ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಮೂಲತಃ ಗುತ್ತಿಗೆದಾರರಾಗಿ ಇಂದು ಸಂಪುಟದರ್ಜೆ ಅಧಿಕಾರದಲ್ಲಿರುವ ಅರಸೀಕೆರೆ ಕ್ಷೇತ್ರದ ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು ತಾಲೂಕಿನಲ್ಲಿ ಅಧಿಕಾರಿಗಳನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಭಾರೀ ಭ್ರಷ್ಟಾಚಾರ ಮಾಡಿದ್ದಾರೆ. ಅದಕ್ಕೆ ಸಂಬಂಧಪಟ್ಟ ದಾಖಲೆಗಳೂ ನನ್ನ ಬಳಿ ಇದ್ದು, ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಇನ್ನೊಂದು ವಾರದಲ್ಲಿ ಅರಸೀಕೆರೆಯಿಂದ ಜಿ ಪಂ ಕಛೇರಿವರೆಗೂ ಪಾದಯಾತ್ರೆ ನಡೆಸುವುದಾಗಿ ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಅರಸೀಕೆರೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಶಾಸಕ ಶಿವಲಿಂಗೇಗೌಡರ ಹಸ್ತಕ್ಷೇಪ ಇದೆ. ತಮ್ಮ ತಾಳಕ್ಕೆ ಕುಣಿಯುವ ಅಧಿಕಾರಿಗಳು ಹಾಗೂ ನೌಕರರನ್ನು ಅವರಿಗೆ ಯೋಗ್ಯತೆ ಇಲ್ಲದಿದ್ದರೂ ತಮಗೆ ಬೇಕಾದ ಕಡೆಗೆ ನೆಮಕ ಮಾಡಿಕೊಂಡು ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಇದಕ್ಕೆ ಬಾಣಾವರ ಗ್ರಾಮ ಪಂಚಾಯ್ತಿಯಲ್ಲಿ ಆಶ್ರಯ ಮನೆ ವಿತರಣೆಯಲ್ಲಿ ನಡೆದಿರುವ ಭಾರೀ ಅಕ್ರಮವೇ ಸಾಕ್ಷಿ ಎಂದು ಅದಕ್ಕೆ ಸಂಬಂಧಪಟ್ಟ ದಾಖಲೆ ಪ್ರದರ್ಶಿಸಿದರು.
ಭ್ರಷ್ಟಚಾರ ಮಾಡಿ ಅಮಾನತ್ತಾದವರನ್ನು ಶಾಸಕರ ಮೌಖಿಕ ಆದೇಶದ ಮೇಲೆ ಮತ್ತೆ ಬೇರೆ ಬೇರೆ ಗ್ರಾಪಂಗಳಿಗೆ ನಿಯೋಜನೆ ಮಾಡಲಾಗಿದೆ. ಇಂತಹ ಪ್ರಕರಣ ಒಂದರಲ್ಲಿ ಹಿಂದೆ ಅರಸೀಕೆರೆ ತಾಲೂಕು ಪಂಚಾಯ್ತಿ ಇಒ ಆಗಿದ್ದ ನಾಗರಾಜು ಎಂಬುವವರು ಅಮಾನತ್ತಾಗಬೇಕಾಯಿತು. ಆಗ ಅವರ ಮೇಲೆ ತನಿಖೆ ನಡೆಯುವಾಗ ಅವರು ಸರ್ಕಾರಕ್ಕೆ ನೀಡಿದ ಮಾಹಿತಿಯಲ್ಲಿ ಶಾಸಕ ಶಿವಲಿಂಗೇಗೌಡರ ಮೌಖಿಕ ಆದೇಶದ ಮೇರೆಗೆ ಅಮಾನತ್ತಾಗಿದ್ದ ಪಿಡಿಒ ಅವರನ್ನು ಬೇರೊಂದು ಗ್ರಾಮ ಪಂಚಾಯ್ತಿಗೆ ನೇಮಕ ಮಾಡಿದೆ ಎಂದು ತಿಳಿಸಿದ್ದಾರೆ. ಹೀಗೆ ಶಾಸಕ ಶಿವಲಿಂಗೇಗೌಡರು ತಮಗೆ ಬೇಕಾದವರನ್ನು ಬೇಕಾದಲ್ಲಿಗೆ ನೇಮಕ ಮಾಡಿಕೊಂಡು ಹಣ ವಸೂಲಿ ಮಾಡಿದ್ದಾರೆ. ಮುಂದಿನ ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಯನ್ನು ಮುಂದಿಟ್ಟುಕೊಂಡು ಈ ಮೂಲಕ ಹಣ ಕ್ರೂಢೀಕರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಮೂಲತಃ ಗುತ್ತಿಗೆದಾರರಾದ ಶಾಸಕ ಶಿವಲಿಂಗೇಗೌಡರಿಗೆ ತಳಮಟ್ಟದಿಂದ ಎಲ್ಲಾ ಗೊತ್ತಿದೆ. ಅವರ ಗಮನಕ್ಕೆ ಬಾರದೆ ಒಂದು ಹುಲ್ಲುಕಡ್ಡಿ ಕೂಡ ಅಲುಗಾಡುವುದಿಲ್ಲ. ಹಾಗಾಗಿ ತಾಲೂಕಿನಲ್ಲಿ ನಡೆದಿರುವ ಎಲ್ಲಾ ಭ್ರಷ್ಟಾಚಾರಕ್ಕೂ ಶಾಸಕ ಶಿವಲಿಂಗೇಗೌಡರೆ ಹೊಣೆ. ಉದ್ಯೋಗ ಖಾತ್ರಿ ಯೋಜನೆಯಡಿ ನಡೆದಿರುವ ಕೆಲಸಗಳಿಗೆಲ್ಲಾ ಇವರ ಕ್ರಷರ್ ನಿಂದಲೆ ಜಲ್ಲಿ, ಎಂ ಸ್ಯಾಂಡ್ ಪೂರೈಕೆ ಆಗಿದೆ. ಅದಕ್ಕೆ ಸಂಬಂಧಪಟ್ಟ ರಸೀತಿಗಳು ಕೂಡ ಇವೆ.
ಇದೆಲ್ಲದರ ವಿರುದ್ಧ ಕ್ರಮ ಕೈಗೊಳ್ಳದೆ ಹೋದಲ್ಲಿ ಅರಸೀಕೆರೆ ತಾಲೂಕು ಪಂಚಾಯ್ತಿ ಎದುರು ಭಾರೀ ಪ್ರತಿಭಟನೆ ಮಾಡುತ್ತೇವೆ. ಆಗಲೂ ಕ್ರಮ ಕೈಗೊಳ್ಳದಿದ್ದರೆ ಜಿ.ಪಂ ಗೆ ಪಾದಯಾತ್ರೆ ನಡೆಸುತ್ತೇವೆ ಎಂದು ಎಚ್ಚರಿಸಿದರು.ತಮ್ಮದೇ ಸರ್ಕಾರವಿರುವಾಗಲೇ ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ನೈತಿಕ ಹೊಣೆ ಹೊತ್ತು ಶಿವಲಿಂಗೇಗೌಡರು ರಾಜೀನಾಮೆ ನೀಡಲೇಬೇಕು ಎಂದು ಅವರು ಒತ್ತಾಯಿಸಿದರು. ಪಿಎಂಎವೈ ಯೋಜನೆಯಡಿ ೯೦ ಫಲಾನುಭವಿಗಳ ಹಣ ಬಿಡುಗಡೆ ವೇಳೆ ಬೋಗಸ್ ದಾಖಲೆ ಮಾಡಲಾಗಿದೆ. ಈ ಅವ್ಯವಹಾರಕ್ಕೆ ಕಾರಣರಾದ ಅಧಿಕಾರಿಗಳನ್ನು ಶಾಸಕರೇ ನೇಮಕ ಮಾಡಿದ್ದರು ಎಂದು ದೂರಿದರು.
ಯಾವ ಅಧಿಕಾರಿಗಳು ಶಾಸಕರ ಮಾತು ಕೇಳುತ್ತಾರೋ, ಸಹಿ ಹಾಕುತ್ತಾರೋ ಅವರನ್ನು ಪ್ರಮುಖ ಗ್ರಾಮ ಪಂಚಾಯಿತಿಗಳಿಗೆ ನೇಮಕ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಯಾವ ಅಧಿಕಾರಿಯೇ ಬರಲಿ, ಶಾಸಕರ ಅನುಮತಿ ಅನಿವಾರ್ಯವಾಗಿದೆ. ಇದರಿಂದಲೇ ಭ್ರಷ್ಟಾಚಾರ ಹೆಚ್ಚಾಗಿದೆ. ನರೇಗಾ ಅಡಿ ೫ ಕೋಟಿ ಬಿಲ್ ಪಾವತಿ ಯಾರ ಹೆಸರಿಗೆ ಆಗಿದೆ ಎಂಬುದನ್ನು ಶಾಸಕರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು. "ಶಾಸಕರು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎನ್ನುತ್ತಾರೆ, ಆದರೆ ಇಷ್ಟು ದಿನ ಕ್ರಮ ಕೈಗೊಳ್ಳದೇ ಇದ್ದದ್ದು ಏಕೆ? ಎಂದು ಪ್ರಶ್ನಿಸಿದ ಸಂತೋಷ್, ಅರಸೀಕೆರೆಯಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಜಾಗವಿಲ್ಲ, ಶಾಸಕರ ತಾಳಕ್ಕೆ ಕುಣಿಯುವವರಿಗೇ ಮಣೆ ಹಾಕಲಾಗುತ್ತಿದೆ " ಎಂದು ಕಿಡಿಕಾರಿದರು. ಕ್ಷೇತ್ರದಲ್ಲಿ ನಡೆದಿರುವ ಎಲ್ಲಾ ಭ್ರಷ್ಟಾಚಾರವನ್ನು ಹಂತ ಹಂತವಾಗಿ ಬಯಲು ಮಾಡುತ್ತೇನೆ. ಬಾಣಾವರ ಪಿಡಿಒ ಹಾಗೂ ತಾಪಂ ಇಒ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ವಾರದಿಂದ ತಾಪಂ ಕಚೇರಿ ಎದುರು ಧರಣಿ ನಡೆಸುತ್ತೇವೆ. ಜಿಪಂ ಸಿಇಒ ಕೂಡ ಕ್ರಮ ಕೈಗೊಳ್ಳದೇ ಇದ್ದರೆ, ಅರಸೀಕೆರೆಯಿಂದ ಹಾಸನವರೆಗೆ ಪಾದಯಾತ್ರೆ ನಡೆಸಿ, ಜಿಪಂ ಎದುರು ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದರು. ಭ್ರಷ್ಟಾಚಾರಕ್ಕೆ ಕಡಿವಾಣ, ತಪ್ಪಿತಸ್ಥರಿಗೆ ಶಿಕ್ಷೆ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಾಗರಾಜ್, ಭೋಜನಾಯಕ, ಅಜ್ಜಪ್ಪ, ಉಮೇಶ್, ಜಯರಾಂ ಉಪಸ್ಥಿತರಿದ್ದರು.---------------------------------------------------------
* ಬಾಕ್ಸ್: ರಂಗಾಪುರ ಕಾವಲಿನದು ದೊಡ್ಡ ಹಗರಣಇನ್ನು ತಾಲೂಕಿನ ರಂಗಾಪುರ ಕಾವಲು ಜಮೀನಿನ ವಿಚಾರದಲ್ಲಿ ದೊಡ್ಡ ಭ್ರಷ್ಟಾಚಾರವೇ ನಡೆದಿದೆ. ಅಲ್ಲಿನ ಜಮೀನು ಸಾಗುವಳಿ ಮಾಡುತ್ತಿರುವ ರೈತರಿಂದ ಶಾಸಕರ ಶಿಷ್ಯನೊಬ್ಬ ಎಕರೆಗೆ 50ರಿಂದ 1 ಲಕ್ಷದವರೆಗೆ ಹಣ ವಸೂಲಿ ಮಾಡಿದ್ದಾನೆ. ಈ ವಿಚಾರವಾಗಿ ನೊಂದ ರೈತರು ಬೆಂಗಳೂರಿಗೆ ತಮ್ಮನ್ನು ಭೇಟಿ ಮಾಡಲು ಹೋಗಿದ್ದಾಗ ಶಿವಲಿಂಗೇಗೌಡರು ಸಮಾಧಾನ ಮಾಡಿ ಕಳುಹಿಸಿದ್ದಾರೆ. ಇತ್ತೀಚೆಗೆ ಅವರ ತೋಟದ ಮನೆಯಲ್ಲೆ ರಾಜಿಪಂಚಾಯ್ತಿ ಮಾಡಲು ಹೋಗಿ ಗಲಾಟೆ ಆಗಿ ಸಭೆ ವಿಫಲವಾಗಿದೆ ಎಂದು ಎನ್. ಆರ್. ಸಂತೋಷ್ ತಿಳಿಸಿದರು.