ಸೈಕ್ಲಿಂಗ್‌ ಪಟುಗಳಿಗೆ ಸಂವಿಧಾನ ಪಾಠ ಮಾಡಿದ ಸಚಿವ ಸಂತೋಷ ಲಾಡ್

| Published : Nov 23 2025, 03:30 AM IST

ಸೈಕ್ಲಿಂಗ್‌ ಪಟುಗಳಿಗೆ ಸಂವಿಧಾನ ಪಾಠ ಮಾಡಿದ ಸಚಿವ ಸಂತೋಷ ಲಾಡ್
Share this Article
  • FB
  • TW
  • Linkdin
  • Email

ಸಾರಾಂಶ

ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ ಹಾಗೂ ಮುಧೋಳ ಕುಮಕಾಲೆ ಪದವಿ ಪೂರ್ವ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಶನಿವಾರ ಮುಧೋಳ-ಜಮಖಂಡಿ ಬೈಪಾಸ್ ರಸ್ತೆ ಮಾರ್ಗದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಪದವಿ ಪೂರ್ವ ಮಹಾವಿದ್ಯಾಲಯಗಳ ಬಾಲಕ-ಬಾಲಕಿಯರ ರಾಜ್ಯ ಮಟ್ಟದ ಸೈಕ್ಲಿಂಗ್ ಕ್ರೀಡಾಕೂಟಕ್ಕೆ ಕಾರ್ಮಿಕ ಸಚಿವ ಸಂತೋಷ ಲಾಡ್‌ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಭಾರತದ ಒಟ್ಟು ಮತದಾರರಲ್ಲಿ ಶೇ.54ರಷ್ಟು ಯುವಕರೇ ಇದ್ದಾರೆ. ಯುವಕರು ಮನಸ್ಸು ಮಾಡಿದರೆ ತಮಗೆ ಬೇಕಾದವರನ್ನು ಪ್ರಧಾನಿ, ರಾಜ್ಯದ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವ ಶಕ್ತಿ ಮತ್ತು ಸಾಮರ್ಥ್ಯವಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ ಹಾಗೂ ಮುಧೋಳ ಕುಮಕಾಲೆ ಪದವಿ ಪೂರ್ವ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಶನಿವಾರ ಮುಧೋಳ-ಜಮಖಂಡಿ ಬೈಪಾಸ್ ರಸ್ತೆ ಮಾರ್ಗದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಪದವಿ ಪೂರ್ವ ಮಹಾವಿದ್ಯಾಲಯಗಳ ಬಾಲಕ-ಬಾಲಕಿಯರ ರಾಜ್ಯ ಮಟ್ಟದ ಸೈಕ್ಲಿಂಗ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಂವಿಧಾನದ''''''''ಹಿಂದೂ ಕೋಡ್ ಬಿಲ್ ಓದಬೇಕು, ಕ್ರೀಡಾ ಮನೋಭಾವದಷ್ಟೇ ಸಂವಿಧಾನ ಅರಿವು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ ಸಚಿವರು, ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರತಿಗಳನ್ನು ನೀಡಿ ಪ್ರಮುಖ ಭಾಗಗಳನ್ನು ಓದಲು ಪ್ರೇರೇಪಿಸಿದರು, ವಿಶೇಷವಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರ ದೂರದೃಷ್ಟಿಯ ಹಿಂದೂ ಕೋಡ್ ಬಿಲ್ ಮತ್ತು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ದೊರಕಿಸಿಕೊಡುವಲ್ಲಿ ಅದರ ಐತಿಹಾಸಿಕ ಪಾತ್ರದ ಕುರಿತು ಸಚಿವರು ವಿದ್ಯಾರ್ಥಿಗಳಿಗೆ ವಿವರವಾಗಿ ಬೋಧಿಸಿದರು.

​ಈ ಅನಿರೀಕ್ಷಿತ ಸಂವಿಧಾನದ ತರಗತಿಯಿಂದ ಉತ್ತೇಜಿತರಾದ ಕ್ರೀಡಾಪಟುಗಳು ಮತ್ತು ವಿದ್ಯಾರ್ಥಿಗಳು ಸಚಿವರೊಂದಿಗೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಕುರಿತು ಗಹನವಾದ ಚರ್ಚೆಗಳಲ್ಲಿ ಭಾಗಿಯಾಗಿದ್ದರು. ಪ್ರತಿಯೊಬ್ಬ ನಾಗರಿಕನೂ ಸಂವಿಧಾನ ಮತ್ತು ಇತಿಹಾಸ ಅರಿತಿದ್ದರೆ ಮಾತ್ರ ಉತ್ತಮ ಭವಿಷ್ಯ ನಿರ್ಮಿಸಲು ಸಾಧ್ಯ ಎಂದು ಹೇಳಿದರು.

ಸೈಕ್ಲಿಂಗ್ ಕ್ರೀಡಾಕೂಟ ಉದ್ಘಾಟನೆಗೆ ಆಗಮಿಸಿದ್ದ ಸಚಿವರು ಯುವಜನರಲ್ಲಿ ಸಂವಿಧಾನದ ಅರಿವು ಮೂಡಿಸುವ ಮೂಲಕ ಮಹತ್ವದ ಸಂದೇಶ ರವಾನಿಸಿದರು. ಕಾರ್ಮಿಕ ಸಚಿವ ಸಂತೋಷ ಲಾಡ್ ವಿದ್ಯಾರ್ಥಿಗಳ ಮಧ್ಯೆದಲ್ಲಿಯೇ ಕುಳಿತು ಕಾರ್ಯಕ್ರಮ ವಿಕ್ಷಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆ ಮತ್ತು ಓದಿನಲ್ಲಿ ಮುಂದೆ ಇರಬೇಕೆಂದು ಹೇಳಿ ಮುಧೋಳ ತಾಲೂಕಿನ ಕುಸ್ತಿ, ಕಬಡ್ಡಿ ಸೇರಿದಂತೆ ಇತರೆ ಗ್ರಾಮೀಣ ಕ್ರೀಡಾ ಪಟುಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಯುವಕರು ಕ್ರೀಡೆಯ ಮೂಲಕ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು, ಬಾಗಲಕೋಟೆ ಜಿಲ್ಲೆ ಸೈಕ್ಲಿಂಗ್‌ ನಂತಹ ಕ್ರೀಡೆಗಳು ಸಾಂಸ್ಕೃತಿಕವಾಗಿ ಬೆಳೆಯುತ್ತಿರುವುದು ಸಂತೋಷಕರವಾದದು, ಸರ್ಕಾರ ಕ್ರೀಡಾ ಸ್ಪರ್ಧೆ ಮತ್ತು ಕ್ರೀಡಾಪಟುಗಳಿಗೆ ಪ್ರೊತ್ಸಾಹ ಮತ್ತು ಬೆಂಗಲ ನೀಡುತ್ತಾ ಬಂದಿದೆ ಎಂದರು. ಜಿಲ್ಲಾಧಿಕಾರಿ ಸಂಗಪ್ಪ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಮುಧೋಳ ತಹಸೀಲ್ದಾರ್ ಪ್ರಕಾಶ ಗಾಯಕವಾಡ, ಪಿಯು ಉಪನಿರ್ದೇಶಕ ಪುಂಡಲೀಕ ಕಾಂಬಳೆ, ಮುಧೋಳ ತಾಪಂ ಇಒ ಎಂ.ವೈ. ಅಂಬಿಗೇರ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಉದಯಸಿಂಗ್ ಪಡತಾರೆ, ಡಾ.ಸಂಜಯ ಘಾರಗೆ, ಅಶೋಕ ಗಂಗಣ್ಣವರ, ಪ್ರಲ್ಹಾದ ಕುಮಕಾಲೆ, ಭೀಮ ಕುಮಕಾಲೆ ಸೇರಿದಂತೆ ಅನೇಕ ಗಣ್ಯರು, ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.