೇರಿ ಶಾಸಕ ಡಾ.ಮಂತರ್ ಗೌಡ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ರೈತರ ಉಪ ಕಸುಬಾದ ಪಶುಪಾಲನೆ ಹಾಗೂ ಹಾಲಿನ ಉತ್ಪಾದನೆಯಿಂದ ಜೀವನಕ್ಕೆ ತುಂಬ ಅನುಕೂಲವಾಗುತ್ತಿದೆ. ಹಾಲಿನ ಮಾರಾಟದಿಂದ ರೈತರಿಗೆ ಆದಾಯ ಬರುತ್ತಿದ್ದು, ಇದರಿಂದ ಅನೇಕ ರೈತ ಕುಟುಂಬಗಳು ಅಭಿವೃದ್ಧಿ ಹೊಂದಿವೆ. ರೈತರು ಗುಣಮಟ್ಟದ ಹಾಲಿನ ಉತ್ಪಾದನೆಗೆ ಹೆಚ್ಚಿನ ಗಮನ ಹರಿಸಬೇಕು. ಹಾಲಿನ ಉತ್ಪಾದನೆ ಹೆಚ್ಚಳದಿಂದ ರೈತರಿಗೆ ಲಾಭವಾಗುತ್ತದೆ. ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಉತ್ಪಾದಕರ ಒಕ್ಕೂಟ ಸ್ಥಾಪನೆಯಾಗಬೇಕು ಎಂಬುದು ತನ್ನ ಆಶಯವಾಗಿದೆ ಎಂದರು.ಹಾಲು ಉತ್ಪಾದಕ ಸಂಘಕ್ಕೆ ಶಾಸಕರ ಅನುದಾನದಿಂದ 3 ಲಕ್ಷ ರು. ಅನುದಾನ ನೀಡಲಾಗಿದೆ. 1200 ಲೀಟರ್ ಹಾಲು ಉತ್ಪಾದನೆ ಮಾಡುತ್ತಿರುವ ಈ ಸಂಘ ಮುಂದಿನ ದಿನಗಳಲ್ಲಿ 2000 ಲೀಟರ್ ಹಾಲು ಸಂಗ್ರಹಿಸುವಂತೆ ಆಗಲಿ ಎಂದು ಶುಭ ಹಾರೈಸಿದರು.
ಗ್ರಾಮಸ್ಥರ ಬಹುದಿನಗಳ ಬೇಡಿಕೆ ಹಾಗೂ ಬಹುದಿನಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಗೊಂದಿಬಸವನಹಳ್ಳಿ ಗ್ರಾಮದ ರಸ್ತೆ ಅಭಿವೃದ್ದಿಗೆ 1.5 ಕೋಟಿ ರು. ವೆಚ್ಚದಲ್ಲಿ ಅನುದಾನ ಬಿಡುಗಡೆಗೊಂಡಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.ಕೊಡಗು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಮಾತನಾಡಿ, ಪ್ರತಿಯೊಬ್ಬರ ಮನೆಗಳಿಗೂ ಬೆಳಗ್ಗೆ ಹಾಲು, ಪೇಪರ್ ಮುಖ್ಯವಾದ ವಸ್ತು ಆಗಿದೆ. ಮನುಷ್ಯ ಸೇರಿದಂತೆ ಪ್ರತಿಯೊಂದು ಪ್ರಾಣಿಗಳಿಗೂ ಹಾಲು ಅಗತ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಹಾಲು ಉತ್ಪಾದನೆಗೆ ರೈತರ ಹಿಂದೇಟು ಹಾಕುತ್ತಿರುವ ವಿಷಯ ಆತಂಕಕಾರಿ ಬೆಳವಣಿಗೆ ಎಂದರು.
ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ.ಹೇಮಂತ್ ಕುಮಾರ್ ಮಾತನಾಡಿ, ಜಿಲ್ಲೆಯ ಕೂಡಿಗೆಯಲ್ಲಿರುವ ಹಾಲಿನ ಡೈರಿಮದರ್ ಡೈರಿಯಾಗಿದೆ. ಇದು ರಾಜ್ಯದಲ್ಲಿ ಪ್ರಪ್ರಥಮವಾಗಿ ಸ್ಥಾಪನೆಗೊಂಡ ಡೈರಿಯಾಗಿದೆ. ಕೊಡಗು ಜಿಲ್ಲೆಯಲ್ಲಿ 38 ಹಾಲು ಉತ್ಪಾದಕರ ಸಂಘಗಳಿದ್ದು, ಇವುಗಳಿಂದ ಕೇವಲ 17 ಸಾವಿರ ಲೀಟರ್ ಮಾತ್ರ ಹಾಲು ಸಂಗ್ರಹ ಮಾಡಲಾಗುತ್ತಿದೆ. ಆದ್ದರಿಂದ ಕೊಡಗಿಗೆ ಪ್ರತ್ಯೇಕ ಒಕ್ಕೂಟ ಮಾಡಲು ಕಷ್ಟ ಸಾಧ್ಯವಾಗಿದೆ. ಚಿಕ್ಕಮಗಳೂರು, ಹಾಸನ, ಕೊಡಗು ಸೇರಿ ಒಂದು ಒಕ್ಕೂಟವಾಗಿದೆ.1978ರಲ್ಲಿ ಸ್ಥಾಪನೆಗೊಂಡ ಹಾಸನ ಒಕ್ಕೂಟದಲ್ಲಿ ಈಗ 11.5 ಲಕ್ಷ ಲೀ ಹಾಲು ಶೇಖರಣೆ ಆಗುತ್ತಿದೆ. ಇದರಲ್ಲಿ ಕೇವಲ 2 ಲಕ್ಷ ಲೀ ಮಾತ್ರ ಮಾರಾಟವಾಗುತ್ತಿದೆ ಎಂದರು.
ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಮಾತನಾಡಿ, ಹಾಲು ಉತ್ಪಾದಕ ಸಹಕಾರ ಉತ್ತಮ ಕಾರ್ಯ ಚಟುವಟಿಕೆ ಮೂಲಕ ಜಿಲ್ಲೆಗೆ ಮಾದರಿಯಾಗಿದೆ. ಸಂಘದ ಏಳಿಗೆಗೆ ಶ್ರಮಿಸುವ ವ್ಯಕ್ತಿಗಳಿಗೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದರು.ಸಂಘದ ನಿರ್ದೇಶಕ ಎಂ.ಎಂ.ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾದರು.
ಗೊಂದಿಬಸವನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಧುಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು, ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ನಾಡಪ್ರಭು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಕೆ.ದಿನೇಶ್, ಹಾಸನ ಹಾಲು ಒಕ್ಕೂಟದ ವಿಸ್ತಾರಣಾಧಿಕಾರಿ ಬಿ.ವಿ.ವೀಣಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಎಚ್.ರೋಹಿತ್, ಕುಶಾಲನಗರ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಅಜಿತ್, ಸಂಘದ ಉಪಾಧ್ಯಕ್ಷ ಎಂ.ಎಸ್.ಪ್ರಸನ್ನ, ನಿರ್ದೇಶಕರಾದ ಪ್ರಕಾಶ್, ಡಿ.ಜಿ.ಪ್ರದೀಪ್, ಪಿ.ಪ್ರವೀಣ್, ರುದ್ರೇಶ್, ಜಿ.ಎನ್.ನವೀನ್, ಬಿ.ಎಸ್.ಶಿವಕುಮಾರ್, ಜಿ.ಎಲ್.ಸೋಮಣ್ಣ, ದಿವಾಕರ್, ಡಿ.ಉಷಾ, ಕಮಲಮ್ಮ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಶ್ರೀನಿವಾಸ್, ಸಿಬ್ಬಂದಿ ಸುಜಾತ ಉಪಸ್ಥಿತರಿದ್ದರು. ಶಿಕ್ಷಕಿ ಲಕ್ಷ್ಮೀ ನಿರೂಪಿಸಿದರು.